ಇಂಗ್ಲೆಂಡ್ ತಂಡದ ಯುವ ಆಟಗಾರ 25 ವರ್ಷದ ಹ್ಯಾರಿ ಬ್ರೂಕ್ ಇತಿಹಾಸ ನಿರ್ಮಿಸಿದ್ದಾರೆ. ಪಾಕ್‌ನ ಮುಲ್ತಾನ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಪರ ಸ್ಪೋಟಕ ಬ್ಯಾಟಿಂಗ್ ನಡೆಸಿದ ಬಲಗೈ ಬ್ಯಾಟರ್ ಹ್ಯಾರಿ ಬ್ರೂಕ್, ಕೇವಲ 310 ಎಸೆತಗಳಲ್ಲಿ ತ್ರಿಶತಕ ಪೂರೈಸಿದರು. ಅವರ ಇನಿಂಗ್ಸ್‌ನಲ್ಲಿ 28 ಬೌಂಡರಿ ಮತ್ತು 3 ಸಿಕ್ಸರ್‌ಗಳು ಮೂಡಿಬಂದವು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಎರಡನೇ ಅತಿ ವೇಗದ ತ್ರಿಶತಕವಾಗಿದೆ.
ಹ್ಯಾರಿ ಬ್ರೂಕ್, ತಮ್ಮ ಈ ಸ್ಪೋಟಕ ತ್ರಿಶತಕದ ಮೂಲಕ ಆಸ್ಟ್ರೇಲಿಯಾದ ದಿಗ್ಗಜ ಮ್ಯಾಥ್ಯೂ ಹೇಡನ್ ಅವರ ದಾಖಲೆಯನ್ನು ಮುರಿದಿದ್ದಾರೆ.
2003ರಲ್ಲಿ ಆಸೀಸ್‌ನ ದಿಗ್ಗಜ ಆರಂಭಿಕ ಬ್ಯಾಟರ್ ಮ್ಯಾಥ್ಯೂ ಹೇಡನ್ ಜಿಂಬಾಬ್ವೆ ಎದುರು 362 ಎಸೆತಗಳಲ್ಲಿ ತ್ರಿಶತಕ ಬಾರಿಸಿ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಬ್ರೂಕ್ ಅಳಿಸಿಹಾಕಿದ್ದಾರೆ. ಅಂದಹಾಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ತ್ರಿಶತಕ ಬಾರಿಸಿದ ವಿಶ್ವ ದಾಖಲೆ ಟೀಮ್ ಇಂಡಿಯಾದ ಸ್ಫೋಟಕ ಆಟಗಾರರಾಗಿದ್ದ ವೀರೇಂದ್ರ ಸೆಹ್ವಾಗ್ ಹೆಸರಲ್ಲಿದೆ. ಸೆಹ್ವಾಗ್, 2008ರಲ್ಲಿ ದಕ್ಷಿಣ ಆಫ್ರಿಕಾ ಎದುರು ಕೇವಲ 278 ಎಸೆತಗಳಲ್ಲಿ ತ್ರಿಶತಕ ಬಾರಿಸಿದ್ದರು.
ಇದಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಹಾಲಿ ಇಂಗ್ಲೆಂಡ್ ಆಟಗಾರರ ಪೈಕಿ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನೂ ಬ್ರೂಕ್ ಸಂಪಾದಿಸಿದ್ದಾರೆ. ಟೆಸ್ಟ್ ಇತಿಹಾಸದಲ್ಲಿ ತ್ರಿಶತಕ ಬಾರಿಸಿದ ಇಂಗ್ಲೆಂಡ್‌ನ 6ನೇ ಬ್ಯಾಟರ್ ಆಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೊದಲ ಟೆಸ್ಟ್ ಪಂದ್ಯ | ಅಶ್ವಿನ್ ಬಲದಿಂದ ಬಾಂಗ್ಲಾದೇಶವನ್ನು ಮಣಿಸಿದ ಭಾರತ
ಟೆಸ್ಟ್ ಕ್ರಿಕೆಟ್‌ನಲ್ಲಿ 2019ರ ಬಳಿಕ ಮೂಡಿಬಂದ ಮೊದಲ ತ್ರಿಶತಕ ಇದಾಗಿದೆ. 2019ರಲ್ಲಿ ಪಾಕಿಸ್ತಾನ ವಿರುದ್ಧವೇ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ 335 ರನ್ ಬಾರಿಸಿದ್ದರು. ಮುಲ್ತಾನ್ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ಸೈಮ್ ಅಯೂಬ್ ಎದುರು ಬೌಂಡರಿ ಬಾರಿಸುವ ಮೂಲಕ ಹ್ಯಾರಿ ಬ್ರೂಕ್ ತ್ರಿಶತಕದ ಸಂಭ್ರಮ ಆಚರಿಸಿದರು. 245 ಎಸೆತಗಳಲ್ಲಿ ದ್ವಿಶತಕ ಪೂರೈಸಿದ ಬ್ರೂಕ್, 322 ಎಸೆತಗಳಲ್ಲಿ 29 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 317 ರನ್ ಬಾರಿಸಿ ಸೈಮ್ ಅಯೂಬ್‌ಗೆ ವಿಕೆಟ್ ಒಪ್ಪಿಸಿದರು.
ಪಾಕಿಸ್ತಾನ ತಂಡ ಮೊದಲ ಇನಿಂಗ್ಸ್‌ನಲ್ಲಿ ಬಾರಿಸಿದ 556 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ 150 ಓವರ್‌ಗಳಲ್ಲಿ 823/7 ರನ್ ಬಾರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಮತ್ತೊಂದೆಡೆ ಜೋ ರೂಟ್, 375 ಎಸೆತಗಳಲ್ಲಿ 262 ರನ್ ಬಾರಿಸಿ ಔಟಾದರು. ರೂಟ್ ಮತ್ತು ಬ್ರೂಕ್ 4ನೇ ವಿಕೆಟ್‌ಗೆ 522 ಎಸೆತಗಳಲ್ಲಿ ದಾಖಲೆಯ 454 ರನ್‌ಗಳ ಜೊತೆಯಾಟವನ್ನಾಡಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ತ್ರಿಶತಕ
278 ಎಸೆತಗಳು – ವೀರೇಂದ್ರ ಸೆಹ್ವಾಗ್ (ಭಾರತ vs ದಕ್ಷಿಣ ಆಫ್ರಿಕಾ), ಚೆನ್ನೈ 2007-08
310 ಎಸೆತಗಳು – ಹ್ಯಾರಿ ಬ್ರೂಕ್ (ಪಾಕಿಸ್ತಾನ vs ಇಂಗ್ಲೆಂಡ್), ಮುಲ್ತಾನ್ 2024
362 ಎಸೆತಗಳು – ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ vs ಜಿಂಬಾಬ್ವೆ), ಪರ್ತ್ 2003-04
364 ಎಸೆತಗಳು – ವೀರೇಂದ್ರ ಸೆಹ್ವಾಗ್ (ಭಾರತ vs ಪಾಕಿಸ್ತಾನ), ಮುಲ್ತಾನ್ 2003-04
