- ಉದಯಪುರದಲ್ಲಿ ಸುದ್ದಿಗಾರರೊಂದಿಗೆ ಗೆಹ್ಲೋಟ್ ಮಾತು
- ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ
ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಬಹುಮತದೊಂದಿಗೆ ಜಯ ಗಳಿಸಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಗಳವಾರ (ಮೇ 9) ಹೇಳಿದ್ದಾರೆ.
ಉದಯಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
“ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚಿಸಲಿದೆ” ಎಂದು ಹೇಳಿದರು.
ರಾಜಸ್ಥಾನದ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಅಶೋಕ್ ಗೆಹ್ಲೋಟ್ ಅವರು ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ವರ್ಷದ ಕೊನೆಯಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆ ನಡೆಯಲಿದೆ.
“ಜನಸಾಮಾನ್ಯರಲ್ಲಿ ನಮ್ಮ ಪರವಾದ ಒಲವಿದೆ. ಆದ್ದರಿಂದ ಇಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಯಾರೇ ಬಂದರೂ ಕಾಂಗ್ರೆಸ್ ಅಧಿಕಾರ ಹಿಡಿಯುವುದನ್ನು ತಡೆಯಲಾಗುವುದಿಲ್ಲ” ಎಂದು ತಿಳಿಸಿದರು.
“ನಮ್ಮ ಸರ್ಕಾರ ನಡೆಸುತ್ತಿರುವ ಹಣದುಬ್ಬರ ಪರಿಹಾರ ಶಿಬಿರಗಳನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ. ಯೋಜನೆಯ ಪ್ರಯೋಜನಗಳು ಪ್ರತಿ ಫಲಾನುಭವಿ ಕುಟುಂಬವನ್ನು ತಲುಪುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲಾಗುತ್ತಿದೆ” ಎಂದು ತಮ್ಮ ಸರ್ಕಾರದ ಯೋಜನೆಗಳ ಕುರಿತು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚುನಾವಣಾ ಪ್ರಚಾರದಲ್ಲಿ ಮೋದಿ ಧಾರ್ಮಿಕ ಘೋಷಣೆ ನನಗೆ ಅಚ್ಚರಿ ಉಂಟು ಮಾಡಿದೆ : ಶರದ್ ಪವಾರ್ ವ್ಯಂಗ್ಯ
ಅಶೋಕ್ ಗೆಹ್ಲೋಟ್ ಅವರು ಇದೇ ವೇಳೆ ಉದಯಪುರ ಹಾಗೂ ಭಿಲ್ವಾರಾ ಜಿಲ್ಲೆಗಳ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದರು. ಇದಕ್ಕೂ ಮುನ್ನ ಉದಯಪುರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಗಮಿಸಿದರು.
ಕರ್ನಾಟಕದಲ್ಲಿ ಬುಧವಾರ (ಮೇ 10) ಮತದಾನ ನಡೆಯಲಿದೆ. 13 ರಂದು ಫಲಿತಾಂಶ ಪ್ರಕಟವಾಗಲಿದೆ.