ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಗಳ ಪಟ್ಟಿ ದೊಡ್ಡದಿದ್ದು ಮುಂದಿನ ಚಳಿಗಾಲದ ಅಧಿವೇಶನದ ವೇಳೆಗೆ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ, ಬರಮಾಡಿಕೊಳ್ಳಲು ಸಿದ್ಧರಾಗಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಬೆಳಗಾವಿ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಕೋಮಾ ಸ್ಥಿತಿಯಲ್ಲಿದ್ದು, ಈ ಸರ್ಕಾರವು ಬೆಂಗಳೂರಿಗೆ ಮಾತ್ರ ಸಿಮಿತವಾಗಿದೆ, ರಾಜ್ಯದಲ್ಲಿ ಹಾಗೂ ರಾಜ್ಯದ ಇತರೆ ಯಾವುದೇ ಭಾಗದಲ್ಲೂ ಅಭಿವೃದ್ಧಿ ಆಗುತ್ತಿಲ್ಲ.
ಕಾಂಗ್ರೆಸ್‌ನ ಒಳ ಜಗಳದಿಂದ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಗಳಲ್ಲಿ ಮುಳುಗಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ. ಬರುವ ಚಳಿಗಾಲ ಅಧಿವೇಶನದ ವೇಳೆಗೆ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿಯನ್ನು ಬರಮಾಡಿಕೊಳ್ಳಲು ಸಿದ್ಧರಾಗಿ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಮತ್ತು ಅಸಮಾಧಾನಗೊಂಡಿರುವ ಪಕ್ಷದ ಕೆಲವು ಹಿರಿಯರಿಗೆ ನಾನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಎಂದು ಒಪ್ಪಿಕೊಳ್ಳಲು ಇನ್ನೂ ಸಮಯ ಬೇಕು. ಎರಡು ವರ್ಷಗಳಾದರೂ ಕೆಲವರಿಗೆ ಮೂರು ವರ್ಷಗಳು ಬೇಕಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಇದನ್ನು ಓದಿದ್ದೀರಾ? ಬೆಳಗಾವಿ | ಗೂಡ್ಸ್ ವಾಹನಕ್ಕೆ ಬೈಕ್ ಡಿಕ್ಕಿ; ಸವಾರ ಸಾವು
ಸುದ್ದಿಗೋಷ್ಠಿಯಲ್ಲಿ ಬಾಲಚಂದ್ರ ಜಾರಕಿಹೊಳಿ, ಈರಣ್ಣ ಕಡಾಡಿ ಸೇರಿದಂತೆ ಜಿಲ್ಲೆಯ ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.