ಕೇರಳದ ಬಹು ನಿರೀಕ್ಷಿತ ತಿರುವೋಣಂ ಬಂಪರ್ ಲಾಟರಿಯ ಡ್ರಾ ಬುಧವಾರ ಮಧ್ಯಾಹ್ನ ನಡೆದಿದೆ. ಒಟ್ಟಾರೆ 500 ಮೌಲ್ಯದ ಟಿಕೆಟ್ಗಳಲ್ಲಿ ಅತ್ಯಧಿಕ ಮೊತ್ತದ ಬಹುಮಾನ 25 ಕೋಟಿ ರೂ. ಆಗಿದೆ. ಇನ್ನು ಎರಡನೇ ಬಹುಮಾನದ ರೂಪವಾಗಿ ತಲಾ 20 ಮಂದಿಗೆ 2 ಕೋಟಿ ಬಹುಮಾನ ನೀಡಲಾಗುತ್ತಿದೆ. ಮೂರನೇ ಬಹುಮಾನ ತಲಾ 20 ಮಂದಿಗೆ 50 ಲಕ್ಷ ನಗದು ಬಹುಮಾನವನ್ನು ಹೊಂದಿದೆ.
ಇನ್ನು ಈ ಟಿಕೆಟ್ನ ಬಂಪರ್ ಮೊತ್ತದ ಬಹುಮಾನವೂ ವಯನಾಡಿನ ಬತ್ತೇರಿಯಲ್ಲಿರುವ ಎನ್‌ಜಿಆರ್ ಲಾಟರಿ ಮಾರಾಟ ಮಾಡಿದ ಟಿಕೆಟ್‌ಗೆ ಬಹುಮಾನ ಬಂದಿದೆ. ಈ ಲಾಟರಿಯನ್ನು ಖರೀದಿಸಿದ್ದ ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರ ವ್ಯಕ್ತಿಗೆ ಒಲಿದು ಬಂದಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ನಿವಾಸಿಯಾಗಿರುವ ಅಲ್ತಾಫ್ ಪಾಷಾಗೆ ಕೇರಳದ ಬಂಪರ್ ಲಾಟರಿ ಹೊಡೆದಿದೆ. ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿರುವ ಅಲ್ತಾಫ್ ಪಾಷಾ, ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಗೆದ್ದಿದ್ದಾರೆ.
ಇದನ್ನು ಓದಿದ್ದೀರಾ? ಶಿವಮೊಗ್ಗ | ‘ವಡ್ಡರ್ಸೆ ರಘುರಾಮ ಶೆಟ್ಟಿ’ ಪ್ರಶಸ್ತಿ: ಆಯ್ಕೆ ಸಮಿತಿಗೆ ಪತ್ರಕರ್ತ ಎನ್. ರವಿಕುಮಾರ್ ನೇಮಕ
ಇತ್ತೀಚೆಗಷ್ಟೆ ಕೇರಳದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದಾಗ ₹500 ರೂ ಕೊಟ್ಟು ಲಾಟರಿ ಖರೀದಿ ಮಾಡಿದ್ದರು. ಇನ್ನು ತಾನು ಖರೀದಿ ಮಾಡಿದ ಲಾಟರಿ ಟಿಕೆಟ್‌ಗೆ ಬಹುಮಾನ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಅಲ್ತಾಫ್ ಕೇರಳಕ್ಕೆ ಹೊರಟಿರುವುದಾಗಿ ಅವರ ಕುಟುಂಬಿಕರು ಮಾಹಿತಿ ನೀಡಿದ್ದಾರೆ.
ಇದೀಗ ಕೇರಳಕ್ಕೆ ಪ್ರಯಾಣ ಮಾಡಿದ್ದು, ಲಾಟರಿ ಹಣ ಪಡೆಯುವ ಪ್ರಕ್ರಿಯೆಯನ್ನು ಪೂರೈಸಿ ಹಣವನ್ನು ಪಡೆದುಕೊಳ್ಳಲಿದ್ದಾರೆ. ಎಲ್ಲ ತೆರಿಗೆಗಳನ್ನು ಕಡಿತಗೊಳಿಸಿದ ನಂತರ ಅಲ್ತಾಫ್ ಪಾಷಾ ಅವರಿಗೆ ₹12.8 ಕೋಟಿ ಸಿಗಲಿದೆ ಎಂದು ತಿಳಿದುಬಂದಿದೆ.
ಕೇರಳದ ಓಣಂ ಹಬ್ಬದ ₹25 ಕೋಟಿ ಮೌಲ್ಯದ ಲಾಟರಿ ಹೊಡೆಯುವ ಈ ಮೂಲಕ, ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಮಂಡ್ಯದ ಅಲ್ತಾಫ್ ಈಗ, ರಾತ್ರೋರಾತ್ರಿ ಕೋಟ್ಯಧಿಪತಿ ಆಗಿದ್ದಾರೆ.

