ಬಡವರು ತಮ್ಮದೇ ನಿವೇಶನ ಇರಬೇಕೆಂಬ ಬಹಳ ಆಸೆ, ಕನಸುಗಳನ್ನು ಇಟ್ಟುಕೊಂಡು ಸರ್ಕಾರಕ್ಕೆ ಹಣ ತುಂಬಿದ್ದಾರೆ. ಬಡವರಿಗೆ ನಿವೇಶನ ನೀಡದೆ ಎರಡ್ಮೂರು ವರ್ಷ ಕಳೆದರೂ ಫಲಾನುಭವಿಗಳಿಗೆ ನಿವೇಶನ ನೀಡುತ್ತಿಲ್ಲ ಎಂದು ಕರವೇ ಗಜಪಡೆ ಹಾವೇರಿ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಆರೋಪಿಸಿದರು.
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗಜಪಡೆ ಸಂಘಟನೆಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“500 ಬಡ ಕುಟುಂಬಗಳಿಂದ ಸರಿಸುಮಾರು ತಲಾ ₹30,000 ಹಣ ಕಟ್ಟಿಸಿಕೊಂಡು ರಶೀದಿ ನೀಡಿ, 2 ವರ್ಷ ಕಳೆದರೂ ಯಾರೊಬ್ಬರಿಗೂ ನಿವೇಶನ ನೀಡಿಲ್ಲ. ಫಲಾನುಭವಿಗಳು ಪುರಸಭೆ ಅಧಿಕಾರಿಗಳನ್ನು ಕೇಳಿದಾಗ, ಸುಳ್ಳು ಭರವಸೆಗಳನ್ನು ಕೊಟ್ಟು ಕಳುಹಿಸುತ್ತಿದ್ದು, ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬಡವರಿಗೆ ನಿವೇಶನ ನೀಡಲು ಒಂದು ಕಮಿಟಿ ರಚನೆ ಮಾಡಿ, ನಿಜವಾದ ಬಡವರಿಗೆ ನಿವೇಶನ ನೀಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ದಲಿತ ಮಹಿಳೆಗೆ ಅವಮಾನ; ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಕ್ಷಮೆಯಾಚನೆಗೆ ಆಗ್ರಹ
“ಒಂದು ವೇಳೆ ಬಡವರಿಗೆ ನಿವೇಶನ ನೀಡದೆ ಹೋದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗುವುದು” ಎಂದು ಯಲ್ಲಪ್ಪ ಮರಾಠೆ ಎಚ್ಚರಿಕೆ ನೀಡಿದರು.
ಕರವೇ ಗಜಪಡೆ ತಾಲೂಕ ಅಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಯೊಸುಫ್ ಸೈಕಲಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪರಪ್ಪಗೌಡ್ರ, ಜಿಲ್ಲಾ ಗೌರವಾಧ್ಯಕ್ಷ ಗಂಗಾಧರಯ್ಯ ಪಾಟೀಲ್, ರವಿ ಮಾಮನಿ, ಶಂಕ್ರಯ್ಯಾ ವಸ್ತ್ರದ, ಹನುಮಂತಪ್ಪ ತಳವಾರ, ಹೂನ್ನೂರಸಾಬ ಕೊಪ್ಪಳ, ಶಿವನಗೌಡ್ರ ಗಂಟಿಗೌಡ್ರ, ಈರಪ್ಪ ಅಂಗಡಿ, ಮಾಲತೇಶ ಈರಣ್ಣ ಮುದಿಯಪ್ಪನವರ್, ವಾಗೀಶ ಎಮ್ಮಿ, ಶಾಂತಾ ಪಟ್ಟಣಶೆಟ್ಟಿ, ಭೂಮಿಕಾ ಪಟ್ಟಣಶೆಟ್ಟಿ, ಮಂಜಣ್ಣ ಯಬಸೂರ, ಸಲ್ಮಿಂಸಾಬ ಆಡೂರು, ಶರಣಯ್ಯ ಹಿರೇಮಠ್ ಸೇರಿದಂತೆ ಬಹುತೇಕ ಕಾರ್ಯಕರ್ತರು ಇದ್ದರು.