ಕನ್ನಡದ ಮಠ ಎಂದೇ ಪ್ರಸಿದ್ಧಿ ಪಡೆದಿರುವ ಬೀದರ್ ಜಿಲ್ಲೆಯ ಭಾಲ್ಕಿ ಹಿರೇಮಠ ಸಂಸ್ಥಾನದ ಗುರು ಪರಂಪರೆ, ಗತ ವೈಭವದ ಇತಿಹಾಸವು ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಅನಾವರಣಗೊಳ್ಳಲಿದೆ.
ಈ ಬಾರಿಯ ಮೈಸೂರು ದಸರಾ ಉತ್ಸವಕ್ಕೆ ರಾಜ್ಯದ 37 ವಿವಿಧ ಸ್ತಬ್ಧ ಚಿತ್ರಗಳು ಆಯ್ಕೆಯಾಗಿವೆ. ಅದರಲ್ಲಿ ಭಾಲ್ಕಿ ಹಿರೇಮಠದ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರ ಸ್ತಬ್ಧ ಚಿತ್ರ ಪ್ರದರ್ಶನಗೊಳ್ಳುವುದು ವಿಶೇಷವಾಗಿದೆ. ಪ್ರತಿಯೊಂದು ಜಿಲ್ಲೆಯಿಂದ ವಿವಿಧ ಕ್ಷೇತ್ರಗಳ ಗಮನ ಸೆಳೆಯುವ ಸ್ಪಬ್ಧ ಚಿತ್ರಗಳು ಸೇರಿ ಜನ ಜಾಗೃತಿ ಸ್ತಬ್ಧ ಚಿತ್ರಣಗಳು ದಸರಾ ಉತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ಜಗತ್ತಿನ ಗಮನ ಸೆಳೆಯಲಿವೆ.
ಗಡಿಭಾಗದಲ್ಲಿ ಕನ್ನಡ ಮತ್ತು ವಚನ ಸಾಹಿತ್ಯ ಪ್ರಸಾರಕ್ಕಾಗಿ ಅವಿರತ ಶ್ರಮಿಸಿದ ಡಾ. ಚನ್ನಬಸವ ಪಟ್ಟದ್ದೇವರ ಸೇವೆಯನ್ನು ಜಿಲ್ಲಾ ಪಂಚಾಯಿತಿ ಬೀದರ್, ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಇಲಾಖೆ ಗುರುತಿಸಿ, ಮೈಸೂರು ದಸರಾ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಚನ್ನಬಸವ ಪಟ್ಟದೇವರ ಹೆಸರಿನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕೆ ಮೈಸೂರು ದಸರಾ ಮಹೋತ್ಸವ ಸಮಿತಿ ಒಪ್ಪಿಗೆ ಸೂಚಿಸಿದ್ದು, ನಾಳೆ ನಡೆಯಲಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಪಟ್ಟದ್ದೇವರ ಸ್ತಬ್ಧಚಿತ್ರ ಪ್ರದರ್ಶನ ನಡೆಯುತ್ತಿರುವುದು ಜಿಲ್ಲೆಗೆ ಹೆಮ್ಮೆ ತರಿಸಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಮನುವಾದಕ್ಕೆ ವಿರುದ್ಧವಾಗಿ ಹುಟ್ಟಿದ್ದು ಬಸವ ಧರ್ಮ : ದಿನೇಶ್ ಅಮೀನ್ ಮಟ್ಟು
ಗಡಿಭಾಗದಲ್ಲಿ ಡಾ.ಚನ್ನಬಸವ ಪಟ್ಟದ್ದೇವರು ಸಲ್ಲಿಸಿರುವ ಕನ್ನಡ, ವಚನ ಸಾಹಿತ್ಯ ಪ್ರಸಾರ ಕಾರ್ಯ, ಅಕ್ಷರ, ಭಕ್ತ ಸಮೂಹ, ಆಧ್ಯಾತ್ಮ ವೈಭವ ಸ್ತಬ್ಧಚಿತ್ರದಲ್ಲಿ ಕಂಗೊಳಿಸುತ್ತಿರುವುದು ಗಡಿ ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.