ಲೋಕಸಭಾ ಚುನಾವಣೆಯ ನಂತರ ನಡೆದ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಸ್ಪಷ್ಟ ತೀರ್ಪು ನೀಡಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಸತತವಾಗಿ ಮೂರನೇ ಬಾರಿ ಅಧಿಕಾರಕ್ಕೆ ಏರಿದೆ. ಆಡಳಿತದ ವಿರೋಧಿ ಅಲೆಯಲ್ಲಿಯೇ ಈಜಿದ ಬಿಜೆಪಿ ಈಗ ಗೆಲುವಿನ ದಡ ಸೇರಿದೆ. ಇನ್ನು ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) – ಕಾಂಗ್ರೆಸ್ ಮೈತ್ರಿಕೂಟ ಸರಳ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. 2014ರ ಚುನಾವಣೆಯಲ್ಲಿ ಕೇವಲ ಮೂವರು ಪಕ್ಷೇತರರು ಗೆದ್ದಿದ್ದರೆ, ಈ ಬಾರಿ, ಏಳು ಪಕ್ಷೇತರರು ವಿಜಯಮಾಲೆ ಧರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ಯನ್ನು ರದ್ದುಗೊಳಿಸಿದ ನಂತರ, ಬರೋಬ್ಬರಿ 10 ವರ್ಷಗಳ ಬಳಿಕ ವಿಧಾನಸಭಾ ಚುನಾವಣೆ ನಡೆದಿದೆ. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಯ ಸಾಧನೆ ಏನಿರಬಹುದು ಎಂಬುದು ಸಾಮಾನ್ಯವಾಗಿ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ಬಿಜೆಪಿಗೆ ಕಾಶ್ಮೀರದ ಭಾಗದಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ಜಮ್ಮು ಭಾಗದಲ್ಲಿ ತನ್ನ ಹಿಡಿತವನ್ನು ಬಿಗಿಗೊಳಿಸಿದೆ.
ಜಮ್ಮು ಕಾಶ್ಮೀರದ ಚುಕ್ಕಾಣಿ ‘ಇಂಡಿಯಾ’ ಕೈಸೇರಿದ್ದು, ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ), ಸಿಪಿಐಎಂನ ‘ಇಂಡಿಯಾ’ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಿದೆ. ಒಮರ್ ಅಬ್ದುಲ್ಲಾ ಮುಂದಿನ ಮುಖ್ಯಮಂತ್ರಿ ಎಂದು ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಘೋಷಿಸಿದ್ದಾರೆ.
ಇನ್ನು ಈ ಬಾರಿ ಚುನಾವಣೆಗೂ ಮೊದಲೇ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದವು. ಕ್ಷೇತ್ರಗಳನ್ನು ಹಂಚಿಕೊಂಡಿದ್ದವು. 51 ಕ್ಷೇತ್ರಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು. ಕಾಂಗ್ರೆಸ್ ಪಕ್ಷ 32 ಕ್ಷೇತ್ರಗಳಲ್ಲಿ ಹಾಗೂ ಇಂಡಿಯಾ ಮೈತ್ರಿಯಡಿ ಕಮ್ಯೂನಿಸ್ಟ್ ಪಕ್ಷಕ್ಕೆ 1 ಸೀಟನ್ನು ಬಿಟ್ಟುಕೊಡಲು ಮೈತ್ರಿ ಪಕ್ಷಗಳು ನಿರ್ಧರಿಸಿದ್ದವು.
ಚುನಾವಣೆಯಲ್ಲಿ ಎನ್‌ಸಿ 42 ಸ್ಥಾನಗಳನ್ನೂ, ಕಾಂಗ್ರೆಸ್ 6, ಸಿಪಿಐ(ಎಂ) 1 ಕ್ಷೇತ್ರಗಳನ್ನೂ ಹಾಗೂ ಬಿಜೆಪಿ 29 ಸ್ಥಾನಗಳನ್ನೂ ಗೆದ್ದಿವೆ. ಪಿಡಿಪಿ ಮತ್ತು ಇತರರು 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಇನ್ನೊಂದೆಡೆ, ಲಡಾಖ್ ಜನರಿಗೆ ಮೋದಿ ಸರ್ಕಾರ ಅನ್ಯಾಯ ಮಾಡಿದ್ದರೂ, ವಿಶೇಷ ಸ್ಥಾನಮಾನವನ್ನ ಕಸಿದುಕೊಂಡು ರಾಜ್ಯತ್ವವನ್ನ ಕಿತ್ತುಕೊಂಡು, ರಾಜ್ಯವನ್ನ ಇಬ್ಭಾಗ ಮಾಡಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಮಾಡಿದರೂ ಕೂಡ ಬಿಜೆಪಿ ಜಮ್ಮು ಕಾಶ್ಮೀರದಲ್ಲಿ ತನ್ನ ಸ್ಥಾನಗಳನ್ನ ಹಾಗೆಯೇ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಇದರ ನಡುವೆಯೇ ಇಂಡಿಯಾ ಒಕ್ಕೂಟಕ್ಕೆ ಸಿಕ್ಕ ಈ ಗೆಲುವು ನಿರ್ಣಾಯಕವಾಗಿದೆ.
ಹೌದು, 2009 ರಿಂದ 2015ರಲ್ಲಿ ಇದೇ ನ್ಯಾಷನಲ್ ಕಾನ್ಫರೆನ್ಸ್ ಜೊತೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್, ಸುಮಾರು 9 ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಮರಳಿದೆ. 2015ರಲ್ಲಿ ಎನ್‌ಸಿ ಪಕ್ಷ 15 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಈಗ 42 ಸ್ಥಾನಗಳಲ್ಲಿ ಜಯ ಗಳಿಸಿದೆ. ಕಾಂಗ್ರೆಸ್ 6 ಸ್ಥಾನಗಳಲ್ಲಿ ಗೆದ್ದು, ಮೈತ್ರಿ ಸರ್ಕಾರ ರಚನೆ ಮಾಡಿವೆ. ಬಾರಿ ದೊಡ್ಡ ಗೆಲುವು ಸಾಧಿಸಿವೆ.
ಮೆಹಬೂಬಾ ಮುಫ್ತಿ ಅವರ ಪಿಡಿಪಿ ಪಕ್ಷ 2014ರಲ್ಲಿ 28 ಸ್ಥಾನಗಳನ್ನ ಗಳಿಸಿತ್ತು. ಆದರೀಗ ಕೇವಲ 3 ಸ್ಥಾನಗಳಿಗೆ ಕುಸಿದಿದೆ. ಅಂತೆಯೇ, ಕಾಂಗ್ರೆಸ್ ಕೂಡ 17ರಿಂದ ಈಗ 6ಕ್ಕೆ ಇಳಿದಿದೆ. ಆದರೆ, ಬಿಜೆಪಿ ತನ್ನ ಸ್ಥಾನಗಳನ್ನು ಕಳೆದುಕೊಳ್ಳದೇ ಹಾಗೆಯೇ ಉಳಿಸಿಕೊಂಡಿದೆ. ಕಳೆದ ಬಾರಿ 25 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಈಗ 28 ಸ್ಥಾನಗಳನ್ನು ಪಡೆದುಕೊಂಡಿದೆ. ಮೂರು ಸ್ಥಾನಗಳನ್ನು ಗಳಿಸಿಕೊಂಡಿದೆ.
ಯಾವುದೇ ಪ್ರಾದೇಶಿಕ ಪಕ್ಷಗಳು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿಲ್ಲ. ಈ ಹಿಂದೆ 2014ರಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದ ಪಿಡಿಪಿ, ಈ ಬಾರಿ ಸಂಪೂರ್ಣವಾಗಿ ಜಮ್ಮು ಕಾಶ್ಮೀರದಲ್ಲಿ ನೆಲಕಚ್ಚಿದೆ. 2018ರಲ್ಲಿ ಮೈತ್ರಿ ಮುರಿದು ಬಿದ್ದಿತ್ತು. ಆದರೂ, ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚನೆ ಮಾಡುವುದಕ್ಕೆ ಪಿಡಿಪಿ ಕಾರಣವಾಗಿತ್ತು. ಆದರೆ, ಈ ಬಾರಿ ಚುನಾವಣೆಯಲ್ಲಿ ಪಿಡಿಪಿ ಸಂಪೂರ್ಣವಾಗಿ ನೆಲಕಚ್ಚಿದೆ.
ಹಿಂದೂಗಳ ಪ್ರಾಬಲ್ಯದ ಜಮ್ಮುವಿನಲ್ಲಿ ಬಿಜೆಪಿಗೆ ಹಾಗೂ ಮುಸ್ಲಿಮರ ಪ್ರಾಬಲ್ಯ ಇರುವ ಕಾಶ್ಮೀರದಲ್ಲಿ ಮೈತ್ರಿಕೂಟಕ್ಕೆ ಮತದಾರರು ಜೈ ಎಂದಿದ್ದಾರೆ.
ಇನ್ನು ರಾಜ್ಯಕ್ಕಿದ ವಿಶೇಷ ಸ್ಥಾನಮಾನವನ್ನ ಕಿತ್ತುಕೊಂಡ ಬಿಜೆಪಿಗರ ವಿರುದ್ಧ ಜನಕ್ಕೆ ಇನ್ನೂ ಸಿಟ್ಟಿದೆ. ಇಷ್ಟಿದ್ದರೂ ಹಿಂದೂ ಮತಗಳನ್ನ ತನ್ನ ತೆಕ್ಕೆಯಲ್ಲಿಯೇ ಬಿಜೆಪಿ ಹಿಡಿದಿಟ್ಟುಕೊಂಡಿದೆ. ಜಮ್ಮುವಿನ ಹಿಂದೂ ಮತಗಳು ಬಿಜೆಪಿ ಪರವಾಗಿ ಚಲಾವಣೆಯಾಗಿವೆ. ಅಲ್ಲದೇ, ಬಿಜೆಪಿ ಗೆದ್ದಿರುವ ಬಹುತೇಕ ಕ್ಷೇತ್ರಗಳು ಜಮ್ಮು ಪ್ರದೇಶದಲ್ಲಿವೆ ಎಂಬುದು ವಿಶೇಷ.
ಜಮ್ಮು-ಕಾಶ್ಮೀರ ಈಗ ಪೂರ್ಣ ಪ್ರಮಾಣದ ರಾಜ್ಯವಾಗಿ ಉಳಿದಿಲ್ಲ. ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಒಡೆದುಹೋಗಿದೆ. 1957ರಿಂದಲೂ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಆ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2019ರಲ್ಲಿ ಕಸಿದುಕೊಂಡಿತು. ರಾಜ್ಯವನ್ನು ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳಾಗಿ ವಿಂಗಡಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಿದೆ.
ಲಡಾಖ್‌ಗೆ ಸಾಂವಿಧಾನಿಕ ರಕ್ಷಣೆ ಮತ್ತು ಜನರ ರಾಜಕೀಯ ಹಕ್ಕುಗಳನ್ನು ಮರಳಿ ನೀಡಬೇಕೆಂದು ಹೋರಾಟಗಳು ನಡೆಯುತ್ತಿವೆ. ಲಡಾಖ್‌ಗೆ ಸಾಂವಿಧಾನಿಕ ರಕ್ಷಣೆಗಾಗಿ ಶಿಕ್ಷಣ ತಜ್ಞ, ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಈ ಹಿಂದೆ 21ದಿನ ಉಪವಾಸ ಸತ್ಯಾಗ್ರಹ ನಡೆಸಿದ್ದ ವಾಂಗ್‌ಚುಕ್ ಅವರು, ಲಡಾಖ್‌ನಿಂದ ದೆಹಲಿಗೆ ಪಾದಯಾತ್ರೆ ಕೂಡ ನಡೆಸಿದ್ದರು. ಆದರೆ, ದೆಹಲಿ ಪೊಲೀಸರು ಅವರನ್ನ ಬಂಧಿಸಿದ್ದರು. ಈ ಹಿಂದೆ ಮೋದಿ ಪರವಾಗಿದ್ದ ವಾಂಗ್ಚುಕ್ ಅವರು ಇದೀಗ ಮೋದಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕಾಶ್ಮೀರ ಮತ್ತು ಲಡಾಖ್ ಭಾಗದ ಜನರು ಬಿಜೆಪಿ-ಪಿಡಿಪಿ ವಿರುದ್ಧ ಮತ ಚಲಾಯಿಸಿದ್ದಾರೆ. ಆ ಮತಗಳನ್ನು ಎನ್‌ಸಿ ಪಡೆದುಕೊಂಡಿದೆ.
370ನೇ ವಿಧಿ ರದ್ದಾದ ಬಳಿಕ ಈ ಚುನಾವಣೆ ನಡೆದಿದೆ. ಈ ಭಾಗದಲ್ಲಿ 5 ವರ್ಷ ಯಾವುದೇ ಚುನಾವಣೆ ನಡೆದಿರಲಿಲ್ಲ. ಐದು ವರ್ಷಗಳ ಕಾಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಹತ್ತಿಕ್ಕಲಾಗಿತ್ತು. ಜನರು ಪ್ರಶ್ನೆ ಮಾಡುವ ಹಕ್ಕನ್ನ ಕಿತ್ತುಕೊಂಡಿದ್ದರು. ಸುಪ್ರೀಂ ಕೋರ್ಟ್ ಚುನಾವಣೆ ನಡೆಸುವಂತೆ ಚಾಟಿ ಬೀಸಿದ ಬಳಿಕ ಈ ಬಾರಿ ಚುನಾವಣೆ ನಡೆಸಲಾಗಿದೆ.
ಅಲ್ಲದೇ, ಜಮ್ಮು ಕಾಶ್ಮೀರವನ್ನ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹಲವಾರು ತಂತ್ರಗಳನ್ನ ರೂಪಿಸಿತ್ತು. ಮೊದಲನೆಯದಾಗಿ, ಜಮ್ಮು ಕಾಶ್ಮೀರವನ್ನ ನೆಗೆಟಿವ್ ಆಗಿ ಬಿಂಬಿಸುವುದಕ್ಕೆ ಮುಸ್ಲಿಮರನ್ನ ನೆಗೆಟಿವ್ ಆಗಿ ತೋರಿಸುವುದಕ್ಕೆ ಕಾಶ್ಮೀರ್ ಫೈಲ್ಸ್ ಸೇರಿದಂತೆ ರಾಜಕೀಯ ಪ್ರೇರಿತ ಪ್ರೋಪಗ್ಯಾಂಡ್ ಸಿನಿಮಾಗಳನ್ನ ನಿರ್ಮಾಣ ಮಾಡಿತ್ತು. ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಅದನ್ನ ಹತ್ತಿಕ್ಕುವ ಭರಾಟೆಯಲ್ಲಿ ಮುಸ್ಲಿಮರನ್ನ ಭಯೋತ್ಪಾದಕರು ಎಂದು ಬಿಂಬಿಸುವ ಪ್ರಯತ್ನಗಳೂ ನಡೆದಿದ್ದವು. ಅಷ್ಟೇ ಅಲ್ಲ, ಬೂಕರ್ ಪ್ರೈಸ್ ವಿನ್ನರ್ ಲೇಖಕಿ ಅರುಂಧತಿ ರಾಯ್ ಅವರು ಜಮ್ಮು ಕಾಶ್ಮೀರ್ ಪರವಾಗಿ ನಿಂತಿದ್ದಕ್ಕೆ ಅವರ ಮೇಲೆ ದೇಶದ್ರೋಹಿ ಕೇಸ್ ಹಾಕಲಾಗಿದೆ.
ಜಮ್ಮು ಕಾಶ್ಮೀರದ ಜನರು ವಿಧಾನಸಬಾ ಚುನಾವಣೆಯ ಫಲಿತಾಂಶಕ್ಕಾಗಿ ಕಾತುರದಿಂದ ಜನರು ಕಾಯುತ್ತಿರುವ ಸಂದರ್ಭದಲ್ಲಿಯೇ ಜಮ್ಮು ಮತ್ತು ಕಾಶ್ಮೀರ್ ವಿಧಾನಸಭೆಗೆ ಐವರು ಸದಸ್ಯರನ್ನ ನಾಮನಿರ್ದೇಶನ ಮಾಡುವುದಕ್ಕೆ ಲೆಫ್ಟಿನೆಂಟ್ ಗವರ್ನರ್‌ಗೆ ವಿಶೇಷ ಅಧಿಕಾರ ನೀಡಿ ಕೇಂದ್ರ ಸರ್ಕಾರ ಆದೇಶಿಸಿತ್ತು.
ಈ ಸುದ್ದಿ ಓದಿದ್ದೀರಾ? ಫಲಿತಾಂಶಕ್ಕೂ ಮುನ್ನವೇ ಹೆದರಿದ ಬಿಜೆಪಿ; ಜಮ್ಮು- ಕಾಶ್ಮೀರದಲ್ಲಿ 5 ಶಾಸಕರ ನಾಮನಿರ್ದೇಶನಕ್ಕೆ ಗವರ್ನರ್‌ಗೆ ಅಧಿಕಾರ
ಜಮ್ಮು-ಕಾಶ್ಮೀರದ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು, ತಮ್ಮ ಆಣತಿಯಲ್ಲಿ ಕೆಲಸ ಮಾಡುವ ಲೆಫ್ಟಿನೆಂಟ್ ಗವರ್ನರ್‍ಗೆ ವಿಶೇಷಾಧಿಕಾರ ನೀಡಿ 5 ಶಾಸಕರನ್ನು ನಾಮನಿರ್ದೇಶನ ಮಾಡಲು ಮೋದಿ ಸರ್ಕಾರ ಹೊಂಚು ಹಾಕಿತ್ತು. ಸೋಲಿನ ಭೀತಿಯಲ್ಲಿದ್ದ ಬಿಜೆಪಿ, ಹೇಗಾದರೂ ಮಾಡಿ, ಸರ್ಕಾರ ರಚಿಸಬೇಕೆಂದು ಇಂತಹ ಮೂರನೇ ದರ್ಜೆಯ ರಾಜಕಾರಣಕ್ಕಿಳಿದಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿತ್ತು.
ಕಳೆದ 6 ವರ್ಷಗಳಲ್ಲಿ ಜಮ್ಮು-ಕಾಶ್ಮೀರದ ಮೇಲೆ ಬಿಜೆಪಿ ಎಸಗಿದ ಕ್ರೌರ್ಯಕ್ಕೆ ಈಗ ಅಲ್ಲಿನ ಜನರು ಪ್ರತ್ಯುತ್ತರ ನೀಡಿದ್ದಾರೆ. ವಿಶೇಷ ಸ್ಥಾನಮಾನ, ರಾಜ್ಯತ್ವ, ರಾಜ್ಯದ ಜನರ ಹಕ್ಕುಗಳನ್ನು ಕಸಿದುಕೊಂಡ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮಣ್ಣು ಮುಕ್ಕಿಸಿದ್ದಾರೆ. ಜಮ್ಮು ಪ್ರದೇಶವನ್ನು ದಾಟಿ, ಬೇರೆ ಪ್ರದೇಶಗಳಲ್ಲಿ ಬಿಜೆಪಿ ನೆಲೆಯನ್ನೂ ಕಾಣದಂತೆ ಹೊರದಬ್ಬಿದ್ದಾರೆ. ಇಡೀ ಜಮ್ಮು ಕಾಶ್ಮೀರ ನಮ್ಮ ಪರವಾಗಿದೆ. ಕೇಂದ್ರ ಸರ್ಕಾರದ ಕ್ರಮಗಳನ್ನು ಒಪ್ಪಿಕೊಂಡಿದೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿತ್ತು. ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿತ್ತು. ಆದರೆ, ನಾವು ಕೇಂದ್ರದ ಕ್ರಮವನ್ನು ಒಪ್ಪಿಕೊಂಡಿಲ್ಲ. ಬಿಜೆಪಿಯನ್ನು ಅಪ್ಪಿಕೊಳ್ಳುವುದೂ ಇಲ್ಲವೆಂದು ಕಾಶ್ಮೀರ ಮತ್ತು ಲಡಾಖ್ ಜನರು ಇಡೀ ದೇಶಕ್ಕೆ ಸಾರಿ ಹೇಳಿದ್ದಾರೆ. ಬಿಜೆಪಿಯ ಬೆನ್ನು ಮುರಿದಿದ್ದಾರೆ.