ಮುಲ್ತಾನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಇನಿಂಗ್ಸ್ ಮತ್ತು 47 ರನ್ಗಳಿಂದ ಹೀನಾಯ ಸೋಲನುಭವಿಸಿದೆ. ಸೋಲಿನ ಜೊತೆ ಪಾಕ್ ತಂಡ ಕೆಟ್ಟ ದಾಖಲೆಯೊಂದನ್ನು ಬರೆದಿದೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೆ 550ಕ್ಕೂ ಅಧಿಕ ರನ್ಗಳಿಸಿ ಸೋಲು ಕಂಡ ಮೊದಲ ತಂಡ ಎಂಬ ಕೆಟ್ಟ ದಾಖಲೆಯನ್ನು ಪಾಕಿಸ್ತಾನ ನಿರ್ಮಿಸಿಕೊಂಡಿತು.
ತವರು ನೆಲದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಇನಿಂಗ್ಸ್ ಸಮೇತ 47 ರನ್ಗಳಿಂದ ಹೀನಾಯ ಸೋಲನುಭವಿಸಿದೆ. ಪಾಕಿಸ್ತಾನದ ಮುಲ್ತಾನ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಾಕ್ ಮೊದಲ ಇನ್ನಿಂಗ್ಸ್ನಲ್ಲೆ 556/10 ರನ್ಗಳನ್ನು ಪೇರಿಸಿತ್ತು. ಶಫೀಖ್ (102), ಶಾನ್ ಮಸೂದ್ (151), ಅಘಾ ಸಲ್ಮಾನ್ (104) ಅವರ ಶತಕದ ನೆರವಿನಿಂದ ಪಾಕ್ಗೆ ಈ ಬೃಹತ್ ರನ್ಗಳನ್ನು ಕಲೆ ಹಾಕಲು ಸಾಧ್ಯವಾಯಿತು.
ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಕೂಡ 7 ವಿಕೆಟ್ ಕಳೆದುಕೊಂಡು 823 ರನ್ಗಳ ದಾಖಲೆ ಮೊತ್ತವನ್ನು ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ 267 ರನ್ಗಳ ಮುನ್ನಡೆ ಗಳಿಸಿತು.ಎರಡನೇ ಇನಿಂಗ್ಸ್ಗೆ ಬ್ಯಾಟಿಂಗ್ಗೆ ಆಗಮಿಸಿದ ಪಾಕ್ 220 ರನ್ಗಳಿಗೆ ಸರ್ವಪತನ ಕಂಡು ಹೀನಾಯ ಸೋಲನುಭವಿಸಿತು.
ಈ ಸುದ್ದಿ ಓದಿದ್ದೀರಾ? ಜಪಾನಿನ ನಿಹಾನ್ ಹಿಡಾಂಕ್ಯೊ ಸಂಸ್ಥೆಗೆ 2024ರ ನೊಬೆಲ್ ಶಾಂತಿ ಪ್ರಶಸ್ತಿ
ಇದರೊಂದಿಗೆ ತನ್ನ ಹೆಸರಿಗೆ ಕೆಟ್ಟ ದಾಖಲೆಯೊಂದನ್ನು ಸೇರಿಸಿಕೊಂಡಿದೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಮೊದಲ ಇನ್ನಿಂಗ್ಸ್ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ನಂತರವೂ ಇನ್ನಿಂಗ್ಸ್ನಿಂದ ಟೆಸ್ಟ್ ಪಂದ್ಯವನ್ನು ಸೋತಿರುವುದು ಇದೇ ಮೊದಲು.
ಹ್ಯಾರಿ ಬ್ರೂಕ್ ತ್ರಿಶತಕ
ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಪರ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದರು. ಜೋರೂಟ್ 262 ರನ್ ಸಿಡಿಸಿ ದ್ವಿಶತಕ ಪೂರೈಸಿದರು. ಮತ್ತೊಂದೆಡೆ ಹ್ಯಾರಿ ಬ್ರೂಕ್ ಭರ್ಜರಿ 317 ರನ್ಗಳಿಸಿ ತ್ರಿಶತಕ ಸಿಡಿಸಿದರು. ಇದರೊಂದಿಗೆ ಇಂಗ್ಲೆಂಡ್ ಪರ ವೇಗದ ತ್ರಿಶತಕ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೂ ಪಾತ್ರರಾದರು. ಅಲ್ಲದೇ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ನಲ್ಲಿ 454 ರನ್ಗಳ ದಾಖಲೆಯ ಜೊತೆಯಾಟವನ್ನು ಆಡಿದ ಮೊದಲ ಜೋಡಿ ಎಂಬ ಹೆಗ್ಗಳಿಕೆ ರೂಟ್, ಬ್ರೂಕ್ ಅವರದ್ದಾಯಿತು.
ಪಾಕ್ ವಿರುದ್ಧದ ಗೆಲುವಿನೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಇದೇ ಮೈದಾನದಲ್ಲಿ ಅಕ್ಟೋಬರ್ 15 ರಂದು ಪ್ರಾರಂಭವಾಗಲಿದೆ.
