ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಕೇಸ್ ವಾಪಸ್‌ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವ ಸಂಪುಟದ ನಿರ್ಧಾರವು ಅವರ ಮತಾಂಧತೆಯ ಪರಮಾವಧಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ತಮ್ಮ ನಿವಾಸದ ಎದುರು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಕೇಸ್ ವಾಪಸ್ ತೆಗೆದುಕೊಳ್ಳುವುದು ಭಯೋತ್ಪಾದನಾ ಚಟುವಟಿಕೆಗೆ ಸಮಾನವಾದ ಘಟನೆಯಾಗಿದೆ. ಗಲಭೆ ಪ್ರಕರಣವು ಎನ್ಐಎ ನ್ಯಾಯಾಲಯದಲ್ಲಿದೆ. ಆರೋಪಿಗಳ ಜಾಮೀನು ಉಚ್ಛ, ಸರ್ವೋಚ್ಛ ಹಾಗೂ ವಿಚಾರಣಾ ನ್ಯಾಯಾಲಯಗಳಲ್ಲಿ ತಿರಸ್ಕರಿಸ್ಕೃತಗೊಂಡಿದ್ದವು. ಪೋಲಿಸ್ ಹಾಗೂ ನ್ಯಾಯಾಂಗ ಎರಡೂ ಇಲಾಖೆಗಳು ಪ್ರಕರಣವನ್ನು ಹಿಂಪಡೆಯುವುದನ್ನು ವಿರೋಧಿಸಿದರೂ ರಾಜ್ಯ ಕಾಂಗ್ರೆಸ್ ನ ಈ ನಿರ್ಧಾರವು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರನ್ನು ಬೆಂಬಲಿಸುವಂಥ ಕಾರ್ಯವನ್ನು ಮಾಡುತ್ತಿದೆ ಎಂದು ಕಿಡಿಕಾರಿದರು.
ಇದನ್ನು ಓದಿದ್ದೀರಾ? ಧಾರವಾಡ | ಹಿಟ್ ಅಂಡ್ ರನ್: ಕೆಲಸ ಮುಗಿಸಿ ಮನೆಗೆ ಹೊರಟಿದ್ದ ವ್ಯಕ್ತಿ ಸಾವು
ಮುಂದುವರೆದು ಇದು ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ದೇಶದಲ್ಲಿ ಮೋದಿ ಸರ್ಕಾರ ಮತಾಂಧ ಶಕ್ತಿಗಳ ಭಯೋತ್ಪಾದನಾ ಚಟುವಟಿಕೆ ವಿರುದ್ಧ ಹೋರಾಟ ಮಾಡುತ್ತಿರುವಾಗ ಕಾಂಗ್ರೆಸ್ ಅದಕ್ಕೆ ತದ್ವಿರುದ್ಧವಾಗಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆಕ್ರೋಶಗೊಂಡರು.