ಬಿಎಸ್‌ಪಿ ಇನ್ಮುಂದೆ ಯಾವುದೇ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಲ್ಲ ಮತ್ತು ಎನ್‌ಡಿಎ, ಇಂಡಿಯಾ ಒಕ್ಕೂಟದಿಂದಲೂ ದೂರವಿರಲಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಶುಕ್ರವಾರ ಹೇಳಿದ್ದಾರೆ. ಹರಿಯಾಣದ ಚುನಾವಣೆಯಲ್ಲಿ ಹೀನಾಯ ಸೋಲನ್ನು ಪ್ರಸ್ತಾಪಿಸಿ ಮಾಯಾವತಿ ಈ ಘೋಷಣೆ ಮಾಡಿದ್ದಾರೆ.
‘ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶಗಳು ಮತ್ತು ಹಿಂದಿನ ಪಂಜಾಬ್ ಚುನಾವಣೆಗಳ ಕಹಿ ಅನುಭವ’ದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಚುನಾವಣೆಗಳಲ್ಲಿ ಬಿಎಸ್‌ಪಿ ನಿರಂತರವಾಗಿ ತನ್ನ ಮತಗಳನ್ನು ಮೈತ್ರಿ ಪಕ್ಷಗಳಿಗೆ ವರ್ಗಾಯಿಸಿದೆ. ಆದರೆ ಈ ಮೈತ್ರಿದಾರರಿಂದ ನಮ್ಮ ಪಕ್ಷಕ್ಕೆ ಮತ ಬರುವ ವಿಚಾರದಲ್ಲಿ ನಿರಾಶಾದಾಯಕ ಫಲಿತಾಂಶವಿದೆ. ಇದು ಪಕ್ಷದ ಕಾರ್ಯಕರ್ತರನ್ನು ನಿರಾಶೆಗೊಳಿಸಿದೆ. ಪಕ್ಷದ ಚಳವಳಿಯನ್ನು ಘಾಸಿಗೊಳಿಸಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹರಿಯಾಣ ಚುನಾವಣೆ | ಬಿಎಸ್‌ಪಿ ಸೋಲಿಗೆ ಜಾಟ್‌ಗಳ ಜಾತಿವಾದಿ ಮನಸ್ಥಿತಿ ಕಾರಣ: ಮಾಯಾವತಿ
ಬಿಎಸ್‌ಪಿ ಕಾರ್ಯಕರ್ತರು ಮತ್ತಷ್ಟು ನಿರಾಶೆಗೆ ಒಳಗಾಗದಂತೆ ನೋಡಿಕೊಳ್ಳುವುದು ಮತ್ತು ನಮ್ಮ ಚಳುವಳಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶ ಮತ್ತು ಪಂಜಾಬ್‌ಗೆ ಮುಂಚಿನ ಚುನಾವಣೆಯ ಕಹಿ ಅನುಭವವನ್ನು ಪರಿಗಣಿಸಿ ಇನ್ನು ಯಾವುದೇ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಲಾಗಿದೆ. ಹಾಗೆಯೇ ಈ ಹಿಂದಿನಂತೆಯೇ ಬಿಜೆಪಿ/ಎನ್‌ಡಿಎ ಮತ್ತು ಕಾಂಗ್ರೆಸ್/ಇಂಡಿಯಾ ಮೈತ್ರಿಕೂಟದಿಂದ ಅಂತರ ಕಾಯ್ದುಕೊಳ್ಳಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಹಾಗೆಯೇ “ಬಿಎಸ್‌ಪಿಯು ಅಂಬೇಡ್ಕರ್‌ವಾದಿ ಮೌಲ್ಯಗಳನ್ನು ಪ್ರತಿನಿಧಿಸುವ ಏಕೈಕ ಪಕ್ಷವಾಗಿದೆ. ಜಾತಿವಾದಿ ಶಕ್ತಿಗಳು ನಮ್ಮನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಿದರೂ ಕೂಡಾ ಬಹುಜನ ಸಮಾಜದ ಸಬಲೀಕರಣಕ್ಕೆ ನಾವು ಬದ್ಧವಾಗಿದ್ದೇವೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬಿಎಸ್‌ಪಿ ರಾಷ್ಟ್ರ ಘಟಕದ ಅಧ್ಯಕ್ಷೆಯಾಗಿ ಮಾಯಾವತಿ ಮರು ಆಯ್ಕೆ
“ಬಿಎಸ್‌ಪಿಯು ಸ್ವಾರ್ಥಕ್ಕಾಗಿ ಇತರ ಪಕ್ಷಗಳು ಅಥವಾ ನಾಯಕರೊಂದಿಗೆ ವಿಲೀನಗೊಳ್ಳುವ ಸಂಘಟನೆಯಲ್ಲ. ಬದಲಾಗಿ ಇದು ಬಹುಜನ ಸಮಾಜದ ವಿವಿಧ ಭಾಗಗಳನ್ನು ರಾಜಕೀಯ ಶಕ್ತಿಯಾಗಿ ಒಗ್ಗೂಡಿಸಿ, ಪರಸ್ಪರ ಸಹಕಾರ ಮತ್ತು ಸಹೋದರತ್ವದ ಮೇಲೆ ಅವರನ್ನು ಸ್ಥಾನಮಾನಕ್ಕೆ ಏರಿಸುವ ಆಂದೋಲನವಾಗಿದೆ” ಎಂದು ಮಾಯಾವತಿ ಹೇಳಿದರು.
ಹರಿಯಾಣದಲ್ಲಿ ಬಿಎಸ್‌ಪಿ ಭಾರತೀಯ ರಾಷ್ಟ್ರೀಯ ಲೋಕದಳದೊಂದಿಗೆ (ಐಎನ್‌ಎಲ್‌ಡಿ) ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದೆ. ಐಎನ್‌ಎಲ್‌ಡಿ ಒಟ್ಟಾಗಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ದಬ್ವಾಲಿ ಮತ್ತು ರಾನಿಯಾ ಎಂಬ ಎರಡು ಸ್ಥಾನಗಳಲ್ಲಿ ಗೆದ್ದು ಶೇಕಡ 4.14 ಮತಗಳನ್ನು ಪಡೆದಿದೆ. ಬಿಎಸ್‌ಪಿ ಕೇವಲ ಶೇಕಡ 1.82ರಷ್ಟು ಮತಗಳನ್ನು ಪಡೆದಿದೆ. ಆದರೆ ಯಾವುದೇ ಕ್ಷೇತ್ರದಲ್ಲೂ ಜಯಗಳಿಸಿಲ್ಲ.
