ತಮ್ಮ ಸ್ನೇಹಿತ ತನ್ನ ಗೆಳತಿಯನ್ನು ‘ಲಾಂಗ್ ಡ್ರೈವ್’ಗೆ ಕರೆದುಕೊಂಡು ಹೋಗಬೇಕೆಂಬ ಕಾರಣಕ್ಕೆ ಇಬ್ಬರು ವಿದ್ಯಾರ್ಥಿಗಳು ಶೋರೂಮ್‌ನಿಂದ ಹೊಸ ಕಾರನ್ನೇ ಕದ್ದಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಶ್ರೇಯ್, ಅನಿಕೇತ್ ನಗರ್ ಹಾಗೂ ದೀಪಾಂಶು ಭಾಟಿ ಕಾರನ್ನು ಕದಿಯನ್ನು ಯೋಜನೆ ರೂಪಿಸಿದ್ದರು. ಅವರಲ್ಲಿ ಇಬ್ಬರು ವಿದ್ಯಾರ್ಥಿಗಳಾಗಿದ್ದಾರೆ. ಆದರೆ, ಯಾರಿಗಾಗಿ ಯಾರು ಕಾರು ಕದಿದ್ದಾರೆ ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿಲ್ಲ.
ಘಟನೆಯ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ, ಇಬ್ಬರು ಹೆಲ್ಮೆಟ್ ಧರಿಸಿದ್ದ ಯುವಕರು ಗ್ರೇಟರ್ ನೋಯ್ಡಾದ ಕಾರು ಶೋರೂಮ್‌ನಲ್ಲಿದ್ದ ಹುಂಡೈ ವೆನ್ಯೂ ಕಾರನ್ನು ‘ಟೆಸ್ಟ್ ಡ್ರೈವ್’ ಮಾಡಲು ಕೇಳಿರುದ್ದಾರೆ. ಕಾರ್ ಡೀಲರ್ ವಾಹವನ್ನು ಪಾರ್ಕಿಂಗ್ ಸ್ಥಳದಿಂದ ಹೊರತೆಗೆದ ಬಳಿಕ, ಆ ಇಬ್ಬರೂ ಕಾರು ಏರಿದ್ದಾರೆ. ಓರ್ವ ಕಾರು ಚಲಾಯಿಸಿದರೆ, ಮತ್ತೊಬ್ಬ ಹಿಂಬದಿಯ ಸೀಟಿನಲ್ಲಿ ಕುಳಿತಿರುವುದು” ಸೆರೆಯಾಗಿದೆ.
ಕಾರು ಸ್ವಲ್ಪ ಮುಂದೆ ಹೋದ ಬಳಿಕ, ಆ ಇಬ್ಬರೂ ಯುವಕರು ಕಾರ್ ಡೀಲರ್‌ನನ್ನು ಕಾರಿನಿಂದ ಹೊರಗೆ ತಳ್ಳಿದ್ದಾರೆ. ನಂತರ, ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ. 100ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಗಳನ್ನು ಬಂಧಿಸಲಾಗಿದೆ. ಕಾರನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.