ಅಭಿವೃದ್ಧಿ ಮತ್ತು ಯೋಜನೆಗಳಿಗೆ ಸರ್ಕಾರಗಳತ್ತ ಮುಖ ಮಾಡಿ ಕಾಯದೆ ಜನರೇ ಸ್ವಸಹಕಾರದಿಂದ ಪ್ರಯತ್ನ ಮಾಡಿದಲ್ಲಿ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಗೆ ಪರಿತಪಿಸದೆ ಸ್ವತಃ ಕಬ್ಬೂರು ಗ್ರಾಮಸ್ಥರೇ ಕೆರೆ ತುಂಬಿಸುವ ಕಾರ್ಯ ಮಾಡಿರುವುದು ಅತ್ಯಂತ ಶ್ಲಾಘನೀಯ ಎಂದು ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಗ್ರಾಮಸ್ಥರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ದಾವಣಗೆರೆ ತಾಲೂಕಿನ ಕಬ್ಬೂರು ಗ್ರಾಮಸ್ಥರ ಕೆರೆಗೆ ನೀರು ಹರಿಸುವ ಪ್ರಯತ್ನದಿಂದ ತುಂಬಿರುವ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದರು.

“ನಿಸ್ವಾರ್ಥದಿಂದ ಕೂಡಿದ ಮನಸ್ಸುಗಳು ಸರ್ವರ, ಸಮಾಜದ ಹಿತವನ್ನು ಬಯಸುತ್ತವೆ. ಸ್ವಾರ್ಥಿಗಳಿಂದ ಸಮಾಜದ, ಗ್ರಾಮದ ಅಭಿವೃದ್ಧಿ ಸಾಧ್ಯವಿಲ್ಲ. ಸಮಾಜದಲ್ಲಿ ಇಂದು ಸ್ವಾರ್ಥಿಗಳು ಹೆಚ್ಚಾಗುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಗ್ರಾಮಸ್ಥರಾದ ನೀವು ಸರ್ಕಾರದ ಯೋಜನೆ ಕಡೆ ನೋಡದೆ ಕೆರೆ ತುಂಬಿಸುವ ಕಾರ್ಯ ಕೈಗೊಂಡು ಯಶಸ್ವಿಯಾಗಿರುವುದು ಅತ್ಯಂತ ಹೆಮ್ಮೆಯ ಮತ್ತು ಸಾಧನೆಯ ವಿಷಯವಾಗಿದೆ. ಭೂಮಿಯ ಮೇಲೆ ನೀರು ಸಾಕಷ್ಟಿರುತ್ತದೆ. ಆದರೆ ಅದೆಲ್ಲವೂ ಕೂಡ ಉಪಯೋಗಕ್ಕೆ ಬರುವುದಿಲ್ಲ. ಕೆರೆ, ಹಳ್ಳ, ಕೊಳ್ಳ, ತೊರೆ, ನದಿಗಳ ಮೂಲಕ ಸಮುದ್ರಕ್ಕೆ ಸಾಗುವ ನೀರನ್ನು ಹಿಡಿದಿಟ್ಟುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕಿದೆ” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಊಟದ ಬಳಿಕ ಒಂದೇ ಕುಟುಂಬದ 7 ಮಂದಿ ಅಸ್ವಸ್ಥ; ‘ಕಲುಷಿತ ನೀರು ಕಾರಣ’ ಎಂದ ಗ್ರಾಮಸ್ಥರು
“ಉಬ್ರಾಣಿ ಏತನೀರಾವರಿ ಮೊದಲು ಪ್ರಾರಂಭವಾಯಿತು. ನಂತರ ಇಪ್ಪತ್ತೆರಡು ಕೆರೆ ಏತನೀರಾವರಿ ಎರಡೂ ಕೆರೆಗಳಿಗೂ ಯಶಸ್ವಿ ಆಗಲಿಲ್ಲ. ನಂತರ ಭರಮಸಾಗರ, ಜಗಳೂರು ಏತನೀರಾವರಿ ಇವುಗಳಿಗೂ ಮೊದಲು ಪ್ರಾರಂಭವಾದ ಬಹುದೊಡ್ಡ ಯೋಜನೆ, ಸಾಸ್ವೆಹಳ್ಳಿ ಏತನೀರಾವರಿ. ಇದಕ್ಕೂ ಸಾಕಷ್ಟು ಅಡೆತಡೆಗಳು ಬಂದವು. ಕೋರ್ಟ್ ಕೂಡಾ ಶೀಘ್ರ ಯೋಜನೆ ಪರವಾಗಿ ಆದೇಶ ನೀಡಿತು. ಆದ್ದರಿಂದ ಈ ವರ್ಷ ಮುತ್ತುಗದೂರು ಕೆರೆಗೆ ಪ್ರಾಯೋಗಿಕ ನೀರು ಹರಿಯಿತು. ಇನ್ನೂ ಮುಂದಿನ ದಿನಗಳಲ್ಲಿ ಯೋಜನೆಯ ಎಲ್ಲ ಕೆರೆಗಳಿಗೂ ನೀರು ತಲುಪುವಂತೆ ನೋಡಿಕೊಳ್ಳಬೇಕಿದೆ. ಇದರಿಂದ ಸಾಕಷ್ಟು ಅಂತರ್ಜಲ ವೃದ್ದಿಯಾಗಿ ನಮ್ಮ ರೈತರ ಬದುಕು ಹಸನಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಬ್ಬೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಇದ್ದರು.