2047ರ ಹೊತ್ತಿಗೆ ಭಾರತ ದೇಶವನ್ನ ಮುಂದುವರಿದ ರಾಷ್ಟ್ರವನ್ನಾಗಿ ಮಾಡುವೆ. ಭಾರತವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಸಾಗುತ್ತಿದೆ. ಜಗತ್ತಿನ ಐದನೇ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮುವಂತೆ ಮಾಡುವೆ. ಇದೇ ‘ಮೋದಿ ಗ್ಯಾರೆಂಟಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವನ್ನೇ ಅಸ್ತ್ರವಾಗಿ ಬಳಸಿಕೊಂಡು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ, 2014ರ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರು. ಆ ಸಮಯದಲ್ಲಿ, ಒಂದು ಡಾಲರ್‌ಗೆ ಒಂದು ರೂಪಾಯಿ ಮೌಲ್ಯ ಬರುವಂತೆ ಮಾಡುತ್ತೇವೆಂದು ಬಿಜೆಪಿಗರು ಬೊಬ್ಬೆ ಹೊಡೆಯುತ್ತಿದ್ದರು. ಆದರೆ, ಆರ್ಥಿಕತೆ ವಿಚಾರದಲ್ಲಿ ಮೋದಿ ನೀಡಿದ್ದ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ. ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ-ಮತ್ತೆ ಕುಸಿತ ಕಾಣುತ್ತಲೇ ಇದೆ.
ಮನಮೋಹನ ಸಿಂಗ್ ಆಡಳಿತದ ಅವಧಿಯಲ್ಲಿ ಡಾಲರ್ ಮೌಲ್ಯ 62 ರೂಪಾಯಿ ಇತ್ತು. ಈ ರೂಪಾಯಿ ಮೌಲ್ಯವನ್ನು ಹೆಚ್ಚಿಸುವೆ ಎಂದು ಅಧಿಕಾರ ಹಿಡಿದ ಪ್ರಧಾನಿ ಮೋದಿ ಆಡಳಿತದಲ್ಲಿ ರೂಪಾಯಿ ಮೌಲ್ಯ 84.07 ರೂ.ಗೆ ತಲುಪಿದೆ. ರೂಪಾಯಿ ಮೌಲ್ಯ ಅಕ್ಟೋಬರ್ ತಿಂಗಳಿನಲ್ಲಿ ಸಾರ್ವಕಾಲಿಕ ಕುಸಿತ ಕಂಡಿದೆ. ಇದು ಸಹಜವಾಗಿಯೇ ಭಾರತೀಯ ಆರ್ಥಿಕತೆಯ ಮೇಲೆ ಅಡ್ಡ ಪರಿಣಾಮ ಬೀರಲಿದೆ.
ಆದಾಗ್ಯೂ, ಕಳೆದ ಎರಡು ತಿಂಗಳಿನಿಂದ ರೂಪಾಯಿ ಮೌಲ್ಯ ಕುಸಿತವನ್ನೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಮರ್ಥಿಸಿಕೊಳ್ಳುತ್ತಲೇ ಬಂದಿದೆ. ಆದರೆ, ಕರೆನ್ಸಿ ಮಾರುಕಟ್ಟೆಯಲ್ಲಿ ತೀಕ್ಷ್ಣ ಪ್ರಮಾಣದ ಚಂಚಲತೆ ಕಂಡುಬಂದಿದೆ. ಇದು, ಆರ್‌ಬಿಐನ ನಿದ್ರೆಗೆಡಿಸಿದೆ. ಗಮನಾರ್ಹವಾಗಿ, ಕಳೆದ ಎರಡು ತಿಂಗಳುಗಳಲ್ಲಿ ಇತರ ಏಷ್ಯನ್ ಕರೆನ್ಸಿಗಳು ಶೇಕಡ 5ರಷ್ಟು ಬಲವರ್ಧನೆ ಪಡೆದಿದ್ದವು, ಭಾರತದ ರೂಪಾಯಿ ಬಲವರ್ಧನೆ ಕಾಣದಿದ್ದರೂ, ಸ್ಥಿರತೆ ಕಾಪಾಡಿಕೊಂಡಿತ್ತು. ಈಕ್ವಿಟಿ ಮಾರುಕಟ್ಟೆಗಳಲ್ಲಿನ ಏರಿಕೆಯಿಂದ ಉತ್ತೇಜಿತಗೊಂಡ ರೂಪಾಯಿ ಆಗಸ್ಟ್ ತಿಂಗಳಿನಲ್ಲಿ 83.5ಕ್ಕೆ ಬಲಗೊಂಡಿತ್ತು. ಆದರೆ, ಅಕ್ಟೋಬರ್ ತಿಂಗಳಿನಲ್ಲಿ ಡಾಲರ್ ಎದುರು ರೂಪಾಯಿ ದುರ್ಬಲಗೊಂಡಿದೆ.
ತಮ್ಮ ಆಡಳಿತದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳ ಸೇರಿದರೂ ಈ ಬಗ್ಗೆ ಮೋದಿ ತುಟಿಬಿಚ್ಚಿಲ್ಲ. ಅದೇ, 2012-13ರ ಅವಧಿಯಲ್ಲಿ ಯುಪಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಮೋದಿ, “ಡಾಲರ್ ಮೌಲ್ಯ ಹೆಚ್ಚುತ್ತಾ ಹೋಗುತ್ತಿದೆ. ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ವಿಶ್ವ ವ್ಯಾಪಾರದಲ್ಲಿ ಭಾರತ ಬಲಗೊಳುತ್ತಿಲ್ಲ. ಆರ್ಥಿಕತೆಯಲ್ಲಿ ಕುಂಠಿತ ಉಂಟಾಗುತ್ತಿದೆ. ಆದರೆ, ಇದಕ್ಕೆ ಯುಪಿಎ ಸರ್ಕಾರ ಉತ್ತರ ನೀಡುತ್ತಿಲ್ಲ. ನೇಪಾಳ ರೂಪಾಯಿದಲ್ಲಿ ಯಾವುದೇ ಸಮಸ್ಯೆಯಿಲ್ಲ. ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ ಕರೆನ್ಸಿಗಳಲ್ಲಿಯೂ ಯಾವುದೇ ಸಮಸ್ಯೆಯಿಲ್ಲ. ಚಿಕ್ಕ ಚಿಕ್ಕ ದೇಶಗಳು ಡಾಲರ್ ಮುಂದೆ ತಮ್ಮ ಕರೆನ್ಸಿ ಗಟ್ಟಿಯಾಗಿ ಬಲಗೊಳ್ಳುವಂತೆ ಮಾಡುತ್ತಿವೆ. ಅದರೆ, ಭಾರತದ ರೂಪಾಯಿ ಕುಸಿಯುತ್ತಿದೆ. ದೇಶದ ಜನ ಈ ಬಗ್ಗೆ ತಿಳಿದುಕೊಳ್ಳಬೇಕು. ಡಾಲರ್ ಮುಂದೆ ಹಿಂದುಸ್ತಾನ್ ರೂಪಾಯಿ ಮೌಲ್ಯ ಬೀಳುತ್ತಲೇ ಹೋಗುತ್ತಿದೆ. ಇದು ಆರ್ಥಿಕ ಕಾರಣದಿಂದ ಅಲ್ಲ, ನಿಮ್ಮ ಭ್ರಷ್ಟ ರಾಜನೀತಿಗಳ ಕಾರಣದಿಂದ” ಎಂದು ಆರೋಪಿಸಿದ್ದರು.
ಆದರೆ, ಮೋದಿ ಅವರು ಆಡಳಿತದ ಚುಕ್ಕಾಣಿ ಹಿಡಿದಾಗಿನಿಂದ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ಇದಕ್ಕೆ ಏನು ಕಾರಣವೇನು? ಈ ಹಿಂದೆ, ಮೋದಿ ಹೇಳಿದ್ದ ಮಾತನ್ನೇ ನಾವು ಅವರಿಗೂ ಅನ್ವಯಿಸಬಹುದಲ್ಲವೇ? ‘ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಆರ್ಥಿಕ ಕಾರಣದಿಂದ ಅಲ್ಲ ನಿಮ್ಮ ಭ್ರಷ್ಟ ರಾಜನೀತಿ ಕಾರಣದಿಂದ’ ಅಂತ ಮೋದಿ ಅವರಿಗೂ ಹೇಳಬೇಕಲ್ಲವೇ?
2013ರಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ₹56.57 ಇತ್ತು. ಮೋದಿ ಅವರು ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ, ಅಂದರೆ 2014ರಲ್ಲಿ ರೂಪಾಯಿ ಮೌಲ್ಯ 62.33ಕ್ಕೆ ಕುಸಿಯಿತು. ಒಂದೇ ವರ್ಷದಲ್ಲಿ ಬರೋಬ್ಬರಿ 6 ರೂಪಾಯಿಯಷ್ಟು ಕುಸಿತ ಕಂಡಿತು. ಅಲ್ಲದೆ, 2022ರ ಜುಲೈ 19 ರವೇಳೆಗೆ ಡಾಲರ್ ಎದುರು ರೂಪಾಯಿ ₹80ಗೆ ಕುಸಿದಿತ್ತು. 2023ರಲ್ಲಿ ₹81.94 ಇದ್ದ ರೂಪಾಯಿ ಮೌಲ್ಯವು 2024ರ ಜೂನ್ 20ರಂದು ಸಾರ್ವಕಾಲಿಕವಾಗಿ ₹83.66ಕ್ಕೆ ಕುಸಿಯಿತು. ಅಕ್ಟೋಬರ್‌ನಲ್ಲಿ ₹84 ದಾಟಿದೆ.
ಆದರೂ, ರೂಪಾಯಿ ಮೌಲ್ಯ ಕುಸಿತವನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಾರೆ. 2022ರಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ₹82.38ಕ್ಕೆ ಕುಸಿದಾಗ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, “ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ, ಡಾಲರ್ ಬಲಗೊಳ್ಳುತ್ತಿದೆ” ಎಂದು ಹೇಳಿದ್ದರು. ಅವರ ಈ ಹೇಳಿಕೆ ಸಾಕಷ್ಟು ಟ್ರೋಲ್‌ಗೆ ತುತ್ತಾಗಿತ್ತು.
ಇನ್ನು, 2018ರಲ್ಲಿ ಕೇಂದ್ರ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು, “ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದಕ್ಕೆ ವಿತ್ತ ನೀತಿಯಾಗಲಿ, ಕೇಂದ್ರದ ಸಮಸ್ಯೆಯಾಗಲಿ ಕಾರಣವಲ್ಲ. ರೂಪಾಯಿ ಮೌಲ್ಯ ಉತ್ತಮವಾಗಿದೆ. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೇ, ನಮ್ಮ ದೇಶದಲ್ಲಿ ಡಾಲರ್ ಮೌಲ್ಯ ಉತ್ತಮವಾಗಿದೆ. ಹಾಗೇ ನೋಡಿದರೇ ರೂಪಾಯಿ ಮೌಲ್ಯ ಉತ್ತಮಗೊಂಡಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುವುದು ಸಾಮಾನ್ಯ” ಎಂದು ಹೇಳಿದ್ದರು. ಮೋದಿ, ನಿರ್ಮಲಾ ಸೀತಾರಾಮನ್ ಹಾಗೂ ಅರುಣ್ ಜೇಟ್ಲಿ ಈ ಮೂವರ ಮಾತುಗಳಲ್ಲಿಯೇ ನಾವು ವಾಸ್ತವವನ್ನ ಅರ್ಥಮಾಡಿಕೊಳ್ಳಬಹುದು.
ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ದುರ್ಬಲವಾಗುತ್ತಿರುವುದು ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ರೂಪಾಯಿಯ ಕುಸಿತವು ಭಾರತಕ್ಕೆ ಸರಕುಗಳ ಆಮದು ದುಬಾರಿಯಾಗಲಿದೆ ಎಂದರ್ಥ. ಕಚ್ಚಾ ತೈಲ ಆಮದು ಮಾಡಿಕೊಳ್ಳುವುದು ದುಬಾರಿಯಾಗಲಿದೆ. ಕಚ್ಚಾ ತೈಲದ ದುಬಾರಿ ಆಮದಿನಿಂದಾಗಿ, ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಹೆಚ್ಚಾಗುತ್ತದೆ. ಜೊತೆಗೆ, ವಿದೇಶದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಹಾಸ್ಟೆಲ್‌ಗಳು, ಕಾಲೇಜು ಶುಲ್ಕಗಳು, ಆಹಾರ ಮತ್ತು ಸಾರಿಗೆಗಾಗಿ ಡಾಲರ್‌ಗಳಲ್ಲಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಪರಿಣಾಮ, ಅಮೆರಿಕಾಗೆ ಪ್ರಯಾಣಿಸುವುದು ಮತ್ತು ಅಲ್ಲಿ ವಿದ್ಯಾಭ್ಯಾಸಕ್ಕೆ ತೆರಳುವುದು ಕೂಡ ದುಬಾರಿಯಾಗಿದೆ.
ಇಂತಹ ಗಂಭೀರ ಪರಿಸ್ಥಿತಿ ಇದ್ದಾಗಲೂ, ಮೋದಿ ಸರ್ಕಾರ ಇತ್ತೀಚೆಗೆ ದೇಶ ಜಗತ್ತಿನ ನಾಲ್ಕನೆಯ ಶ್ರೀಮಂತ ರಾಷ್ಟ್ರವಾಗಿದೆ ಎಂಬ ಸುಳ್ಳು ಪ್ರಚಾರ ಮಾಡಿತ್ತು. ಆದರೆ, ಭಾರತ ಇಂದಿಗೂ ಬಡತನ ರೇಖೆಗಿಂತ ಕೆಳಗೆ ಅತ್ಯಧಿಕ ಜನರನ್ನು ಹೊಂದಿರುವ ರಾಷ್ಟ್ರವಾಗಿದೆ. ಹಸಿವು ಸೂಚ್ಯಂಕದಲ್ಲಿ 125 ದೇಶಗಳ ಪೈಕಿ ಭಾರತ 111ನೇ ಸ್ಥಾನದಲ್ಲಿದೆ. ವಿಶ್ವಬ್ಯಾಂಕ್ ಪ್ರಕಾರ, ಭಾರತದಲ್ಲಿ 97 ಕೋಟಿಗೂ ಅಧಿಕ ಜನರು ಪೌಷ್ಟಿಕ ಆಹಾರ ಪಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಅಲ್ಲದೇ, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ 2013ರ ಪ್ರಕಾರ, 81.35 ಕೋಟಿ ಜನರು ಆಹಾರ ಭದ್ರತೆಯಡಿ ಪಡಿತರ ಆಹಾರ ಪಡೆಯುತ್ತಿದ್ದಾರೆ. ಇದು ಭಾರತದ 75% ಗ್ರಾಮೀಣ ಜನಸಂಖ್ಯೆ ಮತ್ತು 50% ನಗರ ಪ್ರದೇಶದ ಜನಸಂಖ್ಯೆಯನ್ನು ವ್ಯಾಪಿಸುತ್ತದೆ.
ಇನ್ನು ದೇಶದ ಆರ್ಥಿಕತೆಯನ್ನ ಕಾಪಾಡುವಲ್ಲಿ ಮೋದಿ ಆಡಳಿತ ಬೆಸ್ಟಾ? ಅಥವಾ ಮನಮೋಹನ್ ಸಿಂಗ್ ಅವರ ಆಡಳಿತ ಬೆಸ್ಟಾ ಅನ್ನೋದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಹಲವು ಅರ್ಥಶಾಸ್ತ್ರಜ್ಞರು ಮತ್ತು ಚಿಂತಕರು, ಸಿಂಗ್ ಆಡಳಿತದಲ್ಲಿ ಆರ್ಥಿಕತೆಯು ನಿರಂತರ ಪ್ರಗತಿಯಲ್ಲಿ ಸಾಗಿತ್ತು. ನಾನಾ ಕ್ಷೇತ್ರಗಳಿಗೆ ಯುಪಿಎ ಸರ್ಕಾರ ತೆರೆದುಕೊಂಡಿತ್ತು. ಆದರೆ, ಮೋದಿ ಆಡಳಿತದಲ್ಲಿ ಆರ್ಥಿಕತೆ ಆಗ್ಗಾಗ್ಗೆ ಕುಸಿತ ಕಂಡಿದೆ. ಜನರ ತಲಾ ಆದಾಯದಲ್ಲಿನ ಏರಿಕೆ ವರ್ಷದಿಂದ ವರ್ಷಕ್ಕೆ ನಿಧಾನವಾಗಿದೆ. ನಿರುದ್ಯೋಗ ಹೆಚ್ಚುತ್ತಿದೆ. ಜಿಡಿಪಿ ಕೂಡ ಕುಸಿದಿದೆ ಎಂದು ಹೇಳುತ್ತಾರೆ. ಈ ವಾದಕ್ಕೆ ಹಲವಾರು ಡೇಟಾಗಳನ್ನೂ ಕೂಡ ಒದಗಿಸಿದ್ದಾರೆ…
1991ರಲ್ಲಿ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು ಲೈಸೆನ್ಸ್ ರಾಜ್ ಅನ್ನ ರದ್ದುಗೊಳಿಸಿದರು. ಇದು ನಿಧಾನವಾದ ಆರ್ಥಿಕ ಬೆಳವಣಿಗೆಗೆ ಕಾರಣವಾಗಿತ್ತು. ಅವರು ಭಾರತೀಯ ಆರ್ಥಿಕತೆಯನ್ನು ಉದಾರೀಕರಣಕ್ಕೆ ಒಳಪಡಿಸಿದರು. ಆನಂತರ, ಅವರು ಪ್ರಧಾನಿಯಾದರು, ಪಿ.ಚಿದಂಬರಂ ವಿತ್ತ ಸಚಿವರಾದರು. ಅವರ ಅವಧಿಯಲ್ಲಿ, 2007ರಲ್ಲಿ ಭಾರತವು ತನ್ನ ಅತ್ಯಧಿಕ ಜಿಡಿಪಿ ಬೆಳವಣಿಗೆಯ ದರವನ್ನು 9%ಗೆ ಏರಿಸಿಕೊಂಡಿತು. ಆರ್ಥಿಕತೆಯಲ್ಲಿ ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಎರಡನೇ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಿತು.
ಆದರೆ, ಬಳಿಕ ಅಧಿಕಾರಕ್ಕೇರಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ತನ್ನ ಪ್ರಮುಖ ಆರ್ಥಿಕ ನಿರ್ಧಾರಗಳ ಮೂಲಕ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸುವ ಬದಲು ಮತ್ತಷ್ಟು ಹದಗೆಡಿಸಿದೆ. ನೋಟು ರದ್ದತಿ, ಸರಕು ಮತ್ತು ಸೇವಾ ತೆರಿಗೆಯ ಕಾರ್ಯವೈಖರಿಯಲ್ಲಿನ ಗೊಂದಲಗಳು, 2020ರ ದೇಶವ್ಯಾಪಿ ‘ಲಾಕ್‌ಡೌನ್’ ಮತ್ತು 70 ವರ್ಷಗಳಲ್ಲಿ ಆರ್ಥಿಕ ಪ್ರಗತಿಗೆ ಕಾರಣೀಭೂತವಾಗಿದ್ದ ಬೃಹತ್ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ನಿರ್ಧಾರಗಳು ದೇಶದ ಪರಿಸ್ಥಿತಿಯನ್ನು ಆಧೋಗತಿಗೆ ದೂಡುತ್ತಿವೆ.
ಈ ಸುದ್ದಿ ಓದಿದ್ದೀರಾ? ಮೋದಿಯ ಬಿಜೆಪಿ, ಕೇಂದ್ರ ಸರ್ಕಾರದ ದಮನನೀತಿಗೆ ಉತ್ತರ ಕೊಟ್ಟ ಜಮ್ಮು-ಕಾಶ್ಮೀರ
ಆದರೆ, ಆರ್ಥಿಕವಾಗಿ ಸಮರ್ಥ ಸರ್ಕಾರವನ್ನ ನಡೆಸದ ಮೋದಿ ಮತ್ತು ಬಿಜೆಪಿ ಸುಳ್ಳು ಪ್ರಚಾರವನ್ನೇ ಮೈಗೂಡಿಸಿಕೊಂಡಿದೆ. ದೇಶದ ಜನರನ್ನು ಹಾದಿ ತಪ್ಪಿಸುತ್ತಿದೆ. ಮೋದಿ ಅವರು ‘ಅಚ್ಚೇ ದಿನ್’ ಬಗ್ಗೆ ಭಾರೀ ಮಾತನಾಡಿದ್ದರು. ಹಲವು ಭರವಸೆಗಳನ್ನು ನೀಡಿದ್ದರು. ಆ ಎಲ್ಲ ಭರವಸೆಗಳೂ ಸಂಪೂರ್ಣ ಹುಸಿಯಾಗಿವೆ. ಮೋದಿ ಅವರ ಆಡಳಿತದಲ್ಲಿ ಅದಾನಿ–ಅಂಬಾನಿ ಸೇರಿದಂತೆ ಬಂಡವಾಳಶಾಹಿಗಳು ಶ್ರೀಮಂತರಾಗಿದ್ದು ಬಿಟ್ಟರೇ, ಬಡವರು ಮತ್ತಷ್ಟು ಬಡವಾರಾಗುತ್ತಿದ್ದಾರೆ. ಹಸಿವಿನಿಂದ ಬಳಲುತ್ತಿದ್ದವರು ಈಗಲೂ ಹಸಿವಿನಿಂದಲೇ ಬಳಲುತ್ತಿದ್ದಾರೆ.