ತನ್ನ ಬಗ್ಗೆ ತಮಾಷೆ ಮಾಡಿದಳು ಎಂಬ ಕಾರಣಕ್ಕೆ 9 ವರ್ಷ ಬಾಲಕಿಯನ್ನು ದುಷ್ಕರ್ಮಿಯೊಬ್ಬ ಬಾವಿಗೆ ತಳ್ಳಿ, ಆಕೆಯ ಮೇಲೆ ಕಲ್ಲೆಸೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ದುರ್ಘಟನೆ ನಡೆದಿದೆ. ಹತ್ಯೆಗೆ ಬಲಿಯಾದ ಬಾಲಕಿಯನ್ನು ಮೋಹಿನಿ ಶ್ರೀವಾಸ್ ಎಂದು ಗುರುತಿಸಲಾಗಿದೆ.
ಬಾಲಕಿ ಮೋಹಿನಿ ಮತ್ತು ಆಕೆಯ ಅಣ್ಣ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ, ದುಷ್ಕರ್ಮಿ ದಾಳಿ ನಡೆಸಿದ್ದಾನೆ. ಬಾಲಕಿಯ ಅಣ್ಣನ ಮೇಲೂ ದಾಳಿ ನಡೆದಿದ್ದು, ಆತನಿಗೆ ಗಾಯಗಳಾಗಿವೆ. ದುಷ್ಕರ್ಮಿಯು ಬಾಲಕಿಯನ್ನು ಬಾವಿಗೆ ತಳ್ಳಿ, ಬಳಿಕ ಮೇಲಿನಿಂದ ಕಲ್ಲು ಹಾಕಿದ್ದಾನೆ ಎಂದು ವರದಿಯಾಗಿದೆ.
ಆರೋಪಿ ಗೋವರ್ಧನ್ ಪಟೇಲ್ ಮತ್ತು ಬಾಲಕಿ ಒಂದೇ ಗ್ರಾಮದವರಾಗಿದ್ದಾರೆ. ಈ ಹಿಂದೆ, ಆರೋಪಿಯ ಬಗ್ಗೆ ಬಾಲಕಿ ತಮಾಷೆ ಮಾಡಿದ್ದಳು. ಇದರಿಂದ ಕೋಪಕೊಂಡಿದ್ದ ದುಷ್ಕರ್ಮಿ ಆಕೆಯನ್ನು ಹತ್ಯೆಗೈದಿದ್ದಾನೆ ಎಂದು ವರದಿಯಾಗಿದೆ.
ಬಾಲಕಿಯ ಮೃತದೇಹವನ್ನು ಬಾವಿಯಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ, ತಾನೇ ಹತ್ಯೆಗೈದಿದ್ದಾಗಿ ಗೋವರ್ಧನ್ ತಪ್ಪೊಪ್ಪಿಕೊಂಡಿದ್ದಾನೆ. ಬಾಲಿಯ ಸಹೋದರ ತಪ್ಪಿಸಿಕೊಳ್ಳದಿದ್ದರೆ, ಆತನನ್ನೂ ಕೊಲ್ಲುತ್ತಿದ್ದೆ ಎಂದು ಆರೋಪಿ ಹೇಳಿದ್ದಾನೆ.