ʼದಿ ಕೇರಳ ಸ್ಟೋರಿʼ ನಿಷೇಧ ತರವಲ್ಲ ಎಂದ ಅನುರಾಗ್ ಕಶ್ಯಪ್
ಚಿತ್ರದ ಪ್ರದರ್ಶನ ನಿಷೇಧಿಸಿರುವ ಪಶ್ಚಿಮ ಬಂಗಾಳ ಸರ್ಕಾರ
ವಿವಾದಿತ ʼದಿ ಕೇರಳ ಸ್ಟೋರಿʼ ಚಿತ್ರದ ಪ್ರದರ್ಶನವನ್ನು ನಿಷೇಧಿಸಿರುವ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚಿತ್ರದ ಪ್ರದರ್ಶನಗಳನ್ನು ಸ್ವಯಂ ಪ್ರೇರಿತರಾಗಿ ರದ್ದುಗೊಳಿಸಿರುವ ತಮಿಳುನಾಡು ಮಲ್ಟಿಪ್ಲೆಕ್ಸ್ ಮಾಲೀಕರ ಸಂಘದ ನಿಲುವನ್ನು ಪ್ರಶ್ನಿಸಿ ಚಿತ್ರತಂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇನ್ನು ಇದೇ ಚಿತ್ರದ ಪ್ರದರ್ಶನಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಮೇಲ್ಮನವಿ ಕೂಡ ಸುಪ್ರೀಂ ಅಂಗಳದಲ್ಲಿದೆ.
ʼದಿ ಕೇರಳ ಸ್ಟೋರಿʼ ಚಿತ್ರದ ಮೇಲೆ ಪಶ್ಚಿಮ ಬಂಗಾಳ ಸರ್ಕಾರ ಹೇರಿರುವ ನಿರ್ಬಂಧವನ್ನು ತೆರವುಗೊಳಿಸುವಂತೆ ನಿರ್ಮಾಪಕರು ಸುಪ್ರೀಕೋರ್ಟ್‌ಗೆ ಮನವಿ ಮಾಡಿದ್ದಾರೆ. ಜೊತೆಗೆ ತಮಿಳುನಾಡಿನಲ್ಲಿ ಅನಧಿಕೃತವಾಗಿ ಚಿತ್ರದ ಪ್ರದರ್ಶನಕ್ಕೆ ನಿರ್ಬಂಧ ಹೇರಲಾಗಿದೆ ಎಂದೂ ಆರೋಪಿಸಿದ್ದಾರೆ. ಅರ್ಜಿದಾರರ ಪರ ವಾದ ಮಂಡಿಸಿರುವ ವಕೀಲ ಹರೀಶ್ ಸಾಳ್ವೆ, “ಚಿತ್ರದ ನಿರ್ಮಾಪಕರು ಪ್ರತಿದಿನವೂ ಹಣ ಕಳೆದುಕೊಳ್ಳುತ್ತಿದ್ದಾರೆ. ಈಗ ಮತ್ತೊಂದು ರಾಜ್ಯವೂ ಚಿತ್ರಕ್ಕೆ ನಿಷೇಧ ವಿಧಿಸಲು ಮುಂದಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಏಕಸದಸ್ಯ ಪೀಠಕ್ಕೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಶುಕ್ರವಾರ ಅರ್ಜಿ ವಿಚಾರಣೆಗೆ ಸಮ್ಮತಿ ಸೂಚಿಸಿರುವ ಮುಖ್ಯ ನ್ಯಾಯಮೂರ್ತಿಗಳು, ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ನೀಡುವಂತೆ ಸೂಚಿಸಿದ್ದಾರೆ.
ಈ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಲು ನಿರಾಕರಿಸಿರುವ ಕೇರಳ ಹೈಕೋರ್ಟ್ ನಿಲುವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆಗೂ ಮಂಗಳವಾರ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿತ್ತು.
ಕೇರಳದ ಯುವತಿಯರನ್ನು ಬಲವಂತವಾಗಿ ಮತಾಂತರಿಸಿ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆ ಮಾಡಲಾಗಿದೆ ಎಂಬ ಎಳೆಯ ಸುತ್ತ ಮೂಡಿಬಂದಿರುವ ʼದಿ ಕೇರಳ ಸ್ಟೋರಿʼ ಚಿತ್ರವನ್ನು ಮೇ 8ರಂದು ಪಶ್ಚಿಮ ಬಂಗಾಳ ಸರ್ಕಾರ ನಿಷೇಧಿಸಿತ್ತು. ತಮ್ಮ ರಾಜ್ಯದಲ್ಲಿ ದ್ವೇಷ ಹರಡುವುದನ್ನು ತಡೆಯಲು ಮತ್ತು ಹಿಂಸಾಚಾರದ ಘಟನೆಗಳನ್ನು ತಪ್ಪಿಸಿ, ಶಾಂತಿಯನ್ನು ಕಾಪಾಡಲು ಈ ಕ್ರಮ ಕೈಗೊಂಡಿರುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು. ಬಿಡುಗಡೆಗೂ ಮೊದಲೇ ವಿವಾದ ಸೃಷ್ಟಿಸಿದ್ದ ʼದಿ ಕೇರಳ ಸ್ಟೋರಿʼ ಚಿತ್ರದ ಪ್ರದರ್ಶನಗಳನ್ನು ತಮಿಳುನಾಡಿನ ಮಲ್ಟಿಪ್ಲೆಕ್ಸ್ ಮಾಲೀಕರ ಸಂಘ ಕೂಡ ರದ್ದುಗೊಳಿಸಿತ್ತು.
ಈ ಸುದ್ದಿ ಓದಿದ್ದೀರಾ? ಪಶ್ಚಿಮ ಬಂಗಾಳದಲ್ಲಿ ʼದಿ ಕೇರಳ ಸ್ಟೋರಿʼ ಸಿನಿಮಾ ಪ್ರದರ್ಶನ ನಿಷೇಧ
ಈ ನಡುವೆ ʼದಿ ಕೇರಳ ಸ್ಟೋರಿʼ ಚಿತ್ರದ ಪ್ರದರ್ಶನಕ್ಕೆ ನಿಷೇಧ ಹೇರಿದ ಪಶ್ಚಿಮ ಬಂಗಾಳ ಸರ್ಕಾರದ ನಡೆಯನ್ನು ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನೀವು ಆ ಸಿನಿಮಾವನ್ನು ಒಪ್ಪುತ್ತಿರೋ, ಇಲ್ಲವೋ, ಆ ಸಿನಿಮಾ ಷಡ್ಯಂತ್ರದ ಭಾಗವಾಗಿರಲಿ ಅಥವಾ ಷಡ್ಯಂತ್ರಕ್ಕೆ ತಿರುಗೇಟು ನೀಡುವ ಕಥಾಹಂದರವನ್ನೇ ಹೊಂದಿರಲಿ, ಅಕ್ರಮಣಕಾರಿ ಪರಿಭಾಷೆಯನ್ನೇ ಹೊಂದಿರಲಿ. ಆದರೆ, ಚಿತ್ರವೊಂದನ್ನು ನಿಷೇಧಿಸುವುದು ತರವಲ್ಲ” ಎಂದಿದ್ದಾರೆ.