ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ವೀರೋಚಿತ ಹೋರಾಟದ ಹೊರತಾಗಿಯುೂ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 9 ರನ್‌ಗಳ ಸೋಲು ಅನುಭವಿಸಿದೆ. ಈ ಮೂಲಕ ಮಹಿಳೆಯರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಹಾದಿ ಕಠಿಣವಾಗಿದೆ.
ಭಾರತ ತಂಡ ಸೆಮಿಫೈನಲ್ ತಲುಪಬೇಕಾದರೆ ಸೋಮವಾರ ನಡೆಯಲಿರುವ ಎ ಗುಂಪಿನ ಅಂತಿಮ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ತಂಡವನ್ನು ಭಾರೀ ಅಂತರದಿಂದ ಸೋಲಿಸಬೇಕಿದೆ. ಅದೇ ನ್ಯೂಜಿಲೆಂಡ್ ಸರಳ ಜಯ ಅಥವಾ ಸಣ್ಣ ಅಂತರದಿಂದ ಸೋತರೂ ಸೆಮಿಫೈನಲ್ ತಲುಪಬಲ್ಲುದು. ಹೀಗಾಗಿ ಭಾರತ ಇದೀಗ ಪಾಕಿಸ್ತಾನ ಮಹಿಳೆಯರು ದೊಡ್ಡ ಅಂತರದಲ್ಲಿ ಗೆಲ್ಲಬೇಕೆಂದು ಪ್ರಾರ್ಥಿಸಬೇಕಿದೆ.
ಭಾನುವಾರ ನಡೆದ ‘ಎ’ ಗುಂಪಿನ ತನ್ನ ನಾಲ್ಕನೇ ಹಾಗೂ ಅಂತಿಮ ಪಂದ್ಯ ಪಂದ್ಯದಲ್ಲಿ ಗೆಲ್ಲಲು ಭಾರತ 152 ಗುರಿ ಪಡೆದಿತ್ತು. ಆದರೆ ನಿಗದಿತ 20 ಓವರ್ ಗಳಲ್ಲಿ ಭಾರತ ತಂಡ 9 ವಿಕೆಟ್‌ಗೆ 142 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಶೆಫಾಲಿ ವರ್ಮಾ ಅವರ ಹೊಡೆಬಡಿಯ ಆಟದಿಂದಾಗಿ ಭಾರತ ಉತ್ತಮ ಆರಂಭವನ್ನೇ ಪಡೆದಿತ್ತು. ಕೇವಲ 13 ಎಸೆತಗಳಲ್ಲಿ 20 ರನ್ ಗಳಿಸಿ ಆಸೀಸ್ ಮಹಿಳೆಯರ ಪಾಳಯದಲ್ಲಿ ನಡುಕ ಹುಟ್ಟಿಸಿದ್ದರು. 2 ಬೌಂಡರಿ 1 ಸಿಕ್ಸರ್ ಗಳನ್ನು ಬಾರಿಸಿದ್ದ ಅವರ ವಿಕೆಟ್ ಪತನವಾದೊಡನೆ ಭಾರತದ ಅವನತಿ ಪ್ರಾರಂಭವಾಯಿತು. ಸ್ಮೃತಿ ಮಂದಾನ(6) ಅವರ ಬೆನ್ನಲ್ಲೇ ಪೆವಿಲಿಯನ್ ಸೇರಿಕೊಂಡರು. ಬಳಿಕ ಉತ್ತಮವಾಗಿ ಆಡುತ್ತಿದ್ದ ಜೆಮಿಮಾ ರೋಡ್ರಿಗಸ್ (12) ಔಟಾದೊಡನೆ ತಂಡ ಒತ್ತಡಕ್ಕೆ ಸಿಲುಕಿತು.
ಈ ಸುದ್ದಿ ಓದಿದ್ದೀರಾ? 147 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ದಾಖಲೆ ಸೋಲು ಕಂಡ ಪಾಕ್: 556 ರನ್ ಗಳಿಸಿಯೂ ಹೀನಾಯವಾಗಿ ಇಂಗ್ಲೆಂಡ್ ವಿರುದ್ಧ ಪರಾಭವ
ಈ ಹಂತದಲ್ಲಿ ನಾಯಕಿ ಹರ್ಮನ್ ಪ್ರೀತ್ ಕೌರ್ (ಅಜೇಯ 54) ಮತ್ತು ದೀಪ್ತಿ ಶರ್ಮಾ(29) ಈ ಕುಸಿತವನ್ನು ತಡೆದು ನಾಲ್ಕನೇ ವಿಕೆಟ್ ಗೆ 63 ರನ್ ಗಳ ಜೊತೆಯಾಟವಾಡಿದರು. ಆದರೆ ದೀಪ್ತಿ ಶರ್ಮಾ ಔಟಾದೊಡನೆ ಮತ್ತೊಮ್ಮೆ ಭಾರತದ ಕುಸಿತ ಪ್ರಾರಂಭವಾಯಿತು. ಹರ್ಮನ್ ಪ್ರೀತ್ ಏಕಾಂಗಿ ಹೋರಾಟ ವ್ಯರ್ಥವಾಯಿತು.
ಇದಕ್ಕೂ ಮೊದಲು ರೇಣುಕಾ ಠಾಕೂರ್ ಸಿಂಗ್ ಸೇರಿದಂತೆ ಬಿಗುವಿನ ಬೌಲಿಂಗ್ ದಾಳಿ ಸಂಘಟಿಸಿದ ಭಾರತ ತಂಡವು ಆಸ್ಪ್ರೇಲಿಯಾ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕಟ್ಟಿ ಹಾಕಿತು.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿಭಾನುವಾರ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆರು ಬಾರಿಯ ಚಾಂಪಿಯನ್ ಆಸ್ಪ್ರೇಲಿಯಾ ತಂಡ 20 ಓವರ್‌ಗಳಲ್ಲಿ8 ವಿಕೆಟ್ ಕಳೆದುಕೊಂಡು 151 ರನ್ ಕಲೆಹಾಕಿತು. 3ನೇ ಓವರ್‌ನಲ್ಲಿಬೆಥ್ ಮೂನಿ ಮತ್ತು ಜಾರ್ಜಿಯಾ ವರೆಹ್ಯಾಮ್ ಅವರನ್ನು ಔಟ್ ಮಾಡಿದ ರೇಣುಕಾ ಭಾರತಕ್ಕೆ ಆರಂಭಿಕ ಮೇಲುಗೈ ತಂದರು. ಆದರೆ ಗ್ರೇಸ್ ಹ್ಯಾರಿಸ್(40), ತಹಿಲಾ (32) ಮತ್ತು ಎಲಿಸ್ ಪೆರ್ರಿ(32*) ಅವರ ಹೋರಾಟದಿಂದ ಆಸ್ಪ್ರೇಲಿಯಾ ಗೌರವಾನ್ವಿತ ಮೊತ್ತ ಕಲೆಹಾಕಿತು.