ಇಂದಿನ ಎಲ್ಲಾ ಖಾಸಗಿ ಸಂಸ್ಥೆಗಳ ಕಾರ್ಯನಿರ್ವಹಣೆ ಹಾಗೂ ಗುಣಮಟ್ಟವನ್ನು ನಾವು ವಿಮರ್ಶಾತ್ಮಕವಾಗಿ ಅವಲೋಕಿಸಬೇಕಿದೆ. ಖಾಸಗಿ ಬ್ಯಾಂಕುಗಳು ಸಾರ್ವಜನಿಕರನ್ನು ಹಾಡಹಗಲೇ ವಂಚಿಸಿ ಕೊನೆಗೆ ದಿವಾಳಿ ಘೋಷಿಸಿಕೊಳ್ಳುತ್ತಿವೆ. ಐಸಿಐಸಿಐ ಬ್ಯಾಂಕಿನಲ್ಲಿ ಉನ್ನತ ಮಟ್ಟದಲ್ಲಿ ನಡೆದ ಆರ್ಥಿಕ ಹಗರಣ ನಮ್ಮೆದುರಿಗೆ ಜ್ವಲಂತ ಉದಾಹರಣೆಯಾಗಿದೆ.
ಈ ದೇಶದಲ್ಲಿ ಉತ್ತಮ ಸೌಲಭ್ಯವುಳ್ಳ ಆಸ್ಪತ್ರೆ ಯಾವುದು ಎಂಬ ಪ್ರಶ್ನೆಗೆ ತಕ್ಷಣಕ್ಕೆ ದಿಲ್ಲಿಯ ಸರ್ಕಾರಿ ಸ್ವಾಮ್ಯದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಥವಾ ಏಮ್ಸ್ ಎನ್ನುವ ಉತ್ತರ ಹೊಳೆಯುತ್ತದೆ. ಭಾರತದ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳ ಪ್ರಶ್ನೆ ಬಂದಾಗ ನಮ್ಮೆದುರಿಗೆ ಬರುವ ಚಿತ್ರಣ ಸರ್ಕಾರಿ ನಿಯಂತ್ರಣದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿಗಳು ಹಾಗೂ ಎನ್ಐಟಿಗಳು. ಭಾರತದ ಅತ್ಯುತ್ತಮ ಮ್ಯಾನೆಜ್ಮೆಂಟ್ ಕಾಲೇಜುಗಳ ಪ್ರಶ್ನೆ ಬಂದಾಗ ಸಿಗುವ ಉತ್ತರ ಸರ್ಕಾರಿ ಐಐಎಂಗಳು. ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರದ ಉತ್ತಮ ಶಾಲೆಗಳು ಸಹ ಸರ್ಕಾರ ನಡೆಸುವ ಕೇಂದ್ರೀಯ ವಿದ್ಯಾಲಯಗಳು, ಸೈನಿಕ ಶಾಲೆಗಳುˌ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಎನ್ನುವುದು ನಿರ್ವಿವಾದ.
ಇಡೀ ದೇಶದ ಪ್ರವಾಸೋದ್ಯಮ ಹಾಗೂ ಸಾರಿಗೆ ಸೇವೆಗಳ ದೊಡ್ಡದಾದ ಕೊಡುಗೆ ನೀಡುತ್ತಿರುವುದು ಭಾರತೀಯ ರೈಲ್ವೆ ಇಲಾಖೆಯೇ ಹೊರತು ಖಾಸಗಿ ಸಾರಿಗೆ ಸಂಸ್ಥೆಗಳಲ್ಲ. ಇವತ್ತಿಗೂ ದೇಶದ ಅತಿ ಹೆಚ್ಚು ಜನರು ಪ್ರಯಾಣಿಸುವುದು ಭಾರತೀಯ ರೈಲ್ವೆಗಳಲ್ಲಿ. ಅಮೆರಿಕೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾಗೆ ವಿಶ್ವದಲ್ಲಿ ನೇರವಾದ ಪ್ರತಿಸ್ಪರ್ಧಿ ಯಾರು ಎನ್ನುವ ಪ್ರಶ್ನೆ ಎದುರಾದಾಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಎನ್ನುವ ಉತ್ತರ ಬರುತ್ತದೆ. ಹೀಗೆ ಅನೇಕ ಕ್ಷೇತ್ರಗಳಲ್ಲಿ ಸರ್ಕಾರಿ ಸಂಸ್ಥೆಗಳನ್ನು ಸರಿಗಟ್ಟುವ ಗುಣಾತ್ಮಕ ಸೇವೆ ಖಾಸಗಿ ಸಂಸ್ಥೆಗಳು ನೀಡುತ್ತಿಲ್ಲ ಹಾಗೂ ಸರ್ಕಾರಿ ಸಂಸ್ಥೆಗಳ ಕಾರ್ಯಕ್ಷಮತೆಗೆ ಸರಿಗಟ್ಟುವ ಖಾಸಗಿ ಸಂಸ್ಥೆ ಕಳೆದ ಏಳು ದಶಕಗಳಲ್ಲಿ ದೇಶದಲ್ಲಿ ಹುಟ್ಟಿಕೊಂಡಿಲ್ಲ.
ಕೊರೋನ ಸಾಂಕ್ರಾಮಿಕ ರೋಗ ಸ್ಪೋಟಗೊಂಡ ಸಂದಿಗ್ಧ ಸಮಯದಲ್ಲಿ ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳು ಮಾತ್ರ ಜನರಿಗೆ ಉಚಿತ ಮತ್ತು ಹೊರೆಯಾಗದ ಚಿಕಿತ್ಸೆ ನೀಡಿವೆ. ಅದೇ ಸಮಯದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಜನರಿಗೆ ಆರ್ಥಿಕ ನೆರವು ಹಾಗೂ ಸೇವೆಯನ್ನು ನೀಡಿವೆ. ಜನರ ಬಡತನ ಹಾಗೂ ಆರ್ಥಿಕ ಸಂಕಷ್ಟಗಳಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ನೆರವಾಗಿವೆ. ಸರ್ಕಾರಿ ರೈಲುಗಳು, ಬಸ್ಸುಗಳು ಮಾತ್ರ ವಲಸೆ ಕಾರ್ಮಿಕರನ್ನು ಹಾಗೂ ಸಾಮಾನ್ಯ ನಾಗರಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಿವೆ. ಸರ್ಕಾರದ ಏರ್ ಇಂಡಿಯಾ ಸಂಸ್ಥೆಯ ವಿಮಾನಗಳು ವಿದೇಶದಲ್ಲಿದ್ದ ಭಾರತೀಯರನ್ನು ದೇಶಕ್ಕೆ ವಾಪಸ್ಸು ಕರೆತಂದಿವೆ. ದೇಶಾದ್ಯಂತ ಕೊರೋನ ವೈರಸ್ ಪಸರಿಸಿದಾಗ ಸರ್ಕಾರವು ಅವೈಜ್ಞಾನಿಕ ಹಾಗೂ ಅಮಾನುಷ ರೀತಿಯಲ್ಲಿ ಲಾಕ್ಡೌನ್ ಘೋಷಣೆ ಮಾಡಿತ್ತು. ಆಗ ದೇಶದಲ್ಲಿ ಕೃತಕ ಸಾರಿಗೆ ಅಭಾವ ಸೃಷ್ಟಿಸಿ ಖಾಸಗಿ ಸಾರಿಗೆ ಸಂಸ್ಥೆಗಳು ಜನರನ್ನು ಇನ್ನಿಲ್ಲದಂತೆ ಲೂಟಿ ಹೊಡೆದದ್ದು ನಾವು ನೋಡಿದ್ದೇವೆ. ಕೊರೋನ ಸಂದರ್ಭ ಹಾಗಿರಲಿ, ವೀಕ್ ಎಂಡ್, ಸರಣಿ ರಜೆ ಮತ್ತು ಹಬ್ಬ ಹರಿದಿನಗಳ ನೆಪದಲ್ಲಿ ವರ್ಷವಿಡೀ ಖಾಸಗಿ ಸಾರಿಗೆ ಸಂಸ್ಥೆಗಳು ಪ್ರಯಾಣ ದರವನ್ನು ಹೆಚ್ಚಿಸಿ ಜನರನ್ನು ಹಾಡಹಗಲೇ ಸುಲಿಗೆ ಮಾಡುತ್ತವೆ.
ಕೊರೋನ ಎಂಬ ಸಾಂಕ್ರಮಿಕ ಪಿಡುಗು ಕೂಡ ಒಂದು ಕೃತಕವಾಗಿ ಸೃಷ್ಟಿಸಲಾಗಿದ್ದ ದೊಡ್ಡ ಅಂತಾರಾಷ್ಟ್ರೀಯ ಹಗರಣವಾಗಿತ್ತು ಎನ್ನುವುದು ಅನೇಕರಿಗೆ ತಿಳಿದಿಲ್ಲ. ಕೊರೋನ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ವೈರಸ್ ಕಾರಣದಿಂದ ಬರುವ ಸಾಮಾನ್ಯ ಶೀತ, ಜ್ವರ, ನೆಗಡಿಗಳಿಂದ ಬಳಲುವ ರೋಗಿಗಳನ್ನು ಹೆದರಿಸಿ ಲೂಟಿ ಹೊಡೆದ ಸಂಗತಿ ಭಯಾನಕವಾಗಿದೆ. ಕೋವಿಡ್ ಸಾಂಕ್ರಾಮಿಕ ಹರಡಿದಾಗ ನಮ್ಮ ಬಹುತೇಕ ಶ್ರೀಮಂತ ಕ್ರೀಡಾಪಟುಗಳು, ಸಿನಿಮಾ ನಟರು, ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಎಲ್ಲಿದ್ದರು ಎಂದು ನಾವು ಚಿಂತಿಸಬೇಕಿದೆ. ಸರ್ಕಾರಿ ವೈದ್ಯರು, ನರ್ಸ್ಗಳು, ಪೊಲೀಸ್, ಪೌರ ಕಾರ್ಮಿಕರು ಮತ್ತು ಪುರಸಭೆ ನೌಕರರು ತಮ್ಮ ಜೀವದ ಹಂಗನ್ನು ತೊರೆದು ಜನರ ಸೇವೆ ಮಾಡಿದ್ದರು. ಆಗ ಈ ಕಾರ್ಪೊರೇಟ್ ಕಳ್ಳರು ಬಾಯಿ ತೆಗೆಯಲೇಯಿಲ್ಲ.
ದಕ್ಷತೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯು ತಮ್ಮ ಹಕ್ಕುಸ್ವಾಮ್ಯ ಎನ್ನುವಂತೆ ವರ್ತಿಸುವ ಖಾಸಗಿ ಸಂಸ್ಥೆಗಳ ಒಳಗಿನ ಹೂರಣ ಕಳೆದ 25 ವರ್ಷಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ ಮಾಡಿರುವ ನಾನು ಚೆನ್ನಾಗಿ ಬಲ್ಲೆ. ನಾನು ಉದ್ಯೋಗದಲ್ಲಿದ್ದ ಶಿಕ್ಷಣ ಸಂಸ್ಥೆಯೊಂದರ ಆಡಳಿತಾಧಿಕಾರಿಯೊಬ್ಬ “We want only average and below average employs. We don’t want a gold medalist” ಎಂದು ಒತ್ತಿ ಒತ್ತಿ ಹೇಳುತ್ತಿದ್ದ. ಆ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದ ನಾನು ಒಬ್ಬ ಗೋಲ್ಡ್ ಮೆಡಲಿಸ್ಟ್ ಆಗಿದ್ದು ಹಾಗೂ ಆತನ ಅಕ್ರಮಗಳನ್ನು ಪ್ರತಿ ಹಂತದಲ್ಲಿ ಪ್ರಶ್ನಿಸುತ್ತಿದ್ದದ್ದಕ್ಕೆ ಆತ ಹಾಗೆ ಹೇಳುತ್ತಿದ್ದ ಎಂಬುದು ನನಗೆ ತಿಳಿದಿತ್ತು. ಈಗ ಅಂತಹ ಶಿಕ್ಷಣ ಸಂಸ್ಥೆಗಳಲ್ಲಿ ನಕಲಿ Scientist ಗಳು ಆಡಳಿತ ಮಂಡಳಿಯ ಮುಖ್ಯಸ್ಥರ ಎದುರು ತಲೆ ತಗ್ಗಿಸಿ, ನಡು ಬಗ್ಗಿಸಿ, ಕೈಕಟ್ಟಿಕೊಂಡು ನಿಲ್ಲುತ್ತಾರೆ ಹಾಗೂ ಮುಖ್ಯಸ್ಥರು ಹೇಳಿದ್ದಕ್ಕೆಲ್ಲ ಹೂಂಗುಡುತ್ತಾರೆ. ಖಾಸಗಿ ಸಂಸ್ಥೆಗಳಲ್ಲಿ ಅತ್ಯಂತ ಎತ್ತರದ ಹುದ್ದೆಗೇರಬೇಕಾದರೆ ಇದುವೇ ಮುಖ್ಯ ಮಾನದಂಡವಾಗಿದೆ. ಇದು ಬಹುತೇಕ ಎಲ್ಲ ಖಾಸಗಿ ಸಂಸ್ಥೆಗಳ ಹಣೆಬರಹವಾಗಿದೆ.
ಇಂದಿನ ಎಲ್ಲಾ ಖಾಸಗಿ ಸಂಸ್ಥೆಗಳ ಕಾರ್ಯನಿರ್ವಹಣೆ ಹಾಗೂ ಗುಣಮಟ್ಟವನ್ನು ನಾವು ವಿಮರ್ಶಾತ್ಮಕವಾಗಿ ಅವಲೋಕಿಸಬೇಕಿದೆ. ಖಾಸಗಿ ಬ್ಯಾಂಕುಗಳು ಸಾರ್ವಜನಿಕರನ್ನು ಹಾಡಹಗಲೇ ವಂಚಿಸಿ ಕೊನೆಗೆ ದಿವಾಳಿ ಘೋಷಿಸಿಕೊಳ್ಳುತ್ತಿವೆ. ಐಸಿಐಸಿಐ ಬ್ಯಾಂಕ್ನಲ್ಲಿ ಉನ್ನತ ಮಟ್ಟದಲ್ಲಿ ನಡೆದ ಆರ್ಥಿಕ ಹಗರಣ ನಮ್ಮೆದುರಿಗೆ ಜ್ವಲಂತ ಉದಾಹರಣೆಯಾಗಿದೆ. ದೇಶಾದ್ಯಂತ ನೂರಾರು ಖಾಸಗಿ ಬ್ಯಾಂಕುಗಳು ಈ ಹಿಂದೆ ತಮ್ಮ ಗ್ರಾಹಕರನ್ನು ಮುಳುಗಿಸಿ ನಾಪತ್ತೆಯಾಗಿವೆ. ಕೆಲವು ಖಾಸಗಿ ಬ್ಯಾಂಕುಗಳು ಉದ್ದೇಶಪೂರ್ವಕವಾಗಿಯೇ ಗ್ರಾಹಕರನ್ನು ಮುಳುಗಿಸಿ ದಿವಾಳಿ ಘೋಷಿಸಿಕೊಳ್ಳುತ್ತಿವೆ. ಗ್ಲೋಬಲ್ ಟ್ರಸ್ಟ್ ಬ್ಯಾಂಕಿನ ಹಳೆಯ ಪ್ರಕರಣದಿಂದ ಹಿಡಿದು ಇತ್ತೀಚಿನ ಯೆಸ್ ಬ್ಯಾಂಕ್ ಹಗರಣದವರೆಗೆ ಮುಳುಗುವ ಹಂತದಲ್ಲಿದ್ದ ಅನೇಕ ಖಾಸಗಿ ಬ್ಯಾಂಕುಗಳು ಮತ್ತು ಅವುಗಳ ಗ್ರಾಹಕರನ್ನು ಸಾರ್ವಜನಿಕ ವಲಯದ ಬ್ಯಾಂಕುಗಳು ಮಾತ್ರ ರಕ್ಷಿಸಿವೆ.
ಖಾಸಗಿ ವಲಯದ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು ತನ್ನ ಗ್ರಾಹಕರಿಗೆ ಮಾಡುತ್ತಿರುವ ಮೋಸˌ ವಂಚನೆ ಪ್ರಕರಣಗಳು ಟಿವಿ ಮೆಗಾ ಧಾರಾವಾಹಿಗಳಂತಿವೆ. ಖಾಸಗಿ ಬ್ಯಾಂಕುಗಳಲ್ಲಿ ಡೀಫಾಲ್ಟ್ ಮಾಡುವ ಮೂಲಕ ಲೂಟಿ ಹೊಡೆದವರೇ ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖರೀದಿಸುತ್ತಿದ್ದಾರೆ. ಇದು ಕಳ್ಳನ ಕೈಗೆ ಖಜಾನೆಯ ಕೀಲಿ ಕೈ ಕೊಟ್ಟಂತೆ. ಒಂದು ವೇಳೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಅಸಮರ್ಥವಾಗಿವೆ, ಪರಿಣಾಮಕಾರಿ ಕಾರ್ಯ ಮಾಡುತ್ತಿಲ್ಲ, ಅಪ್ರಾಮಾಣಿಕ ಮತ್ತು ಭ್ರಷ್ಟವಾಗಿವೆ ಎನ್ನುವುದಾದಲ್ಲಿ, ಅವುಗಳನ್ನು ನಿರ್ವಹಿಸುವˌ ಮುನ್ನಡೆಸುವ ಸರ್ಕಾರವೇ ಸ್ವತಃ ಅಸಮರ್ಥ, ಅಪ್ರಾಮಾಣಿಕ ಮತ್ತು ಭ್ರಷ್ಟ ಎಂದು ಹೇಳಬೇಕಾಗುತ್ತದೆ.
ಇತ್ತೀಚಿಗೆ ಒಂದು ಕಾರ್ಯಕ್ರಮದಲ್ಲಿ ನಮ್ಮ ಪ್ರಧಾನಿಗಳು “Government has no business to do the business” ಎಂದು ಯಾವ ಲಜ್ಜೆಯೂ ಇಲ್ಲದೆ ಹೇಳಿಕೆ ನೀಡಿದ್ದರು. ಸರ್ಕಾರಕ್ಕೆ ಯಾವುದೇ ವ್ಯವಹಾರ ಮಾಡುವ ಇಚ್ಛೆ ಇಲ್ಲ ಎಂದಾದರೆ ವ್ಯವಹಾರ/ಉದ್ಯೋಗಗಳಿಗೆ ಸರ್ಕಾರವನ್ನು ನಡೆಸುವ ಅಥವಾ ನಿಯಂತ್ರಿಸುವ ಇಚ್ಛೆ ಏಕೋ? ದೇಶದ ರಸ್ತೆಗಳು, ಬೃಹತ್ ಯೋಜನೆಗಳು, ಸಾರಿಗೆ ವ್ಯವಸ್ಥೆ, ರೈಲ್ವೆ, ರಾಷ್ಟ್ರೀಯ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಬಂದರುಗಳು, ಅಣೆಕಟ್ಟುಗಳು, ಕಾಲುವೆಗಳು, ವಿದ್ಯುತ್ ಸರಬರಾಜು, ನೀರು ಸರಬರಾಜು, ಸಂಪರ್ಕ ಹಾಗೂ ಸಂವಹನ ವ್ಯವಸ್ಥೆಗಳು ಮತ್ತು ಸೌಲಭ್ಯಗಳು, ಐಐಟಿಗಳು ಮತ್ತು ಐಐಎಂಗಳು ಮೂಲಸೌಕರ್ಯ ಅಭಿವೃದ್ಧಿಗಳು ಹೀಗೆ ದೇಶದ ಅಸಂಖ್ಯಾತ ಸಮಗ್ರ ಮೂಲಸೌಕರ್ಯ ವ್ಯವಸ್ಥೆಗಳೆಲ್ಲವೂ ನಿರ್ಮಾಣಗೊಂಡಿದ್ದೇ ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಎನ್ನುವುದನ್ನು ನಾವು ಮರೆಯಬಾರದು.
ಈಗ ದೇಶದ ಮೂಲಭೂತ ಅಭಿವೃದ್ಧಿ ಕಾರ್ಯಗಳನ್ನೆಲ್ಲ ಇಂದಿನ ಸರ್ಕಾರ ವ್ಯವಹಾರವೆಂದು ಪರಿಗಣಿಸುತ್ತಿದೆ. ಆ ಕಾರಣದಿಂದಲೇ ಪ್ರಧಾನಿಗಳು “ಸರ್ಕಾರ ಇರುವುದು ವ್ಯವಹಾರ ಉದ್ಯಮಗಳನ್ನು ನಡೆಸುವುದಕ್ಕಲ್ಲ” ಎಂದು ರಾಜಾರೋಷವಾಗಿ ಹೇಳಿದ್ದಾರೆ. ಈ ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ಸಾರ್ವಜನಿಕ ಸೇವೆಯನ್ನು “ಸೇವೆ” ಎಂದು ಪರಿಗಣಿಸಿದ್ದರಿಂದಲೇ ದೇಶ ಇಷ್ಟೊಂದು ಮುಂದುವರೆಯಲು ಸಾಧ್ಯವಾಗಿದೆ. ಆ ಎಲ್ಲಾ ಸಾರ್ವಜನಿಕ ಸೇವೆಗಳನ್ನು ಬಳಸಿಕೊಂಡು ಬೆಳೆದ ನಮ್ಮ ಪ್ರಧಾನಿಗಳು “ಸಾರ್ವಜನಿಕ ಸೇವೆಗಳನ್ನು ವ್ಯವಹಾರ/ಉದ್ಯಮಗಳೆಂದು ಪರಿಗಣಿಸಿ ಅವುಗಳನ್ನು ಮುನ್ನಡೆಸುವುದು ಸರ್ಕಾರದ ಕೆಲಸವಲ್ಲ” ಎಂದು ಜಾಣ ಹೇಳಿಕೆ ನೀಡುವ ಮೂಲಕ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನೆಲ್ಲ ತಮ್ಮ ಆಪ್ತ ಉದ್ಯಮಿಗಳಿಗೆ ಮಾರಾಟ ಮಾಡುವ ಕಾರ್ಯ ಮಾಡುತ್ತಿದ್ದಾರೆ.
ಸ್ವಾತಂತ್ರ್ಯ ದೊರೆತ ಆರಂಭಿಕ ದಿನಗಳಲ್ಲಿ ಹಾಗೂ ಮೊದಲ ಪಂಚವಾರ್ಷಿಕ ಯೋಜನೆಗಳ ಮೂಲಕ ಸಾರ್ವಜನಿಕ ಸೇವೆಗಳನ್ನು ಅಂದಿನ ಸರ್ಕಾರ ವ್ಯವಹಾರವೆಂದು ಪರಿಗಣಿಸಿದ್ದರೆ ದೇಶ ಇಷ್ಟೊಂದು ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಅಂದಿನ ಸರ್ಕಾರ, ಬ್ಯಾಂಕ್ ಗಳ ರಾಷ್ಟ್ರೀಕರಣ ಮಾಡಿರದಿದ್ದರೆ ದೇಶ ಇಷ್ಟೊಂದು ಗಮನಾರ್ಹ ಆರ್ಥಿಕ ಅಭಿವೃದ್ಧಿ ಹೊಂದುತ್ತಿರಲಿಲ್ಲ. ಅಂದಿನ ಸರ್ಕಾರ ತಾನು ಮಾಡಬೇಕಾದ ಕೆಲಸಗಳನ್ನು ಖಾಸಗಿ ಉದ್ಯಮಿಗಳಿಗೆ ವಹಿಸಿದ್ದರೆ ಇಂದು ದೇಶ ಖಾಸಗಿ ಕಾರ್ಪೊರೇಟ್ ಉದ್ಯಮಿಗಳ ಪಾಲಾಗಿರುತ್ತಿತ್ತು. ಅಂದಿನಿಂದ ದೇಶದ ಸರ್ಕಾರಿ ಉದ್ಯಮಗಳ ಮೇಲೆ ಕಣ್ಣಿಟ್ಟು ಅದಕ್ಕಾಗಿ ಹೊಂಚು ಹಾಕಿ ಕುಳಿತಿದ್ದ ಕಾರ್ಪೊರೇಟ್ ಕಳ್ಳರು ಇಂದು ತಮ್ಮ ಕಾರ್ಯವನ್ನು ಸುಲಭವಾಗಿ ಸಾಧಿಸುತ್ತಿದ್ದಾರೆ.
ಇದನ್ನೂ ಓದಿ ಮೋದಿ ಸರ್ಕಾರದ ಮುಖ್ಯ ಧ್ಯೇಯ, ಮನುವಾದದ ವಿಸ್ತಾರ ಮತ್ತು ವಿಕಾಸ
ಬೌದ್ಧರ ಅಹಿಂಸಾ ಮಾರ್ಗಕ್ಕೆ ಹೆದರಿ ವೈದಿಕರು ಗೋಮಾಂಸ ತಿನ್ನುವುದನ್ನು ತ್ಯಜಿಸಿದರೇ?
ಕರ್ನಾಟಕಕ್ಕೆ ಮೋದಿ ಮೋಸ; ತೆರಿಗೆ ಹಂಚಿಕೆಯಲ್ಲಿ ಮತ್ತೆ ತಾರತಮ್ಯ
ಸಾರ್ವಜನಿಕ ವಲಯದಿಂದ ನಿರ್ಮಿಸಲ್ಪಟ್ಟ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಸೇರಿದಂತೆ ಉಳಿದ ಎಲ್ಲಾ ಬಗೆಯ ಮೂಲಸೌಕರ್ಯಗಳ ಸೇವೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಬೃಹದಾಕಾರವಾಗಿ ಬೆಳೆದಿರುವ ಬೆರಳೆಣಿಕೆಯಷ್ಟು ಕಾರ್ಪೊರೇಟ್ ಕಳ್ಳೋದ್ಯಮಿಗಳು ತಮ್ಮ ಸ್ವಂತ ಲಾಭಕ್ಕಾಗಿ ಮತ್ತು ಕೋಟ್ಯಂತರ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಲಾಭದಲ್ಲಿರುವ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ಯಮಗಳ ಮೇಲೆ ವಕ್ರದೃಷ್ಟಿ ಬೀರಿದ್ದಾರೆ. ಇಂದಿನ ಸರ್ಕಾರ ಈ ಕಾರ್ಪೊರೇಟ್ ಕಳ್ಳೋದ್ಯಮಿಗಳ ಹಿತಾಸಕ್ತಿಗಾಗಿ ದುಡಿಯುತ್ತಿರುವುದು ಸ್ಪಷ್ಟವಾಗುತ್ತಿದೆ. ಕಳೆದ ಎಪ್ಪತ್ತು ವರ್ಷಗಳಷ್ಟು ಹಳೆಯ ಮತ್ತು ನಮ್ಮ ಹಿಂದಿನ ರಾಜಕೀಯ ನಾಯಕರ ದೂರದೃಷ್ಟಿಯ ಫಲದಿಂದ ಸ್ಥಾಪಿಸಲಾಗಿರುವ ಅನೇಕ ಸರ್ಕಾರಿ ಉದ್ಯಮಗಳು ಲಾಭದಲ್ಲಿದ್ದರೂ ಕೂಡ ಕೃತಕ ನಷ್ಟವನ್ನು ತೋರಿಸಿ ಆಡಳಿತ ಪಕ್ಷಕ್ಕೆ ಆಪ್ತರಾಗಿರುವ ಕಾರ್ಪೊರೇಟ್ ಕಳ್ಳೋದ್ಯಮಿಗಳಿಗೆ ಮಾರಾಟ ಮಾಡುವ ಸರ್ಕಾರದ ಖಾಸಗೀಕರಣ ನೀತಿಯು ದೇಶದ ಜನರ ಭವಿಷ್ಯಕ್ಕೆ ಮಾರಕವಾಗಿದೆ.
ಈ ಕಾರಣದಿಂದ ನಾವೆಲ್ಲರೂ ಸಾಂಘಿಕವಾಗಿ ಸರ್ಕಾರದ ಚುಕ್ಕಾಣಿ ಹಿಡಿದು, ಕಾರ್ಪೊರೇಟ್ ಕಳ್ಳರ ಸೇವೆ ಮಾಡುತ್ತಿರುವ ಅರ್ಬನ್ ನಾಜಿಗಳ ದುರಾಡಳಿತವನ್ನು ತಿರಸ್ಕರಿಸಬೇಕಿದೆ. ಈ ಅರ್ಬನ್ ನಾಜಿಗಳು ದೇಶಕ್ಕೆ ಮಾಡುತ್ತಿರುವ ಹಾನಿಯನ್ನು ಸಾಮಾನ್ಯ ಜನರು ಅರಿತುಕೊಳ್ಳುತ್ತಿಲ್ಲ. ಕಾರಣ, ಜನರನ್ನು ಧರ್ಮದ ಹೆಸರಿನಲ್ಲಿ ಭಾವನಾತ್ಮಕವಾಗಿ ಕೆರಳಿಸಿ, ಅವರ ಮಿದುಳಿಗೆ ಧರ್ಮದ ವಿಷ ಬೆರೆಸಿ ತಮ್ಮ ಕಾರ್ಯವನ್ನು ಸಾಧಿಸುತ್ತಿದ್ದಾರೆ. ಅರ್ಬನ್ ನಾಜಿಗಳನ್ನು ಜನರು ಸೋಲಿಸದೆ ಹೋದರೆ 1930ರ ಕಾಲಘಟ್ಟದಲ್ಲಿ ಹಿಟ್ಲರ್ ಮತ್ತು ನಾಜಿ ತಂಡದಿಂದ ಜರ್ಮನಿಗೆ ಒದಗಿದ ಸ್ಥಿತಿಯೇ ಭಾರತಕ್ಕೂ ಬರಲಿದೆ ಎನ್ನುವುದನ್ನು ನಾವು ಮರೆಯಬಾರದು.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ