ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿ ಹೊಡೆದು ಆಳದಲ್ಲಿರುವ ಅಡಿಕೆ ತೋಟಕ್ಕೆ ಬಿದ್ದು, ಮಹಿಳೆಯೋರ್ವರು ಮೃತಪಟ್ಟ ಘಟನೆ ಅ. 14 ರ ಸೋಮವಾರ ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಬಿ.ಸಿ.ರೋಡು- ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಬಾಂಬಿಲ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತಪಟ್ಟ ಮಹಿಳೆಯನ್ನು ಮಂಗಳೂರು ನಗರದ ಕೊಡಿಯಾಲುಬೈಲು ನಿವಾಸಿ ಭಾಗೀರಥಿ (62) ಎಂದು ಗುರುತಿಸಲಾಗಿದೆ.
ಇನ್ನು ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ ರೂಪೇಶ್(39) ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ನಗರದ ಯುನಿಟಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೂಪೇಶ್ ಅವರ ಪತ್ನಿ ಸುಚಿತ್ರಾ (33) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
“ಪೂಂಜಾಲಕಟ್ಟೆ ಕಡೆಯಿಂದ ಬರುತ್ತಿದ್ದ ಚಾವರ್ ಲೆಟ್ ಸ್ಪಾರ್ಕ್ ಕಾರು ಮುಂಜಾನೆ ಸುಮಾರು 4.30ರ ಸುಮಾರಿಗೆ ಬಾಂಬಿಲ ಮಸೀದಿ ಮುಂಭಾಗದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಉರುಳಿ ಬಿದ್ದಿದೆ. ರೂಪೇಶ್ ಅವರು ತುಮಕೂರು ಜಿಲ್ಲೆಯವರಾಗಿದ್ದು, ಮಂಗಳೂರಿನ ತನ್ನ ಪತ್ನಿ, ಅತ್ತೆಯ ಜೊತೆಗೆ ತುಮಕೂರಿನಿಂದ ಪ್ರಯಾಣ ಬೆಳೆಸಿದ್ದರು. ದಾರಿಯ ಮಧ್ಯೆ ಧರ್ಮಸ್ಥಳ ದೇವಸ್ಥಾನಕ್ಕೆ ತೆರಳಿ ವಾಪಾಸು ಮಂಗಳೂರಿಗೆ ಬರುತ್ತಿದ್ದ ಬಾಂಬಿಲದಲ್ಲಿ ಕಾರು ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ ಎಂದು ಬಂಟ್ವಾಳ ಸಂಚಾರಿ ಪೊಲೀಸರು ಈ ದಿನ.ಕಾಮ್ಗೆ ಮಾಹಿತಿ ನೀಡಿದ್ದಾರೆ.
ಮೂಲತಃ ಮಂಗಳೂರು ಕೊಡಿಯಾಲ್ ಬೈಲು ನಿವಾಸಿಯಾದ ಪಿಡಬ್ಲ್ಯೂಡಿ ಇಂಜಿಜಿನಿಯರ್ ಗೋಪಾಲ ಎಂಬುವವರ ಸಹೋದರಿ ಭಾಗೀರಥಿ ಅವರ ಪುತ್ರಿ ಸುಚಿತ್ರಾ ಮತ್ತು ಅಳಿಯ ರೂಪೇಶ್ ಜತೆ ಪ್ರಯಾಣಿಸುತ್ತಿದ್ದರು. ರೂಪೇಶ್ ಅವರು ತುಮಕೂರು ಜಿಲ್ಲೆಯವರಾಗಿದ್ದು, ಭಾಗೀರಥಿ ಅವರು ದಸರಾ ರಜೆಯಲ್ಲಿ ಅಳಿಯ ಮಗಳ ಜೊತೆ ತುಮಕೂರಿಗೆ ಹೋಗಿ, ಬಳಿಕ ಅಲ್ಲಿಂದ ಧರ್ಮಸ್ಥಳ ದೇವಸ್ಥಾನಕ್ಕೆ ತೆರಳಿ ವಾಪಾಸು ಮಂಗಳೂರಿಗೆ ಬರುತ್ತಿದ್ದ ಬಾಂಬಿಲದಲ್ಲಿ ಕಾರು ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ದೇಶದ ಜನ ಜಾಗೃತ ಪ್ರಜೆಗಳಾಗದಿದ್ದಲ್ಲಿ ಪ್ರಜಾಪ್ರಭುತ್ವ ಯಶಸ್ಸಾಗಲು ಸಾಧ್ಯವಿಲ್ಲ: ನಿಕೇತ್ ರಾಜ್ ಮೌರ್ಯ
ನಿಯಂತ್ರಣ ತಪ್ಪಿದ ರಭಸಕ್ಕೆ ಕಾರು ಹೆದ್ದಾರಿಯಿಂದ ಸುಮಾರು 200 ಮೀಟರ್ ದೂರವಿದ್ದ ಅಡಿಕೆ ತೋಟಕ್ಕೆ ನುಗ್ಗಿದ್ದು, ತೋಟದಲ್ಲಿದ್ದ ಮಣ್ಣಿನ ದಿಬ್ಬವೊಂದರ ಮೇಲೆ ಬಿದ್ದಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಘಟನೆಯ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫೋಟೋ, ವಿಡಿಯೋ ಕೃಪೆ: ಮೊಹಮ್ಮದ್ ರಾಝಿಕ್, ಎನ್ ಸಿ ರೋಡ್
