ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ನಿಂದ ನೀಡಿದ್ದ ಐದು ಎಕರೆ ಜಮೀನನ್ನು ಖರ್ಗೆ ಕುಟುಂಬ ವಾಪಸ್ ಮಾಡಿದೆ.
“ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅಧ್ಯಕ್ಷರಾಗಿದ್ದು, ಈ ಟ್ರಸ್ಟ್‌ಗೆ ಕೆಐಎಡಿಬಿಯಿಂದ ಐದು ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಲಾಗಿದೆ. ಈ ಜಮೀನನ್ನು ಕೆಐಎಡಿಬಿ ನಿಯಮ ಉಲ್ಲಂಘಿಸಿ ಟ್ರಸ್ಟ್‌ಗೆ ನೀಡಲಾಗಿದೆ. ಜಮೀನು ಮಂಜೂರು ಸಂದರ್ಭದಲ್ಲಿ ನಾಗರಿಕ ಸೌಲಭ್ಯ(ಸಿಎ)ದ ನಿವೇಶನ ಹಂಚಲಾಗಿದೆ” ಎಂದು ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿ, ರಾಜ್ಯಪಾಲರಿಗೆ ದೂರು ನೀಡಿದ್ದರು.
ಆ ದೂರಿನ ಬೆನ್ನಲ್ಲೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಸಹ ಖರ್ಗೆ ಕುಟುಂಬದ ಟ್ರಸ್ಟ್‌ಗೆ ಸಿಎ ನಿವೇಶನ ಮಂಜೂರು ಮಾಡಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದರು.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಖರ್ಗೆ ಕುಟುಂಬ ಜಮೀನು ವಾಪಸ್ ಮಾಡಿದೆ. ಜಮೀನು ವಾಪಸ್ ಮಾಡುವ ನಿರ್ಧಾರದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪತ್ರಿಕಾ ಪ್ರಕಟಣೆ ಮೂಲ ಸ್ಪಷ್ಟನೆ ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಸ್ಪಷ್ಟನೆ
ಕೌಶಲ್ಯ ಅಭಿವೃದ್ಧಿಗಾಗಿ ಸಿದ್ಧಾರ್ಥ ವಿಹಾರ್ ಟ್ರಸ್ಟ್‌ಗೆ ಮಂಜೂರಾಗಿದ್ದ ಸಿಎ ನಿವೇಶನವನ್ನು ರದ್ದುಗೊಳಿಸುವಂತೆ ಕಳೆದ ಸೆಪ್ಟೆಂಬರ್ 20, 2024 ರಂದು ಕೋರಲಾಗಿತ್ತು. ಆದರೂ ಈ ವಿಷಯದಲ್ಲಿ ಕೆಲವು ಸ್ಪಷ್ಟನೆಗಳನ್ನು ನೀಡಲು ಬಯಸುತ್ತೇವೆ.
- ಸಿದ್ಧಾರ್ಥ ವಿಹಾರ್ ಟ್ರಸ್ಟ್ ಸಾರ್ವಜನಿಕ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ದತ್ತಿ ಟ್ರಸ್ಟ್ ಆಗಿದೆ. ಇದು ಖಾಸಗಿ ಅಥವಾ ಕುಟುಂಬದ ಟ್ರಸ್ಟ್ ಅಲ್ಲ. ಇದರ ವತಿಯಿಂದ ಸ್ಥಾಪಿಸಿರುವ ಎಲ್ಲ ಸಂಸ್ಥೆಗಳು ಲಾಭಕ್ಕಾಗಿ ಮಾಡಿರುವುದಲ್ಲ.
- ಇದು ಚಾರಿಟಬಲ್ ಟ್ರಸ್ಟ್ ಆಗಿರುವುದರಿಂದ, ಟ್ರಸ್ಟ್‌ನ ಆಸ್ತಿಗಳು ಮತ್ತು ಆದಾಯದಿಂದ ಯಾವುದೇ ಟ್ರಸ್ಟಿಗಳು ನೇರವಾಗಿ ಅಥವಾ ಪರೋಕ್ಷವಾಗಿ ಪ್ರಯೋಜನ ಪಡೆಯುವುದಿಲ್ಲ.
- ವಿದ್ಯಾರ್ಥಿಗಳನ್ನು ಕೈಗಾರಿಕೆಗಳಿಗೆ ಮುಕ್ತಗೊಳಿಸುವ ಉದ್ದೇಶದಿಂದ ಕೈಗಾರಿಕಾ ಪ್ರದೇಶದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದೇ ಈ ಟ್ರಸ್ಟ್‌ನ ಮುಖ್ಯ ಗುರಿ ಮತ್ತು ಕಾರಣವಾಗಿತ್ತು.
- ಕೇವಲ ಹಂಚಿಕೆ/ಮಂಜೂರಾತಿ ಪತ್ರವನ್ನು ನೀಡಲಾಗಿತ್ತು ಮತ್ತು ಆದರೆ ಕ್ರಯ ಪತ್ರವನ್ನು ಕಾರ್ಯಗತಗೊಳಿಸಲಾಗಿರಲಿಲ್ಲ. ಮಂಜೂರು ಮಾಡಿದ ಸಿಎ ಸೈಟ್‌ಗಾಗಿ ಟ್ರಸ್ಟ್ ಯಾವುದೇ ಸಬ್ಸಿಡಿ, ಹಣಕಾಸಿನ ಬೆಂಬಲ ಅಥವಾ ಕಡಿಮೆ ದರವನ್ನು ವಿನಂತಿಸಿರಲಿಲ್ಲ ಅಥವಾ ಸ್ವೀಕರಿಸಿಲ್ಲ.
- ಶೈಕ್ಷಣಿಕ ಸಂಸ್ಥೆಗಾಗಿ ಸಿಎ ಸೈಟ್ ಹಂಚಿಕೆಗಾಗಿ ಅರ್ಜಿ ಸಲ್ಲಿಸಲು ಮತ್ತು ಸ್ವೀಕರಿಸಲು ಟ್ರಸ್ಟ್ ಸಂಪೂರ್ಣವಾಗಿ ಅರ್ಹತೆ ಪಡೆದಿದೆ.
- ಆದರೂ, ಯಾವುದೇ ಶಿಕ್ಷಣ ಸಂಸ್ಥೆಯು ನಿರಂತರವಾಗಿ ಅಸಮರ್ಪಕ, ಆಧಾರ ರಹಿತ ಮತ್ತು ರಾಜಕೀಯ ಪ್ರೇರಿತ ಆರೋಪಗಳನ್ನು ಎದುರಿಸುತ್ತಿರುವಾಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.
- ಶಿಕ್ಷಣ ಮತ್ತು ಸಾಮಾಜಿಕ ಸೇವೆಯ ಪ್ರಾಥಮಿಕ ಉದ್ದೇಶದಿಂದ ಗಮನ ಮತ್ತು ಪ್ರಯತ್ನಗಳನ್ನು ಬೇರೆಡೆಗೆ ತಿರುಗಿಸುವ ಸುದೀರ್ಘ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ಟ್ರಸ್ಟ್ ಬಯಸುವುದಿಲ್ಲ.
- ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಳೆದ 20-09-2024 ರಂದು ಕೆಐಎಡಿಬಿಗೆ ಪತ್ರ ಬರೆದು, ಪ್ರಸ್ತಾವನೆಯನ್ನು ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಸಿಎ ಸೈಟ್ ಮಂಜೂರು ಮಾಡಬೇಕೆಂಬ ನಮ್ಮ ಮನವಿಯನ್ನು ಹಿಂಪಡೆಯುವಂತೆ ವಿನಂತಿಸಲಾಗಿದೆ.
- 27-09-2024ರಂದು ಪತ್ರ ಬರೆದಿರುವ ಕೆಐಎಡಿಬಿ ಸೈಟ್ ಹಂಚಿಕೆಯನ್ನು ರದ್ದುಗೊಳಿಸಲಾಗಿದೆ ಎಂದು ಟ್ರಸ್ಟ್‌ಗೆ ತಿಳಿಸಿದೆ.
“ಸಿದ್ದಾರ್ಥ್ ವಿಹಾರ ಟ್ರಸ್ಟ್ ಕಾನೂನು ಬಾಹಿರವಾಗಿ ಜಮೀನು ಪಡೆದಿದ್ದರೆ ಪ್ರಧಾನಿ ಮೋದಿ, ಅಮಿತ್ ಷಾ ಸುಮ್ಮನೆ ಬಿಡುತ್ತಿದ್ದರಾ? ವಿಜಯೇಂದ್ರ, ಅಶೋಕ್ ಸುಮ್ಮನೆ ಇರುತ್ತಿದ್ದರಾ? ಕಲಬುರಗಿಯವರೆಗೂ ಪಾದಯಾತ್ರೆ ಮಾಡುತ್ತಿದ್ದರು. ಅವರಿಗೂ ವಾಸ್ತವ ಏನು ಎಂಬುದು ಗೊತ್ತಿದೆ. ಏನೇ ಇರಲಿ ಜಮೀನು ವಾಪಸ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ”
– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ