ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ ಬುಧವಾರ ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹೊಗಳಿದ್ದು, ಅವರು ಭಾರತದ ಪ್ರಧಾನಿಯಾಗಬೇಕು ಎಂದು ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, “ಬೇರೆ ರಾಜಕಾರಣಿಗಳ ರೀತಿ ಮಮತಾ ಬ್ಯಾನರ್ಜಿ ಅವರನ್ನು ಬ್ಲ್ಯಾಕ್ ಮೇಲ್ ಮಾಡುವುದು ಸಾಧ್ಯವಿಲ್ಲ. ಗಟ್ಟಿಗಿತ್ತಿಯಾಗಿರುವ ಅವರು ಭಾರತದ ಪ್ರಧಾನಿಯಾಗಬೇಕು. ಅವರು 34 ವರ್ಷಗಳ ಕಾಲ ಕಮ್ಯುನಿಸ್ಟರ ವಿರುದ್ಧ ಹೇಗೆ ಹೋರಾಡಿದರು, ಈಗ ಏನು ಮಾಡುತ್ತಿದ್ದಾರೆಂದು ನೋಡಿ” ಎಂದು ಹೇಳಿದ್ದಾರೆ.
“ದೇಶಕ್ಕೆ ನಿಜವಾದ ವಿರೋಧ ಪಕ್ಷದ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಆ ಪಕ್ಷವನ್ನು ಅಧಿಕಾರದಲ್ಲಿರುವ ಜನರು ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ” ಎಂದು ಸ್ವಾಮಿ ಹೇಳಿದರು.
“ನಾನು ಬಹಳ ಜನರ ಬಗ್ಗೆ ತಿಳಿದಿದ್ದೇನೆ. ಅವರು ಪ್ರಸ್ತುತ ಸರ್ಕಾರದ ವಿರುದ್ಧ ಒಂದು ಹಂತವನ್ನು ಮೀರಿ ಹೋಗುವುದಿಲ್ಲ. ಏಕೆಂದರೆ ಅವರು ಇಡಿ, ಸಿಬಿಐ, ಆದಾಯ ತೆರಿಗೆ ಮುಂತಾದವುಗಳಿಗೆ ಹೆದರುತ್ತಾರೆ. ಇದು ಭಾರತೀಯ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ” ಎಂದು ಬಿಜೆಪಿ ಮುಖಂಡ ಹೇಳಿದ್ದಾರೆ.
“ಭಾರತಕ್ಕೆ ಆಡಳಿತ ಪಕ್ಷಕ್ಕೆ ಹೆದರದೆ ಗಟ್ಟಿ ಧ್ವನಿಯಲ್ಲಿ ಹೇಳುವ ವಿರೋಧ ಪಕ್ಷದ ಅಗತ್ಯವಿದೆ. ಆದ ಕಾರಣ ಮಮತಾ ಬ್ಯಾನರ್ಜಿ ಅವರನ್ನು ಬೆದರಿಸಲು ಅಸಾಧ್ಯ” ಎಂದು ಸ್ವಾಮಿ ಹೇಳಿದ್ದಾರೆ.