‘ಹುಬ್ಬಳ್ಳಿ ಗಲಭೆಯ ಪ್ರಕರಣವನ್ನು ಹಿಂಪಡೆದ ಕುರಿತು ಮಾತನಾಡುವ ಬಿಜೆಪಿ, ಸಿ.ಟಿ. ರವಿ, ಬಿಜೆಪಿ ಅವಧಿಯಲ್ಲಿ ಹಿಂಪಡೆದಿರುವ ಪ್ರಕರಣಗಳ ಬಗ್ಗೆ ಏಕೆ ಮಾತನಾಡಲ್ಲ’ ಎಂದು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ‘ಹೋರಾಟಗಳು ನಡೆದ ಸಂದರ್ಭದಲ್ಲಿ ನಡೆದ ಗಲಭೆ ಪ್ರಕರಣಗಳನ್ನು ಕಾಲ ಕಾಲಕ್ಕೆ ಎಲ್ಲ ಸರ್ಕಾರಗಳು ಹಿಂಪಡೆದಿದ್ದಾರೆ. ರೈತ ಹೋರಾಟ, ವಿದ್ಯಾರ್ಥಿ ಹೋರಾಟ, ಜನರ ಹೋರಾಟಗಳ ಕೇಸ್‌ಗಳನ್ನು ಹಿಂಪಡೆದಿರುತ್ತವೆ. ಅದೇ ರೀತಿ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿರಬಹುದು’ ಎಂದರು.
‘ಕಾಂಗ್ರೆಸ್ ಸರ್ಕಾರ ಬಂದರೆ ಮುಸ್ಲಿಂ ಭಯೋತ್ಪಾದಕರಿಗೆ ಹಬ್ಬ’ ಎಂದ ವಿಪಕ್ಷ ನಾಯಕ ಆರ್. ಅಶೋಕ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯವರು ಹಿಜಾಬ್, ಹಲಾಲ್, ಅಜಾನ್ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಆರ್. ಅಶೋಕ್ ಸಹ ಇದನ್ನೇ ಮಾಡಿದ್ದಾರೆ. ಆದರೆ, ನಾವು ಎಲ್ಲ ಜನರನ್ನು ರಕ್ಷಣೆ ಮಾಡುತ್ತೇವೆ. ಹಿಂದೂ, ಮುಸ್ಲಿಂ, ಸಿಖ್, ಬೌದ್ಧ, ಜೈನರು ಸೇರಿ ಎಲ್ಲರನ್ನು ರಕ್ಷಣೆ ಮಾಡುತ್ತೇವೆ’ ಎಂದರು.
ಗಲಭೆಗಳಾದಾಗ ಅಮಾಯಕರ ಮೇಲೆ ಕೇಸ್ ದಾಖಲಾಗಿರುತ್ತದೆ. ಗಲಭೆ ಮಾಡಿದವರು ಓಡಿ ಹೋಗಿರುತ್ತಾರೆ. ಗಲಭೆ ನೋಡುತ್ತ ನಿಂತವರು ಸಿಕ್ಕಿಹಾಕಿ ಕೊಂಡಿರುತ್ತಾರೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಇದನ್ನು ಓದಿದ್ದೀರಾ? ಮುಧೋಳ | ಸ್ಥಗಿತಗೊಂಡಿದ್ದ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮರು ಚಾಲನೆ
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯವರಿಗೆ ತಮ್ಮಲ್ಲೆ ನೆಲೆ ಇಲ್ಲ. ಅವರಲ್ಲಿ 20 ಗುಂಪುಗಳಿವೆ. ಮೊದಲು ತಮ್ಮ ಮನೆ ಸರಿ ಪಡೆಸಿಕೊಳ್ಳಲಿ. ಬೇರೆಯವರದ್ದೇನು ನೋಡುತ್ತಾರೆ. ಶೇ. 40 ಭ್ರಷ್ಟಾಚಾರದಿಂದ ಜನರು ಬಿಜೆಪಿಯನ್ನು ಕಿತ್ತೆಸೆದು ಮನೆಗೆ ಕಳಿಸಿದ್ದಾರೆ. ಬಿಜೆಪಿಯಲ್ಲೇ ಹೊಂದಾಣಿಕೆ ಇಲ್ಲ’ ಎಂದು ಲೇವಡಿ ಮಾಡಿದರು.
