ಪಂಚಮಸಾಲಿ ಸಮುದಾಯಕ್ಕೆ ‘2ಎ’ ಮೀಸಲಾತಿ ನೀಡುವ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವ ಪ್ರಗತಿಯೂ ಕಂಡಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ಭೇಟಿಗಾಗಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮುದಾಯದ ಎಲ್ಲ ಪದಾಧಿಕಾರಿಗಳು ಅ.18ರಂದು ಬೆಂಗಳೂರಿನಲ್ಲಿ ಧರಣಿ ನಡೆಸಲಿದ್ದೇವೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಮೀಸಲಾತಿ ಹೋರಾಟ ಬಳಸಿಕೊಂಡು ಆಯ್ಕೆಯಾದ ನಮ್ಮ ಸಮುದಾಯದ ಕಾಂಗ್ರೆಸ್‌ನ ಶಾಸಕರು ಮೀಸಲಾತಿ ಬೇಡಿಕೆ ಈಡೇರಿಸಿ ಎಂದು ಮುಖ್ಯಮಂತ್ರಿ ಮುಂದೆ ಏಕೆ ಕೇಳುತ್ತಿಲ್ಲ ಎಂದು ಗೊತ್ತಾಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮುಖ್ಯಮಂತ್ರಿ ಭೇಟಿಗಾಗಿ ದಿನಾಂಕ ನಿಗದಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅ.18ರಂದು ಬೆಂಗಳೂರಿನಲ್ಲಿ ಧರಣಿ ನಡೆಸಿದ ನಂತರವೂ ಮುಖ್ಯಮಂತ್ರಿ ಭೇಟಿಗೆ ಸಮಯ ನಿಗದಿಯಾಗದಿದ್ದರೆ ವಿಧಾನಸೌಧಕ್ಕೆ ಹೋಗಿ ಅಸಮಾಧಾನ ಹೊರಹಾಕುತ್ತೇವೆ” ಎಂದು ತಿಳಿಸಿದರು.
”ನಾನು ಶ್ರೀಗಳನ್ನು ಸಿ.ಎಂಗೆ ಭೇಟಿ ಮಾಡಿಸಿದ್ದೇನೆ” ಎಂಬ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ‘ಎಲ್ಲಿ ಭೇಟಿ ಮಾಡಿಸಿದ್ದಾರೆ’ ಎಂದು ಸುದ್ದಿಗಾರರನ್ನೇ ಮರುಪ್ರಶ್ನಿಸಿದರು.