ತಂತ್ರಜ್ಞಾನ ಮತ್ತು ಅಂತರ್ಜಾಲದ ಸವಲತ್ತುಗಳು ಮನುಷ್ಯನ ದಿನನಿತ್ಯದ ಕೆಲಸ ಕಾರ್ಯಗಳನ್ನು ಸುಲಭ ಮಾಡಿವೆ. ಬೆರಳ ತುದಿಯಲ್ಲೇ ಲೋಕವನ್ನು ತೆರೆದಿಟ್ಟು ಬೆರಗುಟ್ಟಿಸಿವೆ. ಆದರೆ, ಆ ಸವಲತ್ತು-ಸುಲಭದ ಹಾದಿಯೇ ವಂಚಕರಿಗೆ ಹಣ ಸಂಪಾದನೆಯ ಮಾರ್ಗವೂ ಆಗಿದೆ, ಅಂಥವರ ಸಂಖ್ಯೆ ಮಿತಿ ಮೀರುತ್ತಿದೆ. ಸೈಬರ್ ಅಪರಾಧ ಪತ್ತೆ ಹಚ್ಚುವುದು ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ಸವಾಲಾಗಿದೆ.
ಮಾಹಿತಿ ತಂತ್ರಜ್ಞಾನ ಬೆಳವಣಿಗೆಯಾದಂತೆ, ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಫೋನ್ ಕಾಣಿಸಿಕೊಳ್ಳುತ್ತಿದ್ದಂತೆ, ಪ್ರತಿದಿನವೂ, ಪ್ರತಿಕ್ಷಣವೂ ಸೈಬರ್ ಅಪರಾಧದ ಅಪಾಯವೂ ಕೂಡ ಮೇರೆ ಮೀರುತ್ತಿದೆ. ಅಂತರ್ಜಾಲ ಹಾಗೂ ತಂತ್ರಜ್ಞಾನದ ಸುರಕ್ಷಿತ ಬಳಕೆಯ ಕುರಿತು ಐಟಿ-ಬಿಟಿ ಕಂಪನಿಗಳು, ಸರ್ಕಾರ, ಪೊಲೀಸ್ ಇಲಾಖೆ- ಯಾರು ಎಷ್ಟೇ ಎಚ್ಚರಿಕೆ ವಹಿಸಿದರೂ ತಡೆಗಟ್ಟುವುದು, ನಿಯಂತ್ರಿಸುವುದು ದಿನದಿಂದ ದಿನಕ್ಕೆ ಸವಾಲಾಗುತ್ತಿದೆ.
ಸೈಬರ್ ಕ್ರೈಮ್ ಎನ್ನುವುದು ಕ್ರಿಮಿನಲ್ ಚಟುವಟಿಕೆಯಾಗಿದ್ದು ಅದು ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಫೋನ್, ಕಂಪ್ಯೂಟರ್ ನೆಟ್‌ವರ್ಕ್ ಸಾಧನಗಳನ್ನು ಗುರಿಯಾಗಿಸಿಕೊಳ್ಳಲಾಗುತ್ತದೆ. ಅದಕ್ಕೆ ತಕ್ಕಂತೆ ಎಟಿಎಂ, ಕ್ಯೂ ಆರ್ ಕೋಡ್, ಬ್ಯಾಂಕ್ ಕೆವೈಸಿ, ಆಧಾರ್ ಜೋಡಣೆ, ಟಿಕೆಟ್ ಕಾಯ್ದಿರಿಸುವಿಕೆ, ಯುಪಿಐ, ಇ-ಕಾಮರ್ಸ್ ಮುಂತಾದೆಡೆ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿದೆ ಮತ್ತು ಜನಸಾಮಾನ್ಯರೂ ಇದಕ್ಕೆ ತೆರೆದುಕೊಂಡಿದ್ದಾರೆ.
ತಂತ್ರಜ್ಞಾನ ಮತ್ತು ಅಂತರ್ಜಾಲದ ಸವಲತ್ತುಗಳು ಮನುಷ್ಯನ ದಿನನಿತ್ಯದ ಕೆಲಸ ಕಾರ್ಯಗಳನ್ನು ಸುಲಭ ಮಾಡಿವೆ, ನಿಜ. ಬೆರಳ ತುದಿಯಲ್ಲೇ ಲೋಕವನ್ನು ತೆರೆದಿಟ್ಟು ಬೆರಗುಟ್ಟಿಸಿದೆ, ಅದೂ ನಿಜ. ಆದರೆ, ಆ ಸವಲತ್ತು-ಸುಲಭದ ಹಾದಿಯೇ ಕೆಲವರಿಗೆ ಹಣ ಸಂಪಾದನೆಯ ಮಾರ್ಗವೂ ಆಗಿದೆ, ಅಂಥವರ ಸಂಖ್ಯೆ ಮಿತಿ ಮೀರುತ್ತಿದೆ. ಸೈಬರ್ ಅಪರಾಧವನ್ನು ವ್ಯಕ್ತಿಗಳು, ಸಂಸ್ಥೆಗಳು- ಯಾರೋ ಎಲ್ಲೋ ಕೂತು ಮಾಡುತ್ತಿದ್ದಾರೆ. ಅವರು ಸಾಮಾನ್ಯರಿಗಿಂತ ಬುದ್ಧಿವಂತರು, ಸಂಘಟಿತರು, ಸುಧಾರಿತ ತಂತ್ರಗಳನ್ನು ಬಳಸುತ್ತಾರೆ ಮತ್ತು ತಾಂತ್ರಿಕವಾಗಿ ನುರಿತವರಾಗಿದ್ದಾರೆ. ಇನ್ನು ಕೆಲವರು ಅನನುಭವಿ ಹ್ಯಾಕರ್‌ಗಳು ತಮಾಷೆಗಾಗಿ, ಚಟಕ್ಕಾಗಿ, ಮಾದಕವ್ಯಸನದ ಉನ್ಮತ್ತ ಸ್ಥಿತಿಯಲ್ಲಿ ಮಾಡುವವರೂ ಇದ್ದಾರೆ.
2020ರಲ್ಲಿ, ಬಿಜೆಪಿ ಸರ್ಕಾರವಿದ್ದಾಗ ಶ್ರೀಕಿ ಎಂಬ ಮಾದಕವ್ಯಸನಿ ಅಂತಾರಾಷ್ಟ್ರೀಯ ಮಟ್ಟದ ಆನ್‌ಲೈನ್ ಗೇಮಿಂಗ್ ಕಂಪನಿಗಳು ಹಾಗೂ ಸರ್ಕಾರದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಸುಮಾರು 11 ಕೋಟಿಯನ್ನು ದೋಚಿದ್ದ. ಆ ಸಂಗತಿಯನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದ. ಶ್ರೀಕಿಗೆ ಸ್ಟಾರ್ ಹೋಟೆಲ್ ವಾಸ್ತವ್ಯ ಮತ್ತು ಮಾದಕವಸ್ತು ಸರಬರಾಜು ಮಾಡಿ, ಈ ಕೃತ್ಯದಲ್ಲಿ ಬಳಸಿಕೊಂಡ ರಾಜಕಾರಣಿಗಳ ಮಕ್ಕಳು ಹಾಗೂ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು 11 ಕೋಟಿಯ ಬಿಟ್ ಕಾಯಿನ್‌ಗಳನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದು ಸುದ್ದಿಯಾಗಿತ್ತು.
ಬಿಟ್ ಕಾಯಿನ್ ವ್ಯವಹಾರಕ್ಕೆ ಬಳಕೆದಾರರ ವೈಯಕ್ತಿಕ ವಿವರದ ಅಗತ್ಯವಿಲ್ಲ. ಅನಾಮಿಕರಾಗಿಯೂ ವಹಿವಾಟು ನಡೆಸಬಹುದು. ಹೀಗಾಗಿ ಇದರಲ್ಲಿ ಪಾಲ್ಗೊಂಡವರನ್ನು ಪತ್ತೆ ಹಚ್ಚುವುದು ತೀರಾ ಕಷ್ಟ. ಯಾವುದೇ ರಾಷ್ಟ್ರದ ವಿದೇಶಾಂಗ ನೀತಿ, ಬ್ಯಾಂಕಿಂಗ್ ನಿಯಮ, ಆದಾಯ ತೆರಿಗೆ ಇಲಾಖೆಗಳ ಅಡ್ಡಿ– ಆತಂಕಗಳೂ ಬಿಟ್ ಕಾಯಿನ್‌ಗೆ ಸದ್ಯಕ್ಕಿಲ್ಲ. ಇದೇ ಕಾರಣಕ್ಕೆ, ದಂಧೆಕೋರರಿಗೆ ಬಿಟ್ ಕಾಯಿನ್ ವ್ಯವಹಾರ ಸಲೀಸಾಗಿದೆ. ಆದಕಾರಣ, ಶ್ರೀಕಿ ಕೇಸ್‌ನಲ್ಲಿ ರಾಜಕಾರಣಿಗಳ ಮಕ್ಕಳ ಹೆಸರೂ ಹೊರಬರಲಿಲ್ಲ ಮತ್ತು ಲೂಟಿಯಾದ ಹಣವೂ ಪತ್ತೆಯಾಗಲಿಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹೆಣ್ಣಿನ ಮೇಲಿನ ಶೋಷಣೆ ತಡೆಯುವಲ್ಲಿ ಕುಟುಂಬಗಳಿಗಿದೆ ಪ್ರಧಾನ ಪಾತ್ರ!
ಇತ್ತೀಚೆಗೆ ಬೆಂಗಳೂರು ನಗರ ಪೊಲೀಸರು ಹಂಚಿಕೊಂಡ ಮಾಹಿತಿ ಪ್ರಕಾರ, ನಗರದಲ್ಲಿ ಪ್ರತಿದಿನ 50ಕ್ಕೂ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ಎಂಟು ತಿಂಗಳಲ್ಲಿ, ಆಗಸ್ಟ್ 31ರವರೆಗೆ 12,356 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. 1,242 ಕೋಟಿ ರೂಪಾಯಿಗಳು ವಂಚಕರ ವಶವಾಗಿದೆ. ಇದು ಸಣ್ಣ ಮೊತ್ತವಲ್ಲ. ಇದರ ಹಿಂದಿರುವ ಜಾಲವನ್ನು ಜಾಲಾಡುವುದು ಅಷ್ಟು ಸುಲಭವೂ ಅಲ್ಲ. ನಮ್ಮ ಪೊಲೀಸ್ ಇಲಾಖೆ ಆ ಮಟ್ಟಿಗಿನ ತಂತ್ರಜ್ಞಾನವನ್ನೂ ಅಳವಡಿಸಿಕೊಂಡಿಲ್ಲ, ತರಬೇತಿಯನ್ನೂ ಪಡೆದಿಲ್ಲ.
ತಿಂಗಳ ಹಿಂದೆ, ಶಿವಮೊಗ್ಗ ಜಿಲ್ಲೆಯ ಸಾಗರದ ವೈದ್ಯರೊಬ್ಬರು ಶೇರು ವ್ಯವಹಾರದಲ್ಲಿ ಹಣ ತೊಡಗಿಸಲು ಹೋಗಿ 84 ಲಕ್ಷ ಕಳೆದುಕೊಂಡಿದ್ದರು. ಸಾಮಾನ್ಯವಾಗಿ ವೈದ್ಯರು ಎಂದರೆ, ಕಲಿತವರು, ತಿಳಿದವರು, ಹೊಸಗಾಲದ ತಂತ್ರಜ್ಞಾನಕ್ಕೆ ತೆರೆದುಕೊಂಡವರು ಎಂಬುದು ಸಾಮಾನ್ಯರ ಭಾವನೆ. ಆದರೆ, ಅವರೇ ಸೈಬರ್ ವಂಚಕರ ಬಲೆಗೆ ಬಿದ್ದು, ಹಣ ಕಳೆದುಕೊಂಡಿದ್ದರು.
ವಂಚನೆಗೊಳಗಾದ ವೈದ್ಯರು ಠಾಣೆಗೆ ತೆರಳಿ ದೂರು ದಾಖಲಿಸಿದರು. ಅದರ ಹಿಂದೆಯೇ ಶಿವಮೊಗ್ಗದ ಗೋಪಾಳ ಬಡಾವಣೆಯ ವ್ಯಾಪಾರಿಯ 52 ಲಕ್ಷ, ವಿವೇಕಾನಂದ ಬಡಾವಣೆಯ ಅರಣ್ಯ ಇಲಾಖೆ ನೌಕರನ 32 ಲಕ್ಷ, ವಿಜಯನಗರದ ವ್ಯಾಪಾರಿಯ 11 ಲಕ್ಷ ಹಣ ಕೂಡ ಅದೇ ಶೇರು ವ್ಯವಹಾರದಲ್ಲಿ ವಂಚಕರ ಪಾಲಾಗಿದ್ದು ಬಯಲಾಗಿತ್ತು.
ಶೇರು ವ್ಯವಹಾರದಲ್ಲಿ ಹಣ ಹೂಡಿ ಹೆಚ್ಚಿನ ಲಾಭಾಂಶ ಗಳಿಸಬಹುದೆಂಬ ಆಸೆಯಿಂದ ಅಪರಿಚಿತ ಕರೆ ಸ್ವೀಕರಿಸಿ, ಮಾಹಿತಿ ತಿಳಿಯುವ ಹಂತದಲ್ಲಿ ತಮ್ಮ ವೈಯಕ್ತಿಕ ವಿವರಗಳನ್ನು, ಬ್ಯಾಂಕಿಂಗ್ ಮಾಹಿತಿಯನ್ನು ಹಂಚಿಕೊಂಡಿರುತ್ತಾರೆ. ಕ್ಷಣಾರ್ಧದಲ್ಲಿ ವಂಚಕರ ಬಲೆಗೆ ಬಿದ್ದು, ಹಣ ಕಳೆದುಕೊಂಡಿರುತ್ತಾರೆ. ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಸೈಬರ್ ಅಪರಾಧಗಳ ಸ್ವರೂಪವೂ ಬದಲಾಗುತ್ತಿದೆ. ವಂಚಕರ ಕಾರ್ಯವಿಧಾನದಲ್ಲಿಯೂ ಬದಲಾವಣೆ ಆಗಿದೆ. ಇದು ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹೆಚ್ಚುತ್ತಿರುವ ಸೈಬರ್ ಅಪರಾಧವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ʼಕರ್ನಾಟಕ ಸೈಬರ್ ಸೆಕ್ಯುರಿಟಿ ಪಾಲಿಸಿ-2024ʼ ಜಾರಿಗೆ ತಂದಿದೆ. ಸೈಬರ್ ಸೆಕ್ಯುರಿಟಿ ನೀತಿಯ ಜೊತೆಗೆ ಸಿಸ್ಕೋ ಸಹಯೋಗದೊಂದಿಗೆ ʼಸೈಬರ್ ಸೆಕ್ಯುರಿಟಿʼ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನೂ ಪ್ರಾರಂಭಿಸಿದೆ.
ಆದರೆ, ಸೈಬರ್ ವಂಚಕರು ತಂತ್ರಜ್ಞಾನದಷ್ಟೇ ಮುಂದಿದ್ದಾರೆ. ಆ ವಂಚನೆಯ ಆಳ-ಅಗಲ ಅರಿಯುವುದು ಕಷ್ಟವಿದೆ. ಅವರನ್ನು ಪತ್ತೆಹಚ್ಚುವ, ಹಿಡಿಯುವ ಜವಾಬ್ದಾರಿ ಹೊತ್ತಿರುವ ನಮ್ಮ ಪೊಲೀಸರಿಗೆ ನೂರೆಂಟು ಕೇಸುಗಳ ಜೊತೆಗೆ ಅದೂ ಒಂದು. ಜೊತೆಗೆ ಕೆಲಸದ ಒತ್ತಡ, ಸಿಬ್ಬಂದಿ ಕೊರತೆಯೂ ಇದೆ. ಸರ್ಕಾರವೂ ಕಾಲಕಾಲಕ್ಕೆ ತೆರವಾದ ಹುದ್ದೆಗಳನ್ನು ತುಂಬದೆ ಖಾಲಿ ಉಳಿಸಿಕೊಂಡಿರುವುದು ಇಲಾಖೆಯ ಮೇಲೆ ಒತ್ತಡ ಹೆಚ್ಚಾಗಲು ಕಾರಣವಾಗಿದೆ.
ಇದು ಸಹಜವಾಗಿಯೇ ಎಲ್ಲೋ ಕೂತು ಕಾರ್ಯನಿರ್ವಹಿಸುವ ಸೈಬರ್ ವಂಚಕರಿಗೆ ಅನುಕೂಲ ಮಾಡಿಕೊಟ್ಟಿದೆ. ಅದಕ್ಕೆ ಮನುಷ್ಯರ ಮರ್ಕಟ ಮನಸ್ಸು ಸಹಕರಿಸಿದೆ. ಜನ ಜಾಗೃತರಾಗದಿದ್ದರೆ, ಮುಂದಾಗಬಹುದಾದ ವಂಚನೆ, ಮೋಸಗಳನ್ನು ಊಹಿಸಲೂ ಸಾಧ್ಯವಿಲ್ಲ.
