ಅಮೆರಿಕಗೆ ತೆರಳುವ ಒಂದು ವಿಮಾನ ಸೇರಿದಂತೆ ನಾಲ್ಕು ವಿಮಾನಗಳಿಗೆ ಮಂಗಳವಾರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಬಾಂಬ್ ಬೆದರಿಕೆ ಹಾಕಲಾಗಿದೆ. ‘ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್’ ಎಂಬ ಎಕ್ಸ್ ಖಾತೆಯ ಮುಖಾಂತರ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಆ ಸಂದೇಶಗಳಲ್ಲಿ, ಎಕ್ಸ್ ಹ್ಯಾಂಡಲ್ ಏರ್ ಲೈನ್ ಮತ್ತು ಪೊಲೀಸ್ ಇಲಾಖೆಯ ಖಾತೆಗಳನ್ನು ಟ್ಯಾಗ್ ಮಾಡಲಾಗಿದೆ.
ಜೈಪುರದಿಂದ ಅಯೋಧ್ಯೆ ಮೂಲಕ ಬೆಂಗಳೂರಿಗೆ ತೆರಳುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ (IX765), ದರ್ಭಾಂಗದಿಂದ ಮುಂಬೈಗೆ ತೆರಳುವ ಸ್ಪೈಸ್ ಜೆಟ್ ವಿಮಾನ (SG116), ಸಿಲಿಗುರಿಯಿಂದ ಬೆಂಗಳೂರಿಗೆ ಆಕಾಶ ಏರ್ ವಿಮಾನ (QP 1373) ಹಾಗೂ ದೆಹಲಿಯಿಂದ ಚಿಕಾಗೋಗೆ ತೆರಳುವ ಏರ್ ಇಂಡಿಯಾ ವಿಮಾನ (AI 127)ಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಈ ಬೆದರಿಕೆಯಿಂದ ನೂರಾರು ಪ್ರಯಾಣಿಕರು ಮತ್ತು ಏರ್ಲೈನ್ ಸಿಬ್ಬಂದಿಗಳು ಅತಂಕಗೊಂಡಿದ್ದಾರೆ.
ಬೆದರಿಕೆ ಬಂದ ಕೂಡಲೇ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದು, ವಿಮಾನಗಳೊಳಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಮಾಡಿದ ಸಂದೇಶಗಳು ಸುಳ್ಳು ಎಂದು ಘೋಷಿಸಲಾಗಿದೆ.
ಇನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ಒಳಪಡಿಸಲಾಗಿತ್ತು.
ಇನ್ನು, ನಿನ್ನೆ ಕೂಡ ಅಂತಾರಾಷ್ಟ್ರೀಯ ವಿಮಾನಗಳಿಗೂ ಬಾಂಬ್ ಬೆದರಿಕೆ ಬಂದಿತ್ತು. ಪರಿಣಾಮವಾಗಿ, ದೆಹಲಿಯಿಂದ ಚಿಕಾಗೋಗೆ ತೆರಳುತ್ತಿದ್ದ ಎಐ ವಿಮಾನವನ್ನು ಭದ್ರತಾ ತಪಾಸಣೆಗಾಗಿ ಕೆನಡಾಕ್ಕೆ ತಿರುಗಿಸಲಾಗಿದೆ ಎಂದು ಫ್ಲೈಟ್-ಟ್ರ್ಯಾಕಿಂಗ್ ವೆಬ್‌ಸೈಟ್ ಹೇಳಿದೆ.
ಸೌದಿ ಅರೇಬಿಯಾದಿಂದ ಇಂಡಿಗೋ ವಿಮಾನವು ಬಾಂಬ್ ಬೆದರಿಕೆಯ ನಂತರ ಜೈಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬೆದರಿಕೆಗಳ ಹಿಂದಿರುವ ವ್ಯಕ್ತಿ ಅಥವಾ ಜನರನ್ನು ಪತ್ತೆಹಚ್ಚಲು ಭಾರತೀಯ ಸೈಬರ್-ಸೆಕ್ಯುರಿಟಿ ಏಜೆನ್ಸಿಗಳು ಮತ್ತು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಸಹಾಯ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.