ಛಿದ್ರಗೊಂಡಿರುವ ಸಮಾಜ ಮತ್ತು ಚುನಾವಣೆಯ ಚಿತ್ರಗಳು

Date:

Advertisements
ಪ್ರಸಕ್ತ ಆಡಳಿತ ವಿರೋಧಿ ವಾತಾವರಣ ಬಹುತೇಕ ಕಡೆಗಳಲ್ಲಿ ಕಂಡು ಬಂದಿದೆ. ಚುನಾವಣಾ ಕದನವು ಬೊಮ್ಮಾಯಿ v/s ಸಿದ್ದರಾಮಯ್ಯ ಆಗುವ ಬದಲಿಗೆ, ನರೇಂದ್ರ ಮೋದಿ v/s ಸಿದ್ದರಾಮಯ್ಯ ಎಂಬಂತಾಗಿತ್ತು. ಇಲ್ಲಿ ರಾಷ್ಟ್ರೀಯ ಸುರಕ್ಷತೆ, ಫುಲ್ವಾಮ, ಬಾಲಾಕೋಟ್ ಚರ್ಚೆಗೆ ತರಲು ಯಾರಿಗೂ ಸಾಧ್ಯವಾಗಿಲ್ಲ. ಕೆಲ ಭಜರಂಗಿಯಂತಹ ಭಾವನಾತ್ಮಕ ವಿಚಾರಗಳು ಮಾತ್ರ ಮುನ್ನೆಲೆಗೆ ಬಂದಿದ್ದವು.

ದೇಶ ಸುತ್ತು ಇಲ್ಲವೇ ಕೋಶ ಓದು-ಇದು ನಮ್ಮಲ್ಲಿರುವ ನಾಣ್ಣುಡಿ. ಸದ್ಯ ನಡೆಯುತ್ತಿರುವ ಪ್ರಜಾಪ್ರಭುತ್ವದ ಹಬ್ಬದ ಸಡಗರವನ್ನು ಕೂಡ ಸುತ್ತಾಡಿ ಗಮನಿಸಿರುವೆ. 224 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಒಂದೇ ಹಂತದಲ್ಲಿ ನಡೆಸಿರುವುದರಿಂದ `ದಾಖಲೀಕರಣ’ ಮಾಡುವುದು ಒಂದು ಸವಾಲಾಗಿದೆ.

ಕಳೆದ 40 ದಿನಗಳಿಂದ ನಡೆಯುತ್ತಿರುವ `ಚುನಾವಣೆ‘ ಎಂಬ ಮಹಾಸಂಗ್ರಾಮದಲ್ಲಿ ಖುದ್ದು ಪ್ರಧಾನಿ ಮೋದಿ ಅವರೇ ನೇರವಾಗಿ ಭಾಗವಹಿಸಿದ್ದರು. ಅವರು `ನಾನ್‌ಸ್ಟಾಪ್’ ವಾಹನ ಏರಿದರೂ, ಅದರಲ್ಲಿ ಕಳಾಹೀನತೆಯಿತ್ತು. ಮೋದಿ ಮೇನಿಯಾದ ಫಲ ಗೊತ್ತಾಗಬೇಕಾದರೆ, ಇವಿಎಂ ಯಂತ್ರಗಳು ಮಾತನಾಡಬೇಕು.

ನಮ್ಮದು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಭೂಪ್ರದೇಶದಲ್ಲಿ ಏಳನೇ ಅತಿ ದೊಡ್ಡ ದೇಶವಾಗಿದೆ. ಪ್ರಜಾಪ್ರಭುತ್ವ ಹೊಂದಿರುವ ಅತ್ಯಂತ ಜನಪ್ರಿಯ ದೇಶವೂ ಆಗಿದೆ. ಜೀವನದ ಪ್ರತಿಯೊಂದು ಅಂಶದಲ್ಲೂ ವೈವಿಧ್ಯಮಯತೆಯಿಂದ  ಕೂಡಿರುವ ದೇಶವೂ ನಮ್ಮದಾಗಿದೆ. ದೇಶವು ಸಾಮಾಜಿಕ, ರಾಜಕೀಯ, ಆರ್ಥಿಕ, ಭೌಗೋಳಿಕವಾಗಿಯೂ ಕೂಡ ವೈವಿಧ್ಯಮಯವಾಗಿದೆ.

Advertisements

`ಚುನಾವಣೆ’ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಗಾಢವಾಗಿ ಸನ್ನಿಯಂತೆ ಆವರಿಸಿದೆ. ಮತದಾರರು ಇದೊಂದು `ಮಹಾನ್ ಉತ್ಸವ’ ಎಂಬಂತೆ ಸಂತಸದಿಂದ ಭಾಗಿಯಾಗಿದ್ದಾರೆ. ಇವರೊಂದಿಗೆ `ಚುನಾವಣಾ ಆಯೋಗದ ಗುರುತಿನ ಪತ್ರ’ ಹೊತ್ತು ಸಕ್ರಿಯವಾಗಿ ನಾನು ಕೂಡ ಭಾಗಿಯಾಗಿದ್ದಕ್ಕೆ ಸಂತಸವಿದೆ.

ಇದನ್ನು ಓದಿದ್ದೀರಾ?: ಚುನಾವಣೆಯ ಹೊತ್ತಲ್ಲೇ ಮಹತ್ವದ ಸಮೀಕ್ಷೆ; ಟಿವಿ ಚಾನೆಲ್‌ಗಳನ್ನು ಕನ್ನಡಿಗರು ತಿರಸ್ಕರಿಸುತ್ತಿದ್ದಾರೆ : ಇಲ್ಲಿದೆ ನೋಡಿ ಅಂಕಿ-ಅಂಶ, ಭಾಗ 1

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಮಡಿಕೇರಿ, ಕುಶಾಲನಗರಗಳಲ್ಲಿ ಕಂಡಂತೆ ಜನ `ಅಭಿವೃದ್ಧಿಗಾಗಿ’ ಮತ ಚಲಾಯಿಸಿದ್ದೇವೆಂದು ಹೇಳುತ್ತಿದ್ದಾರೆ. ಸುಳ್ಳುಬುರುಕರಿಗೆ, ಮರುಳು ಮಾಡುವವರಿಗೆ ಮತ ಚಲಾಯಿಸಲ್ಲವೆಂದು ವೀರಾವೇಶದ ಮಾತುಗಳನ್ನು ಆಡಿದ್ದಾರೆ. ಬೆಂಗಳೂರು ನಗರ ಹೊರತುಪಡಿಸಿದರೆ, ಉಳಿದೆಡೆ ಎಲ್ಲಿ ಕಂಡರೂ ಅಲ್ಲಿ `ಚುನಾವಣೆ’ಯದ್ದೇ  ಸದ್ದು. ಇದು ಸುಗ್ಗಿಕಾಲ ಆಗಿರುವುದರಿಂದ, ಬಿತ್ತನೆ ಕೆಲಸ ಇನ್ನೂ ಬಂದಿಲ್ಲ. ಹೀಗಾಗಿ ಜನ ಎಂಟು ಗಂಟೆಗೆ ಹೋಟೆಲ್‌ಗಳ ಬಳಿ ಜಮಾವಣೆಯಾಗುತ್ತಿದ್ದಾರೆ. ಎಲ್ಲರ ಕೈಯಲ್ಲೂ ಚಹಾ, ಕಾಫಿ, ಬೀಡಿ, ಸಿಗರೇಟು ಅಲಂಕರಿಸಿಬಿಟ್ಟಿವೆ. ಇವರ ಮಾತಿನ ಧಾಟಿ `ರಾಜಕೀಯ ನಿಪುಣ’ರಿಗಿಂತ ಕಡಿಮೆ ಇಲ್ಲ. ಅಷ್ಟೊಂದು ಕರಾರುವಾಕ್ಕಾಗಿ ಜಾತಿವಾರು, ಧರ್ಮವಾರು ಲೆಕ್ಕಾಚಾರ ಹಾಕುತ್ತಿದ್ದಾರೆ.

ಇವೆಲ್ಲವುಗಳ ನಡುವೆ ಮತದಾನ ನಡೆದಿದೆ. 97 ಲಕ್ಷ 13 ಸಾವಿರದ 349 ಮತದಾರರಲ್ಲಿ 52 ಲಕ್ಷ 96 ಸಾವಿರದ 902 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 2013ರಲ್ಲಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚಿಸಿತ್ತು. ಇದರ ಮೂಲಕ ಮೈತ್ರಿ ಸರ್ಕಾರದ ಯುಗ ಅಂತ್ಯವಾಯಿತೆಂದು ಭಾವಿಸಲಾಗಿತ್ತು. ಆದರೆ ನಂತರ ನಡೆದ ಚುನಾವಣೆಯಲ್ಲಿ ಯಾವೊಂದು ಪಕ್ಷವೂ ಬಹುಮತ ಪಡೆಯಲಾಗಲಿಲ್ಲ. ಕಾಂಗ್ರೆಸ್-ಜೆಡಿಎಸ್ ಕೂಡಿ ಮೈತ್ರಿ ಸರ್ಕಾರ ರಚಿಸಿದವು. ನಂತರ ನಡೆದ 17 ಶಾಸಕರ ರಾಜೀನಾಮೆ ಪ್ರಹಸನದಿಂದ ಮೈತ್ರಿ ಸರ್ಕಾರ ಕುಸಿದು ಬಿತ್ತು. ಭಾಜಪ ಸರ್ಕಾರ ರಚಿಸಿ, ಬಹುಮತ ಸಾಬೀತುಪಡಿಸಿತು.

ಪ್ರಧಾನಿ ಮೋದಿ ಅವರ ದೌರ್ಬಲ್ಯದ ವಲಯ ಎಂದರೆ, ಅದು ಆರ್ಥಿಕತೆ. ಆರ್ಥಿಕತೆ ವಿಚಾರದಲ್ಲಿ ಸಿದ್ದರಾಮಯ್ಯ ಸಿದ್ಧಹಸ್ತರು. ಮಧ್ಯರಾತ್ರಿಯಲ್ಲಿ ಎಬ್ಬಿಸಿ ಆಯ-ವ್ಯಯ, ಆದಾಯ, ಖರ್ಚು, ಸಾಲದ ವಿವರ ಕೇಳಿದರೂ ಕರಾರುವಾಕ್ಕಾಗಿ ಹೇಳುವಷ್ಟು ನಿಪುಣತೆ ಹೊಂದಿದ್ದಾರೆ. ಇದಲ್ಲದೆ ಅಂದಾಜು 1.3 ಬಿಲಿಯನ್ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಸುಧಾರಿತ ಶಿಕ್ಷಣ ವ್ಯವಸ್ಥೆಯಿಂದಾಗಿ ಪ್ರತಿ ತಿಂಗಳು ಅರ್ಧ ಮಿಲಿಯನ್ ಜನ ಉದ್ಯೋಗಾಕಾಂಕ್ಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಇದು ಪ್ರಧಾನಿ ಮೋದಿ ಅವರಿಗೆ ಕಠಿಣ ಸವಾಲಾಗಿದೆ. ಅವರು 10 ಮಿಲಿಯನ್ ಉದ್ಯೋಗ ಸೃಷ್ಟಿಸುವುದಾಗಿ ನಿರುದ್ಯೋಗಿಗಳ ಮನದಲ್ಲಿ ಆಸೆ ಮೂಡಿಸಿದ್ದರು. ಇದು ಮಹತ್ವಾಕಾಂಕ್ಷೆಯ ಯೋಜನೆಯಾಯಿತೇ ಹೊರತು ಸಾಧಿಸಲು ಇನ್ನೂ ಸಾಧ್ಯವಾಗಿಲ್ಲ. ಉದ್ಯೋಗ ಸೃಷ್ಟಿಸುವುದಿರಲಿ, ಇದ್ದ ಉದ್ಯೋಗಗಳನ್ನೂ ಕಳೆಯಲಾಗುತ್ತಿದೆ. ಕಳೆದೆರಡು ವರ್ಷಗಳ ಹಿಂದೆ ಬಿಎಸ್‌ಎನ್‌ಎಲ್ ಒಂದರಲ್ಲಿಯೇ 5 ಲಕ್ಷ ಮಂದಿ ಉದ್ಯೋಗ ಬಿಟ್ಟು ಹೊರಹೋಗಿದ್ದರು. ನಮ್ಮಲ್ಲಿದ್ದ 400 ಮಿಲಿಯನ್ ಹುದ್ದೆಗಳು 2016ರಿಂದ 2019ರೊಳಗೆ ಇಳಿಕೆಯಾಗಿದ್ದನ್ನು ಮರೆಯುವಂತಿಲ್ಲ.

ಇಷ್ಟಕ್ಕೂ 1950ರಿಂದ ನಮ್ಮದು ಜಾತ್ಯತೀತ ಗಣರಾಜ್ಯ. ಪ್ರಜಾಪ್ರಭುತ್ವ ಸಂಸದೀಯ ವ್ಯವಸ್ಥೆಯಲ್ಲಿ ಆಡಳಿತ ನಡೆಸಲಾಗುತ್ತಿದೆ. ನಮ್ಮದು ಬಹುತ್ವ, ಬಹುಭಾಷಾ ಮತ್ತು ಬಹು ಜನಾಂಗೀಯ ಸಮಾಜವೂ ಆಗಿದೆ. ರಾಷ್ಟ್ರಪತಿ ಸಶಸ್ತ್ರ  ಪಡೆಗಳ ಸರ್ವೋಚ್ಚ ಕಮಾಂಡರ್, ಪ್ರಥಮ ಪ್ರಜೆ ಮತ್ತು ಮುಖ್ಯಸ್ಥರು ಆಗಿರುತ್ತಾರೆ. ಆದರೆ ಪ್ರಧಾನಿಯಾದವರು ಕಾರ್ಯನಿರ್ವಾಹಕ ಅಧಿಕಾರವನ್ನು ಹೊಂದಿರುವ ಮುಖ್ಯಸ್ಥರಾಗಿದ್ದಾರೆ. ಇದೇ ಮಾದರಿಯಲ್ಲಿ ರಾಜ್ಯಮಟ್ಟದಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿರುತ್ತಾರೆ. ಇಂತಹದ್ದೊಂದು ರಚನೆಯನ್ನು“ಸಂವಿಧಾನ” ಮಾಡಿದೆ.

ನಮ್ಮ ಚುನಾವಣಾ ವ್ಯವಸ್ಥೆ ಫಸ್ಟ್ ಪಾಸ್ಟ್ ದಿ ಪೋಸ್ಟ್ ಮಾದರಿಯನ್ನು ಆಧರಿಸಿದೆ. ಇದರಂತೆ ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಹಾಕುತ್ತಾರೆ. ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ. ಒಟ್ಟು ಮತದಲ್ಲಿ ಅರ್ಧಕ್ಕಿಂತ ಕಡಿಮೆ ಮತ ಗಳಿಸಿದವರು ಕೂಡ ವಿಜಯಶಾಲಿಗಳಾಗುತ್ತಾರೆ.

ಇಲ್ಲಿ ಒಂದು ಮತದ ಅಂತರದಿಂದ ಗೆದ್ದು ಬೀಗಿದವರು ಇದ್ದಾರೆ. 2004ರಲ್ಲಿ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎ.ಆರ್. ಕೃಷ್ಣಮೂರ್ತಿ ಅವರ ವಿರುದ್ಧ ಧ್ರುವನಾರಾಯಣ ಅವರು `ಒಂದು ಮತ’ದ ಅಂತರದಿಂದ ಗೆಲುವು ಸಾಧಿಸಿದ್ದರು. ಇದೇ ಬಗೆಯಲ್ಲಿ 2008ರ ರಾಜಸ್ತಾನ ವಿಧಾಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹುರಿಯಾಳು ಸಿ.ಪಿ. ಜೋಶಿ ಭಾಜಪದ ಕಲ್ಯಾಣ್‌ಸಿಂಗ್ ಚೌಹಾಣ್ ಎದುರು ಒಂದು ಮತದಿಂದ ಸೋತಿದ್ದರು.

ಪ್ರಸಕ್ತ ಆಡಳಿತ ವಿರೋಧಿ ವಾತಾವರಣ ಬಹುತೇಕ ಕಡೆಗಳಲ್ಲಿ ಕಂಡು ಬಂದಿದೆ. `ಚುನಾವಣಾ ಕದನ’ ಬೊಮ್ಮಾಯಿ v/s ಸಿದ್ದರಾಮಯ್ಯ ಆಗುವ ಬದಲಿಗೆ, ನರೇಂದ್ರ ಮೋದಿ v/s ಸಿದ್ದರಾಮಯ್ಯ ಎಂಬಂತಾಗಿತ್ತು. ಇಲ್ಲಿ ರಾಷ್ಟ್ರೀಯ ಸುರಕ್ಷತೆ, ಫುಲ್ವಾಮ, ಬಾಲಾಕೋಟ್ ಚರ್ಚೆಗೆ ತರಲು ಯಾರಿಗೂ ಸಾಧ್ಯವಾಗಿಲ್ಲ. ಕೆಲ ಭಜರಂಗಿಯಂತಹ ಭಾವನಾತ್ಮಕ ವಿಚಾರಗಳು ಮಾತ್ರ ಮುನ್ನೆಲೆಗೆ ಬಂದಿದ್ದವು. ಬೆಂಗಳೂರು ಸುತ್ತಮುತ್ತಲಿರುವ ಉತ್ತರ ಭಾರತೀಯರು ಯಥಾಪ್ರಕಾರ ಕಮಲಕ್ಕೆ ಅಂಟಿಕೊಂಡಿದ್ದಾರೆ. ಆದರೂ ಜನ ಹೇಳುವಂತೆ ಡಬಲ್ ಇಂಜಿನ್ ಸರ್ಕಾರ ವಿಫಲಗೊಂಡಿದೆ. ಅದರಲ್ಲೂ ಹಿಂದಿನ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿಯೇ ಕೃಷಿ ವಲಯದ ಅವನತಿ, ದುಬಾರಿ ಜಿಎಸ್‌ಟಿ, ಕುಸಿಯುತ್ತಿರುವ ಆರ್ಥಿಕತೆ, ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ, ಮೂಲ ಸೌಕರ್ಯಗಳ ಕೊರತೆ, ಮೇಕ್ ಇನ್ ಇಂಡಿಯಾ ವೈಫಲ್ಯ ಮುಂತಾದವುಗಳನ್ನು ಮರೆಸಲು `ದೇಶಭಕ್ತಿ’ಯ ಅಸ್ತ್ರ  ಪ್ರಯೋಗಿಸಲಾಗಿತ್ತು. ಇದೀಗ ಕರ್ನಾಟಕದಲ್ಲಿ ಮೀಸಲಾತಿ ಹೆಚ್ಚಳ, ಒಳಮೀಸಲು ಕಲ್ಪಿಸುವಿಕೆ, ಮುಸಲ್ಮಾನರ ಮತ ಬೇಡವೆಂದು ಹೇಳಿಕೆ ಕೊಡಿಸಿದ್ದು ಇವೆಲ್ಲ ತಂತ್ರ ಬಳಸಲಾಗಿದೆ. ಇದರೊಂದಿಗೆ ಮೇಲ್ವರ್ಗ ಮತ್ತು ಕೆಳವರ್ಗದಲ್ಲಿರುವವರ ಧಾರ್ಮಿಕ ಪ್ರಜ್ಞೆಯನ್ನು, ಸಾಮಾಜಿಕ ಸವಲತ್ತಿನ ಪ್ರಜ್ಞೆಯನ್ನು ಬಡಿದೆಬ್ಬಿಸಲು ಪ್ರಯತ್ನಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಫಲಕೊಟ್ಟಿದೆ ಎಂಬುದು ಇವಿಎಂ ಮತ ಯಂತ್ರಕ್ಕೆ ಮಾತ್ರ ಗೊತ್ತಿದೆ.

ಇದನ್ನು ಓದಿದ್ದೀರಾ?: ಸಂಘಪರಿವಾರದ ಇತಿಹಾಸ ನೋಡಿದರೆ ಅವರಿಗೆ ‘ಹೆಣರಾಜಕಾರಣ’ ಅಂದ್ರೆ ಬಲು ಇಷ್ಟ!

ಇದರ ಜೊತೆಗೆ ಮತ್ತಷ್ಟು ಸಮಸ್ಯೆಗಳೂ ಇವೆ. ಎಸ್.ಸಿ., ಎಸ್.ಟಿ. ವರ್ಗಗಳ ಅಸಂತೃಪ್ತಿಯ ಜಾಲದೊಳಗೆ ಪಂಚಮಸಾಲಿಗರು, ಮುಸಲ್ಮಾನರು ಕೂಡಿಕೊಂಡಿದ್ದಾರೆ. ಬಹಳ ವರ್ಷಗಳ ಬೇಡಿಕೆಯಾದ ಒಳಮೀಸಲು ತರಲಾಗಿದೆ. ಮೀಸಲು ಪ್ರಕರಣ ಏರಿಸಲಾಗಿದೆ. ಆದರೂ ಜಾರಿಗೆ ಬರುವ ಬಗ್ಗೆ ನಂಬಿಕೆ ಇಲ್ಲ.

ದಲಿತರು ಮತ್ತು ಹಿಂದುಳಿದ ವರ್ಗಗಳು, ಮುಸಲ್ಮಾನರು ಇಂದಿಗೂ ನಿಂದನೆಯನ್ನು ಎದುರಿಸುತ್ತಲೇ ಇದ್ದಾರೆ. ಅಂದಾಜು 100 ಮಿಲಿಯನ್‌ನಷ್ಟು `ಮತಬಲ’ ಹೊಂದಿರುವ ಇವರುಗಳಲ್ಲಿ ಹಿಂದೆ ಇದ್ದಂತಹ `ನಂಬಿಕೆ’ ಕುಸಿದಿದೆ. `ಹಿಂದೂವಾದ’ ಮೇಲ್ವರ್ಗಗಳಿಗಷ್ಟೆ `ಲಾಭ’ ತಂದುಕೊಡಲಿದೆ ಎನ್ನುವ ನಂಬಿಕೆ ಬಲವಾಗಿದೆ.

ಹಿಂದೆ ಪ್ರಧಾನಿ ಮೋದಿ ಅವರು ತಾನು ಚಹಾ ಮಾರುತ್ತಾ ರಾಜಕಾರಣದಲ್ಲಿ ಬೆಳೆದು ಬಂದಿರುವೆನೆಂದು ಬಿಂಬಿಸಿಕೊಂಡಿದ್ದರು. ಚಹಾ ಮಾರುವವರು ಸಾಮಾನ್ಯವಾಗಿ ಬಡಜನರೇ ಆಗಿರುತ್ತಾರೆ. ಮೇಲಾಗಿ ನಗರ ಪ್ರದೇಶಗಳಲ್ಲಿ ಹಿಂದುಳಿದವರು ಮತ್ತು ದಲಿತರೇ ಚಹಾ ಮಾರುವ ಉದ್ಯೋಗಸ್ಥರಾಗಿರುತ್ತಾರೆ. ಇಂತಹವರ ಶೇಕಡ 24ರಷ್ಟು ಮತ ಮೋದಿ ಅವರು ಪ್ರಧಾನಿ ಆಗಲೆಂದು ಬ್ಯಾಲೆಟ್ ಬಾಕ್ಸ್ ಅಂದರೆ ಇವಿಎಂ ಯಂತ್ರ ತುಂಬಿದ್ದರು. ಇವತ್ತಿಗೂ ಜನಸಂಖ್ಯೆಯಲ್ಲಿ ದೊಡ್ಡದಾಗಿರುವ ದಲಿತರು ಮದುವೆ ದಿಬ್ಬಣದಲ್ಲಿ ಕುದುರೆ ಸವಾರಿ ಮಾಡುವಂತಿಲ್ಲ. ದನದ ಚರ್ಮ ಸುಲಿಯುತ್ತಿದ್ದಾರೆಂಬ ಕಾರಣಕ್ಕೆ ಮುಸಲ್ಮಾನರು ದಾಳಿಗೊಳಾಗುತ್ತಿದ್ದಾರೆ. ಗೋಸಂರಕ್ಷಣೆಗಾಗಿ ಜನರ ಜೀವದೊಂದಿಗೆ ಸೆಣೆಸಲಾಗುತ್ತಿದೆ. ಇದರ ನಡುವೆ ಸಂಪ್ರದಾಯವಾದಿ ಹಿಂದೂಗಳು ತಮ್ಮ ಪ್ರಾಚೀನ ಸಂಪ್ರದಾಯ ಮತ್ತು `ಮೌಲ್ಯಗಳ ಸಂರಕ್ಷಕ’ರಾಗಿ ಪ್ರಧಾನಿ ಮೋದಿ ಅವರನ್ನು ಕಾಣುತ್ತಿದ್ದಾರೆ. ಸರ್ಕಾರದೊಳಗಡೆ ಸೇವೆ ಮಾಡುತ್ತಿರುವ ದಲಿತರು ಮತ್ತು ಅಲ್ಪಸಂಖ್ಯಾತರು ಕೂಡ `ಅಸುರಕ್ಷತೆ’ಯಿಂದ ಬಳಲುತ್ತಿದ್ದಾರೆಂದು ಸಾಮಾಜಿಕ ಮಾಧ್ಯಮಗಳು ತೋರುತ್ತಿವೆ.

ಪ್ರಸ್ತುತ ಪ್ರಜಾಪ್ರಭುತ್ವ ವಸಾಹತುಶಾಹಿಯೊಂದಿಗೆ ಕೂಡಿ ಅಭಿವೃದ್ಧಿ ಹೊಂದಿದೆ. ಹೀಗಾಗಿ ಕಾರ್ಪೊರೇಟ್ ವಸಾಹತುಶಾಹಿ ಕುಳಗಳ ಯೋಗಕ್ಷೇಮ ಕಾಯುವಂತಾಗಿದೆ. ಇತರರ ರಾಷ್ಟ್ರೀಯತೆಯನ್ನು ನಿರಾಕರಿಸಿ, ಅಂತಹ ನಿರಾಕರಣೆಯ ಮೇಲೆ `ದೇಶ’ ಕಟ್ಟಲು ಮುಂದಾಗಲಾಗುತ್ತಿದೆ. ಇದರಿಂದಾಗಿಯೇ ಮಣಿಪುರದಂತಹ ಸಂಘರ್ಷಗಳು ಉದ್ಭವಿಸಿ, ಹಿಂಸೆ ವೈಭವೀಕರಿಸಲಾಗುತ್ತಿದೆ.

ಇನ್ನು ತೋರಿಕೆಗಾಗಿ ಎಲ್ಲರ ಒಳಗೊಳ್ಳುವಿಕೆ ಕುರಿತಂತೆ `ಸಬ್‌ಕೆ ಸಾಥ್, ಸಬ್‌ಕೆ ವಿಕಾಸ್’ ಘೋಷಣೆ ಹೊರಬೀಳುತ್ತಲೇ ಇರುತ್ತದೆ. ಆದರೆ, ಓರ್ವ ಇಸ್ಲಾಂ ಧರ್ಮೀಯರಿಗೂ ಆಡಳಿತ ನಡೆಸುತ್ತಿರುವ ಪಕ್ಷ ಸ್ಪರ್ಧಿಸಲು ಅವಕಾಶ ಕೊಟ್ಟಿಲ್ಲ. ಕಳೆದೊಂದು ವರ್ಷದಿಂದ ಹೆಚ್ಚು ಧ್ರುವೀಕರಣ ನಡೆದಿದೆ. ಇದು ಹಿಂದೂತ್ವದ ಅಡಿಯಲ್ಲಿ ನಡೆದಿದ್ದರಿಂದ ಇಸ್ಲಾಂ ಧರ್ಮ ಮೂದಲಿಕೆಗೆ ಗುರಿಯಾಗಬೇಕಾಯಿತೆಂದು ಕೆಲವರು ನೋವಿನಿಂದ ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಪಕ್ಷ ಕಳೆದುಕೊಂಡಿದ್ದ ಲಿಂಗಾಯತ ಸಮುದಾಯದ ಮತಗಳನ್ನು ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಮೂಲಕ ಮತ್ತೆ ಗಳಿಸುವ ಉಮೇದಿನಲ್ಲಿದೆ. ಪ್ರಧಾನಿಯವರ ಸತತ ಪ್ರಚಾರ `ಮತ’ ಗಳಿಸಿಕೊಡುವುದು ಸಂಶಯವಾಗಿದೆ. ಕಾರಣ, ದೇಶ ಎದುರಿಸುತ್ತಿರುವ ಸಮಸ್ಯೆಗಳೆಲ್ಲವೂ ಸಾಮಾಜಿಕ ಮಾಧ್ಯಮಗಳ ಮೂಲಕ ಮುನ್ನೆಲೆಗೆ ಬಂದು ಕೂತಿವೆ.

ಈ ಸುದ್ದಿ ಓದಿದ್ದೀರಾ: ಚುನಾವಣೋತ್ತರ ಸಮೀಕ್ಷೆ | ಕಾಂಗ್ರೆಸ್‌ಗೆ ರಾಜ್ಯದ ಅಧಿಕಾರ?!

ಇದರ ನಡುವೆ ದೇವನೂರ ಮಹಾದೇವ ಅವರಂತಹ ಚಿಂತಕರು ಸಿದ್ದರಾಮಯ್ಯ ಅವರ ಪರ ವರುಣಾದಲ್ಲಿ ಮತ ಯಾಚಿಸಿದ್ದಾರೆ. ಇದರಿಂದಾಗಿ ವರುಣಾ ಮಾತ್ರವಲ್ಲದೆ, ರಾಜ್ಯದ ಉದ್ದಗಲ ಇರುವ ದಲಿತ ಸಮುದಾಯದವರ ಮತಗಳೂ ಕಾಂಗ್ರೆಸ್‌ನೆಡೆ ಹರಿದುಬಂದಿರುವ ಸಂಭವವಿದೆ.

ಹಾಗಂತ ಪ್ರಧಾನಿ ಮೋದಿ ಅವರ ವರ್ಚಸ್ಸು ಮತ ಸೆಳೆಯುವುದಿಲ್ಲ ಎನ್ನಲೂ ಆಗುವುದಿಲ್ಲ. ಇವತ್ತಿಗೂ ಭಾಜಪದ ಇತರೆ ನಾಯಕರಿಗೆ ಹೋಲಿಸಿದರೆ ಮೋದಿ ಅವರು ಹೆಚ್ಚು ಪರಿಣಾಮಕಾರಿಯಾಗಿದ್ದಾರೆ. ಆದರೆ, ಇಲ್ಲಿ ರಾಜಕೀಯ ಪಕ್ಷ, ಅಭ್ಯರ್ಥಿ, ಪ್ರಚಲಿತ ಸಮಸ್ಯೆ ಆಧರಿಸಿ ಮತ ಚಲಾವಣೆ ಆದಂತಿದೆ. ಅದು ಮತದಾನೋತ್ತರ ಸಮೀಕ್ಷೆಗಳಲ್ಲಿ ಪ್ರತಿಫಲನಗೊಳ್ಳುತ್ತಿದೆ.

ಡಾ. ಎಂ.ಎಸ್. ಮಣಿ
ಡಾ. ಎಂ ಎಸ್ ಮಣಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X