ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಜನರನ್ನು ಹೈರಾಣಾಗಿಸಿದೆ. ಮುಂದಿನ ಎರಡು ದಿನ ಕೂಡ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರಲ್ಲಿ ಮೊನ್ನೆ ರಾತ್ರಿ ಆರಂಭವಾದ ಮಳೆ ನಿನ್ನೆಯೆಲ್ಲ ಸುರಿದು ನಗರದಲ್ಲಿ ಹಲವಾರು ತೊಂದರೆಗಳನ್ನು ಸೃಷ್ಟಿಸಿತ್ತು. ನಗರದ ಬಹುತೇಕ ಕಡೆ ಜನಜೀವನ ಅಸ್ತವ್ಯಸ್ತ ಮಾಡಿದೆ. ಈ ಮಧ್ಯೆ ಹವಾಮಾನ ಇಲಾಖೆ ಮತ್ತೊಮ್ಮೆ ಎಚ್ಚರಿಕೆಯನ್ನ ನೀಡಿದ್ದು, ನಗರದಲ್ಲಿ ಮತ್ತೆರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ವಿಶ್ವದ ದೈತ್ಯ ಐಟಿ ಕಂಪನಿಗಳು ವಾಸ್ತವ್ಯ ಹೂಡಿರುವ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ರಸ್ತೆಯೇ ಕಾಣದಾಯಿತು. ಮಂಡಿ ಮಟ್ಟಕ್ಕೆ ತುಂಬಿದ್ದ ನೀರಿನಲ್ಲೇ ಬೈಕ್ ಸವಾರರು ಸಂಚಾರ ಮಾಡಿದರು.
ಬೆಂಗಳೂರಿನಲ್ಲಿ ನಿನ್ನೆ 59.8 ಮಿ.ಮೀ ಮಳೆಯಾಗಿದೆ. ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 80.01 ಮಿ.ಮೀ ಮಳೆ ದಾಖಲಾಗಿದೆ. ಹೆಣ್ಣೂರು ಬಾಗಲೂರು ಮುಖ್ಯ ರಸ್ತೆ ಹಾಗೂ ವಡ್ಡರಪಾಳ್ಯ ಸಾಯಿ ಬಡಾವಣೆಯ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಪಾಲಿಕೆ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪೊಲೀಸರಿಗೆ-ಸರ್ಕಾರಕ್ಕೆ ಸವಾಲಾಗಿರುವ ಸೈಬರ್ ಕ್ರೈಮ್
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮದಿಂದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೆರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದು ಮುಂದಿನ ಎರಡು ದಿನ ಮುಂದುವರೆಯಲಿದ್ದು, ಇಂದು, ನಾಳೆ ರಾಜ್ಯದ್ಯಾಂತ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಉಡುಪಿ, ದಕ್ಷಿಣ ಕನ್ನಡ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬೆಂಗಳೂರಿನಲ್ಲಿ ಇಂದು, ನಾಳೆ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಬುಧವಾರ ನಗರದ ಪ್ರಾಥಮಿಕ ಮತ್ತು ಫ್ರೌಡ ಶಾಲಾಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ. ಐಟಿ ಕಂಪನಿಗಳು ಕೂಡ ಮಳೆಯ ಹಿನ್ನೆಲೆ ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಂಗೆ ಅವಕಾಶ ನೀಡಿವೆ.
ನಗರದ ಮಳೆ ಅವಾಂತರದ ಸಂಬಂಧ ಡಿಸಿಎಂ ಡಿ ಕೆ ಶಿವಕುಮಾರ್ ಕೆಲ ಮಹತ್ವದ ಸೂಚನೆ ನೀಡಿದ್ದಾರೆ. ಮಳೆ ನೀರು ಮನೆಗಳಿಗೆ ನುಗ್ಗಿ ತೊಂದರೆಯಾದ ಕುಟುಂಬಗಳಿಗೆ ಪಾಲಿಕೆಯಿಂದ 10 ಸಾವಿರ ರೂ. ಶೀಘ್ರ ಪರಿಹಾರ ಬಿಡುಗಡೆಗೆ ಸೂಚನೆ ನೀಡಿದ್ದಾರೆ.
ಅಲ್ಲದೆ ಕೂಡಲೇ ಸಮಸ್ಯೆ ಇರುವ ಪ್ರದೇಶಗಳಲ್ಲಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಲಾಗಿದೆ. ಪಾಲಿಕೆ ವಾರ್ ರೂಂ 24 ಗಂಟೆ ಕೆಲಸ ಮಾಡುವಂತೆ ಸೂಚಿಸಿದ್ದು, ಮಳೆ ಎದುರಿಸಲು ಬೇಕಾದ ಸಿದ್ಧತೆಗಳನ್ನು ಶೀಘ್ರ ಕಾರ್ಯರೂಪಕ್ಕೆ ತರುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.
