ಜಮ್ಮು ಮತ್ತು ಕಾಶ್ಮೀರದ ನೂತನ ಸಿಎಂ ಆಗಿ ಒಮರ್ ಅಬ್ದುಲ್ಲಾ ಇಂದು ಪ್ರಮಾಣವಚನ ಸ್ವೀಕರಿಸಿದರು. ಶೇರ್ ಇ ಕಾಶ್ಮೀರ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್‌ನಲ್ಲಿ 11:30ಕ್ಕೆ ನಡೆದ ಸಮಾರಂಭದಲ್ಲಿ ಒಮರ್ ಅಬ್ದುಲ್ಲಾ ಎರಡನೇ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಪ್ರಮಾಣ ವಚನ ಬೋಧಿಸಿದರು.
370 ವಿಧಿ ರದ್ಧತಿಯ ಬಳಿಕ ನಡೆದ ಮೊದಲ ವಿಧಾನಸಭೆಯಲ್ಲಿ ಗೆಲುವು ಸಾಧಿಸಿದ ನ್ಯಾಷನಲ್ ಕಾನ್ಫರೆನ್ಸ್‌ನ ನಾಯಕರಾದ ಒಮರ್ ಅಬ್ದುಲ್ಲಾ ಮೊದಲ ಮುಖ್ಯಮಂತ್ರಿಯಾಗಿ ಸ್ಥಾನಕ್ಕೇರಲಿದ್ದಾರೆ. ಇದಕ್ಕೂ ಮುನ್ನ 2009-2014 ರಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಉಮರ್ ಅಬ್ದುಲ್ಲಾ ಅಕ್ಟೋಬರ್ 11ರಂದು ಹಕ್ಕು ಮಂಡಿಸಿದ್ದರು. 42 ಮಂದಿ ನ್ಯಾಷನಲ್ ಕಾನ್ಫರೆನ್ಸ್ ಶಾಸಕರು, ನಾಲ್ವರು ಪಕ್ಷೇತರರು, ಕಾಂಗ್ರೆಸ್ ಪಕ್ಷದ ಆರು ಮಂದಿ ಹಾಗೂ ಸಿಪಿಐ(ಎಂ)ನ ಒಬ್ಬ ಶಾಸಕರ ಬೆಂಬಲ ತಮಗಿದೆ ಎಂದು ಅಬ್ದುಲ್ಲಾ ಹೇಳಿದ್ದರು.
ಒಮರ್ ಅಬ್ದುಲ್ಲಾ ಅವರ ಮಂತ್ರಿಮಂಡಳಿಯು ಒಟ್ಟು 10 ಸಚಿವರನ್ನು ಹೊಂದಿರುತ್ತದೆ. ಇವರಲ್ಲಿ ಸಕೀನಾ ಇಟ್ಟು, ಸೈಫುಲ್ಲಾ ಮಿರ್, ಅಬ್ದುಲ್ ರಹೀಮ್ ರಾಥರ್, ಅಲಿ ಮೊಹಮ್ಮದ್ ಸಾಗರ್, ಸುರಿಂದರ್ ಸಿಂಗ್, ಅಜಯ್ ಸಾಧೋತ್ರಾ, ಪಿರ್ಜಾದಾ ಮೊಹಮ್ಮದ್ ಸೈಯದ್ ಮತ್ತು ಕೆಲವು ಸ್ವತಂತ್ರರು ಸೇರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜಾತಿ ಗಣತಿ | ಬಿಜೆಪಿ ತನ್ನ ನಿಲುವು ಹೇಳಲಿ: ಡಿ ಕೆ ಶಿವಕುಮಾರ್
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಎಸ್‌ಪಿ ನಾಯಕ ಅಖಿಲೇಶ್ ಯಾದವ್, ಆಪ್ ಮುಖಸ್ಥ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ವಿಧಾನಸಭೆಯ ಒಟ್ಟು 90 ಸ್ಥಾನಗಳಲ್ಲಿ ಎನ್‌ಸಿ 42 ಸ್ಥಾನಗಳನ್ನು ಗೆದಿದ್ದರೆ, ಕಾಂಗ್ರೆಸ್ 6 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ.
