ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಮುಗಿದಿದ್ದು, ಅಭ್ಯರ್ಥಿಗಳ ಭವಿಷ್ಯ ಶನಿವಾರ ನಿರ್ಧಾರವಾಗಲಿದೆ. ಈ ನಡುವೆ ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್‌ಗೆ ಗೆಲುವಿನ ದಿಕ್ಕನ್ನು ತೋರಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಈ ಸಮೀಕ್ಷೆಗಳನ್ನು ಅಲ್ಲಗಳೆದಿದ್ದಾರೆ.
ಚುನಾವಣಾ ನಂತರದ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಹಲವು ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಸೃಷ್ಟಿಯ ಕುರಿತು ಪ್ರತಿಪಾದಿಸಿ, ಕಾಂಗ್ರೆಸ್ ಹೆಚ್ಚು ಸೀಟುಗಳನ್ನು ಪಡೆಯಲಿದೆ ಎಂದು ಹೇಳಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯರ್ಶಿ ಬಿ ಎಲ್ ಸಂತೋಷ್ ಟ್ವಿಟರ್ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದು, ‘31,000 ಬೂತ್‌ಗಳಲ್ಲಿ ನಾವೇ ಮುನ್ನಡೆ ಸಾಧಿಸಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಎಲ್ಲ ಸಮೀಕ್ಷೆದಾರರಿಗೆ ಗೌರವದಿಂದ ಹೇಳಬಯಸುವುದೇನೆಂದರೆ, ಬಿಜೆಪಿಗೆ 2014ರಲ್ಲಿ 282 ಸ್ಥಾನ, 2019ರಲ್ಲಿ 303 ಸ್ಥಾನ (ಲೋಕಸಭಾ ಚುನಾವಣೆ), 2022ರಲ್ಲಿ 156 ಸ್ಥಾನ, 2018ರಲ್ಲಿ 104 ಸ್ಥಾನ ದೊರೆಯಬಹುದು ಎಂದು ಯಾವ ಸಮೀಕ್ಷೆಯೂ ನುಡಿದಿರಲಿಲ್ಲ. 2018ರಲ್ಲಿ 24,000 ಬೂತ್‌ಗಳಲ್ಲಿ ನಾವು ಲೀಡ್ ಪಡೆದಿದ್ದೆವು. ಆದರೆ, 14 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಯಾವ ಬೂತ್‌ನಲ್ಲಿಯೂ ಮುನ್ನಡೆ ಸಾಧಿಸಿರಲಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
“ಈ ಬಾರಿಯೂ ಎಲ್ಲ ವಿಧಾನಸಭಾ ಕ್ಷೇತ್ರಗಳೂ ನಮ್ಮ ಪರವಾಗಿರಲಿದ್ದು, 31,000 ಬೂತ್‌ಗಳಲ್ಲಿ ನಾವೇ ಲೀಡ್ ಪಡೆಯಲಿದ್ದೇವೆ. ಉಳಿದ ಅಂಕಿಸಂಖ್ಯೆಗಳು ನಿಮ್ಮ ಊಹೆಯಷ್ಟೇ” ಎಂದು ಸಮೀಕ್ಷೇಗಳನ್ನು ಅಲ್ಲಗಳೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹೈಕಮಾಂಡ್ ನನ್ನ ಸಿಎಂ ಮಾಡಿದ್ರೆ ಬೇಡ ಅನ್ನೋಕೆ ಆಗುತ್ತಾ?: ಡಾ. ಜಿ ಪರಮೇಶ್ವರ್