ಸಾರ್ವಜನಿಕ ಸೇವಾ ವಾಹನಗಳು ಕಡ್ಡಾಯವಾಗಿ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳುವ ಕುರಿತು ಸರಕಾರ ಆದೇಶ ಹೊರಡಿಸಿದೆ. ಇದರಲ್ಲಿ ಸಾರಿಗೆ ಇಲಾಖೆ ಮತ್ತು ಜಿಪಿಎಸ್ ಸಾಧನ ತಯಾರಿಕ ಕಂಪನಿಗಳ ಕಮಿಷನ್ ದಂಧೆ ಕುರಿತು ಸಾರ್ವಜನಿಕ ವಲಯದಲ್ಲಿ ಶಂಕೆ ವ್ಯಕ್ತವಾಗಿದ್ದು, ಸಾಮಾಜಿಕ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನಿರ್ಭಯ ಯೋಜನೆಯಡಿಯಲ್ಲಿ ಸಾರ್ವಜನಿಕ ಸೇವಾ ವಾಹನಗಳು ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಅಳವಡಿಕೆಯನ್ನು ಸರಕಾರ ಕಡ್ಡಾಯಗೊಳಿಸಿದ್ದು, ಸರಕಾರ ಹೇಳಿರುವ ಕಂಪನಿಯ ಸಾಧನಗಳನ್ನೇ ಅಳವಡಿಸಬೇಕೆಂದು ಒತ್ತಾಯಿಸುತ್ತಿದೆ. ಇದರಿಂದ ಈಗಾಗಲೇ ಜಿಪಿಎಸ್ ಅಳವಡಿಸಿಕೊಂಡಿರುವ ವಾಹನ ಮಾಲೀಕರಿಗೆ ಹೆಚ್ಚಿನ ಹೊರೆಯಾಗಲಿದೆ. ಇದು ಸಾರಿಗೆ ಇಲಾಖೆ ಮತ್ತು ಖಾಸಗಿ ಕಂಪನಿಗಳ ನಡುವಿನ ಕಮಿಷನ್ ದಂಧೆ ಎಂದು ಸಾಮಾಜಿಕ ಹೋರಾಟಗಾರರು ದೂರಿದ್ದಾರೆ.
ಕೇಂದ್ರ ಮೋಟಾರ್ ವಾಹನ ನಿಯಮಗಳಂತೆ ಬಸ್ಸುಗಳು, ಕ್ಯಾಬುಗಳು ಸೇರಿದಂತೆ ಸಾರ್ವಜನಿಕ ಸೇವಾ ವಾಹನಗಳಲ್ಲಿ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಿತ್ತು. ಈ ಯೋಜನೆಯ ಭಾಗವಾಗಿ ಕರ್ನಾಟಕ ಸಾರಿಗೆ ಇಲಾಖೆ ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರನ್ನು ಕೂಡ ಸ್ಥಾಪಿಸಿದೆ.
ಈ ಸಾಧನಗಳ ಅಳವಡಿಕೆಗೆ ಸೆಪ್ಟೆಂಬರ್ 10 ಕೊನೆಯ ದಿನವಾಗಿತ್ತು. ಆದರೆ ಇಲಾಖೆಯ ನಿರೀಕ್ಷೆಯಂತೆ ಈ ಸಾಧನಗಳ ಅಳವಡಿಕೆ ಪೂರ್ಣಗೊಂಡಿಲ್ಲ. ಸಾರಿಗೆ ಇಲಾಖೆ ನೀಡುವ ಮಾಹಿತಿಗಳ ಪ್ರಕಾರ ಒಟ್ಟು 6 ಲಕ್ಷ ವಾಹನಗಳಲ್ಲಿ 7076 ವಾಹನಗಳಲ್ಲಿ ಮಾತ್ರ ಜಿಪಿಎಸ್ ಅಳವಡಿಸಲಾಗಿದೆ. ವಾಹನ ಮಾಲೀಕರು ಮತ್ತು ಚಾಲಕರ ಅಸೋಸಿಯೇಷನ್ ನೀಡುವ ಮಾಹಿತಿ ಪ್ರಕಾರ ಈಗಾಗಲೇ ಶೇ.60ರಷ್ಟು ವಾಹನಗಳಿಗೆ ಈ ಸಾಧನಗಳ ಅಳವಡಿಕೆ ಆಗಿದೆ. ಈಗಾಗಲೇ ಬಹಳಷ್ಟು ಖಾಸಗಿ ವಾಹನ ನಿರ್ವಾಹಕರು ಈ ಸಾಧನಗಳನ್ನು ಅಳವಡಿಸಿದ್ದಾರೆ. ಆದರೆ ನವೀಕರಣದ ಸಮಯದಲ್ಲಿ ಇವುಗಳನ್ನು ಇಲಾಖೆಯವರು ಒಪ್ಪುತ್ತಿಲ್ಲ ಎಂಬುದು ವಾಹನ ಮಾಲೀಕರ ಅಳಲು.
ಈ ಕುರಿತು ಕರ್ನಾಟಕ ಜನಶಕ್ತಿಯ ಸಿದ್ದರಾಜು ಮಾತನಾಡಿ, ಹೊಸ ವಾಹನದ ರಿಜಿಸ್ಟ್ರೇಷನ್ ಸಮಯದಲ್ಲೆ 10 ಸಾವಿರ ನೀಡಿ ಜಿಪಿಎಸ್ ಅಳವಡಿಸಿಕೊಂಡ ನಂತರವೇ ರಿಜಿಸ್ಟರ್ ಆಗಿರುತ್ತದೆ. ಜಿಪಿಎಸ್ ಅವಧಿ ಮುಗಿಯುವ ತನಕ ಮುಂದುವರಿಸಬೇಕು. ಆದರೂ, ಅವಧಿ ಮುಗಿಯುವ ಮುನ್ನವೆ 14 ಸಾವಿರಗಳನ್ನು ನೀಡಿ ಸಾರಿಗೆ ಇಲಾಖೆಗೆ ನೋಂದಣಿ ಆಗಿರುವ ಕೆಲವು ಕಂಪನಿಗಳಿಂದ ಹೊಸದಾಗಿ ಮತ್ತೊಮ್ಮೆ ಜಿಪಿಎಸ್ ಅಳವಡಿಸಿಕೊಂಡರೆ ಮಾತ್ರ ಪಿಟ್ನೆಸ್(ಎಫ್‌ಸಿ) ಪ್ರಮಾಣಪತ್ರ ಕೊಡಲಾಗುವುದು ಎಂದು ಹೇಳುವುದು ಅವೈಜ್ಞಾನಿಕ ಅಲ್ಲವೆ. ಸಾರಿಗೆ ಇಲಾಖೆ ಬಡವರ ಮೇಲೆ ಬರೆ ಎಳೆಯುವುದು ದರೋಡೆ ಅಲ್ಲವೆ. ಅವಧಿ ಮುಕ್ತಾಯವಾದ ನಂತರ ನೊಂದಾಯಿತ ಕಂಪನಿಗಳಿಂದ ಜಿಪಿಎಸ್ ಅಳವಡಿಸಿಕೊಳ್ಳುತ್ತಾರೆ. ಈಗ ಚಾಲ್ತಿಯಲ್ಲಿರುವ ಜಿಪಿಎಸ್ ಪರಿಗಣಿಸಿ ಎಫ್‌ಸಿ ನೀಡಬೇಕು ಎಂದು ಆಗ್ರಹಿಸಿದರು.
ವಕೀಲರಾದ ಬಿ ಟಿ ವಿಶ್ವನಾಥ್ ಮಾತನಾಡಿ, ಸರಕಾರ ಹೊರಡಿಸಿರುವ ಆದೇಶದ ಪ್ರಕಾರ ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿರುವ ಸಂಸ್ಥೆಗಳಿಂದ ಮಾತ್ರ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಸಾಧನಗಳನ್ನು ಅಳವಡಿಸಿಕೊಳ್ಳಬೇಕು. ಹಾಗೆ ಮಾಡಿದರೆ ಮಾತ್ರ ಫಿಟ್ನೆಸ್ ಪ್ರಮಾಣ ಪತ್ರವನ್ನು ನವೀಕರಿಸುತ್ತೇವೆ ಎಂಬ ಆದೇಶ ಕಾನೂನುಬಾಹಿರ. ಸರಕಾರದ ಸೂಚನೆ ಮೇರೆಗೆ ಈಗಾಗಲೇ ಈ ಸಾಧನಗಳನ್ನು ಅಳವಡಿಸಿಕೊಂಡವರಿಗೆ ಈ ಆದೇಶ ಅನವಶ್ಯಕವಾಗಿ ನಷ್ಟವನ್ನುಂಟುಮಾಡುತ್ತದೆ. ಹೊಸಬರಿಗೆ ಬೇಕಾದರೆ ಅನ್ವಯಸಲಿ. ಈಗಾಗಲೇ ಅಳವಡಿಸಿಕೊಂಡಿರುವವರು ಮತ್ತೆ ಅಳವಡಿಸಿಕೊಳ್ಳಬೇಕು ಎನ್ನುವುದು ಕಾನೂನುಬಾಹಿರ ಎಂದರು.
ಮಹಿಳಾ ಮುನ್ನಡೆ ಪೂರ್ಣಿಮಾ ಮಾತನಾಡಿ, ಮಹಿಳೆಯರ ಸುರಕ್ಷತೆಗಾಗಿ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಸಾಧನಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಹೊರಡಿಸಿರುವ ಆದೇಶ ಸ್ವಾಗತಾರ್ಹ. ಸುರಕ್ಷತೆ ಜನರ ಕೈಗೆಟುಕುವಂತೆ ಇರಬೇಕೆ ವಿನಃ, ಯಾವುದೋ ಕಂಪನಿಗಳ ಕಮಿಷನ್ ಲೂಟಿ ಮಾಡುವ ದಂಧೆಯಾಗಬಾರದು. ಸೌಲಭ್ಯ ಕೊಡುತ್ತೀರಿ, ಸುರಕ್ಷತೆ ಕೊಡುತ್ತೀರಿ ಎಲ್ಲವೂ ಸರಿ. ಆದರೆ, ಕೆಲವು ಕಂಪನಿಗಳಿಗೆ ಲಾಭ ಮಾಡಿಕೊಡುವ ನಡೆ ಸರಿಯಲ್ಲ. ಎರಡು ಪಟ್ಟು ಮೂರು ಪಟ್ಟು ದರಗಳನ್ನು ಹೆಚ್ಚು ಮಾಡಿ ಜನರನ್ನು ಸುಲಿಗೆ ಮಾಡುವಂತಾಗಬಾರದು ಎಂದು ಖಂಡಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಒಳಮೀಸಲಾತಿ ಜಾರಿಗೆ ಆಗ್ರಹ: ಮಾದಿಗ ಸಮುದಾಯದಿಂದ ಪ್ರತಿಭಟನೆ
ಮಹಾರಾಷ್ಟ್ರ, ಕೇರಳ, ತಮಿಳುನಾಡಿನಂತ ರಾಜ್ಯಗಳಲ್ಲಿ ಕೂಡ ಈ ಸಾಧನಗಳ ಅಳವಡಿಕೆ ಆಗಿದೆ. ಅಲ್ಲಿ ಇವುಗಳ ಬೆಲೆ 7 ಸಾವಿರ ಇದೆ. ಅದೇ ಕರ್ನಾಟಕದಲ್ಲಿ 15 ಸಾವಿರದವರೆಗೆ ಇದೆ. ಮೊದಲು ದರಗಳ ಬಗ್ಗೆ ಇಲಾಖೆ ಸ್ಪಷ್ಟತೆ ಕೊಡಬೇಕಿದೆ. 12 ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿ ಒಪ್ಪಂದ ಮಾಡಿಕೊಂಡು ನೋಂದಣಿ ಆಗಿರುವ ಕಂಪನಿಗಳಿಂದಲೇ ಈ ಸಾಧನಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಒತ್ತಾಯ ಏಕೆ?. ಒಕ್ಕೂಟ ಸರಕಾರ ನಿಗಧಿಪಡಿಸಿದ ದರಕ್ಕೆ ದುಪ್ಪಟ್ಟು ಏಕೆ? ಈ ಸಾಧನಗಳಲ್ಲಿ ಅಂತಹ ವಿಶೇಷತೆ ಏನಿದೆ ಎಂದು ಸ್ಪಷ್ಟಪಡಿಸಬೇಕಿದೆ. ನಂತರ ಅಳವಡಿಕೆ ಬಗ್ಗೆ ಕ್ರಮವಹಿಸಿಬೇಕಿದೆ. ಈ ಹೆಚ್ಚುವರಿ ಬೆಲೆಯಲ್ಲಿ ಯಾರ ಯಾರ ಪಾಲು ಇದೆ ಎಂದು ಸಾರಿಗೆ ಇಲಾಖೆ ಹೇಳಬೇಕಿದೆ. ಈ ಮೂಲಕ ಸಾರಿಗೆ ಇಲಾಖೆ ಲೂಟಿ ಮಾಡಲು ಹೊರಟಿದೆ ಎನ್ನುವ ಸಾರ್ವಜನಿಕರ ಆರೋಪವನ್ನು ದೂರ ಮಾಡಬೇಕಿದೆ ಎಂದು ಅವರು ಸವಾಲೆಸೆದಿದ್ದಾರೆ.
