ದಕ್ಷಿಣ ಕನ್ನಡ ಜಿಲ್ಲೆಯ ಮಸೀದಿ ಆವರಣದಲ್ಲಿ ‘ಜೈಶ್ರೀರಾಮ್’ ಎಂದು ಘೋಷಣೆ ಕೂಗಿದ್ದ ಇಬ್ಬರು ಕೋಮುವಾದಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ. ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಮಸೀದಿ ಆವರಣದಲ್ಲಿ ‘ಜೈಶ್ರೀರಾಮ್’ ಎಂದು ಘೋಷಣೆ ಕೂಗಿದರೆ ಧಾರ್ಮಿಕ ಭಾವನೆಗೆ ಧಕ್ಕೆಯಾಗಲ್ಲ ಎಂದಿದ್ದಾರೆ. ಅವರ ಈ ಹೇಳಿಕೆ ಚರ್ಚೆ, ವಿರೋಧಗಳಿಗೆ ಗ್ರಾಸವಾಗಿದೆ.
2023ರ ಸೆಪ್ಟೆಂಬರ್ 24ರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಐತ್ತುರು ಗ್ರಾಮದ ಕಡಬ-ಮರ್ದಾಳ ರಸ್ತೆಯಲ್ಲಿರುವ ಮಸೀದಿ ಆವರಣಕ್ಕೆ ನುಗ್ಗಿದ್ದ ಅಪರಿಚಿತ ದುಷ್ಕರ್ಮಿಗಳು ‘ಜೈಶ್ರೀರಾಮ್’ ಎಂದು ಘೋಷಣೆ ಕೂಗಿದ್ದರು. ಜೊತೆಗೆ ಬ್ಯಾರಿ ಸಮುದಾಯಕ್ಕೆ (ಮುಸ್ಲಿಮರು) ಸೇರಿದವರನ್ನು ನಾವು ಬದುಕಲು ಬಿಡುವುದಿಲ್ಲ ಎಂಬ ಬೆದರಿಕೆಯನ್ನೂ ಹಾಕಿದ್ದರು. ಈ ದೃಶ್ಯವೂ ಸಿಸಿಟಿವಿಯಲ್ಲಿಯೂ ಸೆರೆಯಾಗಿತ್ತು.
ಇದನ್ನು ಓದಿದ್ದೀರಾ? ಮಸೀದಿ ಬಳಿ ಜೈ ಶ್ರೀರಾಮ್ ಕೂಗಿದರೆ ತಪ್ಪಲ್ಲ: ಕರ್ನಾಟಕ ಹೈಕೋರ್ಟ್
ಮಸೀದಿ ಆವರಣಕ್ಕೆ ಬಂದು ಜೈಶ್ರೀರಾಮ್ ಎಂದು ಘೋಷಣೆ ಕೂಗುವ ಮೂಲಕ ಸೌಹಾರ್ದತೆ ಇರುವ ಪ್ರದೇಶದಲ್ಲಿ ಕೋಮುಗಲಭೆ ಸೃಷ್ಟಿಸುವ ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡದ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನಿವಾಸಿ ಕೀರ್ತನ್ ಕುಮಾರ್ ಮತ್ತು ಎನ್ಎಂ ಸಚಿನ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಇಬ್ಬರೂ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ಇತ್ತೀಚೆಗೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ಪ್ರಕರಣವನ್ನು ರದ್ದುಪಡಿಸಿದೆ. ಜೊತೆಗೆ ಮಸೀದಿ ಆವರಣದಲ್ಲಿ ಜೈಶ್ರೀರಾಮ್ ಎಂದು ಘೋಷಣೆ ಕೂಗುವುದು ತಪ್ಪಲ್ಲ ಎಂದಿದ್ದಾರೆ.
ಸದ್ಯ ನ್ಯಾಯಮೂರ್ತಿಗಳ ಈ ತೀರ್ಪಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಅಸಮಾಧಾನ ವ್ಯಕ್ತವಾಗಿದೆ. “ಮಸೀದಿ ಆವರಣದಲ್ಲಿ ಜೈಶ್ರೀರಾಮ್ ಕೂಗುವುದು ತಪ್ಪಲ್ಲ ಎಂದಾದರೆ, ದೇವಸ್ಥಾನದ ಆವರಣದಲ್ಲಿ ಅಲ್ಲಾಹು ಅಕ್ಬರ್ ಎಂದು ಕೂಗುವುದು ಸರಿಯಾಗುತ್ತದೆಯೇ? ಎರಡೂ ಕೂಡಾ ತಪ್ಪು” ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನು ಓದಿದ್ದೀರಾ? ಮಾನನಷ್ಟ ಪ್ರಕರಣ | ಶಾಸಕ ಯತ್ನಾಳ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ
ಈ ಬಗ್ಗೆ ‘ಈದಿನ.ಕಾಮ್‘ ಜತೆ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ, “ಕರ್ನಾಟಕ ನ್ಯಾಯಮೂರ್ತಿ ನಾಗಪ್ರಸನ್ನ ಅವರ ತೀರ್ಪು ಮನಸ್ಸಿಗೆ ಘಾಸಿಯುಂಟು ಮಾಡುವಂತಹ ತೀರ್ಪಾಗಿದೆ. ಇದು ನಮ್ಮ ದೇಶದ ಇತಿಹಾಸದಲ್ಲೇ ಸೌಹಾರ್ದತೆಗೆ ಒಂದು ಕಪ್ಪು ಚುಕ್ಕೆ. ಯಾಕೆಂದರೆ ನಮ್ಮ ದೇಶದಲ್ಲಿ ಎಲ್ಲ ಧರ್ಮಗಳ ಗುರುತನ್ನು ನಾವು ಉಳಿಸಿಕೊಂಡು, ಬೆಳೆಸಿಕೊಂಡು, ಅದರ ಪ್ರಚಾರ ಮಾಡಿಕೊಂಡು ಬದುಕುತ್ತಿರುವವರು” ಎಂದು ಹೇಳಿದ್ದಾರೆ.
“ಈ ರೀತಿ ಒಂದು ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿರುವುದು ಮತ್ತು ಆ ಧಾರ್ಮಿಕ ಕೇಂದ್ರದ ಪಾವಿತ್ರತ್ಯೆಯನ್ನು ಗಣನೆಗೆ ತೆಗೆದುಕೊಳ್ಳದಿರುವುದು ಸರಿಯಲ್ಲ. ಯಾವುದೇ ಧಾರ್ಮಿಕ ಕೇಂದ್ರಗಳಿಗೂ ಅದರದ್ದೇ ಆದ ಕಟ್ಟುಪಾಡುಗಳಿರುತ್ತದೆ. ಅದಕ್ಕೆ ಧಕ್ಕೆ ತಂದು, ಧಾರ್ಮಿಕ ನಂಬಿಕೆಗೆ ನೋವುಂಟು ಮಾಡಲಾಗಿದೆ. ನಮ್ಮ ಭಾರತದ ಭಾವೈಕ್ಯತೆ ಮತ್ತು ಸೌಹಾರ್ದತೆಯ ವ್ಯವಸ್ಥೆಗೆ ಘಾಸಿಯುಂಟು ಮಾಡಿದೆ ಎಂದು ನಾವು ಭಾವಿಸುತ್ತೇವೆ” ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ‘ಈದಿನ.ಕಾಮ್’ ಜತೆ ಮಾತನಾಡಿದ ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ರಾಜ್ಯ ಸಮಿತಿ ಸದಸ್ಯ ಸಂತೋಷ್ ಬಜಾಲ್ “ಮಸೀದಿ ಮುಂದೆ ಜೈಶ್ರೀರಾಮ್ ಕೂಗಿದ್ದು ತಪ್ಪಲ್ಲ ಎಂದಾದರೆ ಇನ್ನು ದೇವಸ್ಥಾನದ ಮುಂದೆ ಅಲ್ಲಾಹು ಅಕ್ಬರ್ ಕೂಗುವುದೂ ತಪ್ಪಾಗುದಿಲ್ಲ ಎಂದಾಯಿತಲ್ಲವೆ” ಎಂದು ಪ್ರಶ್ನಿಸಿದ್ದಾರೆ.
“ನ್ಯಾಯಮೂರ್ತಿಗಳು ಈ ಪ್ರಕರಣದ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮತೀಯ ರಾಜಕಾರಣದ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡಿಲ್ಲ. ಸಂಘಪರಿವಾರದ ಕಾರ್ಯಕರ್ತರು ಯಾವುದೇ ದುರುದ್ದೇಶವಿಲ್ಲದೆ ಮಸೀದಿ ಮುಂದೆ ಹಾದುಹೋಗುವಾಗ ರಾಮನನ್ನು ಭಜಿಸಿದರೆ ತಪ್ಪಿಲ್ಲ. ಆದರೆ ಮಸೀದಿ ಮುಂದೆಯೇ ರಾಮನನ್ನು ಭಜಿಸಬೇಕೆಂಬ ಪೂರ್ವಗೃಹತೆ ಇದ್ದರೆ ಅದು ದುರುದ್ದೇಶಪೂರ್ವಕ ಮತ್ತು ಧಾರ್ಮಿಕ ನಂಬಿಕೆಗೆ ಧಕ್ಕೆಯಾಗುವಂತದ್ದೇ ಆಗಿರುತ್ತದೆ. ಸಂಘಪರಿವಾರ ಮುಸ್ಲಿಂ ಸಮುದಾಯವನ್ನು ಅನುಮಾನಿಸುವ ರೀತಿ ಅರ್ಥವಾಗಬೇಕಾದರೆ ನಾವು ಸಂತ್ರಸ್ತ ಸಮುದಾಯದ ಜೊತೆ ನಿಂತು ನೋಡಬೇಕಾಗುತ್ತದೆ” ಎಂದು ಸಂತೋಷ್ ಬಜಾಲ್ ಅಭಿಪ್ರಾಯಿಸಿದ್ದಾರೆ.
ಕಳೆದ ತಿಂಗಳಲ್ಲಿ ಒಂದೇ ದಿನ 503 ಅರ್ಜಿಗಳ ವಿಚಾರಣೆ ನಡೆಸುವ ಮೂಲಕ ಸುದ್ದಿಯಾಗಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಇತ್ತೀಚೆಗೆ ನೀಡಿದ ‘ಜೈಶ್ರೀರಾಮ್’ ಘೋಷಣೆ ಕುರಿತಾದ ತೀರ್ಪು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ತೀರ್ಪಿನ ಬಗ್ಗೆ ಹಲವು ಮುಸ್ಲಿಂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
