ಕಳ್ಳಭಟ್ಟಿ ಸೇವಿಸಿ 20 ಮಂದಿ ಹತರಾಗಿರುವ ದುರ್ಘಟನೆ ಬಿಹಾರದ ಸಿವಾನ್ ಮತ್ತು ಸರನ್ ಜಿಲ್ಲೆಗಳಲ್ಲಿ ನಡೆದಿದೆ. ಇನ್ನೂ ಹಲವರು ಅಸ್ವಸ್ಥಗೊಂಡಿದ್ದಾರೆ ಎಂದೂ ಹೇಳಲಾಗಿದೆ.
ಸಿವಾನ್ ಜಿಲ್ಲೆಯ ಮಾಧಾರ್ ಗ್ರಾಮವೊಂದರಲ್ಲಿಯೇ ಕಳ್ಳಭಟ್ಟಿ ಮದ್ಯ ಸೇವಿಸಿ ಒಂಬತ್ತು ಮಂದಿ ಸಾವನ್ನಪಿದ್ದಾರೆ. ಅಲ್ಲದೆ, ಸುತ್ತಮುತ್ತಲಿನ ಗ್ರಾಮಗಳ 11 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ರಾತ್ರಿ, ಮಾಧಾರ್ ಗ್ರಾಮದ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಕಳ್ಳಭಟ್ಟಿ ಮದ್ಯವನ್ನು ಅದೇ ಗ್ರಾಮದವರೂ ಸೇರಿದಂತೆ ಹಲವರು ಸೇವಿಸಿದ್ದಾರೆ. ಬಳಿಕ, ಅವರೆಲ್ಲರಿಗೂ ದೃಷ್ಟಿನಾಶ, ವಾಕರಿಕೆ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ. ಅವರಲ್ಲಿ ಆರು ಮಂದಿ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದದ್ದಾರೆ.
“ಮಘಾರ್ ಮತ್ತು ಔರಿಯಾ ಪಂಚಾಯತ್ ವ್ಯಾಪ್ತಿಯಲ್ಲಿ ಮೂವರು ಸಾವನ್ನಪ್ಪಿರುವ ಬಗ್ಗೆ ಆರಂಭದಲ್ಲಿ ಮಾಹಿತಿ ದೊರೆಯಿತು. ತಕ್ಷಣವೇ ಸ್ಥಳಕ್ಕೆ ಅಧಿಕಾರಗಳ ತಂಡವನ್ನು ಕಳುಹಿಸಲಾಗಿದ್ದು, 12 ಮಂದಿಯನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ” ಎಂದು ಸಿವಾನ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಮುಕುಲ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಎರಡೂ ಜಿಲ್ಲೆಯಲ್ಲಿ ಆಡಳಿತ ಮಂಡಳಿಗಳು ತನಿಖೆ ನಡೆಸುತ್ತಿವೆ. ಮಘಾರ್ ಮತ್ತು ಔರಿಯಾ ಪಂಚಾಯಿತಿ ವ್ಯಾಪ್ತಿಯ ಇಬ್ಬರು ಚೌಕಿದಾರ್‌ರನ್ನು ಅಮಾನತುಗೊಳಿಸಿ ಪಂಚಾಯತ್ ರಾಜ್ ಇಲಾಖೆ ಆದೇಶಿಸಿದೆ.
ಬಿಹಾರದಲ್ಲಿ 2016ರ ಏಪ್ರಿಲ್‌ನಿಂದಲೇ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿ ಬಿಹಾರ ಸರ್ಕಾರ ಆದೇಶಿಸಿದೆ. ಆದಾಗ್ಯೂ, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಪ್ರಕರಣಗಳು ಆಗ್ಗಾಗ್ಗೆ ಬೆಳಕಿಗೆ ಬರುತ್ತಿವೆ. 2016ರಿಂದ ಈವರೆಗೆ ಅಕ್ರಮ ಮದ್ಯ ಸೇವನೆಯಿಂದ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಬಿಹಾರ ಸರ್ಕಾರ ತಿಳಿಸಿದೆ.