ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಮೂಲದ, ಅನಿವಾಸಿ ಭಾರತೀಯ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿಯವರು ಆಡಳಿತ ನಿರ್ದೇಶಕರಾಗಿರುವ ದುಬೈನ ಹೋಟೆಲೊಂದಕ್ಕೆ ಅಕೌಂಟೆಂಟ್ ಆಗಿ ಸೇರಿ ₹2.5 ಕೋಟಿಗೂ ಅಧಿಕ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಬಾರ್ಕೂರು ಮೂಲದ ನಾಗೇಶ್ ಪೂಜಾರಿ (31) ಎಂಬಾತನಿಗೆ ಈ ಹಿಂದೆ ಬ್ರಹ್ಮಾವರ ಜೆ.ಎಂ.ಎಫ್.ಸಿ ನ್ಯಾಯಾಲಯ ನೀಡಿದ ಜಾಮೀನು ಆದೇಶವನ್ನು ರಾಜ್ಯ ಉಚ್ಚ ನ್ಯಾಯಾಲಯ ರದ್ಧುಗೊಳಿಸಿದ ಹಿನ್ನೆಲೆಯಲ್ಲಿ ಕಳೆದ ವಾರ ಉಡುಪಿ ಸೆನ್ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಹೆಚ್ಚಿನ ತನಿಖೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ 3 ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದಿದ್ದರು.
ಇದನ್ನು ಓದಿದ್ದೀರಾ? ಶಿವಮೊಗ್ಗ | ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ; ವಿದ್ಯಾರ್ಥಿ ಸ್ಥಳದಲ್ಲೇ ಸಾವು
ನಂತರ ಅ.16 ಬುಧವಾರದಂದು ಆರೋಪಿಯ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿದ್ದಲ್ಲದೇ, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿದ್ದಾರೆ. ಜಾಮೀನು ಅರ್ಜಿ ಮೇಲಿನ ಆದೇಶವನ್ನು ಅ.21ರ ಸೋಮವಾರಕ್ಕೆ ನಿಗದಿಪಡಿಸಿದ್ದಾರೆ ಎಂದು ತಿಳಿದುಬಂದಿದೆ.
