ಅಕ್ಟೋಬರ್ 18ರಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಶೀಘ್ರ ಅನುಷ್ಠಾನಕ್ಕಾಗಿ ಆಗ್ರಹಿಸಿ ಹಾಗೂ ದಲಿತ ಹಿಂದುಳಿದ ವರ್ಗಗಳ ಮೀಸಲಾತಿ ಮಿತಿಯ ಪ್ರಮಾಣವನ್ನು ಶೇ.50 ರಿಂದ ಶೇ.75ಕ್ಕೆ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದಸಂಸ ಮುಖಂಡ ಮರೆಪ್ಪ ಹಳ್ಳಿ ಒತ್ತಾಯಿಸಿದ್ದಾರೆ.
ಕಲಬುರಗಿಯಲ್ಲಿ ಹೇಳಿಕೆ ನೀಡಿರುವ ಅವರು “ಇತ್ತೀಚೆಗೆ ಸರ್ಕಾರವು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಜನಗಣತಿ ವರದಿಯನ್ನು ಸ್ವೀಕರಿಸಿದ್ದನ್ನು ದಲಿತ ಸಂಘರ್ಷ ಸಮಿತಿಯು ಸ್ವಾಗತಿಸಿ ಅಭಿನಂದನೆ ಸಲ್ಲಿಸುತ್ತದೆ” ಎಂದು ತಿಳಿಸಿದರು.
“ರಾಜ್ಯದ ಜನಸಂಖ್ಯೆಯ ಬಹು ಭಾಗವಾಗಿರುವ ಆದಿವಾಸಿಗಳು, ಅಲೆಮಾರಿಗಳು, ದಲಿತರು, ಹಿಂದುಳಿದವರು ಅಲ್ಪಸಂಖ್ಯಾತರು ಮುಂತಾದ ಶೋಷಿತ ಸಮುದಾಯಗಳು ಹಲವು ದಶಕಗಳಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದವು. ಆದರೆ ಜಾತಿ ಕೇಂದ್ರಿತ ಪಕ್ಷ ರಾಜಕಾರಣವು ಈ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಸ್ಥಿತಿಗತಿಗಳನ್ನು ಉತ್ತಮ ಪಡಿಸುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದವು. ಇದರಿಂದಾಗಿ ಸಮಾಜದಲ್ಲಿ ಅಸಮಾನತೆಯ ಕಂದಕಗಳು ಮತ್ತಷ್ಟು ಹೆಚ್ಚಾಗುತ್ತಲೇ ಬರುತ್ತಿತ್ತು. ಈ ನಿಟ್ಟಿನಲ್ಲಿ ‘ಸಾಮಾಜಿಕ ನ್ಯಾಯ’ದ ಗುರಿಗಳನ್ನು ತಲುಪಲು ಕಾಲ ಕಾಲಕ್ಕೆ ಜಾತಿ ಜನಗಣತಿಯ ನಿಖರ ವಿವರಗಳನ್ನು ಆಧರಿಸಿ ಮೀಸಲಾತಿ ಹೆಚ್ಚಳ ಹಾಗೂ ಇನ್ನಿತರ ಯೋಜನೆಗಳನ್ನು ರೂಪಿಸುವುದು ಅನಿವಾರ್ಯ. ಈ ಕೊರತೆಯನ್ನು ತಮ್ಮ ಸರ್ಕಾರವು ನೀಗಿಸಲು ಹೊರಟಿರುವುದು ನಿಜಕ್ಕೂ ಅಭಿನಂದನಾರ್ಹವಾದದು” ಎಂದರು.
“ಜಾತಿ ಜನಗಣತಿ ವರದಿ ಸ್ವೀಕಾರಗೊಂಡ ಕೂಡಲೇ ಕೆಲವು ಪಟ್ಟಭದ್ರ ಜಾತಿವಾದಿ ವ್ಯಕ್ತಿ ಹಾಗೂ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು ತೀವ್ರ ಅಸಮಾಧಾನ ಹೊರಹಾಕಿ ವಿರೋಧ ವ್ಯಕ್ತಪಡಿಸುತ್ತಿರುವುದು ಕಳವಳಕಾರಿ ಸಂಗತಿ. ಈ ಪಟ್ಟಭದ್ರ ಜಾತಿವಾದಿಗಳು ಜಾತಿ ಜನಗಣತಿ ವರದಿಯನ್ನು ತಿರಸ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದನ್ನು ದಸಂಸವು ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ, ‘ಸಾಮಾಜಿಕ ನ್ಯಾಯ’ ವಿರೋಧಿಯಾದ ಅಸಮಾಧಾನಗಳನ್ನು , ವಿರೋಧ, ಪ್ರತಿಭಟನೆಗಳನ್ನು ತಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸದೆ ‘ಸಾಮಾಜಿಕ ನ್ಯಾಯ’ದ ಪರವಾಗಿ ದೃಢ ನಿಲುವು ತಾಳಬೇಕೆಂದು ” ಎಂದು ಮನವಿ ಮಾಡಿದರು.
“ಈ ಜಾತಿ ಜನಗಣತಿ ವರದಿಯ ಅಂಕಿ – ಅಂಶಗಳ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರ ಹಿಂದುಳಿದ ವರ್ಗಗಳ ಈಗಿರುವ ಶೇ.50 ರಷ್ಟು ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಮಿತಿಯ ಪ್ರಮಾಣವನ್ನು ಶೇ. 75ಕ್ಕೆ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದರ ಮೂಲಕ ಕರ್ನಾಟಕ ರಾಜ್ಯದ ‘ಸಾಮಾಜಿಕ ನ್ಯಾಯ’ದ ಪರಂಪರೆಯನ್ನು ತಾವು ಮತ್ತು ತಮ್ಮ ಸರ್ಕಾರ ಮತ್ತೊಮ್ಮೆ ಎತ್ತಿ ಹಿಡಿದು ದೇಶಕ್ಕೇ ಮಾದರಿ ಆಡಳಿತ ನೀಡಬೇಕು ಎಂದು ಮರೆಪ್ಪ ಹಳ್ಳಿ ಒತ್ತಾಯಿಸಿದ್ದಾರೆ.
