ವಿಜಯದಶಮಿ ಮುಗಿದು ಐದು ದಿನದ ನಂತರ ಬರುವ ಹುಣ್ಣಿಮೆಯನ್ನು ಮಲೆನಾಡಿನಲ್ಲಿ ʼಭೂಮಿ ಹುಣ್ಣಿಮೆʼ ಅಥವಾ ಬಯಲು ಸೀಮೆಯಲ್ಲಿ ಸೀಗೆ ಹುಣ್ಣಿಮೆ ಎಂದು ಕರೆಯುತ್ತಾರೆ. ಭೂಮಿ ಹುಣ್ಣಿಮೆ ಶರದೃತುವಿನ ಆಶ್ವಯುಜಮಾಸದ ಶುಕ್ಲಪಕ್ಷದ ಕೊನೆಯ ದಿನ, ಅಂದರೆ ಹುಣ್ಣಿಮೆಯಂದು ಭೂಮಿ ಪೂಜೆಯನ್ನು ಮಾಡುವುದು ವಿಶೇಷತೆಯಾಗಿದೆ. ಇದು ಪುರಾತನ ಕಾಲದಿಂದಲೂ ನಡೆದು ಬಂದಿರುವ ಪ್ರಕೃತಿ ಪೂಜೆಯಾಗಿದೆ.
ನಮ್ಮ ಪೂರ್ವಿಕರು ಪ್ರಕೃತಿಯನ್ನು ಗೌರವಿಸುವ ಸಲುವಾಗಿ ಕೆಲವು ವಿಶೇಷ ದಿನಗಳನ್ನು ಗುರುತಿಸಿ ಆದಿನದಂದು ಆಯಾಯ ರೂಪವನ್ನು ಪೂಜಿಸುವ ಪರಿಪಾಠ ಆರಂಭಿಸಿದರು. ಅದರಲ್ಲಿ ಇಂದಿನ ದಿನ ʼಭೂಮಿ ಹುಣ್ಣಿಮೆʼ ರೈತರಿಗೆ ಮಹತ್ವದ ಹಬ್ಬ ಎಂದೇ ಹೇಳಬಹುದು. ಹೊಲ ಉಳುಮೆ ಮಾಡಿ, ಬಿತ್ತಿ, ಬೆಳೆದು, ಕಟಾವು ಮಾಡಿ, ಭೂಮಿಯಿಂದಲೇ ಜೀವನ ನಡೆಸುವ ರೈತರು ವರ್ಷಕ್ಕೊಮ್ಮೆ ಭೂಮಿ ತಾಯಿಗೆ ಪೂಜೆ ಸಲ್ಲಿಸುವ ವಾಡಿಕೆಯಾಗಿದೆ.

ತನ್ನನ್ನು ಹಾಗೂ ತನ್ನ ಕುಟುಂಬವನ್ನೂ ಸಲಹು ಎಂದು ಪೂಜೆ ನೆರವೇರಿಸುವ ರೈತರು ಬೇಡಿಕೊಳ್ಳುತ್ತಾರೆ.
ಮನುಷ್ಯನು ತಾನು ಎಷ್ಟೇ ಸ್ವಾವಲಂಬಿಯೆಂದು ಹೇಳಿದರೂ ಪ್ರಕೃತಿಯ ಅವಲಂಬನೆಯಿಲ್ಲದೆ ಮನುಷ್ಯನಿಗೆ ಜೀವಿಸಲು ಸಾಧ್ಯವೇ ಇಲ್ಲ. ನಾವು ತನ್ನದೆಂದು ಹೇಳುವ ವಸ್ತು ಏನಿದೆ. ಅದರ ಉತ್ಪತ್ತಿಯೆನ್ನುವುದು ಪಂಚಭೂತಗಳ ಸೃಷ್ಟಿಯಾಗಿದ್ದೇ ಹೊರತು ನಮ್ಮ ಕಾರಣದಿಂದ ಅಲ್ಲ. ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ಗಾಳಿ, ಆಕಾಶ ಇವುಗಳಿಗೆ ಈ ವ್ಯವಸ್ಥೆಯಿಂದ ಉಪಕೃತನಾದ ಮಾನವನು ಅವಶ್ಯವಾಗಿ ಕೃತಜ್ಞತೆಯನ್ನು ಸಲ್ಲಿಸಲೇಬೇಕು. ಇದು ಸಂಪ್ರದಾಯವೂ ಹೌದು, ಶಾಸ್ತ್ರವೂ ಆಗಿದೆಂದು ಮಲೆನಾಡಿನ ರೈತರು ಹೇಳುತ್ತಾರೆ.

ಭೂಮಿತಾಯಿಯು ತನ್ನ ಮಡಿಲಿನಲ್ಲಿ ಫಲವನ್ನ /ಫಸಲನ್ನುತುಂಬಿಕೊಂಡು ಹಚ್ಚಹಸುರಾಗಿ ಕಂಗೊಳಿಸುತ್ತಿರುತ್ತಾಳೆ. ಅಂದರೆ ತನ್ನ ಗರ್ಭದಿಂದ ಪುಷ್ಟಿಯನ್ನು ನೀಡಿ ನಮಗಾಗಿ ಫಲವನ್ನು ನೀಡಲು ಸಿದ್ಧಳಾಗಿರುವಳು ಎಂಬ ಭಾವದಿಂದ ಸ್ತ್ರೀಯರಿಗೆ ಸೀಮಂತ ಮಾಡಿದ ರೀತಿಯಲ್ಲಿ ವಿವಿಧ ತಿಂಡಿಗಳನ್ನು ಮಾಡುತ್ತಾರೆ. ಭೂಮಾತೆಯು ಈ ದಿನದಂದು ದೊಡ್ಡವಳಾದಳು(ಮೈನೆರೆದಳು) ಎಂಬ ಭಾವದಿಂದ ವಿಶೇಷವಾಗಿ ಪೂಜಿಸುತ್ತಾರೆ.

ಚರಗ ಚೆಲ್ಲುವುದು ಎಂದರೇನು? : ಮುಂಗಾರು ಮಳೆಯಲ್ಲಿ ನಾಟಿ ಮಾಡಿ, ಪೈರು ಈಗ ಕಾಳು ಕಟ್ಟುವ ಸಮಯ. ಮಲೆನಾಡಿನಲ್ಲಿ ಇದಕ್ಕಾಗಿ ಊರ ಜಾತ್ರೆಯಂತೆಯೇ ಜನ ಸೇರುವುದು ವಿಶೇಷ. ರಾತ್ರಿಯೇ ಅಡುಗೆ ಮಾಡಿ, ಸೂರ್ಯ ಹುಟ್ಟುತ್ತಲೇ ಜಮೀನಿಗೆ ಹೋಗಿ ಪೂಜೆ ಸಲ್ಲಿಸುವುದು ಪದ್ಧತಿ. ಭೂಮಿ ತಾಯಿಗೆ ನೈವೇದ್ಯ ಮಾಡಿ, ಅಡುಗೆಯನ್ನು ಸೇರಿಸಿ, ಜಮೀನಿನ ಸುತ್ತಲೂ ಹರಡಲಾಗುತ್ತದೆ. ಇದನ್ನು ‘ಚರಗ ಚೆಲ್ಲುವುದು’ ಎಂದೂ ಕರೆಯುತ್ತಾರೆ. ಹೀಗೆ ಮಾಡಿದರೆ ಉತ್ತಮ ಫಸಲು ಬರುತ್ತದೆ ಎಂಬುದು ರೈತರ ನಂಬಿಕೆ.

ಹಬ್ಬದ ತಯಾರಿ: ಮನೆಯ ಗಂಡಸರು ಇಂದಿನ ದಿನ ತಮ್ಮ ಹೊಲ, ತೋಟಗಳಿಗೆ ಹೋಗಿ ಅಲ್ಲಿ ನೆಲವನ್ನು ಶುಚಿಗೊಳಿಸಿ, ಬಾಳೆಕಂಬ ಇತ್ಯಾದಿಗಳಿಂದ ಮಂಟಪ ಮಾಡಿ, ಮಾವಿನೆಲೆಯ ತೋರಣವನ್ನು ಮಾಡುತ್ತಾರೆ. ಮನೆಯ ಮಹಿಳೆಯರು ಭೂಮಿಗೆ ರಂಗವಲ್ಲಿಯನ್ನಿಟ್ಟು, ಹೂವಿನಿಂದ ಅಲಂಕರಿಸಿ, ಅರಶಿಣ–ಕುಂಕುಮಗಳಿಂದ ಅರ್ಚನೆ ಮಾಡಬೇಕು. ಹಸಿರು ಬಳೆ, ಹಸಿರು ವಸ್ತ್ರ ಇತ್ಯಾದಿಗಳನ್ನು ಪೂಜೆಗೆ ಇಡುತ್ತಾರೆ.
ಬುಟ್ಟಿ ಮಾಡುವ ವಿಧಾನ: ಬುಟ್ಟಿಗೆ ಸಗಣಿ, ಕೆಮ್ಮಣ್ಣು ಹಚ್ಚಿ ನಂತರ ಅದರ ಮೇಲೆ ಅಕ್ಕಿ ಹಿಟ್ಟಿನಲ್ಲಿ ಹಸೆ ಚಿತ್ತಾರವನ್ನು ಬಿಡಿಸಲಾಗುತ್ತದೆ. ಮಲೆನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಚಿತ್ತಾರಗಳನ್ನು ಬುಟ್ಟಿಯ ಮೇಲೆ ಬಿಡಿಸಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಭೂಮಿಗೆ ಪೂಜೆ ಸಲ್ಲಿಸಿ ರೈತ ಕುಟುಂಬಗಳಿಂದ ಶೀಗೆ ಹುಣ್ಣಿಮೆ ಆಚರಣೆ
ಮನೆಯಿಂದ ಸುಂದರವಾದ ಬುಟ್ಟಿಯನ್ನು ಸಿದ್ಧಪಡಿಸಿ ಮನೆಯಲ್ಲಿಯೇ ಮಾಡಿದ ವಿವಿಧ ಭಕ್ಷ್ಯಗಳನ್ನು ಈ ಬುಟ್ಟಿಯಲ್ಲಿರಿಸಿ ಪೂಜಾ ಸ್ಥಾನಕ್ಕೆ ಹೋಗಿ, ಅಲ್ಲಿ ಮನೆಯವರೆಲ್ಲಾ ಸೇರಿ ಪೂಜಿಸಬೇಕು. ಪೂಜೆಯ ಕೊನೆಯಲ್ಲಿ ತಾಯಿಯನ್ನು ಭಕ್ತಿಯಿಂದ ಪ್ರಾರ್ಥಿಸಿ, ಒಳ್ಳೆಯ ರೀತಿಯ ಫಸಲನ್ನು ನೀಡು ಎಂಬ ಭಾವದಿಂದ ಬುಟ್ಟಿಯಲ್ಲಿ ತಂದ ಆಹಾರವನ್ನು ಬಾಳೇ ಎಲೆಯ ಮೇಲೆ ಬಡಿಸಬೇಕು. ಈ ರೀತಿಯಾಗಿ ಬೆಳೆ ನೀಡುವ ಭೂತಾಯಿಗೆ ರೈತರು ಮನಸಾರೆ ಪ್ರಾರ್ಥಿಸುತ್ತಾರೆ. ಇದರಿಂದ ನಮಗೆ ಕುಟುಂಬದಲ್ಲಿ ಏನೇ ಮನಸ್ಥಾಪವಿದ್ದರೂ ಈ ಹಬ್ಬದಿಂದ ಬಾಂಧವ್ಯ ಹೆಚ್ಚಾಗುತ್ತದೆ ಎಂಬುದು ಅರ್ಥವಾಗುತ್ತದೆ.

ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.