ವಿವಾಹಿತ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದ ಯುವಕನೋರ್ವನಿಗೆ ಥಳಿಸಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ನೀಮ್ ಕಾ ಥಾನಾ ಜಿಲ್ಲೆಯ ರಾವತ್ ಮಜ್ರಾ ಗ್ರಾಮದಲ್ಲಿ ನಡೆದಿದೆ.
ಬುಧವಾರ ರಾತ್ರಿ 25 ವರ್ಷದ ಯುವಕನಿಗೆ ಥಳಿಸಿ ಹತ್ಯೆ ಮಾಡಲಾಗಿದ್ದು ಈ ಹತ್ಯೆಗೆ ಸಂಬಂಧಿಸಿದಂತೆ ಮಹಿಳೆಯ ಅತ್ತೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಗುರುವಾರ ಉಪ ಪೊಲೀಸ್ ವರಿಷ್ಠಾಧಿಕಾರಿ (ನೀಮ್ ಕಾ ಥಾನಾ ಸರ್ಕಲ್) ಅನುಜ್ ದಾಲ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾಂಗೋ ಜ್ವರದಿಂದ ಮಹಿಳೆ ಸಾವು; ಮಾರ್ಗಸೂಚಿ ಹೊರಡಿಸಿದ ರಾಜಸ್ಥಾನ ಸರ್ಕಾರ
ಮೃತ ಯುವಕನನ್ನು ಮುಖೇಶ್ ಕುಮಾರ್ ಮೀನಾ ಎಂದು ಗುರುತಿಸಲಾಗಿದೆ. ಮುಖೇಶ್ ಮೇಲೆ ಗುಂಪೊಂದು ಹಲ್ಲೆ ನಡೆಸುತ್ತಿದೆ ಎಂಬ ಮಾಹಿತಿ ಲಭಿಸಿದ ಕೂಡಲೆ ಪೊಲೀಸರ ತಂಡವು ಸ್ಥಳಕ್ಕೆ ಧಾವಿಸಿದ್ದು ಮುಖೇಶ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಮುಖೇಶ್ ಸಾವನ್ನಪ್ಪಿರುವುದಾಗಿ ಘೋಷಿಸಿಸಿದ್ದಾರೆ ಎಂದು ಹೇಳಿದರು.
ಪೊಲೀಸರ ಪ್ರಕಾರ, ಮುಖೇಶ್ ಬನ್ಸೂರ್ ನಿವಾಸಿಯಾಗಿದ್ದು, ಟೆಂಟ್ ವ್ಯಾಪಾರವೊಂದರಲ್ಲಿ ಕೆಲಸ ಮಾಡುತ್ತಿದ್ದನು. ಒಂದು ವರ್ಷದ ಹಿಂದೆ ಆತನ ಉದ್ಯೋಗ ಸ್ಥಳದಿಂದ 2 ಕಿಮೀ ದೂರದಲ್ಲಿರುವ ರಾವತ್ ಮಜ್ರಾ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಭೇಟಿಯಾಗಿದ್ದನು.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಬುಡಕಟ್ಟು ಬಾಲಕನ ಥಳಿಸಿ ಹತ್ಯೆ: 7 ಟಿಎಂಸಿ ನಾಯಕರ ಬಂಧನ
ಮೃತನ ಸಹೋದರಿ ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳ ವಿರುದ್ಧ ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆಗಾಗಿ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಡಿಎಸ್‌ಪಿ ಅನುಜ್ ದಾಲ್ ತಿಳಿಸಿದ್ದಾರೆ.
ಪ್ರಾಥಮಿಕವಾಗಿ ಗುಂಪು ಹಲ್ಲೆ ನಡೆಸಿದ್ದರಿಂದ ಮುಖೇಶ್ ಸಾವನ್ನಪ್ಪಿರುವುದಾಗಿ ಕಂಡುಬಂದಿದೆ. ಆದರೆ ಮರಣೋತ್ತರ ಪರೀಕ್ಷೆ ವರದಿ ಬರಬೇಕಷ್ಟೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
