ಶಸ್ತ್ರಾಸ್ತ್ರಗಳನ್ನು ಬದಿಗಿಟ್ಟು ನಮ್ಮ ಒತ್ತೆಯಾಳುಗಳನ್ನು ಬಿಟ್ಟು ಬಿಡಿ, ನಾವು ನಿಮ್ಮನ್ನು ಬದುಕಲು ಬಿಡುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಹಮಾಸ್ ಉದ್ದೇಶಿಸಿ ಹೇಳಿದ್ದಾರೆ.
ಗುರುವಾರ ಇಸ್ರೇಲ್ ಸೇನೆ ಹಮಾಸ್ ಸಂಘಟನೆಯ ಮುಖ್ಯಸ್ಥ ಯಹ್ಯಾ ಸಿನ್ವರ್ (61) ಅವರನ್ನು ಹತ್ಯೆ ಮಾಡಿದ ಬಳಿಕ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಯಹ್ಯಾ ಸಿನ್ವರ್ ಹತ್ಯೆಯಾದರೂ ನಮ್ಮ ಆಕ್ರಮಣ ನಿಲ್ಲುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಮತ್ತೆ ಗುಡುಗಿದ್ದಾರೆ.
ಗುರಿ ಇನ್ನೂ ಈಡೇರಿಲ್ಲ. ನಮ್ಮೆಲ್ಲ ಒತ್ತೆಯಾಳುಗಳನ್ನು ಬಂಧ ಮುಕ್ತವಾಗಿಸುವವರೆಗೂ, ಹಮಾಸ್ ಅನ್ನು ಸಂಪೂರ್ಣ ನಿರ್ನಾಮ ಮಾಡುವವರೆಗೂ ಈ ಹೋರಾಟ ನಿಲ್ಲುವುದಿಲ್ಲ. ಇದು ನಮ್ಮ ಗುರಿ ಅಷ್ಟೇ ಅಲ್ಲ. ನಮ್ಮ ಜವಾಬ್ದಾರಿಯೂ ಆಗಿದೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮಹಾ’ ಚುನಾವಣೆಗಾಗಿ ಒಂದಾದ ಮನುವಾದಿಗಳು, ಒಂದಾಗದ ಜಾತ್ಯತೀತರು
2023ರ ಅಕ್ಟೋಬರ್ 7 ರಂದು ಹಮಾಸ್, ದಕ್ಷಿಣ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಅಂದಿನಿಂದ ಇಸ್ರೇಲ್ ಹಮಾಸ್ ನೆಲೆಯೂರಿರುವ ಗಾಜಾದ ಮೇಲೆ ಪ್ರತಿದಾಳಿ ನಡೆಸುತ್ತಿದೆ. ಇದರಿಂದ ಎರಡೂ ಕಡೆ 45 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ.
ಹಮಾಸ್ ಸಂಘಟನೆ 250ಕ್ಕೂ ಹೆಚ್ಚು ಇಸ್ರೇಲಿಗರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತ್ತು. ಅದರಲ್ಲಿ 70 ಜನ ಮೃತಪಟ್ಟಿದ್ದರೆ, ಉಳಿದ ಇನ್ನೂ ನೂರಕ್ಕೂ ಹೆಚ್ಚು ಜನರ ರಕ್ಷಣೆಗೆ ಇಸ್ರೇಲ್ ಸೆಣಸುತ್ತಿದೆ. ಕೆಲವರು ಬಿಡುಗಡೆಯಾಗಿದ್ದಾರೆ.