ಜನರು ಸಮಾಜಮುಖಿಯಾಗಲು ಮಹರ್ಷಿ ವಾಲ್ಮೀಕಿಯವರ ರಾಮಾಯಣ ನೆರವಾಗಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಹೇಳಿದರು.
ಚಾಮರಾಜನಗರದ ವರನಟ ಡಾ ರಾಜ್‍ಕುಮಾರ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಉತ್ಕೃಷ್ಟ, ನೈತಿಕ ಮೌಲ್ಯಗಳಿಂದ ಕೂಡಿದ್ದು, ಜನರು ಸಮಾಜಮುಖಿಯಾಗಿ ಬೆಳೆಯಲು ನೆರವಾಗಿದೆ. ರಾಮಾಯಣದ ನೈಜ ಪಾತ್ರಗಳು ನಮ್ಮೆಲ್ಲರ ಮೇಲೆ ಪ್ರಭಾವ ಬೀರಿದೆ. ವಾಲ್ಮೀಕಿ ರಾಮಾಯಣ ರಚನೆ ಮೂಲಕ ಎಲ್ಲರೂ ಸುಭಿಕ್ಷತೆಯಿಂದ ಬಾಳಿ ಬದುಕುವ ರಾಮರಾಜ್ಯದ ಕನಸು ಕಂಡಿದ್ದರು. ರಾಮಾಯಣ ಭಾರತಕ್ಕೆ ಮಾತ್ರ ಸೀಮಿತವಾಗಿರದೇ, ವಿಶ್ವದ ಅನೇಕ ಭಾಷೆಗಳಿಗೆ ತರ್ಜುಮೆಯಾಗಿ ಜನರಿಗೆ ಉತ್ತಮ ಸಂದೇಶ ನೀಡಿದೆ” ಎಂದು ಹೇಳಿದರು.
“ಮಹರ್ಷಿ ವಾಲ್ಮೀಕಿಯವರ ಪ್ರತಿಮೆ ನಿರ್ಮಾಣಕ್ಕೆ ಯಾವ ವಿರೋಧವೂ ಇಲ್ಲ. ಸರ್ಕಾರದ ಮಂಜೂರಾತಿ ಬೇಕಾಗಿದೆ. ಮುಖ್ಯಮಂತ್ರಿಯವರು ಹಾಗೂ ಸಂಬಂಧಪಟ್ಟ ಇತರೆ ಸಚಿವರೊಂದಿಗೆ ಈಗಾಗಲೇ ಪ್ರತಿಮೆ ನಿರ್ಮಾಣ ಕುರಿತು ಚರ್ಚಿಸಲಾಗಿದ್ದು, ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದ್ದಾರೆ. ಮಹರ್ಷಿ ವಾಲ್ಮೀಕಿಯವರ ಪ್ರತಿಮೆ ಜೊತೆಗೆ ಮಹರ್ಷಿ ಭಗೀರಥ ಹಾಗೂ ಭಕ್ತಶ್ರೇಷ್ಠ ಕನಕದಾಸರ ಪುತ್ಥಳಿ ನಿರ್ಮಾಣಕ್ಕೂ ಸರ್ಕಾರ ಒಪ್ಪಿದೆ. ಈ ಸಂಬಂಧ ಪ್ರತಿಮೆಗಳ ನಿರ್ಮಾಣಕ್ಕೆ ಅಗತ್ಯವಾದ ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ” ಎಂದರು.
ಶಾಸಕ ಎ ಆರ್ ಕೃಷ್ಣಮೂರ್ತಿ ಮಾತನಾಡಿ, “ಬಂಗಾರವೇ ಬದುಕಲ್ಲ. ಬದುಕು ಬಂಗಾರದಂತಿರಬೇಕೆಂದು ನುಡಿದ ವಾಲ್ಮೀಕಿಯವರ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಹರ್ಷಿಗೆ ಎಲ್ಲರೂ ಸಂಸ್ಕಾರಪೂರ್ಣ ಗೌರವ ನೀಡಬೇಕಾಗಿದೆ. ಅನೇಕ ಸಂತರು, ದಾರ್ಶನಿಕರು ಜಗತ್ತನ್ನು ಉತ್ತಮ ದಿಕ್ಕಿನತ್ತ ಕೊಂಡೊಯ್ದಿದ್ದಾರೆ. ಅಂತಹ ಮಹಾಪುರುಷರಲ್ಲಿ ವಾಲ್ಮೀಕಿ ಸಹ ಒಬ್ಬರಾಗಿದ್ದಾರೆ” ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಪ್ರಾಂಶುಪಾಲ ಬಂಗಾರ ನಾಯಕ ಮಾತನಾಡಿ, “ವಾಲ್ಮೀಕಿ ಇಡೀ ಜಗತ್ತಿಗೆ ರಾಮಾಯಣ ಮಹಾಕಾವ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ. ರಾಮಾಯಣದ ಮೂಲಅಂಶ ಮನುಷ್ಯನ ನೈತಿಕತೆಯೇ ಆಗಿದೆ. ಇಂದಿನ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ವಾಲ್ಮೀಕಿಯವರು ಆದರ್ಶ ಹಾಗೂ ಅನುಕರಣೀಯರಾಗಿದ್ದಾರೆ.
ರಾಮಾಯಣವನ್ನು ಅಧ್ಯಯನ ಮಾಡುವ ಮೂಲಕ ಅದರಲ್ಲಿನ ವಾಸ್ತವವನ್ನು ಎಲ್ಲರೂ ಅರಿಯಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ರಾಮಾಯಣ ಭಾರತೀಯರ ಜೀವನ ಚರಿತ್ರೆ, ಸಂಸ್ಕೃತಿ ಪ್ರತಿಬಿಂಬಿಸುವ ಮಹಾಕಾವ್ಯ: ಸಚಿವ ಮಹದೇವಪ್ಪ
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್ ವಿ ಚಂದ್ರು ಮಾತನಾಡಿ, “ಒಬ್ಬ ಬೇಟೆಗಾರ, ದರೋಡೆಕೋರ ವ್ಯಕ್ತಿ ರಾಮಾಯಣ ಮಹಾಕಾವ್ಯ ರಚಿಸಿ ಆದಿಕವಿಯಾದ ವ್ಯಕ್ತಿತ್ವ ಮಹರ್ಷಿ ವಾಲ್ಮೀಕಿಯವರದ್ದು. ವ್ಯಕ್ತಿಗೆ ಶಿಕ್ಷಣದಷ್ಟೇ ಸಂಸ್ಕಾರವೂ ಮುಖ್ಯವಾಗಿದೆ. ಸಮಾಜದಲ್ಲಿ ಎಲ್ಲರೂ ಪ್ರಬುದ್ಧತೆಯಿಂದ ನಡೆದುಕೊಳ್ಳಬೇಕಾಗಿದೆ” ಎಂದರು.
ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ ಮರಿಸ್ವಾಮಿ, ಚಾಮರಾಜನಗರ ಮತ್ತು ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಬಿ ಟಿ ಕವಿತ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ ಲಕ್ಷ್ಮೀ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್ ಎಸ್ ಬಿಂದ್ಯಾ ಕಾರ್ಯುಕ್ರಮದಲ್ಲಿ ಇದ್ದರು.