ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿಗಳು ಭರದಿಂದ ಆರಂಭವಾಗಿದ್ದರೂ ಇನ್ನೂ ಸಮ್ಮೇಳನಾಧ್ಯಕ್ಷರ ಆಯ್ಕೆ ನಡೆದಿಲ್ಲವಾದ ಕಾರಣ ಸಮ್ಮೇಳನಾಧ್ಯಕ್ಷರು ಯಾರಾಗಬಹುದು, ಯಾರಾಗಬೇಕು ಎಂಬ ಬಗ್ಗೆ ನಾಡು ಕುತೂಹಲದಿಂದ ಎದುರು ನೋಡುತ್ತಿದೆ, ಕಾಯುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿಯವರು ಮತ್ತು ಅವರ ಜಿಲ್ಲಾಧ್ಯಕ್ಷರುಗಳ ತಂಡ ಯಾರನ್ನು ಅಯ್ಕೆ ಮಾಡುತ್ತದೆ ಎಂಬ ಬಗ್ಗೆ ಕರ್ನಾಟಕದ ಸಾರಸ್ವತ ಲೋಕ ತವಕದಿಂದ, ಸಾಶಂಕಿತವಾಗಿ ಕಾಯುತ್ತಿದೆ.
‘ಸಾಶಂಕಿತ’ ಎಂಬ ಪದ ಬಳಸಿದ್ದೇಕೆಂದರೆ ಸ್ವತಃ ಲೇಖಕರೂ ಅಲ್ಲದ, ಕರ್ನಾಟಕದ ಸಂವೇದನಾ ಬಹುತ್ವದ ಲೇಖಕ ಸಮುದಾಯದ ಜೊತೆಗೆ ಅಂತಹ ಆತ್ಮೀಯ ಸಂಬಂಧವನ್ನೂ ಇಟ್ಟುಕೊಳ್ಳದ, ಕಳೆದ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು ಆಹ್ವಾನಿತರು ಅಲ್ಲಿನ ಅವ್ಯವಸ್ಥೆಯನ್ನು ಪ್ರಶ್ನಿಸಿದ್ದಕ್ಕಾಗಿ ಉಡಾಫೆಯ ದಾರ್ಷ್ಟ್ಯದ ನಡೆನುಡಿ ತೋರಿದ ಮಹೇಶ್ ಜೋಶಿಯವರ ತಂಡದ ತೀರ್ಮಾನದ ಬಗ್ಗೆ ಸಹಜವಾಗೇ ನಾಡಿನಲ್ಲಿ ಆತಂಕದಿಂದ ಕೂಡಿದ ನಿರೀಕ್ಷೆ ಇದೆ.
ಈ ಆತಂಕ ಮನೆ ಮಾಡಿರುವಾಗಲೇ ಮಾಧ್ಯಮಗಳಲ್ಲಿ ಸಾಹಿತ್ಯೇತರ ಕ್ಷೇತ್ರದ ಹಲವು ಹೆಸರುಗಳೂ ಸಮ್ಮೇಳನಾಧ್ಯಕ್ಷರ ಸ್ಥಾನಕ್ಕೆ ಶಿಪಾರಸ್ಸು ಮಾಡಲ್ಪಟ್ಟು ಇದು ನಾಡಿನಾದ್ಯಂತ ವ್ಯಾಪಕ ಟೀಕೆಗೂ ಒಳಗಾಗಿದೆ.
ಅ ಕುರಿತ ಒಂದು ಪತ್ರಿಕಾವರದಿ ಇಲ್ಲಿದೆ. “ಡಿಸೆಂಬರ್ 20, 21 ಹಾಗೂ 22ರಂದು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಸಾಹಿತ್ಯೇತರರಿಂದಲೂ ಲಾಬಿ ಹೆಚ್ಚಿದೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೇರಿ ವಿವಿಧ ರಾಜಕಾರಣಿಗಳು, ನಿರ್ಮಲಾನಂದನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್, ಕ್ರೀಡಾಪಟು ಮಾಲತಿ ಹೊಳ್ಳ ಸೇರಿ ಹಲವು ಸಾಹಿತ್ಯೇತರರ ಹೆಸರು ಸಮ್ಮೇಳನಾಧ್ಯಕ್ಷತೆಗೆ ಶಿಫಾರಸುಗೊಂಡಿವೆ”.
ಈ ವರದಿ ಪ್ರಕಟಗೊಳ್ಳುತ್ತಿದ್ದಂತೆ ಸ್ವಾಭಾವಿಕವಾಗಿಯೇ ಕರ್ನಾಟಕದ ಬರಹಗಾರ ಸಮುದಾಯದಲ್ಲಿ ತಳಮಳ ಮತ್ತು ವಿರೋಧ ಉಮ್ಮಳಿಸಿದ್ದು, ಹಲವು ನೆಲೆಗಳಿಂದ ಈ ಸಾಂಸ್ಕೃತಿಕ ಕುರೂಪವೊಂದು ಆಗಕೂಡದು ಎಂಬ ಪ್ರತಿಭಟನೆಯ ದನಿ ಎದ್ದಿದೆ.

ಇದನ್ಮು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿರುವ ಮಹೇಶ್ ಜೋಶಿಯವರು, “ತನ್ನಂತೆ ಸಾಹಿತ್ಯೇತರ ವ್ಯಕ್ತಿಗಳು ‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಬಹುದಾದರೆ, ಸಾಹಿತ್ಯೇತರ ವ್ಯಕ್ತಿಗಳು ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೇಕೆ ಆಗಬಾರದು” ಎಂದು ಕೇಳಿ ತಮ್ಮ ಎಂದಿನ ಅಸೂಕ್ಷ್ಮತೆ ಮತ್ತು ದಾರ್ಷ್ಟ್ಯ ಎರಡನ್ನೂ ತೋರಿದ್ದಾರೆ. ಉಡಾಫೆಯ ನಡೆನುಡಿಗೆ ಕುಖ್ಯಾತಿ ಪಡೆದ ಜೋಶಿ ಯಾವ ಬಗೆಯ ಸಾಂಸ್ಕೃತಿಕ ಅನಾಹುತವನ್ನಾದರೂ ಮಾಡುವ ಬಗ್ಗೆ ಸಂಶಯವೇ ಇಲ್ಲ.
ಈ ಬಗೆಯ, ತಮಗೆ ಅನುಕೂಲಕರವಾದ ತರ್ಕ ಕಟ್ಟಿಕೊಂಡ ಜೋಶಿಯವರಿಗೆ ಅಷ್ಟೇ ಸರಳ ಉತ್ತರವನ್ನು ನಾವು ಕೊಡಬಹುದು : ನೋಡಿ ಜೋಷಿಯವರೇ, ”ಮೇಷ್ಟ್ರಾಗಿದ್ದರೆ, ರೈತಾಪಿ, ವ್ಯಾಪಾರ, ಕುಶಲ ಕರ್ಮಿ ಮೂಲದಿಂದ ಬಂದಿದ್ದರೆ ಆತ ಮೇಷ್ಟ್ರ ಕೆಲಸವಾದ ಪಾಠ ಮಾಡಲೇಬೇಕು. ರಾಜಕಾರಣಿಯೊಬ್ಬ ಬೇರೆ ಬೇರೆ ಜಾತಿ ಧರ್ಮಗಳಿಂದ ರಾಜಕೀಯಕ್ಕೆ ಬಂದಿದ್ದರೂ, ಪ್ರಜಾಪ್ರಭುತ್ವದ ಜಾತ್ಯತೀತ ಮೌಲ್ಯಗಳಿಗೇ ಕೆಲಸ ಮಾಡಬೇಕು. ಪಾಕಿಸ್ತಾನ, ಇಂಡಿಯಾ ಟೀಮುಗಳು ಕೂಡಿ ಕ್ರಿಕೆಟ್ ಅಂಗಳಕ್ಕಿಳಿದರೆ ಕ್ರೀಡಾ ನಿಯಮಕ್ಕೆ ಬದ್ಧವಾಗಿ ಕ್ರಿಕೆಟ್ ಆಡಬಹುದಲ್ಲದೇ, ಅಂಗಳದಲ್ಲಿ ಕ್ಯಾತೆ ತೆಗೆದು ಹೊಡೆದಾಡಲು ಸಾಧ್ಯವೇ? ಪರಿಶಿಷ್ಟ ಜಾತಿ ಮತ್ತು ಬುಡಕಟ್ಟಿಗೆ ಒದಗಿಸಿದ ಮೀಸಲಾತಿಯಲ್ಲಿ ಗೆದ್ದ ಬಿಜೆಪಿ ಶಾಸಕ, ಸಂಸದರು ಬಿಜೆಪಿಯ ವರ್ಣಾಶ್ರಮ ಧರ್ಮವನ್ನು ಒಪ್ಪಿಕೊಳ್ಳಬೇಕಾಗಿಲ್ಲ. ಅದರ ವಿರುದ್ದ ಹೋರಾಡಬೇಕು…”
ಹೀಗೆ, ಈ ಬಹು ಬಗೆಯಲ್ಲಿ ಉತ್ತರಗಳು ಮಹೇಶ್ ಜೋಶಿಯವರ ತಲೆಯಲ್ಲಿ ಕವಿದಿರುವ ದಡ್ಡತನದ ಕಾರ್ಮೋಡವನ್ನು ದೂರ ಸರಿಸಬಹುದೆಂದು ಕಾಣುತ್ತದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಐತಿಹಾಸಿಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ತಮ್ಮ ಹಕ್ಕು ಅಧಿಕಾರ ಯಾವುವು ಮತ್ತು ಬಾಧ್ಯತೆಗಳು ಯಾವುವು ಎಂಬ ಬಗ್ಗೆ ಜೋಶಿಯವರು ಯೋಚಿಸಬೇಕು.
ಮೇ ಸಾಹಿತ್ಯ ಮೇಳ ಖ್ಯಾತಿಯ ಚಿಂತಕ ಮತ್ತು ಸಂಘಟಕ ಬಸವರಾಜ ಸೂಳೀಬಾವಿಯವರು, “ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಹೆಸರು ಸೂಚನೆ ಕ್ರಿಯೆ ಒಂದು ಸುತ್ತು ತಿರುಗುತ್ತಿರುವ ಈ ಹೊತ್ತು, ಕೆ ಪಿ ಸುರೇಶ ಕೆಲವು ಮಹತ್ವದ ಸಂಗತಿಗಳನ್ನು ಪ್ರಸ್ತಾಪ ಮಾಡಿದ್ದಾರೆ. ಅದನ್ನು ಹಂಚಿಕೊಳ್ಳುತ್ತಿರುವೆ. ಅವರು ಎತ್ತಿರುವ ಸಂಗತಿಗಳ ಕುರಿತು ಚರ್ಚೆಯಾಗಲಿ” ಎಂದು ಕೆ ಪಿ ಸುರೇಶ ಅವರ ಈ ಕುರಿತ ಬರಹವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರ ಮುಖ್ಯ ಅಂಶಗಳು ಕೆಳಗಿವೆ.
“ಈ ಕಸಾಪ ಸಮ್ಮೇಳನದ ಅಧ್ಯಕ್ಷಗಿರಿಗೆ ಹೆಸರು ಸೂಚಿಸುವ ಧಾವಂತದ ಟ್ರ್ಯಾಪ್‌ಗೆ ನಮ್ಮ ಅನೇಕ ಗೆಳೆಯರೂ ಬಿದ್ದಿದ್ದಾರೆ! ಮಹೇಶ ಜೋಶಿ ಎಂಬ ಸಾಂಸ್ಕೃತಿಕ ಭ್ರಷ್ಟನಿಗೆ ಬೇಕಾದ್ದೂ ಇದೇ! ಈ ಮೂಲಕ ಅದಕ್ಕೊಂದು ಮಾನ್ಯತೆ ದಕ್ಕುತ್ತದೆ. ಅದೊಂದು ಸಾಂಸ್ಕೃತಿಕವಾಗಿ ಅಸಂಗತಗೊಂಡಿರುವ, ಸಾಂಸ್ಕೃತಿಕವಾಗಿ ಭ್ರಷ್ಟಗೊಂಡಿರುವ ಸಂಸ್ಥೆ. ಅಡ್ಡಂಡ ರಂಗಾಯಣವನ್ನು ಕೆಡಿಸಿದ ರೀತಿಯಲ್ಲಿ ಈ ಮಹೇಶ ಕಸಾಪವನ್ನು ಲಡ್ಡುಗೊಳಿಸಿಯಾಗಿದೆ. ನಮ್ಮ ಸಾಂಸ್ಕೃತಿಕ ಹಸಿರುತನಕ್ಕೆ ಕಸಾಪದ ಶಾಮಿಯಾನ, ಬೋರ್ಡು, ಬ್ಯಾಜು ಮುಖ್ಯ ಎಂದು ಯಾರಾದರೂ ಭಾವಿಸಿದರೆ ಅವರು ಸಾಂಸ್ಕೃತಿಕವಾಗಿ ಬರಡಾಗಿದ್ದಾರೆ ಎಂದರ್ಥ. ಇದಕ್ಕಿಂತ ಎಷ್ಟೋ ಪಾಲು ಸಹನೀಯವಾಗಿದ್ದ ಹಂಪನಾ ಕಾರಣಕ್ಕೆ ಬಂಡಾಯ ಚಳವಳಿ, ಸಂಘಟನೆ ಹುಟ್ಟಿಕೊಂಡಿತು ಎಂಬುದನ್ನು ನೆನಪಿಸಬೇಕೇ? ಈಗ ಕಸಾಪ ಆ ಕಾಲಕ್ಕಿಂತ ಹೆಚ್ಚು ಪ್ರಜಾಸತ್ತಾತ್ಮಕವಾಗಿದೆಯೇ?
ಆ ʼಬಂಡಾಯ ಚಳವಳಿʼ ಒಂದು ಅಪ್ರಬುದ್ಧ ಸಾಂಸ್ಕೃತಿಕ ನಿಲುವಾಗಿತ್ತೇ? ಈಗ ನಮ್ಮ ಹಿರಿಯ ಪ್ರಗತಿಪರರು ತಳೆದಿರುವ ನಿಲುವು ನೋಡಿದರೆ ಹಾಗನ್ನಿಸುತ್ತದೆ.
ಕಸಾಪದ ಛತ್ರಿಯಡಿ ಹೋದರೆ ಸಾಹಿತ್ಯಿಕ, ಸಾಂಸ್ಕೃತಿಕ ಸಾಧನೆಗೆ ಸನ್ನದು ಎಂದು ಇವರೆಲ್ಲಾ ಭಾವಿಸಿರುವಂತೆ ಹೊಸ ತಲೆಮಾರಿಗೆ ತೋರಬಹುದು, ಅಲ್ಲವೇ? ಇನ್ನಷ್ಟು ಕೊಳೆತಿರುವ ಈ ಕಾಲವೂ ಸಹಜ ಸ್ಥಿತಿ ಎಂದು ಯಾಕೆ ಅನ್ನಿಸುತ್ತಿದೆ? ಈ New Normalcy ಅಂದರೆ ನಮ್ಮನ್ನು ಪಳಗಿಸಲಾಗಿದೆ ಎಂದರ್ಥ. ಈ ತರ ಮೆತ್ತಗಾಗಿ ಸಮ್ಮತಿ ನೀಡುವ ಮನೋಭಾವ ಬೆಳೆದಂತೆ, ಹೊಸ ತಲೆಮಾರಿಗೆ ಚರಿತ್ರೆಯ, ಬಂಡಾಯದ ಕಾರಣಗಳು ದಕ್ಕದೇ ಹೋಗುತ್ತದೆ. ಪ್ರಭುತ್ವದ ಲಕ್ಷಣ ಏನೇ ಇರಲಿ ಸಾಹಿತ್ಯ, ಸಾಂಸ್ಕೃತಿಕ ಕ್ರಿಯೆಗಳಿಗೆ ಅಡ್ಡಿ ಇಲ್ಲ ಎಂಬಷ್ಟರ ಮಟ್ಟಿಗೆ ಮೌಲ್ಯ ನಿರ್ಲಿಪ್ತವಾಗಿ ಬಿಟ್ಟರೆ, ಅಲ್ಲಿಗೆ ಕತೆ ಮುಗಿದಂತೆ.
ಇದನ್ನೂ ಓದಿ ಮಂಡ್ಯ ಸಾಹಿತ್ಯ ಸಮ್ಮೇಳನ | ಯಾರು ಬೇಕಾದರೂ ಅಧ್ಯಕ್ಷರಾದರೆ ಅದು ʼಸಾಹಿತ್ಯ ಸಮ್ಮೇಳನʼ ಹೇಗಾಗುತ್ತದೆ?
ಈ ಟಿಪ್ಪಣಿಯನ್ನೂ ಮತ್ತು ಈ ಟಿಪ್ಪಣಿ ಹಂಚಿಕೊಂಡವರ ಟಿಪ್ಪಣಿಯನ್ನೂ ಹಾಕಿದ್ದೇಕೆಂದರೆ “ಸಾಹಿತ್ಯೇತರ ಕ್ಷೇತ್ರದ ತಾನೇ ಪರಿಷತ್ತಿನ ಅಧ್ಯಕ್ಷ ಪದವಿ ಹಿಡಿಯುವುದಾದರೆ, ಸಮ್ಮೇಳನಾಧ್ಯಕ್ಷರು ಯಾಕೆ ಸಾಹಿತ್ಯೇತರ ಕ್ಷೇತ್ರದವರಾಗಬಾರದು? ” ಎಂದು ಆಗ್ರಹದ ದನಿಯಲ್ಲಿ ಕೇಳುವ ಪರಿಷತ್ತಿನ ಅಧ್ಯಕ್ಷರಿಂದ ಹಿಡಿದು, ಸಾಹಿತ್ಯ ಪರಿಷತ್ತು ಕರ್ನಾಟಕದ ಜನತೆಯ ದುಡ್ಡಿನಲ್ಲಿ ಸಂಘಟಿಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಕಬ್ಜಾ ಮಾಡುವ ಹುನ್ನಾರಕ್ಕೆ ಮುಂದಾಗಿರುವ ಸಾಹಿತ್ಯೇತರ ವಲಯದ ಪಟ್ಟಭದ್ರ ಸಾಮಾಜಿಕ ರಾಜಕೀಯ ಶಕ್ತಿಗಳವರೆಗೆ ಪ್ರಭಾವಿ ಸಾಂಸ್ಥಿಕ ಶಕ್ತಿಗಳು ಒಟ್ಟಾಗುತ್ತಿರುವಾಗ, ಕರ್ನಾಟಕದ ಚಿಂತಕ ವಲಯ ಮೇಲಿನಂತೆ ಪರಿಷತ್ತಿನ ಜೊತೆಗೆ ಸಂಬಂಧ ಕಳಚಿಕೊಳ್ಳುವ, ಮಾತಾಡಿದರೆ ಪರಿಣಾಮ ಏನಾಗುತ್ತದೆಯೆಂದು ಊಹಿಸಬಹುದು.

ಕರ್ನಾಟದ ಏಕೀಕರಣ ಚಳವಳಿಯಿಂದ ಮೊದಲುಗೊಂಡು, ಕನ್ನಡದ ಏಳ್ಗೆಯ ಹಲವು ಚಳವಳಿಗಳಿಗೆ ತನ್ನ ಶಕ್ತಿ ಮೀರಿ ಶ್ರಮಿಸಿರುವ, ಕನ್ನಡ ಪುಸ್ತಕ ಪ್ರಕಟಣೆಯ ಕ್ಷೇತ್ರದಲ್ಲೂ ತನ್ನ ಕೊಡುಗೆ ನೀಡಿರುವ ಮತ್ತು ಹಲವು ಐತಿಹಾಸಿಕ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸುವ ಮೂಲಕ ಜನ ಸಾಮಾನ್ಯರಲ್ಲಿ ಕನ್ನಡಾಭಿಮಾನ ಅಂಕುರಿಸಲು ಕಾರಣವಾಗಿರುವ ಸಾಹಿತ್ಯ ಪರಿಷತ್ತನ್ನು ನಾವು ಕಟ್ಟೆಚ್ಚರದಿಂದ ಕಾಪಾಡಿಕೊಳ್ಳಬೇಕಾದ ಸಂಸ್ಥೆಯೆಂದು ಭಾವಿಸದೇ, ಅದನ್ನು ನಿರ್ಲಕ್ಷಿಸಿ ಬಿಡುವ ಮಾತಾಡುವುದು ಸಾಹಿತ್ಯೇತರ ವಲಯದ ಕನ್ನಡ ಕಂಟಕ ಪಟ್ಟಭದ್ರ ಶಕ್ತಿಗಳಿಗೆ ಸಾಂಸ್ಕೃತಿಕ ಸಂಸ್ಥೆಯನ್ನು ಸಲೀಸಾಗಿ ಒಪ್ಪಿಸಿಬಿಟ್ಟಂತಾಗುತ್ತದೆ.
ಹತ್ತು ವರ್ಷ ದಾಟಿ ಹದಿನೈದರತ್ತ ಮುನ್ನಡೆದಿರುವ, ಸದ್ಯದ ಕೇಂದ್ರ ಸರ್ಕಾರ ಮೋದಿ -ಅರೆಸ್ಸೆಸ್ -ಬಿಜೆಪಿ ನಿಯಂತ್ರಿತವಾಗಿದೆ, ಫ್ಯಾಸಿಸ್ಟ್ ಆಗಿದೆ ಅಂತ ಅದಕ್ಕೂ ನಮಗೂ ಸಂಬಂಧ ಇಲ್ಲ ಅಂತ ಕೈಸೋಸಿ ಬಿಟ್ಟು ಬಿಡಲಾಗುವುದಿಲ್ಲ. ಸರ್ಕಾರದ ನಡೆ ನುಡಿಗಳನ್ನು ವಿಮರ್ಶಿಸುತ್ತಲೇ ಅದನ್ನು ಪ್ರಜಾಪ್ರಭುತ್ವಕ್ಕೆ ಬದ್ಧಗೊಳಿಸಬೇಕಾಗುತ್ತದೆ.
ಅದೇ ತರ, ಈ ಸಾಹಿತ್ಯಕ ಸಂಸ್ಥೆ ಇರುವವರೆಗೆ (ಇದು ಚುನಾಯಿತ ಅಧಿಕಾರ ಹೊಂದಿದೆ, ಸರ್ಕಾರಿ ಅನುದಾನ ಪಡೆಯುತ್ತದೆ, ನಮ್ಮ ಹಿರಿಯರು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಅಂತ ಕರೆದು ಕಟ್ಟಿ ಬೆಳೆಸಿದ್ದು) ಅದರ ನಡೆ ನುಡಿ ನಿಲುವು ಆಯ್ಕೆಗಳ ಬಗ್ಗೆ ಕನ್ನಡ ಜನತೆ critical ಅಗಿರಲೇಬೇಕಾಗುತ್ತದೆ. ಹಾಗಿದ್ದೇ ಆ ಸಂಸ್ಥೆಯು ಪ್ರಜಾಪ್ರಭುತ್ವ ಮತ್ತು ಸಾಹಿತ್ಯಕ ಸಂವೇದನೆಯ ಹತ್ತಿರ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ.
ಹೀಗಾಗಿ ಒಂದೆಡೆ ಸಾರ್ವಜನಿಕ ಕ್ಷೇತ್ರದ ಜಾತೀಯ ಮತ್ತು ರಾಜಕೀಯ ಪಟ್ಟಭದ್ರ ಶಕ್ತಿಗಳು ಸಾಹಿತ್ಯ. ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಕಬ್ಜಾ ಮಾಡುವ ಮೂಲಕ ಪರಿಷತ್ತಿನ ಪ್ರಾಣವನ್ನೇ ಹೀರಲು ಹೊರಟಿದ್ದರೆ, ಪರಿಷತ್ ಅಧ್ಯಕ್ಷರು, ”ನನ್ನಂತಹ ಸಾಹಿತ್ಯಕ್ಕೆ ಹೊರಗಿನವನೇ ಪರಿಷತ್ ಅಧ್ಯಕ್ಷನಾಗಬಹುದಾದರೆ ಸಮ್ಮೇಳನದ ಅಧ್ಯಕ್ಷರು ಯಾಕಾಗಬಾರದು?” ಎಂದು ಕೇಳುವ ಮೂಲಕ ಆತಂಕ ಮೂಡಿಸುತ್ತಿದ್ದರೆ, ಸಾಹಿತ್ಯ ಪರಿಷತ್ ಸಂಘಟಿಸುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯ ಬಗ್ಗೆ ಚರ್ಚೆ ಮಾಡುವುದು, “ನಮ್ಮ ಸಾಂಸ್ಕೃತಿಕ ಹಸಿರುತನಕ್ಕೆ ಕಸಾಪದ ಶಾಮಿಯಾನ, ಬೋರ್ಡು, ಬ್ಯಾಜು ಮುಖ್ಯ ಎಂದು ಯಾರಾದರೂ ಭಾವಿಸಿದರೆ ಅವರು ಸಾಂಸ್ಕೃತಿಕವಾಗಿ ಬರಡಾಗಿದ್ದಾರೆ ಎಂದರ್ಥ” ಎಂಬ ಅಭಿಪ್ರಾಯ ರೂಪಿಸುವ ಕೆಲಸ ಮಾಡುವುದು, ಅದಕ್ಕೆ ಬಲ ಕೊಡುವ ವರ್ಗವೊಂದು ಸಾಹಿತಿಗಳ ನಡುವೆ ತಲೆಯೆತ್ತುವುದು ಸಾಹಿತ್ಯೇತರ ಶಕ್ತಿಗಳ ಪುಡಾರಿಗಿರಿಯ ಅಟ್ಟಹಾಸಕ್ಕೆ ಜಾಗ ಮಾಡಿಕೊಟ್ಟಂತಾಗುತ್ತದೆ.

ಹಿರಿಯ ಲೇಖಕರಾದ ಶೂದ್ರ ಶ್ರೀನಿವಾಸ ಅವರು ಸುರೇಶ್ ಅವರ ಅಭಿಪ್ರಾಯವನ್ನು ಸಮರ್ಥಿಸುತ್ತ ಈ ಮಾತುಗಳನ್ನು ದಾಖಲಿಸುತ್ತಾರೆ. “ಸುರೇಶ್ ನೀವು ಹೇಳಿರುವುದು ಸರಿ. ನಾವು ಕೆಲವರು ಬಹಳ ಹಿಂದೆಯೇ ಬಂಡಾಯ ಸಂಘಟನೆ ಪ್ರಾರಂಭಿಸಿದಾಗ ಮತ್ತು ಜಾಗೃತ ಸಾಹಿತ್ಯ ಸಮಾವೇಶ ನಡೆಸಿದಾಗ ನಮ್ಮ ಪ್ರತಿರೋಧ ಇದ್ದದ್ದು ಸಾಹಿತ್ಯ ಪರಿಷತ್ತು ಯಾವ ಲೇಖಕರನ್ನು ಸೃಷ್ಟಿ ಮಾಡಿಲ್ಲ. ಹಾಗೆಯೇ ಬೆಳೆಸಿಲ್ಲ. ಇದರ ಜೊತೆಗೆ ಎಷ್ಟೊಂದು ಲೇಖಕರನ್ನು ಪ್ರಶಸ್ತಿ ನೆಪದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭ್ರಷ್ಟಗೊಳಿಸಿದೆ. ಈ ವಿಷಯದ ಬಗ್ಗೆಯೇ ನಿನ್ನೆ ಮೊಗಳ್ಳಿಯವರ ಬಳಿ ಚರ್ಚಿಸುತ್ತಿದ್ದೆ. ಅದಕ್ಕೆ ಹೆಚ್ಚು ಅನುದಾನ ಮತ್ತು ಇತರೆ ಸವಲತ್ತುಗಳನ್ನು ಕೊಡುವುದು ನಿಲ್ಲಿಸಬೇಕು. ಮನು ಬಳಿಗಾರ ಅವರ ಕಾಲದಿಂದಲೂ ಇದು ಅತಿಯಾಗುತ್ತಾ ಬಂದಿದೆ. ಜೊತೆಗೆ ಮೂರು ವರ್ಷಗಳಿಂದ ಐದು ವರ್ಷಗಳಿಗೆ ಹೆಚ್ಚಿಸಿಕೊಂಡಿದ್ದೇ ದೊಡ್ಡ ಅಪರಾಧ”.
ಈ ಬಗೆಯ ಸಂಕುಚಿತ ದೃಷ್ಟಿಯಿಂದ ಆಗುವ ಅನಾಹುತವೆಂದರೆ, ಈಗಾಗಲೇ ಕನ್ನಡದ ಅಭಿವೃದ್ಧಿ ಮತ್ತು ಕನ್ನಡ ಸಾಂಸ್ಕೃತಿಕ ಸಂಸ್ಥೆಗಳಿಗೆ ನಿರ್ದಾಕ್ಷಿಣ್ಯವಾಗಿ ಅನುದಾನ ಸ್ಥಗಿತಗೊಳಿಸುವ ಮೂಲಕ ಅವುಗಳನ್ನು inoperative ಆಗಿಸಿ ನಿಷ್ಕ್ರಿಯಗೊಳಿಸಿರುವ ಸರ್ಕಾರ ಸಾಹಿತ್ಯ ಪರಿಷತ್ತಿಗೂ ಅನುದಾನವನ್ನು ನಿಲ್ಲಿಸಿದರೆ ಆಶ್ಚರ್ಯವೇ ಇಲ್ಲ. ಸೂಕ್ತ ಸಾಂಸ್ಕೃತಿಕ ವ್ಯಕ್ತಿಯ ಆಯ್ಕೆಯ ಜೊತೆಗೆ, ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯುವ ಕೆಲಸವನ್ನು ಆಗು ಮಾಡಲು ಕನ್ನಡದ ಸಾರಸ್ವತ ಲೋಕ ಶ್ರಮಿಸಬೇಕಾಗಿದೆ. ಇದರಿಂದ ಕನ್ನಡದ ಅಭಿವೃದ್ಧಿಗೆ ಪೂರಕ ಪರಿಸರವೂ, ಉನ್ನತ ಮೌಲ್ಯಗಳ ಸ್ಥಾಪನೆ ಮತ್ತು ಪ್ರಸರಣವೂ ಇಲ್ಲಿ ಜರುಗಿದಂತಾಗುತ್ತದೆ.
ಕೋಮುವಾದಿ ಪ್ರಭುತ್ವ ದೇಶದ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡು ದಶಕವೇ ಕಳೆದು ಹೋಗಿ ಪ್ರಜಾಪ್ರಭುತ್ವವನ್ನು ನಿರ್ವಹಿಸಬೇಕಾಗಿದ್ದ ಚುನಾವಣಾ ಆಯೋಗ, ನ್ಯಾಯಾಂಗ, ಮಾಧ್ಯಮ, ಇಡಿ, ಸಿಬಿಐ ಮುಂತಾಗಿ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನೂ ತನ್ನ ಕೈಗೊಂಬೆಗಳನ್ನಾಗಿ ಮಾಡಿಕೊಂಡಿರುವುದನ್ನು ನೋಡಿಕೊಂಡು ಕುಂತ ʼಇಂದ್ರಿಯ ಮಂದʼ ದೇಶವೊಂದು ಈ ಬಗೆಯಲ್ಲಿ ಎಳಸಾಗಿ ಯೋಚಿಸುವುದರಲ್ಲಿ ಅಚ್ಚರಿಯಿಲ್ಲ. ಅದರೆ ಅದು ಆತ್ಮಘಾತುಕವಾಗುತ್ತದೆ.
ಸಾಹಿತ್ಯದ ಸಂಸ್ಥೆಯೊಂದನ್ನು ಪುಡಾರಿಗಿರಿಯ ಆಡುಂಬೊಲವಾಗಲು ಅನುವು ಮಾಡಿಕೊಡುವ ಇಂತಹ ಆಲೋಚನೆ, ನಾವು ನಮ್ಮ ಅಪಕ್ವ ಆಲೋಚನೆ ಮತ್ತು ನಿರ್ಧಾರಗಳ ಮೂಲಕ ಮತ್ತೊಂದು ಗುರುತರವಾದ ಸಾಂಸ್ಕೃತಿಕ ದುರಂತವನ್ನು ಆಹ್ವಾನಿಸಿಕೊಂಡಂತೆ. ಪ್ರಭುತ್ವಗಳು ಸತತವಾಗಿ ಕನ್ನಡವನ್ನು ನಿರ್ಲಕ್ಷಿಸುತ್ತಿರುವ ಸದ್ಯದ ನಿರಾಶಾದಾಯಕ ಸನ್ನಿವೇಶದಲ್ಲಿ ಕನ್ನಡದ ಏಳ್ಗೆಯ ದೃಷ್ಟಿಯಿಂದಂತೂ ಈ ಧೋರಣೆಗಳು ಕೆಡುಕಿನವಾಗುತ್ತವೆ.
ಸಾಹಿತ್ಯ ಪರಿಷತ್ತು ಮತ್ತು ಅದರ ಸಾಂಸ್ಕೃತಿಕ ಅಭಿವ್ಯಕ್ತಿಯಂತಿರುವ ಸಾಹಿತ್ಯ ಸಮ್ಮೇಳನ ಮತ್ತು ಅದರ ಅಧ್ಯಕ್ಷರ ಆಯ್ಕೆಯು ಪ್ರಜಾಪ್ರಭುತ್ವವಾದಿಗಳೆಲ್ಲರೂ ಚಿಂತಿಸಬೇಕಾದ, ಸೂಕ್ತವಾದ ಆಯ್ಕೆಗೆ ಹಕ್ಕೊತ್ತಾಯ ಮಂಡಿಸಬೇಕಾದ ಗಂಭೀರ ಸಂಗತಿಯಾಗಿದೆ.

ಕೆ ಪಿ ನಟರಾಜ್
ಲೇಖಕ