ಸಂಭಾವಿತ ಎಂದು ಮಾಧ್ಯಮಗಳಿಂದ ಪ್ರಚಾರ ಪಡೆದಿರುವ ಪ್ರಲ್ಹಾದ್ ಜೋಶಿಯವರು ಈಗ ಕೇಂದ್ರ ಸಚಿವರು. ಮೋದಿ ಮತ್ತು ಅಮಿತ್ ಶಾಗಳ ಆಪ್ತರು. ಇದೇ ಸಂದರ್ಭದಲ್ಲಿ ಸಹೋದರ ಗೋಪಾಲ್ ಜೋಶಿ, ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಮಾಜಿ ಶಾಸಕರಿಗೆ 2 ಕೋಟಿ ಟೋಪಿ ಹಾಕಿದ್ದಾರೆ. ಅವರ ಮೇಲೆ ಎಫ್ಐಆರ್ ದಾಖಲಾಗಿದೆ. ಆದರೆ ಸಚಿವರು, ಅವರಿಗೂ ನನಗೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ.
‘ಯಾರ್ ಯಾರೋ ದೊಡ್ಡವರ ಹೆಸರು ಹೇಳಿ ಟೋಪಿ ಹಾಕಿರುತ್ತಾರೆ. ಇದನ್ನು ಒಂದು ಪಕ್ಷಕ್ಕೆ ಜೋಡಿಸೋದು ಸರಿಯಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು, ಕಳೆದ ವರ್ಷದ ಸೆಪ್ಟೆಂಬರ್‍ನಲ್ಲಿ ಹೇಳಿದ್ದರು.
ಎಬಿವಿಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಎಂಬ ಹುಡುಗಿ, ಬಿಜೆಪಿ ಮತ್ತು ಸಂಘಪರಿವಾರದ ವೇದಿಕೆಗಳಲ್ಲಿ ಹಿಂದುತ್ವ ಕುರಿತ ಭಾವಾವೇಷದ ಭಾಷಣಗಳಿಂದ ಭಾರೀ ಜನಪ್ರಿಯತೆ ಗಳಿಸಿದ್ದರು. ಕರಾವಳಿಯ ಫೈರ್ ಬ್ರಾಂಡ್, ಪ್ರಖರ ಭಾಷಣಗಾರ್ತಿ ಎಂದು ಹೆಸರು ಪಡೆದಿದ್ದರು. ಸಂಘಿಗಳ ಸಹವಾಸ, ಸಹಕಾರ, ವೇದಿಕೆ, ಮಾಧ್ಯಮಗಳ ಪ್ರಚಾರದಿಂದ ಉಬ್ಬಿಹೋದ ಚೈತ್ರಾ, ಉಡುಪಿ ಜಿಲ್ಲೆ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಗಾಳ ಹಾಕಿದ್ದರು. ಬಿಜೆಪಿ ಟಿಕೆಟ್ ಕೊಡಿಸುತ್ತೇನೆಂಬ ಆಮಿಷವೊಡ್ಡಿ 7 ಕೋಟಿ ರೂಪಾಯಿ ಹಣ ವಸೂಲಿ ಮಾಡಿದ್ದರು. ಟಿಕೆಟ್ ಕೊಡಿಸದೆ ವಂಚಿಸಿದ್ದರು.
ಆ ವಂಚನೆ ಪ್ರಕರಣ ಬಯಲಾಗಿ, ದೂರು ದಾಖಲಾಗಿ, ಪೊಲೀಸ್, ಕೋರ್ಟ್, ವಿಚಾರಣೆಯ ಹಂತದಲ್ಲಿದ್ದಾಗ, ಮಾಧ್ಯಮದವರು ಬಿಜೆಪಿಯ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಮುಖಕ್ಕೆ ಮೈಕ್ ಹಿಡಿದಿದ್ದರು. ಆಗ ಅವರು, ‘ಚೈತ್ರಾ ಕುಂದಾಪುರ ಬಿಜೆಪಿ ಅಲ್ಲ. ನಮ್ಮ ಪಕ್ಷಕ್ಕೂ ಅವರಿಗೂ ಸಂಬಂಧ ಇಲ್ಲ’ ಎಂದಿದ್ದರು.
ಅವರೇ ಮುಂದುವರೆದು, ’20 ಸಾವಿರಕ್ಕಿಂತ ಹೆಚ್ಚು ಹಣವನ್ನು ವಹಿವಾಟು ಮಾಡಬಾರದು ಎಂದು ಸರ್ಕಾರದ ಕಟ್ಟುನಿಟ್ಟಿನ ಕಾನೂನು ಇದೆ. ದುಡ್ಡು ಕೊಟ್ಟ ಉದ್ಯಮಿಗೆ ಬುದ್ಧಿ ಬೇಡವಾ’ ಎಂದು ಕೂಡ ಪ್ರಶ್ನಿಸಿದ್ದರು.
ಈಗ, ಒಂದು ವರ್ಷದ ನಂತರ, ಅದೇ ರೀತಿಯ ವಂಚನೆ ಬಿಜೆಪಿಯಿಂದಲೇ ಬಯಲಾಗಿದೆ. ‘ದುಡ್ಡು ಕೊಟ್ಟ ಉದ್ಯಮಿಗೆ ಬುದ್ಧಿ ಬೇಡವಾ’ ಎಂದು ಪ್ರಶ್ನಿಸಿದ ಪ್ರಲ್ಹಾದ್ ಜೋಶಿಯವರ ಸಹೋದರನೇ 2 ಕೋಟಿ ವಂಚಿಸಿದ್ದು, ಜೋಶಿಗೇ ಜನ ಪ್ರಶ್ನಿಸುವ ಸಂದರ್ಭ ಸೃಷ್ಟಿಯಾಗಿದೆ.
ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ ಗೋಪಾಲ ಜೋಶಿ, ಅಮಿತ್ ಶಾ ಪಿಎ ಜೊತೆ ಮಾತಾಡಿ ಡೀಲ್ ಕುದುರಿಸಿದ್ದೇನೆ ಎಂದಿದ್ದರು. ವಿಜಯಪುರ ಜಿಲ್ಲೆ ನಾಗಠಾಣ ಕ್ಷೇತ್ರದ ಮಾಜಿ ಶಾಸಕ ದೇವಾನಂದ್ ಫೂಲ್ ಸಿಂಗ್ ಚವ್ಹಾಣ್ ಅವರಿಂದ 2 ಕೋಟಿ ಸುಲಿಗೆ ಮಾಡಿದ್ದರು. ಟಿಕೆಟ್ ಕೊಡಿಸದೆ ಇದ್ದಾಗ, ಕೊಟ್ಟ ಹಣ ಕೇಳಲು ಹೋದಾಗ, ಗೂಂಡಾಗಳನ್ನು ಬಿಟ್ಟು ಧಮ್ಕಿ ಹಾಕಿಸಿದ್ದರು. ಆ ಆರೋಪದ ಅಡಿ ಗೋಪಾಲ ಜೋಶಿ, ಅವರ ಮಗ ಅಜಯ್, ವಿಜಯಲಕ್ಷ್ಮಿ ಮೇಲೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನು ಓದಿದ್ದೀರಾ?: ಅಮಿತ್ ಶಾ-ಪ್ರಲ್ಹಾದ್ ಜೋಶಿ ಹೆಸರೇಳಿ 2 ಕೋಟಿ ವಂಚನೆ: ಪ್ರಕರಣ ಮುಚ್ಚಿಡುತ್ತಿರುವ ಮಾಧ್ಯಮಗಳು
ಈ ಕುರಿತು ಬಿಜೆಪಿಯಿಂದ 5 ಸಲ ಗೆದ್ದು, ಕೇಂದ್ರ ಸಚಿವರಾಗಿರುವ ಪ್ರಲ್ಹಾದ್ ಜೋಶಿ ಏನು ಹೇಳುತ್ತಾರೆ? ಭಾರತೀಯ ಜನತಾ ಪಕ್ಷಕ್ಕೂ ಜೋಶಿ ಕುಟುಂಬಕ್ಕೂ ಸಂಬಂಧ ಇದೆಯೇ? ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಜೋಶಿಯವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಆರ್‍ಎಸ್ಎಸ್ ಮತ್ತು ಬಿಜೆಪಿಯಲ್ಲಿದ್ದು, ಕೇಂದ್ರ ಸಚಿವರಾಗಿರುವುದರಿಂದ ಗೋದಿ ಮೀಡಿಯಾ ಜಾಗೃತವಾಗಿದೆ. ಆ ತಕ್ಷಣವೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರನ್ನು ಸಂಪರ್ಕಿಸಿ, ‘ನನಗೂ ಅವರಿಗೂ ಸಂಬಂಧವಿಲ್ಲ’ ಎಂಬ ಹೇಳಿಕೆ ಪಡೆದು, ಹಂಚುವ ಉಸಾಬರಿ ಹೊತ್ತುಕೊಂಡಿದೆ, ಇರಲಿ. ಆದರೆ ವಂಚನೆಯನ್ನು ಅಲ್ಲಗಳೆಯಲಾಗುವುದಿಲ್ಲವಲ್ಲ?
ಅಷ್ಟಕ್ಕೂ ಯಾರೀ ಜೋಶಿ?
ಹುಬ್ಬಳ್ಳಿಯ ರೈಲ್ವೆ ವರ್ಕ್‌ಶಾಪ್‌ನಲ್ಲಿ ನೌಕರರಾಗಿದ್ದ ವೆಂಕಟೇಶ್ ಜೋಶಿಯವರಿಗೆ ಮನೆತುಂಬಾ ಮಕ್ಕಳು. ಗಿರಿಣಿಚಾಳ್ ಪಕ್ಕದ ರೈಲ್ವೆ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದ ಜೋಶಿ ಕುಟುಂಬಕ್ಕೆ ರೈಲ್ವೆ ಪಗಾರವೇ ಆಧಾರ. ಹಿರಿಯ ಪುತ್ರ ಗೋಪಾಲ್ ಜೋಶಿ ಕೆನರಾ ಬ್ಯಾಂಕ್ ಉದ್ಯೋಗಿ, ಎರಡನೆಯವ ಎಲ್ಐಸಿ ನೌಕರ. ಮೂರನೇ ಪುತ್ರ ಪ್ರಲ್ಹಾದ್ ಜೋಶಿ ಪದವಿ ಮುಗಿಸಿದ ನಂತರ ಕೆಲಸವಿಲ್ಲದೆ, ದೇಶಪಾಂಡೆ ನಗರದಲ್ಲಿ ಫೆನಾಯಿಲ್ ಅಂಗಡಿ ತೆರೆದಿದ್ದರು. ಅದು ಸಾಲದೆಂದು ವಿಆರ್‍ಎಲ್ ಕಚೇರಿಯಲ್ಲಿ ಪಾರ್ಟ್ ಟೈಂ ಕೆಲಸಕ್ಕೂ ಸೇರಿದ್ದರು. ಸೈಕಲ್‌ನಲ್ಲಿ ಓಡಾಡುತ್ತಿದ್ದರು.
ರೈಲ್ವೆ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದ ಪಕ್ಕದ ಮನೆಯ ರೈಲ್ವೆ ನೌಕರನ ಮಗನಾಗಿದ್ದ ಅನಂತಕುಮಾರ್ ಜೊತೆ ಸೇರಿ ಆರ್‍ಎಸ್ಎಸ್‌ನೊಂದಿಗೆ ಗುರುತಿಸಿಕೊಂಡಿದ್ದರು. ಕಾರ್ಪೊರೇಷನ್ ಮತ್ತು ಎಂಎಲ್‌ಸಿ ಎಲೆಕ್ಷನ್‌ಗೆ ಸ್ಪರ್ಧಿಸಿ, 40 ಮತ ಪಡೆದು ಸೋತಿದ್ದರು. 1992-94ರಲ್ಲಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಆರ್‍ಎಸ್ಎಸ್ ತ್ರಿವರ್ಣ ಧ್ವಜ ಹಾರಿಸುವ ಕಿತಾಪತಿಗೆ ಕೈಹಾಕಿದಾಗ, ಪ್ರಲ್ಹಾದ್ ಜೋಶಿ ಮೊದಲಬಾರಿಗೆ ಸಾರ್ವಜನಿಕರ ಗಮನಕ್ಕೆ ಬಂದರು. ಆ ನಂತರ ಕಾಶ್ಮೀರ ಉಳಿಸಿ ಆಂದೋಲನ ಇವರನ್ನು ರಾಜ್ಯಕ್ಕೆ ಪರಿಚಯಿಸಿತು.

ಡಮ್ಮಿ ಕ್ಯಾಂಡಿಡೇಟ್
ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುತ್ತಿದ್ದ ಲಿಂಗಾಯತರ ವಿಜಯ ಸಂಕೇಶ್ವರ, 2004ಲ್ಲಿ ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಿ, ಕಣಕ್ಕಿಳಿದಿದ್ದರು. ಅವರಿಗೆ ಎದುರಾಳಿಯಾಗಲು ಕಾಂಗ್ರೆಸ್‌ನಿಂದ ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ್ ತಯಾರಾಗಿದ್ದರು. ಅದು ಹೇಳಿ ಕೇಳಿ ಲಿಂಗಾಯತರ ಕ್ಷೇತ್ರ. ಅದನ್ನು ಸಂಕೇಶ್ವರ್ ಗಟ್ಟಿಗೊಳಿಸಿದ್ದರು. ಲಿಂಗಾಯತರನ್ನು ಬಿಟ್ಟರೆ ಮುಸ್ಲಿಮರು ಮತ್ತು ಕುರುಬರ ಸಂಖ್ಯೆ ಹೆಚ್ಚು. ಬ್ರಾಹ್ಮಣರದು 25ರಿಂದ 30 ಸಾವಿರವಿದ್ದರೆ ಹೆಚ್ಚು. ಬ್ರಾಹ್ಮಣ ಜಾತಿಯಿಂದ ಬಂದ ಜೋಶಿ ಅಭ್ಯರ್ಥಿಯಾಗಲು ಸಾಧ್ಯವೇ? ಹಣಬಲವಂತೂ ಇಲ್ಲ. ಇನ್ನೆಲ್ಲಿಂದ ರಾಜಕಾರಣ ಮಾಡುವುದು?
2004ರ ಸಮಯಕ್ಕೆ ಗೆಳೆಯ ಅನಂತಕುಮಾರ್ ರಾಜಕಾರಣದಲ್ಲಿ ಮುಂಚೂಣಿ ನಾಯಕನಾಗಿದ್ದರು. ಕೇಂದ್ರ ಮಂತ್ರಿಯಾಗಿಯೂ ಹೆಸರು ಮಾಡಿದ್ದರು. ಪಕ್ಷದಲ್ಲಿ ಪ್ರಭಾವಿ ಸ್ಥಾನದಲ್ಲಿದ್ದರು. ರೈಲ್ವೆ ಕ್ವಾರ್ಟರ್ಸ್ ಗೆಳೆಯರಾದ ಕಾರಣ, ಅನಂತಕುಮಾರ್ ಮನೆಗೆ ಹೋಗುವುದು ಬರುವುದು ಜೋಶಿಗೆ ರೂಢಿಯಾಗಿತ್ತು. ಅದಕ್ಕೆ ಸಂಪರ್ಕ ಸೇತುವೆಯಾಗಿ ಆರ್‍ಎಸ್ಎಸ್ ಇತ್ತು.
2004ರಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಕೃಷ್ಣರೊಂದಿಗೆ ಅನಂತಕುಮಾರ್ ಅವರದು ಪಕ್ಷಕ್ಕೂ ಮೀರಿದ ಸ್ನೇಹ, ಸ್ನೇಹಕ್ಕೂ ಮೀರಿದ ವ್ಯವಹಾರವಿತ್ತು. ಆಗತಾನೆ ಚೀಫ್ ಸೆಕ್ರೆಟರಿಯಾಗಿ ನಿವೃತ್ತರಾಗಿದ್ದ ಬಿ.ಎಸ್. ಪಾಟೀಲ್, ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗುವ ಆಸೆ ವ್ಯಕ್ತಪಡಿಸಿದರು. ಕೃಷ್ಣರ ಶಿಫಾರಸ್ಸಿನಿಂದ ಟಿಕೆಟ್ ಕೂಡ ಸಿಕ್ಕಿತ್ತು. ಅವರು, ಅನಂತಕುಮಾರ್ ಅವರನ್ನು ಕಂಡು ಮಾತನಾಡಿ ಎಂದರು.
ಬಿ.ಎಸ್.ಪಾಟೀಲ್‌ಗೆ ಧಾರವಾಡ ಲೋಕಸಭಾ ಕ್ಷೇತ್ರದಿಂದ ಗೆಲ್ಲಲು ಬೇಕಾದ- ಸಂಕೇಶ್ವರ್ ಬಿಜೆಪಿ ಬಿಟ್ಟಿದ್ದು, ಲಿಂಗಾಯತ ಜಾತಿ ಬಲ, ಹಣಬಲ, ಪಕ್ಷದ ಬೆಂಬಲ- ಎಲ್ಲವೂ ಇತ್ತು. ಹಾಗಾಗಿ ಅವರು ಕೃಷ್ಣರ ಆದೇಶದಂತೆ ಅನಂತಕುಮಾರ್ ಅವರನ್ನು ಖುದ್ದಾಗಿ ಭೇಟಿ ಮಾಡಿ, ಒಂದಷ್ಟು ದುಡ್ಡು ಕೊಟ್ಟು, ಡಮ್ಮಿ ಕ್ಯಾಂಡಿಡೇಟ್ ಹಾಕುವಂತೆ ವಿನಂತಿಸಿಕೊಂಡರು.
ಅನಂತಕುಮಾರ್ ಅವರಿಗೆ ಏನನ್ನಿಸಿತೋ, ಪಕ್ಕದಲ್ಲಿ ನಿಂತಿದ್ದ ಪ್ರಲ್ಹಾದ್ ಜೋಶಿಯವರ ಕೈಗೆ 50 ಸಾವಿರ ಕೊಟ್ಟು, ಹೋಗು ನಿಲ್ಲು ಎಂದರು. ಬಿ.ಎಸ್. ಪಾಟೀಲ್ ಗೆದ್ದಷ್ಟೇ ಖುಷಿಯಾದರು. ಆದರೆ, ಬಿಜೆಪಿಯ ಪ್ರಭಾವಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಚುನಾವಣಾ ಪ್ರಚಾರಕ್ಕಾಗಿ ಹುಬ್ಬಳ್ಳಿಗೆ ಬಂದರು. ವಾತಾವರಣವೇ ಬದಲಾಗಿಹೋಯಿತು. 2004ರಲ್ಲಿ, ಮೊದಲಬಾರಿಗೆ ಲಿಂಗಾಯತರು ಬಿಜೆಪಿಗೆ ಮತ ಚಲಾಯಿಸಿದ್ದರು. ಪರಿಣಾಮವಾಗಿ ಜೋಶಿ ಗೆದ್ದು ಸಂಸತ್ ಪ್ರವೇಶಿಸಿದ್ದರು.
ಗೆಳೆಯನ ಸಾವು ತಂದ ಸಚಿವ ಸ್ಥಾನ
2004ರಲ್ಲಿ ಗೆದ್ದ ಪ್ರಲ್ಹಾದ್ ಜೋಶಿ, ನಿಧಾನವಾಗಿ ದೆಹಲಿ ರಾಜಕಾರಣವನ್ನು ಅರಗಿಸಿಕೊಳ್ಳತೊಡಗಿದರು. 2009ರಲ್ಲಿ ಮತ್ತೆ ಗೆದ್ದು ಕ್ಷೇತ್ರವನ್ನು ಗಟ್ಟಿಮಾಡಿಕೊಂಡರು. 2014ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದರು. ಅದೇ ವರ್ಷ ಮೂರನೇ ಬಾರಿಗೆ ಗೆದ್ದಾಗ, ಕೇಂದ್ರದಲ್ಲಿ ಮೋದಿ ಪ್ರಧಾನಿಯಾಗಿದ್ದರು.
ಇದನ್ನು ಓದಿದ್ದೀರಾ?: ಮೈಸೂರು: ಮುಡಾ ಕಚೇರಿ ಮೇಲೆ ಇ.ಡಿ ದಾಳಿ
ರೈಲ್ವೆ ಕ್ವಾರ್ಟರ್ಸ್ ಗೆಳೆಯ ಅನಂತಕುಮಾರ್ ಇರುವಷ್ಟು ದಿನವೂ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿದಾಗಲೆಲ್ಲ ಕರ್ನಾಟಕ ಮತ್ತು ಬ್ರಾಹ್ಮಣ ಕೋಟಾದಡಿ ಅನಂತಕುಮಾರರಿಗೇ ಮಂತ್ರಿ ಸ್ಥಾನ. ಆದರೆ ಆಕಸ್ಮಿಕವಾಗಿ ಅನಂತಕುಮಾರ್ ಕ್ಯಾನ್ಸರ್‍ಗೆ ತುತ್ತಾಗಿ, 2018ರಲ್ಲಿ ನಿಧನರಾದರು. ಅದೃಷ್ಟಕ್ಕೆ 2019ರಲ್ಲೂ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರಕ್ಕೇರಿತು. ಅಲ್ಲಿಗೆ ನಾಲ್ಕು ಬಾರಿ ಗೆದ್ದು ಸೀನಿಯಾರಿಟಿ ಸ್ಥಾನ ಗಿಟ್ಟಿಸಿಕೊಂಡಿದ್ದ ಪ್ರಲ್ಹಾದ್ ಜೋಶಿಯವರಿಗೆ ಮಂತ್ರಿ ಸ್ಥಾನ ಅನಾಯಾಸವಾಗಿ ಲಭಿಸಿತ್ತು. ಕಲ್ಲಿದ್ದಲು, ಸಂಸದೀಯ ವ್ಯವಹಾರಗಳಂತಹ ತೂಕದ ಖಾತೆಗಳೇ ಸಿಕ್ಕಿದ್ದವು.
ಸೌಮ್ಯ ಸ್ವಭಾವ, ಸಂಭಾವಿತ ವ್ಯಕ್ತಿತ್ವ ಮಂತ್ರಿ ಸ್ಥಾನಕ್ಕೆ ಮೆರಗು ಕೊಟ್ಟಿತ್ತು. ಅದು ಮೋದಿ ಅಂಡ್ ಗ್ಯಾಂಗ್‌ಗೂ ಇಷ್ಟವಾಗಿತ್ತು. 2019ರಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿದಾಗ, ಮುಂದಿನ ಮುಖ್ಯಮಂತ್ರಿ ಪ್ರಲ್ಹಾದ್ ಜೋಶಿ ಎಂಬ ಕೂಗು ಕೂಡ ಕೇಳಿಬಂದಿತ್ತು. ಆದರೆ, ಅದನ್ನು ಕುಮಾರಸ್ವಾಮಿಯವರು, ʼಪೇಶ್ವೆ ಬ್ರಾಹ್ಮಣರು, ಗಾಂಧಿ ಕೊಂದವರು ಮುಖ್ಯಮಂತ್ರಿಯಾಗಲಿದ್ದಾರೆʼ ಎಂದು 2023ರಲ್ಲಿ ಬಹಿರಂಗವಾಗಿ ಹೇಳಿದಾಗ, ವಿವಾದವಾಗಿ ಅದು ಅಲ್ಲಿಗೇ ನಿಂತುಹೋಯಿತು. ಅದರಿಂದ ವಿಚಲಿತರಾದ ಜೋಶಿ, ಎಂದಿನಂತೆ ಅದನ್ನು ಕೂಡ ಮೀಡಿಯಾ ಮೂಲಕವೇ ಸಂಭಾಳಿಸಿದ್ದರು. ಆನಂತರ ದಿಲ್ಲಿಗಷ್ಟೇ ಸೀಮಿತವಾಗಿದ್ದರು. ಮೋದಿಯವರ ಆಪ್ತ ಉದ್ಯಮಿ ಗೌತಮ್ ಅದಾನಿಯವರಿಗೆ ಕಲ್ಲಿದ್ದಲು ಸರಬರಾಜು ಗುತ್ತಿಗೆ ಕೊಡಿಸುವಲ್ಲಿ ನಿರತರಾಗಿ, ಲಾಭದ ಕಡೆ ಮುಖ ಮಾಡಿದ್ದರು. ಅದಾನಿ ಹೊರದೇಶದಿಂದ ಕಲ್ಲಿದ್ದಲನ್ನು ಟನ್‌ಗೆ 3,500ರಂತೆ ಖರೀದಿಸಿ, ಕೇಂದ್ರ ಸರ್ಕಾರಕ್ಕೆ ಟನ್‌ಗೆ 6 ಸಾವಿರಕ್ಕೆ ಮಾರಿದ್ದು ದೊಡ್ಡ ಹಗರಣವಾಗಿತ್ತು. ಅದರಲ್ಲಿ ಜೋಶಿಯವರಿಗೆ ಕಿಕ್ ಬ್ಯಾಕ್ ಸಿಕ್ಕಿದೆ ಎಂಬ ಆರೋಪವೂ ಕೇಳಿಬಂದಿತ್ತು.

ಯಾರದೋ ದುಡ್ಡು ಜೋಶಿ ಜಾತ್ರೆ
ಪ್ರಲ್ಹಾದ್ ಜೋಶಿಯವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರ ಸಹೋದರ ಗೋಪಾಲ್ ಜೋಶಿಯವರು ಕೆನರಾ ಬ್ಯಾಂಕ್ ಹುಬ್ಬಳ್ಳಿ ಬ್ರಾಂಚ್‌ನಲ್ಲಿ ಮಾರ್ಕೆಟಿಂಗ್ ಆಫೀಸರ್ ಹುದ್ದೆಯಲ್ಲಿದ್ದರು. ಗುಮಾಸ್ತನಾಗಿ ಕೆಲಸಕ್ಕೆ ಸೇರಿದ ಗೋಪಾಲ್ ಜೋಶಿ, ವರ್ಗವಾಗಿ ಹೋದ ಕಡೆಗಳಲ್ಲೆಲ್ಲ ವಿವಾದ ಹುಟ್ಟುಹಾಕುತ್ತಿದ್ದರು. ಮೋಸ, ವಂಚನೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದರು. 1998-99ರಲ್ಲಿ, ರಾಣೆಬೆನ್ನೂರು ಬ್ರಾಂಚಿನಲ್ಲಿದ್ದಾಗ, ಇಂಥದ್ದೇ ವಂಚನೆ ಪ್ರಕರಣದಲ್ಲಿ ಪಾಲ್ಗೊಂಡು ವಜಾಗೊಂಡಿದ್ದರು. ಸಹೋದರ ಪ್ರಲ್ಹಾದ್ ಜೋಶಿಯವರ ರಾಜಕೀಯ ಪ್ರಭಾವ ಬಳಸಿ ಮತ್ತೆ ಕೆಲಸ ಗಿಟ್ಟಿಸಿಕೊಂಡಿದ್ದರು.
ವಂಚನೆ, ವಿವಾದಗಳನ್ನೆಲ್ಲ ಮೆಟ್ಟಿ ನಿಂತಿದ್ದ ಗೋಪಾಲ್ ಜೋಶಿ, ಸಹೋದರ ಪ್ರತಿನಿಧಿಸುವ ಆರ್‍ಎಸ್ಎಸ್ ಮತ್ತು ಬಿಜೆಪಿ ಎಂಬ ಗುರಾಣಿ ಬಳಸಿ ಕೆನರಾ ಬ್ಯಾಂಕಿನಲ್ಲಿ ರಾಜನಂತೆ ಮೆರೆಯುತ್ತಿದ್ದರು. ಅಷ್ಟೇ ಅಲ್ಲ, ಕೆಲವು ನಾಯಕರ ನಿಕಟ ಸಂಪರ್ಕದಲ್ಲಿದ್ದ ಗೋಪಾಲ್, ಸಹೋದರನ ಸಂಸದರ ಕಚೇರಿಯನ್ನೇ ವರ್ಗಾವಣೆ ದಂಧೆಗೆ ಬಳಸಿಕೊಂಡಿದ್ದರು. ಬ್ಯಾಂಕಿನ ಉನ್ನತ ಅಧಿಕಾರಿಗಳನ್ನು ವರ್ಗಾಯಿಸಿ, ಪ್ರಸಾದ ಸ್ವೀಕರಿಸಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.
2009-10ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಗೋಪಾಲ್ ಜೋಶಿ ಮಾರ್ಕೆಟಿಂಗ್ ಆಫೀಸರ್ ಆಗಿದ್ದರು. ಸಹೋದರನ ರಾಜಕೀಯ ಪ್ರಭಾವ ಬಳಸಿ ಜೋಶಿ ವಿವಿಧ ಸರ್ಕಾರಿ ಸಂಸ್ಥೆಗಳಾದ- ಮೈಸೂರು ಮಿನರಲ್ಸ್, ಕರ್ನಾಟಕ ಬೆವರೇಜಸ್, ಬಿಎಂಆರ್‍ಡಿಎ, ಹಟ್ಟಿ ಗೋಲ್ಡ್ ಮೈನ್ಸ್, ರಾಜೀವ್ ಗಾಂಧಿ ಆರೋಗ್ಯ ವಿವಿ ಸೇರಿ ಹಲವು ಸಂಸ್ಥೆಗಳಿಂದ 1200 ಕೋಟಿ ರೂಪಾಯಿಗಳ ನಿಶ್ಚಿತ ಠೇವಣಿ ಸಂಗ್ರಹಿಸಿದ್ದರು. ಆ ಹಣವನ್ನು ಗೋಪಾಲ್ ಜೋಶಿ ಸೂಚನೆಯಂತೆ ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾಯಿಸಿದ್ದರು. ಅದನ್ನು ಹೆಚ್ಚಿನ ಬಡ್ಡಿಗೆ ಬಿಟ್ಟು, ಬಡ್ಡಿ ಹಣವನ್ನು ಜೋಶಿ ಲಪಟಾಯಿಸಿದ್ದರು; ಸರ್ಕಾರಿ ಸಂಸ್ಥೆಗಳಿಗೆ ಸಂದಾಯವಾಗಬೇಕಿದ್ದ ಬಡ್ಡಿ ಹಣವನ್ನು ಕೊಡದೆ ನಷ್ಟವುಂಟುಮಾಡಿದ್ದರು ಎಂಬುದು ಅವರ ಮೇಲಿರುವ ಗುರುತರ ಆರೋಪ.
ಬ್ಯಾಂಕಿನಲ್ಲಿ ನಡೆದ ಈ ಬಹುಕೋಟಿ ಹಗರಣವನ್ನು ಬಯಲು ಮಾಡಿದ ಬ್ಯಾಂಕಿನ ಅಧಿಕಾರಿಗಳು, ಹಣ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆಂದು ಗೋಪಾಲ್ ಜೋಶಿ ವಿರುದ್ಧ ಸಿಬಿಐಗೆ ದೂರು ನೀಡಿದ್ದರು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಸಿಬಿಐ ದೂರು ದಾಖಲಿಸಿಕೊಂಡು, ಜೋಶಿಯನ್ನು ವಿಚಾರಣೆಗೊಳಪಡಿಸಿತ್ತು.
ಈ ನಡುವೆ ಕೆನರಾ ಬ್ಯಾಂಕ್ ವಿಚಕ್ಷಣ ದಳದ ಆಂತರಿಕ ತನಿಖೆಯಿಂದ ಗೋಪಾಲ್ ಜೋಶಿಯ ವಂಚನೆ ಪ್ರಕರಣ ಸಾಬೀತಾಗಿ, 2012ರ ಸೇವೆಯಿಂದ ವಜಾ ಮಾಡಲಾಗಿತ್ತು. ಇದೇ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಕೆನರಾ ಬ್ಯಾಂಕ್ ಸಿಬ್ಬಂದಿ, ಆತ್ಮಹತ್ಯೆಗೆ ಶರಣಾಗಿದ್ದೂ ಆಗಿತ್ತು. ಹಗರಣ, ಆತ್ಮಹತ್ಯೆ, ಜೋಶಿ ಜಾತ್ರೆ ಸುದ್ದಿ ಮಾಧ್ಯಮಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.
ಪ್ರಲ್ಹಾದ್ ಜೋಶಿ ಮೂರು ಬಾರಿ ಗೆದ್ದು ದೆಹಲಿ ಮಟ್ಟದಲ್ಲಿ ಪ್ರಭಾವಿ ರಾಜಕಾರಣಿಯಾಗಿದ್ದಾಗಲೇ, ಸಹೋದರನ ಮೇಲೆ ದಾಖಲಾಗಿದ್ದ ಬಹುಕೋಟಿ ಹಗರಣ ಸಿಬಿಐನ ಅಂಗಳದಲ್ಲಿತ್ತು. 2009ರಲ್ಲಿ ನಡೆದ ಹಗರಣ ತನಿಖೆಯ ಹಾದಿ ಸವೆಸುತ್ತಿದ್ದಾಗ, ಜನರ ನೆನಪಿನಿಂದ ಮಾಸುತ್ತಿದ್ದಾಗ, 2014ರಲ್ಲಿ ಮೋದಿ ಪ್ರಧಾನಿಯಾಗುತ್ತಿದ್ದಂತೆ, ಕೆನರಾ ಬ್ಯಾಂಕಿನ ಮಾಜಿ ಉದ್ಯೋಗಿ ಗೋಪಾಲ್ ಜೋಶಿ ಅವರನ್ನು ಸಿಬಿಐ ಆರೋಪ ಮುಕ್ತಗೊಳಿಸುವ ಪವಾಡವೂ ನಡೆದುಹೋಯಿತು.
ಬಿಜೆಪಿಗರು ಎಲ್ಲದಕ್ಕೂ ಸಿಬಿಐಗೆ ಕೊಡಿ ಎಂದು ಆಗ್ರಹ, ಒತ್ತಡ, ಒತ್ತಾಯ ಮಾಡುವುದರ ಹಿಂದಿನ ಮರ್ಮ ಇಲ್ಲಿದೆ ನೋಡಿ.
ಸಂಬಂಧವಿಲ್ಲವೆಂದ ಸಚಿವರು
ಸೌಮ್ಯ ಸ್ವಭಾವದ ಸಂಭಾವಿತ ಎಂದೇ ಗೋದಿ ಮೀಡಿಯಾಗಳಿಂದ ಪ್ರಚಾರ ಪಡೆದಿರುವ ಪ್ರಲ್ಹಾದ್ ಜೋಶಿಯವರು ಈಗ ಕೇಂದ್ರ ಸಚಿವರು. ಮೋದಿ ಮತ್ತು ಅಮಿತ್ ಶಾಗಳ ಆಪ್ತರು. ದೆಹಲಿ ಮಟ್ಟದಲ್ಲಿ ಕರ್ನಾಟಕ ಎಂದಾಕ್ಷಣ ಜೋಶಿ ಎನ್ನುವಷ್ಟರಮಟ್ಟಿಗಿನ ಪ್ರಭಾವಿಗಳು.
ಇದೇ ಸಂದರ್ಭದಲ್ಲಿ ಸಹೋದರ ಗೋಪಾಲ್ ಜೋಶಿಯಿಂದ 2 ಕೋಟಿಯ ವಂಚನೆ ನಡೆದಿದೆ. ಅವರ ಮೇಲೆ ಎಫ್ಐಆರ್ ಕೂಡ ದಾಖಲಾಗಿದೆ. ಕುತೂಹಲಕರ ಸಂಗತಿ ಎಂದರೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು, ‘ಅವರಿಗೂ ನನಗೂ ಸಂಬಂಧವಿಲ್ಲ’ ಎಂದಿದ್ದಾರೆ. ಅದೇ ಸಮಯಕ್ಕೆ ಸರಿಯಾಗಿ ಮುಡಾ ಕಚೇರಿ ಮೇಲೆ ಇಡಿ ದಾಳಿ ಮಾಡಿಸಿದ್ದಾರೆ. ಮಾಧ್ಯಮಗಳ ಗಮನ ಅತ್ತ ಹರಿಯುತ್ತದೆ, ನಾವು ಬಚಾವಾಗಬಹುದೆಂದು ಭಾವಿಸಿದ್ದಾರೆ. ಮುಂದುವರೆದು, ‘ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ’ ಎಂದಿದ್ದಾರೆ.
ಹಾಗಾದರೆ, ಗೋಪಾಲ್ ಜೋಶಿ ಕೆನರಾ ಬ್ಯಾಂಕಿನ ಉನ್ನತ ಅಧಿಕಾರಿಗಳ ವರ್ಗಾವಣೆಗೆ ಸಂಸದರ ಕಚೇರಿಯನ್ನು ಬಳಸಿಕೊಂಡಿದ್ದು ಹೇಗೆ? ಸರ್ಕಾರಿ ಸಂಸ್ಥೆಗಳಿಂದ 1200 ಕೋಟಿ ನಿಶ್ಚಿತ ಠೇವಣಿ ಎತ್ತಿದ್ದು ಹೇಗೆ? ಹಣ ದುರುಪಯೋಗವಾಗಿದೆ ಎಂದು ಬ್ಯಾಂಕಿನ ಅಧಿಕಾರಿಗಳೇ ದೂರು ನೀಡಿದರೂ, ಸಿಬಿಐ ಕುಣಿಕೆಯಿಂದ ತಪ್ಪಿಸಿಕೊಂಡಿದ್ದು ಹೇಗೆ? ಗೋಪಾಲನ ಗೋಲ್‌ಮಾಲ್‌ಗಳಿಗೆ ಕ್ರಮ ಕೈಗೊಂಡಿದ್ದಕ್ಕೆ ಏನಾದರೂ ಪುರಾವೆ ಇದೆಯೇ… ಪ್ರಲ್ಹಾದ್ ಜೋಶಿಯವರೇ?
ಇವು ಸಾರ್ವಜನಿಕರು ಕೇಳುತ್ತಿರುವ ಪ್ರಶ್ನೆಗಳು. ಮಾತೆತ್ತಿದರೆ ಹಿಂದುತ್ವ, ದೇಶಪ್ರೇಮ, ರಾಷ್ಟ್ರೀಯತೆ, ಭ್ರಷ್ಟಾಚಾರರಹಿತ ಆಡಳಿತದ ಬಗ್ಗೆ ಎದೆಯುಬ್ಬಿಸಿ ಹೇಳುವ ಬಿಜೆಪಿಯ ನಾಯಕರಾದ ನೀವು ಜನರ ಪ್ರಶ್ನೆಗಳಿಗೆ ಉತ್ತರಿಸುವ ಕಾಲ ಬಂದಿದೆ, ಉತ್ತರಿಸಿ.

ಲೇಖಕ, ಪತ್ರಕರ್ತ
ಗೋಪಾಲ ಕಾಂಡವನ್ನು ಯಾವುದೇ ವಿಪ್ರತ್ತೋಮರ ಮಾಧ್ಯಮದವರು ಉಲ್ಲೇಖಿಸದೆ ಇರುವುದು ಧರ್ಮೋರಕ್ಷತಿ ರಕ್ಷಿತ ಎನ್ನುವಂತಿದೆ