ಕುಮಾರಸ್ವಾಮಿ ಅವರು ನನ್ನನ್ನು ಸದಾ ಸ್ಮರಿಸುತ್ತಿರಬೇಕು. ಇಲ್ಲದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ. ಅವರು ಹಾಗೂ ಅವರ ಸಹೋದರರು ನನ್ನ ಸ್ಮರಿಸುತ್ತಲೇ ಇರುತ್ತಾರೆ. ಅವರು ನನ್ನ ದಾಖಲೆಗಳನ್ನು ಹುಡುಕಲು ಹರಸಾಹಸ ಪಡುತ್ತಿದ್ದಾರೆ. ನನ್ನ ಎಲ್ಲಾ ದಾಖಲೆಗಳು ಇ.ಡಿ ಸಿಬಿಐ ಬಳಿ ಇವೆ. ಹೊಸದಾಗಿ ಹುಡುಕುವುದೇನಿಲ್ಲ. ಅವರು ನನಗೆ ಕೇಳಿದ್ದರೆ ನಾನೇ ಅವರಿಗೆ ನನ್ನ ದಾಖಲೆಗಳನ್ನು ಒದಗಿಸುತ್ತಿದ್ದೆ. ನಾವು ಇನ್ನೂ ಅವರ ಸುದ್ದಿಗೆ ಹೋಗಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಪಂಚಮಸಾಲಿ ಲಿಂಗಾಯತರ ಮೀಸಲಾತಿ ವಿಚಾರವಾಗಿ ಸಮುದಾಯದ ನಾಯಕರ ಜತೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, “ಮುಡಾ ಬಗ್ಗೆ ಇ.ಡಿ ಅವರು ಮಾಹಿತಿ ಸಂಗ್ರಹಿಸುತ್ತಿರಬಹುದು. ಅದನ್ನು ದಾಳಿ ಎಂದು ಹೇಗೆ ಹೇಳುತ್ತೀರಿ. ಅವರು ದಾಖಲೆ ಕೇಳಬಹುದು, ಇವರು ಕೊಡಬಹುದು. ದಾಖಲೆ ಪರಿಶೀಲನೆ ಮಾಡಬಹುದು. ಅದಕ್ಕಿಂತ ಹೆಚ್ಚಾಗಿ ಇನ್ನೇನು ಮಾಡಲು ಸಾಧ್ಯ? ದಾಖಲೆಗಳನ್ನು ಹೊಸದಾಗಿ ತಿದ್ದಲು ಸಾಧ್ಯವೇ? ಪ್ರಕರಣದ ಎಲ್ಲಾ ದಾಖಲೆಗಳು ಸಾರ್ವಜನಿಕವಾಗಿವೆ. ನಾವು ಕಾನೂನು ರೀತಿಯ ಹೋರಾಟ ಮಾಡುತ್ತೇವೆ. ವಾಸ್ತವಾಂಶ ಜನರ ಮುಂದಿಡುತ್ತೇವೆ” ಎಂದರು.
ನೈಸ್ ರಸ್ತೆ ವಿಚಾರವಾಗಿ ಕುಮಾರಸ್ವಾಮಿ ಅವರ ವಿಚಾರವಾಗಿ ಕೇಳಿದಾಗ, “ನೈಸ್ ವ್ಯಾಪ್ತಿಯಲ್ಲಿ ಅವರ ಆಸ್ತಿ ಎಷ್ಟಿದೆ ಎಂದು ಮೊದಲು ಅವರು ಬಹಿರಂಗಪಡಿಸಲಿ. ಸಮಯ ಬಂದಾಗ ನಾನು ಅದನ್ನು ಹೇಳುತ್ತೇನೆ” ಎಂದು ತಿಳಿಸಿದರು.
“ಯಾವುದೇ ಸಮುದಾಯಕ್ಕೆ ಅನ್ಯಾಯವಾಗಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ. ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದ್ದು ನಾವು ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಪಂಚಮಸಾಲಿ ಸಮುದಾಯದ ಜತೆ ಮತ್ತೆ ಚರ್ಚೆ ಮಾಡುತ್ತೇವೆ” ಎಂದು ಡಿಸಿಎಂ ತಿಳಿಸಿದರು.
ಕಾಲಮಿತಿಯಲ್ಲಿ ಮೀಸಲಾತಿ ನೀಡಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಬೇರೆ ಸಮಾಜಗಳಿಗೆ ನೋವಾಗುವಂತೆ ತೀರ್ಮಾನ ಮಾಡಿತ್ತು. ನಂತರ ಆ ಸರ್ಕಾರವೇ ನಾವು ಯಾವುದೇ ಮೀಸಲಾತಿ ಜಾರಿ ಮಾಡುವುದಿಲ್ಲ ಎಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದೆ. ಈ ವಿಚಾರ ನ್ಯಾಯಾಲಯದಲ್ಲಿ ಇರುವಾಗ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ” ಎಂದರು
ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಬಗ್ಗೆ ಕೇಳಿದಾಗ, “ನಾನೇ ಅಭ್ಯರ್ಥಿ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಹಸ್ತದ ಗುರುತೇ ಅಭ್ಯರ್ಥಿ” ಎಂದು ತಿಳಿಸಿದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.