ಚಿಂತಾಮಣಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಲ್ಲಿ ಮನೆಗಳಿಗೆ ಕನ್ನ ಹಾಕಿ ಬಂಗಾರ, ಬೆಳ್ಳಿ ಮುಂತಾದ ಒಡವೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಮೂರು ಮಂದಿ ಖತರ್ನಾಕ್ ಕಳ್ಳರನ್ನು ಚಿಂತಾಮಣಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದು, ಕಳ್ಳರಿಂದ 47 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಹಿಂದೂಪುರದ ಮಹೇಶ್ ಅಲಿಯಾಸ್ ಉಪ್ಪಾರ್ ಮಹೇಶ್(25) ಬಿನ್ ಗುರಪ್ಪ, ಬೆಂಗಳೂರಿನ ಕಾಟನ್ ಪೇಟೆ ಜಾಲಿ ಮೊಹಲ್ಲಾ ನಿವಾಸಿ ಮುದಾಸ್ಸಿರ್ ಪಾಷಾ(33) ಬಿನ್ ಲೇಟ್ ಅಬ್ದುಲ್ ಬಶೀರ್, ಚಿಂತಾಮಣಿ ತಾಲ್ಲೂಕು, ಚಿನ್ನಸಂದ್ರ ಗ್ರಾಮದ ಸುಲ್ತಾನ್ ಬಾಷಾ(22) ಬಿನ್ ಸೈಯದ್ ಆಸಿಫ್ ಭಾಷಾ ಬಂಧಿತ ಆರೋಪಿಗಳು.
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾಯನಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ಸಿ ವಿ ಕೃಷ್ಣಾರೆಡ್ಡಿ ಎಂಬುವರ ಮನೆಯ ಬೀಗ ಮುರಿದು ಚಿನ್ನದ ಒಡವೆಗಳನ್ನು ಕಳ್ಳತನ ಮಾಡಲಾಗಿತ್ತು. ಅದಲ್ಲದೆ ತಾಲ್ಲೂಕಿನ ಕಾಗತಿ ಗ್ರಾಮದ ರಾಜಪ್ಪ ಎಂಬುವರ ಮನೆಯಲ್ಲೂ ಇತ್ತೀಚೆಗಷ್ಟೇ ಕಳ್ಳರು ಒಡವೆಗಳನ್ನು ದೋಚಿ ಪರಾರಿಯಾಗಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಳ್ಳರ ಭೇಟೆಗಾಗಿ ಎಸ್ಪಿ ಕುಶಾಲ್ ಚೌಕ್ಸೆ, ಎಎಸ್ಪಿ ರಾಜಾ ಇಮಾಮ್ ಖಾಸಿಂ, ಡಿವೈಎಸ್ಪಿ ಮುರಳಿಧರ್ ನೇತೃತ್ವದಲ್ಲಿ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜು ಎಸ್, ಬಟ್ಲಹಳ್ಳಿ ಪೊಲೀಸ್ ಇನಸ್ಪೆಕ್ಟರ್ ಪುನೀತ್ ನಂಜುರಾಯ್, ಸಬ್ ಇನ್ಸ್ಪೆಕ್ಟರ್ ಮಮತಾ ಇ ಎಂ, ನಾಗೇಂದ್ರ ಪ್ರಸಾದ್ ಒಳಗೊಂಡ ವಿಶೇಷ ತಂಡವನ್ನು ರಚಿಸಿ, ಕಳ್ಳರನ್ನು ಎಡೆಮುರಿಕಟ್ಟಿದ್ದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಎಂಎಲ್‌ಎ ಪ್ರದೀಪ್ ಈಶ್ವರ್ ಸ್ಕಾಲರ್‌ಶಿಪ್ – 2024 ಘೋಷಣೆ
ಈ ಕುರಿತು ಪ್ರತಕ್ರಯಿಸಿರುವ ಎಸ್ಪಿ ಕುಶಾಲ್ ಚೌಕ್ಸೆ, ನಮ್ಮ ಪೊಲೀಸರ ತಂಡ ಕಳ್ಳತನದ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದೆ. ಈ ಮೂವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಪ್ರಕರಣವನ್ನು ಶೀಘ್ರವಾಗಿ ಭೇದಿಸಿರುವ ತಂಡದ ಶ್ರಮಕ್ಕೆ ಅಭಿನಂದನೆಗಳು ಎಂದು ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.