- ತರಬೇತಿ ವೈದ್ಯರೊಬ್ಬರು ಚಿಕಿತ್ಸೆ ನೀಡುವ ಪ್ರಯತ್ನದಲ್ಲಿದ್ದಾಗ ರೋಗಿ ಸಾವು
- ತಪ್ಪಿತಸ್ಥ ವೈದ್ಯರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಆದೇಶ
ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ವೈದ್ಯರಿಲ್ಲದ ಕಾರಣ, ತುರ್ತುಚಿಕಿತ್ಸೆ ಸಿಗದೆ ಮಹಿಳೆಯೊಬ್ಬರು ಗುರುವಾರ ಮಧ್ಯರಾತ್ರಿ ಮೃತಪಟ್ಟ ಘಟನೆ ತುಮಕೂರಿನ ತುರುವೇಕೆರೆಯಲ್ಲಿ ನಡೆದಿದೆ. ಆಸ್ಪತ್ರೆ ವಿರುದ್ಧ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ಮಹಿಳೆ ನಿರ್ಮಲ (40) ಪಟ್ಟಣದ ಅಗಸರ ಬೀದಿಯ ನಿವಾಸಿ ಎನ್ನಲಾಗಿದೆ. ಗುರುವಾರ ರಾತ್ರಿ 11.45ರ ಸಮಯದಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣ ಚಿಕಿತ್ಸೆಗೆ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಕರ್ತವ್ಯದಲ್ಲಿರದ ಕಾರಣ ರೋಗಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ದೂರಿದ್ದಾರೆ.
ಮೃತ ಮಹಿಳೆಗೆ, ಉಸಿರಾಟದ ತೊಂದರೆ ಕಾಣಿಸಿಕೊಂಡ ನಂತರ ಆಕೆಯ ಸಂಬಂಧಿಕರು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ತಕ್ಷಣ ಚಿಕಿತ್ಸೆ ನೀಡುವಂತೆ ರೋಗಿಯ ಕಡೆಯವರು ಕೇಳಿಕೊಂಡಿದ್ದಾರೆ. ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿ ಇರಬೇಕಾಗಿದ್ದ ವೈದ್ಯ ಡಾ.ಮುರಳಿ ಆಸ್ಪತ್ರೆಯಲ್ಲಿ ಇರಲಿಲ್ಲ. ಅಲ್ಲೇ ಇದ್ದ ತರಬೇತಿ ವೈದ್ಯರೊಬ್ಬರು (ಹೌಸ್ ಸರ್ಜನ್) ಚಿಕಿತ್ಸೆ ನೀಡುವ ಪ್ರಯತ್ನ ನಡೆಸಿದ್ದಾರೆ. ಆದರೆ, ಅವರ ಪ್ರಯತ್ನ ಫಲಕಾರಿಯಾಗದೇ ರೋಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ತಪ್ಪಿತಸ್ಥ ವೈದ್ಯರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಪದೇಪದೇ ಇಂತಹ ಘಟನೆಗಳು ನಡೆಯುತ್ತಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಪಟ್ಟಣದ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು ಖಾಸಗಿ ಕ್ಲಿನಿಕ್ ಹೊಂದಿದ್ದಾರೆ. ಹೀಗಾಗಿ, ಇಲ್ಲಿ ಅವರು ಕರ್ತವ್ಯ ನಿರ್ವಹಿಸುವುದಿಲ್ಲ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಎಚ್ ಡಿ ರುದ್ರೇಶ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ತಾಯಿ, ಮಗು ಸಾವು ಸೂಚ್ಯಂಕ; 10 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ
ಮನವಿ ಪತ್ರಕ್ಕೆ ಸ್ಪಂಧಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ, ಚಿಕಿತ್ಸೆ ಸಿಗದೆ ರೋಗಿ ಮೃತಪಟ್ಟಿರುವುದು ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಸಲು ಡಾ.ಪುರುಷೋತ್ತಮ್ ನೇತೃತ್ವದ ತಂಡ ರಚಿಸಲಾಗಿದೆ. ಐದು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ (ಕೆಎಆರ್‍ಡಿ)ಸಂಘಟನೆಯ ಕಾರ್ಯಕರ್ತರಾದ ಹೆಸರು ಹೇಳಲು ಇಚ್ಛಿಸದ ವೈದ್ಯರೊಬ್ಬರು ಮಾತನಾಡಿ, “ಕೇರಳದಲ್ಲಿ ವಂದನಾ ಎಂ ವೈದ್ಯ ಮೃತಪಟ್ಟ ಪ್ರಕರಣ ಇನ್ನೂ ಮಾಸುವ ಮುನ್ನವೇ, ತುಮಕೂರಿನಲ್ಲಿ ನರ್ಸೊಬ್ಬರ ಮೇಲೆ ಹಲ್ಲೆಯಾಗುತ್ತಿದೆ. ರೋಗಿಗೆ ನೀಡಬೇಕಾದ ಎಲ್ಲ ಚಿಕಿತ್ಸೆ ನೀಡಿದ್ದರು. ಮಧ್ಯೆ ಹೃದಯಘಾತವಾದ ಕಾರಣ ಅವರು ಮೃತಪಟ್ಟಿದ್ದಾರೆ. ಇದರಲ್ಲಿ ನರ್ಸ್ ತಪ್ಪು ಇಲ್ಲ. ರೋಗಿಯ ಸಂಬಂಧಿಕರು ರಾತ್ರಿ ಏಕಾಏಕಿ ದಾಳಿ ಮಾಡಿ ಅವಾಚ್ಯ ಶಬ್ಧದಲ್ಲಿ ಆಕೆಯನ್ನು ನಿಂದಿಸಿದ್ದಾರೆ” ಎಂದರು.