ಚುನಾವಣೆ ಬಂದಾಗ ಬಿಜೆಪಿಗೆ ಎಂದಿನಂತೆ ಮತ್ತೆ ‘ಗೋಮಾತೆ’ಯ ನೆನಪಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ (ಶಿಂದೆ ಬಣ) ಮೈತ್ರಿ ಸರ್ಕಾರ ದೇಸಿ ತಳಿಯ ಹಸುಗಳನ್ನು ‘ರಾಜ್ಯ ಮಾತೆ’ ಎಂದು ಘೋಷಿಸಿದೆ. ಜೊತೆಗೆ ದೇಸಿ ಹಸುಗಳನ್ನು ಸಾಕುವ ರೈತರಿಗೆ ದಿನಕ್ಕೆ 50 ರೂಪಾಯಿ ಸಬ್ಸಿಡಿ ಘೋಷಿಸಿದೆ. ಆದರೆ, ಸಬ್ಸಿಡಿ ರೈತರ ಖಾತೆ ತಲುಪುತ್ತೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ, ಎನ್‌ಸಿಪಿ (ಅಜಿತ್ ಬಣ) ಹಾಗೂ ಶಿವಸೇನೆ (ಶಿಂಧೆ ಬಣ) ಮೈತ್ರಿಯಲ್ಲಿ ಮಹಾಯುತಿ ಸರ್ಕಾರ ರಚಿಸಿ ಎರಡು ವರ್ಷಗಳಾಗಿವೆ. ಇದೀಗ, ದೇಸಿ ಹಸುಗಳನ್ನು ಗೋಮಾತೆ-ರಾಜ್ಯಮಾತೆ ಎಂದು ಸರ್ಕಾರ ಘೋಷಿಸಿದೆ. ದೇಶಿ ಹಸುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ದೇಸಿ ತಳಿಗಳನ್ನು ಉಳಿಸುವ ನಿಟ್ಟಿನಲ್ಲಿ ಈ ಘೋಷಣೆ ಮಾಡಿದ್ದೇವೆಂದು ಸರ್ಕಾರ ಹೇಳಿಕೊಂಡಿದೆ. ಸರ್ಕಾರ ರಚನೆಯಾಗಿ ಎರಡು ವರ್ಷಗಳಲ್ಲಿ ಬಾರದ ದೇಸಿ ಹಸುಗಳನ್ನು ಉಳಿಸಬೇಕು ಎಂಬ ವಿವೇಚನೆ ಈಗ ಬಂದಿದೆ. ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿರುವುದೇ ಇದಕ್ಕೆ ಕಾರಣ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಈ ದೇಸಿ ತಳಿ ಮತ್ತು ಇತರೆ ತಳಿ ಹಸು ಎಂಬ ವಿಂಗಡನೆ ವಿಚಾರಕ್ಕೆ ಬಂದಾಗ ನಾವು ಬಿಜೆಪಿಗರ ಗಾಡ್ ಫಾದರ್ ವಿನಾಯಕ ದಾಮೋದರ ಸಾವರ್ಕರ್ ನೆನಪು ಮಾಡುವ ಜೊತೆಗೆ, ಸ್ವಾಮಿ ವಿವೇಕಾನಂದರ ಕೆಲವು ಬರವಣಿಗೆ ಕಡೆ ಕಣ್ಣಾಯಿಸಬೇಕಾಗುತ್ತದೆ. ಇದರೊಂದಿಗೆ ‘ಗೋಮಾತೆ’ ಹೆಸರಲ್ಲಿ ಮುಸ್ಲಿಮರು ಮತ್ತು ದಲಿತರ ಮೇಲೆ ಹಲ್ಲೆ, ಹತ್ಯೆ ಎಸಗುವ ಬಿಜೆಪಿ ಕಾರ್ಯಕರ್ತರಿಗಾಗಿ ಬಿಜೆಪಿಯ ಹಿರಿಯ ನಾಯಕ, ಮಾಜಿ ಪ್ರಧಾನಿ ದಿ. ಅಟಾಲ್ ಬಿಹಾರಿ ವಾಜಪೇಯಿ, ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಮಾತುಗಳನ್ನು ಒಮ್ಮೆ ಮೆಲುಕು ಹಾಕಬೇಕಾಗುತ್ತದೆ.
ಇತರೆ ತಳಿಯ ಹಸು ಆಹಾರವೇ?
ಮಹಾರಾಷ್ಟ್ರ ಸರ್ಕಾರ ದೇಸಿ ತಳಿ ಹಸುಗಳನ್ನು ಮಾತ್ರ ರಾಜ್ಯ ಮಾತೆ ಎಂದು ಘೋಷಿಸಿದೆ. ತಮ್ಮ ರಾಜಕೀಯ ಗಿಮಿಕ್‌ನಿಂದ ಈ ಬಾರಿ ಇತರೆ ತಳಿಯ ಹಸುಗಳನ್ನು ದೂರವಿರಿಸಿದೆ. ಅದೇನೇ ಇರಲಿ ದೇಸಿ ಹಸು ರಾಜ್ಯ ಮಾತೆಯಾದರೆ ಇತರೆ ತಳಿ ಹಸುಗಳು ಆಹಾರವೇ ಎಂದು ನೆಟ್ಟಿಗರು ಗೇಲಿ ಮಾಡುತ್ತಿದ್ದಾರೆ. ಈ ತಳಿಗಳ ವಿಚಾರಕ್ಕೆ ಬಂದಾಗ ನಾವು ಬಿಜೆಪಿಯ ಹಿರಿಯ ನಾಯಕ ಅಟಾಲ್ ಬಿಹಾರಿ ವಾಜಪೇಯಿ ಅವರ ಮಾತೊಂದನ್ನು ಮರೆಯುಂತಿಲ್ಲ.
ಇದನ್ನು ಓದಿದ್ದೀರಾ? ಬೌದ್ಧರ ಅಹಿಂಸಾ ಮಾರ್ಗಕ್ಕೆ ಹೆದರಿ ವೈದಿಕರು ಗೋಮಾಂಸ ತಿನ್ನುವುದನ್ನು ತ್ಯಜಿಸಿದರೇ?
ಒಮ್ಮೆ ಅಟಾಲ್ ಬಿಹಾರಿ ವಾಜಪೇಯಿ ಅವರು ಅಮೆರಿಕದಲ್ಲಿದ್ದಾಗ ಗೋಮಾಂಸವನ್ನು ಸೇವಿಸುತ್ತಿದ್ದರು. ಇದನ್ನು ನೋಡಿದ ಮತ್ತೋರ್ವ ವ್ಯಕ್ತಿ ಅದು ಗೋಮಾಂಸ ಎಂದು ವಾಜಪೇಯಿ ಬಳಿ ಹೇಳಿದರು. ಆಗ ವಾಜಪೇಯಿ, “ಇದು ಭಾರತೀಯ ಹಸು ಅಲ್ಲ” ಎಂದು ಹೇಳಿ ಮುಗುಳ್ನಕ್ಕರು. ಈ ಘಟನೆಯನ್ನು ಅಟಲ್ ಬಿಹಾರಿ ವಾಜಪೇಯಿ
ಅವರ ಬಗ್ಗೆ ಲೇಖಕ ವಿಜಯ್ ತ್ರಿವೇದಿ ಬರೆದ ‘ಹಾರ್ ನಹಿಂ ಮನುಂಗಾ’ ಪುಸ್ತಕದಲ್ಲಿ ವಿವರಿಸಲಾಗಿದೆ.
ಇನ್ನು ದನದ ಮಾಂಸ ಸೇವನೆ ವಿಚಾರಕ್ಕೆ ಬಂದಾಗ ಬಿಜೆಪಿಯ ಗೋ ರಕ್ಷಣೆಯ ಘೋಷಣೆ ಕೆಲವು ರಾಜ್ಯಗಳಿಗೆ ಅನ್ವಯವಾಗಲ್ಲ. ಕೇರಳ ಮತ್ತು ಗೋವಾದಲ್ಲಿ ಬಿಜೆಪಿ ನಿಲುವು ಬದಲಾಗುತ್ತದೆ. ಹಾಗೆಯೇ ಭಾರತದ ಗೋಮಾಂಸ ರಫ್ತು ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ರಫ್ತು ಮಾಡುತ್ತಿರುವುದು ದೇಸಿ ತಳಿಯಲ್ಲ ಎಂದು ಅಂಧಭಕ್ತರು ವಾದ ಮಾಡಿದರೂ ಆಶ್ಚರ್ಯವೇನಿಲ್ಲ.
ಒಂದು ಬಾರಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಾ ಕೇಂದ್ರ ಸಚಿವ ಕಿರಣ್ ರಿಜಿಜು, “ನಾನು ಕೂಡಾ ಬೀಫ್ ತಿನ್ನುತ್ತೇನೆ” ಎಂದು ಹೇಳಿದ್ದರು. ಆದರೆ, ಬಿಜೆಪಿ ನಾಯಕನ ಈ ಹೇಳಿಕೆ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ “ನನ್ನ ಹೇಳಿಕೆಯನ್ನು ತಿರುಚಲಾಗಿದೆ, ನಾನು ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲಿಸುವೆ” ಎಂದು ಹೇಳಿಕೊಂಡಿದ್ದರು.
ಇದನ್ನು ಓದಿದ್ದೀರಾ? ಹರಿಯಾಣ | ಗೋಮಾಂಸ ತಿಂದ ಶಂಕೆಯಲ್ಲಿ ಕಾರ್ಮಿಕನ ಹತ್ಯೆ; ಐವರ ಬಂಧನ
ಬಿಜೆಪಿ ಆಡಳಿತವಿರುವ ಬಹುತೇಕ ರಾಜ್ಯಗಳು ಗೋಹತ್ಯೆ ವಿರುದ್ಧ ಕಠಿಣ ಕಾನೂನುಗಳನ್ನು ಬೆಂಬಲಿಸಿದ್ದರೂ, ಕೂಡಾ ಕೇರಳದ ಮಲ್ಲಪುರಂನಲ್ಲಿ ಬಿಜೆಪಿಯ ಅಭ್ಯರ್ಥಿಯೊಬ್ಬರು ತಾನು ಆಯ್ಕೆಯಾದರೆ ಉತ್ತಮ ಗೋಮಾಂಸ ಲಭ್ಯವಾಗುವಂತೆ ನೋಡಿಕೊಳ್ಳುವುದಾಗಿ ಮತದಾರರಿಗೆ ಭರವಸೆ ನೀಡಿದ್ದರು. “ಕಾನೂನಿನ ಮಿತಿಯೊಳಗೆ ನಾನು ಸ್ವಚ್ಛ ಕಸಾಯಿಖಾನೆ ನಿರ್ಮಿಸುತ್ತೇನೆ. ಗೋಮಾಂಸ ಲಭ್ಯವಾಗುವಂತೆ ಮಾಡುತ್ತೇನೆ” ಎಂದು ಬಿಜೆಪಿ ಅಭ್ಯರ್ಥಿ ಎನ್ ಶ್ರೀಪ್ರಕಾಶ್ ಹೇಳಿದ್ದರು.
ಬಿಜೆಪಿಗರ ಗಾಡ್ ಫಾದರ್ ಸಾವರ್ಕರ್ ಮಾತುಗಳು
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ಸಾವರ್ಕರ್ ಗೋಹತ್ಯೆಯ ವಿರೋಧಿಯಲ್ಲ, ಗೋವನ್ನು ಅವರು ಪವಿತ್ರವೆಂದು ಪರಿಗಣಿಸಲ್ಲ. ಸಾವರ್ಕರ್ ದೃಷ್ಟಿಯಲ್ಲಿ ಗೋವು ಉಪಯುಕ್ತ ಪ್ರಾಣಿ. ಸಾವರ್ಕರ್ ಮಾಂಸಾಹಾರಿ. ಗೋಮಾಂಸ ಸೇವಿಸುತ್ತಿದ್ದರು” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಆಲ್ಲದೆ, ಸಾವರ್ಕರ್ ಬ್ರಾಹ್ಮಣರಾದರೂ ಕೂಡಾ ಸಸ್ಯಾಹಾರಿಯಾಗಿರಲಿಲ್ಲ ಎಂದು ಹಲವು ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ಹಲವು ಲೇಖಕರು ಕೂಡಾ ಈ ಮಾತುಗಳನ್ನು ಹೇಳುತ್ತಾರೆ. ಸಾಹಿತ್ಯೋತ್ಸವದಲ್ಲಿ ಲೇಖಕ ವೈಭವ್ ಪುರಂದರೆ ಮಾತನಾಡಿ, “ಸಾವರ್ಕರ್ ಅವರು ಗೋವು ಕೇವಲ ಕರುವಿನ ತಾಯಿ ಎಂಬ ಅಭಿಪ್ರಾಯವನ್ನು ಹೊಂದಿದ್ದರು. ಅವರು ಅದನ್ನು ತಿಂದಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲದಿದ್ದರೂ, ಅವರು ಗೋಮಾಂಸ ತಿನ್ನುವುದನ್ನು ವಿರೋಧಿಸಲಿಲ್ಲ” ಎಂದು ಹೇಳಿದ್ದರು. ‘ಸಾವರ್ಕರ್: ದಿ ಟ್ರೂ ಸ್ಟೋರಿ ಆಫ್ ದಿ ಫಾದರ್ ಆಫ್ ಹಿಂದುತ್ವ’ ಎಂಬ ಪುಸ್ತಕದಲ್ಲಿಯೂ ವೈಭವ್ ಪುರಂದರೆ ಇದನ್ನು ಬರೆದಿದ್ದಾರೆ.
ಇದನ್ನು ಓದಿದ್ದೀರಾ? ಫ್ರಿಡ್ಜ್‌ನಲ್ಲಿ ಗೋಮಾಂಸವಿದ್ದ ಮನೆಗಳು ಮಾತ್ರ ನೆಲಸಮ; ಅಕ್ರಮವಾದರೂ ಹಾಗೆಯೇ ಇವೆ 16 ನೆರೆಹೊರೆ ಮನೆ!
ಗೋರಕ್ಷಣೆಯ ವಿಚಾರದಲ್ಲಿ ಸಾವರ್ಕರ್ ನಿಲುವು ಸ್ಪಷ್ಟವಾಗಿಲ್ಲ ಎಂದು ಪುರಂದರೆ ಹೇಳುತ್ತಾರೆ. “ಹಿಂದುಗಳನ್ನು ದ್ವೇಷಿಸುವ ಉದ್ದೇಶದಿಂದ ಗೋವನ್ನು ಕೊಂದರೆ ಅದು ತಪ್ಪಾಗುತ್ತದೆ. ಆದರೆ ಗೋ ಮಾಂಸ ಇಷ್ಟಪಡುವ ಕಾರಣ, ತಿನ್ನಲು ಗೋಹತ್ಯೆ ಮಾಡಿದರೆ ಅದು ಸರಿ ಎಂದು ಸಾವರ್ಕರ್ ನಂಬಿದ್ದರು” ಎಂದು ಲೇಖಕರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ವೇದಗಳಲ್ಲಿ ‘ಹಸು ಬಲಿ’ಯ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಸ್ವಾಮಿ ವಿವೇಕಾನಂದರು ತಮ್ಮ ವಿವಿಧ ಬರಹಗಳಲ್ಲಿ ಹಸುವನ್ನು ಪವಿತ್ರ ಕಾರ್ಯಗಳಲ್ಲಿ ಬಲಿ ನೀಡುತ್ತಾರೆ ಮತ್ತು ಗೋಮಾಂಸ ಸೇವನೆ ನಿಷೇಧವಲ್ಲ ಎಂಬ ಬಗ್ಗೆ ಪ್ರಸ್ತಾಪಿಸಿದ್ದಾರೆ. “ಹಳೆಯ ಆಚರಣೆಗಳ ಪ್ರಕಾರ ಒಬ್ಬ ಗೋಮಾಂಸ ತಿನ್ನದವ ಒಳ್ಳೆಯ ಹಿಂದು ಅಲ್ಲ ಎಂದು ನಾನು ನಿಮಗೆ ಹೇಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ. ಕೆಲವು ಸಂದರ್ಭಗಳಲ್ಲಿ ಜನರು ಗೂಳಿಯನ್ನು ಬಲಿಕೊಟ್ಟು ತಿನ್ನಬೇಕು” ಎಂದು ಸ್ವಾಮಿ ವಿವೇಕಾನಂದರು ತಮ್ಮ ‘ದಿ ಕಂಪ್ಲಿಟ್ ವರ್ಕ್ಸ್ ಆಫ್ ವಿವೇಕಾನಂದ’ ಪುಸ್ತಕದಲ್ಲಿ ಬರೆದಿದ್ದಾರೆ. ಹೀಗೆ ಹಲವೆಡೆ ಹಿಂದೂಗಳೂ ಗೋಮಾಂಸ ಸೇವಿಸುತ್ತಿದ್ದ ಬಗ್ಗೆ ಉಲ್ಲೇಖಗಳಿವೆ.
ಗೋರಕ್ಷಣೆ ಹೆಸರಲ್ಲಿ ಮುಸ್ಲಿಮರು, ದಲಿತರ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿ ಜೈಲು ಪಾಲಾಗುವ ಬಿಜೆಪಿ ಕಾರ್ಯಕರ್ತರೆನಿಸಿಕೊಂಡ ಯುವಕರು ಮೊದಲು ಈ ಮೇಲಿರುವ ತಮ್ಮ ನಾಯಕರುಗಳ ಅಭಿಪ್ರಾಯವನ್ನೊಮ್ಮೆ ಓದಬೇಕು. ಮೋದಿ ಆಡಳಿತದ ಬಳಿಕ ಗೋ ಮಾಂಸ ರಫ್ತಿನ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನಕ್ಕೆ ಏರುತ್ತಿರುವುದರ ಹಿಂದಿರುವುದು ಬರೀ ವ್ಯಾಪಾರ, ಯಾವ ಗೋ ರಕ್ಷಣೆಯೂ ಅಲ್ಲ ಎಂಬುದನ್ನು ಮನಗಾನಬೇಕು. ಏನೇ ಆದರೂ ಗೋಮಾಂಸ ತಿನ್ನುವುದು, ತಿನ್ನದಿರುವುದು ಅವರವರ ವೈಯಕ್ತಿಕ ಆಯ್ಕೆ. ಅದು ಆಹಾರದ ಹಕ್ಕು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.