2024ರ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ, 2 ಕೋಟಿ ರೂ. ಹಣ ಪಡೆದು ವಂಚಿಸಿದ್ದ ಪ್ರಕರಣದಲ್ಲಿ ಗೋಪಾಲ್ ಜೋಶಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ, ಅವರ ಮನೆಯ ಮೇಲೆ ಎಸಿಪಿ ಚಂದನ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರನಾಗಿರುವ ಗೋಪಾಲ್ ಜೋಶಿ ಅವರು ಪ್ರಲ್ಹಾದ್ ಜೋಶಿ ಮತ್ತು ಅಮಿತ್ ಶಾ ಹೆಸರು ಬಳಸಿಕೊಂಡು ವಂಚನೆ ಎಸಗಿದ್ದಾರೆ ಎಂದು ಮಾಜಿ ಶಾಸಕ ದೇವಾನಂದ ಸಿಂಗ್ ಔಹಾಣ್ ಅವರ ಪತ್ನಿ ಸುನಿತಾ ಆರೋಪಿಸಿದ್ದಾರೆ. ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಬೆನ್ನಲ್ಲೇ ಗೋಪಾಲ್ ಜೋಶಿ ತಲೆಮರೆಸಿಕೊಂಡಿದ್ದರು. ಶನಿವಾರ ಬೆಳಗ್ಗೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ, ಎಸಿಪಿ ಚಂದನ್ ನೇತೃತ್ವದಲ್ಲಿ ದಾಳಿ ನಡೆದಿದೆ. ಹುಬ್ಬಳ್ಳಿಯ ಇಂದಿರಾ ಕಾಲೋನಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆದಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.