ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಕರೆ, ಕಟ್ಟೆ, ತೊರೆಗಳು ತುಂಬಿಹರಿಯುತ್ತಿವೆ. ಕೃಷಿ ಭೂಮಿಯೂ ಜಲಾವೃತವಾಗಿದ್ದು, ಬೆಳೆ ನಷ್ಟವಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನೂ ಒಂದು ವಾರದ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಲೆನಾಡು, ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಪ್ರದೇಶಗಳ ನಾನಾ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಮತ್ತು ದಾವಣಗೆರೆ – ಈ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಬೆಂಗಳೂರು ನಗರದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಹಲವೆಡೆ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಜೈರಾಮ್ ಜಂಕ್ಷನ್, ಮೈಸೂರು ರಸ್ತೆಯ ಜಯರಾಮದಾಸ್ ಜಂಕ್ಷನ್, ಕೆಂಗೇರಿ, ಮಡಿವಾಳ, ರೂಪೇನ ಅಗ್ರಹಾರದಲ್ಲಿ ಸಂಚಾರ ಬಿಗಡಾಯಿಸಿದೆ. ಸಿಲ್ಕ್‌ಬೋರ್ಡ್ ಸೇರಿದಂತೆ, ಹಲವು ಪ್ರದೇಶಗಳು ಜಲಾವೃತಗೊಂಡಿವೆ.
ಶಿವಮೊಗ್ಗದಲ್ಲಿಯೂ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ನಗರದ ಆಲ್ಕೊಳದಲ್ಲಿರುವ ಎಸ್.ಹೆಚ್ ಲೇಔಟ್‌ನ ಕೆರೆ ಸಂಪೂರ್ಣವಾಗಿ ತುಂಬಿದೆ. ಕೆರೆ ನೀರು ಕೋಡಿ ಬಿದ್ದು, ಲೇಔಟ್‌ಗೆ ನೀರು ನುಗ್ಗಿದೆ. ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ಮನೆಗಳಿಗೂ ನೀರು ನುಗ್ಗಿದೆ. ಬಸ್ ಸಂಚಾರವೂ ಅಸ್ತವ್ಯಸ್ತಗೊಂಡಿದೆ. ಕೆಲಸಕ್ಕೆ ಹೋಗುವರು ತೊಂದರೆ ಅನುಭವಿಸುವಂತಾಗಿದೆ.