ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಯಡಿಯೂರಪ್ಪ ಅವರ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಪಾತ್ರವಿದೆ ಎಂಬ ಅನುಮಾನವಿದೆ. ಅವರ ಸಾವಿನ ಬಗ್ಗೆಯೂ ತನಿಖೆ ಆಗಬೇಕು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಆರೋಪಿಸಿದ್ದಾರೆ.
ಮುಡಾ ಕಡತಗಳನ್ನು ಬೈರತಿ ಸುರೇಶ್ ಸುಟ್ಟು ಹಾಕಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಆರೋಪಕ್ಕೆ ಭಾನುವಾರ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಅವರು ” ಶೋಭಾ ಕರಂದ್ಲಾಜೆ ಅವರ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಕೇಂದ್ರ ಸಚಿವರು ಹೇಳಿದಾಕ್ಷಣ ಇಡಿ ಬಂಧಿಸಲು ಸಾಧ್ಯವೇ? ನಾನು ಈ ನೆಲದ ಕಾನೂನಿನ ಬಗ್ಗೆ ಗೌರವ ಉಳ್ಳವನು. ಸಿಬಿಐ, ಇ.ಡಿ, ಪೊಲೀಸ್, ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅತ್ಯಂತ ಹೆಚ್ಚು ವಿಶ್ವಾಸವಿದೆ,” ಎಂದು ತಿಳಿಸಿದರು.
ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರ ಇದೆ ಎಂದು ನನಗೆ ಅನುಮಾನ ಇದೆ. ರಾಜ್ಯ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಳ್ಳೆಯವರು. ಅವರ ಮಕ್ಕಳು ಕೂಡ ಒಳ್ಳೆಯವರು. ಹಾಗಾದರೆ, ಯಡಿಯೂರಪ್ಪನವರ ಪತ್ನಿ ಮೈತ್ರಾ ದೇವಿ ಅವರ ಸಾವು ಹೇಗಾಯ್ತು. ಆ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾತ್ರ ಇರುವ ಬಗ್ಗೆ ನನಗೆ ಅನುಮಾನ ಇದೆ. ಅವರ ಸಾವಿನ ಬಗ್ಗೆ ತನಿಖೆ ಆಗಬೇಕು. ಸಚಿವೆ ಶೋಭಾ ಕರಂದ್ಲಾಜೆ ಅವರ ಬಂಧನ ಆಗಬೇಕು. ಕೂಡಲೇ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಮೂಲಕ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಚಿವ ಬೈರತಿ ಸುರೇಶ್ ಅವರನ್ನು ಬಂಧಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದ ಮಾತಿಗೆ ವೈಯಕ್ತಿಕವಾಗಿಯೇ ತಿರುಗೇಟು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗೋಪಾಲ್ ಜೋಶಿ ಪ್ರಕರಣ ಮತ್ತು ಮಾರಿಕೊಂಡ ಮಾಧ್ಯಮಗಳು
”ಈ ರೀತಿ ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ. ಆ ರೀತಿ ಮಾತನಾಡುವುದಾದರೆ ನಾನೂ ಹೇಳುತ್ತೇನೆ. 20 ವರ್ಷಗಳ ಹಿಂದೆ ಯಡಿಯೂರಪ್ಪನವರ ಪತ್ನಿ ಮೈತ್ರಾದೇವಿ ಸಾವು ಹೇಗಾಯಿತು ಎಂದು ಕೇಳುತ್ತೇನೆ. ಯಡಿಯೂರಪ್ಪನವರು ಹಾಗೂ ಅವರ ಮಕ್ಕಳು ಒಳ್ಳೆಯವರು. ಆದರೆ ಮೈತ್ರಾದೇವಿ ಸಾವು ಹೇಗಾಯಿತು ಎಂಬ ಬಗ್ಗೆ ಕೂಲಂಕಷ ಚರ್ಚೆ, ತನಿಖೆಯಾಗಬೇಕು. ಮೈತ್ರಾದೇವಿ ಅವರ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರವಿದೆ ಎಂದು ಹೇಳುತ್ತೇನೆ. ಕೂಡಲೇ ಶೋಭಾ ಕರಂದ್ಲಾಜೆ ಅವರನ್ನು ಬಂಧಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಗೃಹ ಸಚಿವರು ತೀರ್ಮಾನಿಸಬೇಕು,” ಎಂದು ಹೇಳಿದರು.
ಬೈರತಿ ಮೇಲೆ ಆರೋಪಿಸಿದ್ದ ಶೋಭಾ
‘‘ಮುಡಾ ಹಗರಣ ಬಯಲಾಗುತ್ತಿದ್ದಂತೆ ಮುಡಾ ಕಚೇರಿಗೆ ತರಾತುರಿಯಲ್ಲಿ ತೆರಳಿದ ಸಚಿವ ಬೈರತಿ ಸುರೇಶ್ ಅವರು 1997ರಿಂದ ಕಚೇರಿಯಲ್ಲಿದ್ದ ಕಡತಗಳನ್ನು ಎತ್ತಿಕೊಂಡು ಬಂದು ಸುಟ್ಟು ಹಾಕಿದ್ದಾರೆ,’’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದರು. ಬೈರತಿ ಸುರೇಶ್ ಅವರನ್ನು ಬಂಧಿಸಿದರೆ ಮುಡಾ ಕಡತಗಳ ರಹಸ್ಯ ಬಯಲಾಗಲಿದೆ ಎಂದಿದ್ದರು.
