ರಘುನಂದನ ಅವರ 'ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ ಮತ್ತು ಅದರ ಸುತ್ತ' ಕೃತಿಯ ಬಗ್ಗೆ 'ಬಹುವಚನ ಸಾಹಿತ್ಯ ವಿಮರ್ಶೆ’ ದ್ವೈಮಾಸಿಕ ಪತ್ರಿಕೆಯ ಆಗಸ್ಟ್-ಸೆಪ್ಟೆಂಬರ್ 2024ರ ಸಂಚಿಕೆಯಲ್ಲಿ ಎಸ್ ಆರ್ ವಿಜಯಶಂಕರ ಅವರ ವಿಮರ್ಶೆ 'ವಸ್ತುಕ-ಧ್ಯಾನಕ ಮಾದರಿಯ ಕಾವ್ಯ' ಪ್ರಕಟವಾಯಿತು. ಈ ವಿಮರ್ಶೆಯು ಮುಖ್ಯವಾಗಿ ಚರ್ಚಿಸಲೇಬೇಕಾದ ವಿಚಾರಗಳನ್ನು ತೋರಿಕೆಗೆ ಮಾತ್ರ ಪ್ರಸ್ತಾಪಿಸಿದೆ ಎಂದನ್ನಿಸಿತು. ಈ ಎಲ್ಲ ಅಂಶಗಳನ್ನು ಉದ್ದೇಶಿಸುತ್ತ, ಕೃತಿಯು ಲೇಖಕರಿಗೆ ದಕ್ಕಿದ ರೀತಿಯನ್ನು ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ವಿವರಿಸಿದ್ದಾರೆ.
ಎಸ್ ಆರ್ ವಿಜಯಶಂಕರ ಅವರು ಕೃತಿಯ ಶೀರ್ಷಿಕೆಯ ಮೊದಲ ಭಾಗವಾದ ‘ತುಯ್ತವೆಲ್ಲ ನವ್ಯದತ್ತ’ ಎಂಬುದನ್ನಷ್ಟೇ ಗಮನದಲ್ಲಿಟ್ಟುಕೊಂಡು ವಿಮರ್ಶೆ ಮಾಡಿದಂತಿದೆ. ಬೇಂದ್ರೆಯವರ ‘ಉಯ್ಯಾಲೆ'(1938) ಸಂಕಲನದ ಕವಿತೆಗಳ, ಅದರಲ್ಲೂ ಅಷ್ಟಷಟ್ಪದಿಗಳ ತುಯ್ತವೆಲ್ಲ ಕನ್ನಡ ಸಾಹಿತ್ಯದಲ್ಲಿ 50ರ ದಶಕದಲ್ಲಿ ಸ್ಪಷ್ಟರೂಪು ಪಡೆದ ‘ನವ್ಯ’ದತ್ತಲೇ ಇತ್ತು ಎಂಬ ಹೊಳಹನ್ನು ಆಧಾರಸಮೇತ ಮುಂದಿಡುವುದೇ ಈ ಕೃತಿಯ ಮುಖ್ಯ ಉದ್ದೇಶವಾಗಿದೆ ಎಂದು ಭಾವಿಸಿದರೆ ವಿಜಯಶಂಕರ ಅವರ ವಿಮರ್ಶೆಯು ಆ ಉದ್ದೇಶಸಾಧನೆಯ ಹಾದಿಯನ್ನು ಹೆಚ್ಚುಕಡಿಮೆ ಸರಿಯಾಗಿಯೇ ಚಿತ್ರಿಸಿದೆ ಎಂದು ಹೇಳಬಹುದು. ಅಲ್ಲದೆ, ಆ ಉದ್ದೇಶಸಾಧನೆಗೆ ಪೂರಕವಲ್ಲದ ವಿಷಯಗಳೂ ಈ ಕೃತಿಯಲ್ಲಿವೆ ಎಂದು ಅವರು ಎತ್ತಿತೋರುವ ನಿದರ್ಶನಗಳು ಸಮಂಜಸವಾಗಿವೆ ಎಂದೂ ಅನ್ನಿಸಬಹುದು. ಆದರೆ, ಕೃತಿಯನ್ನು ಕೂಲಂಕಷವಾಗಿ ಓದಿದಾಗ ಹಾಗೂ ಶೀರ್ಷಿಕೆಯ ಇನ್ನುಳಿದ ಭಾಗವಾದ ‘ಅಂದತ್ತರ ಉಯ್ಯಾಲೆ ಮತ್ತು ಅದರ ಸುತ್ತ’ ಇದನ್ನು ಮತ್ತೆಮತ್ತೆ ನೋಡಿ, ಚಿಂತಿಸಿದಾಗ ಕೃತಿವಿಮರ್ಶೆಯ ಮುಖಾಂತರ ಕಾವ್ಯದ ಸೃಷ್ಟಿ ಮತ್ತು ಆಸ್ವಾದನೆಗೆ ಸಂಬಂಧಿಸಿದಂತೆ ನೈತಿಕ-ರಾಜಕೀಯ ಆಯಾಮಗಳುಳ್ಳ ಉತ್ಕಟವಾದ ತತ್ತ್ವಜಿಜ್ಞಾಸೆಯನ್ನು ನಡೆಸುವುದು ಈ ಕೃತಿಯ ಉದ್ದೇಶವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಯಾನದ ಪರಿ: ಲಂಘನೆ ಹೌದು, ಉಲ್ಲಂಘನೆ ಅಲ್ಲ..
ಒಂದು ನಿದರ್ಶನ ಕೊಟ್ಟು ವಿವರಿಸುವುದಾದರೆ, ತುಯ್ತವೆಲ್ಲ ನವ್ಯದತ್ತ ಎಂದು ಸಾಧಿಸುವುದಷ್ಟೇ ಕೃತಿಯ ಉದ್ದೇಶವಾಗಿದ್ದಿದ್ದರೆ, ಜಾನ್ ಡನ್ ಮೊದಲಾದ ಮೆಟಫಿಜ಼ಿಕಲ್ ಕವಿಗಳ ಪ್ರಭಾವ ಬೇಂದ್ರೆಯವರ ಮೇಲೆ ಆಗಿದೆಯೋ ಇಲ್ಲವೋ ಎಂದು ತಿಳಿಯಲು ಬೇಂದ್ರೆಯವರ ಒಂದು ಸಮರ್ಥ ಜೀವನಚರಿತ್ರೆಯ ಅಗತ್ಯವಿದೆ ಎಂದಷ್ಟೇ ಹೇಳಿ ರಘುನಂದನರು ಸುಮ್ಮನಾಗಬಹುದಿತ್ತು. ಆದರೆ, ಬೇಂದ್ರೆಯವರ ಬಗ್ಗೆ ಅಂಥ ಜೀವನಚರಿತ್ರೆ ಇನ್ನೂ ಬಂದಿಲ್ಲ ಎಂದು ಹೇಳುತ್ತಲೇ, ಸಾಹಿತಿಗಳ ಜೀವನಚರಿತ್ರೆಯ ಸ್ವರೂಪವನ್ನು ಕುರಿತು ಸುದೀರ್ಘವಾಗಿ ಚರ್ಚಿಸುವ ಅವರು, ಸಾಹಿತಿಗಳ ಜೀವನಚರಿತ್ರೆಗಳು ಹೇಗಿರಬೇಕೆಂಬುದಕ್ಕೆ ವಿಶಿಷ್ಟ ವ್ಯಾಖ್ಯಾನವನ್ನೇ ನೀಡುತ್ತಾರೆ. (ಪುಟ 238-249).
ಇದನ್ನು ಓದಿದ್ದೀರಾ?: ಸಚಿವ ಪ್ರಲ್ಹಾದ್ ಜೋಶಿ ಸಹೋದರನ ವಂಚನೆ ಪ್ರಕರಣಗಳೂ, ಸಂಬಂಧವಿಲ್ಲದ ಸಬೂಬುಗಳೂ
ಈ ರೀತಿಯ ಅನೇಕ ಲಂಘನಗಳು ಕೃತಿಯುದ್ದಕ್ಕೂ ಸಂಭವಿಸುತ್ತವೆಯಾದರೂ, ಅವ್ಯಾವುವೂ ಉಲ್ಲಂಘನೆಗಳಲ್ಲ; ‘ಉಯ್ಯಾಲೆ’ಯ ಕುಣಿಕೆಯೊಂದಿಗೆ ಕಾವ್ಯತತ್ತ್ವಜಿಜ್ಞಾಸೆಯ ಹಗ್ಗದ ನಂಟನ್ನೆಂದೂ ಬಿಡದ ಜೀಕಿನ ಜಿಗಿತಗಳು. ಜಿಗಿತದ ಕೆಲವು ತಾಣಗಳಲ್ಲಿ ನಿಂತು, ತಾವು ಮುಂದಿಡುವ ವಿಚಾರಕ್ಕೆ ಅಗತ್ಯವಾದ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ವಿವರಿಸುತ್ತ, ಆ ವಿವರಣೆಯ ಸುತ್ತ ಮೂಡಬಹುದಾದ ಪ್ರಶ್ನೆಗಳನ್ನೂ, ತಕರಾರುಗಳನ್ನೂ ಮುಂಚಿತವಾಗಿಯೇ ಊಹಿಸಿ, ಸಾವಧಾನದಿಂದ ನಿರ್ವಹಿಸುತ್ತ, ತಮ್ಮ ಹೊಳಹುಗಳ ತಾತ್ತ್ವಿಕ ಮತ್ತು ನೈತಿಕ ನೆಲೆಗಳನ್ನು ತಮಗೆ ತಾವು ಸ್ಪಷ್ಟಪಡಿಸಿಕೊಳ್ಳುತ್ತಲೇ ಓದುಗರನ್ನೂ ಆ ನೆಲೆಗಳ ಗ್ರಹಿಕೆಗೆ ಸಿದ್ಧಗೊಳಿಸುತ್ತ ಸಾಗುವುದು ಈ ವಿಮರ್ಶಾಕೃತಿಯಲ್ಲಿ ರಘುನಂದನರು ಕೈಗೊಂಡ ಕಾವ್ಯ ಮತ್ತು ಲೋಕಮೀಮಾಂಸೆಯ ಯಾನವಾಗಿದೆ; ತಮ್ಮೊಡನೆ ಓದುಗರನ್ನೂ ನಡೆಸುತ್ತ ಸಾಗಿದ ದಾರಿಯಾಗಿದೆ.
ಬಹುಶಃ ಈ ಯಾನ ಮತ್ತು ನಡೆಯೇ ವಿಜಯಶಂಕರ ಅವರಿಗೆ ಪ್ರಯಾಣಿಕರನ್ನು ಅವರ ಗುರಿಯವರೆಗೆ ಜೊತೆ ಹೋಗಿ ಮುಟ್ಟಿಸಿ ಹಿಂತಿರುಗುವ ಪರಿಯಂತೆ ಕಂಡಿರಲಿಕ್ಕೂ ಸಾಕು. ಈ ಯಾನದ ಪರಿ ಹಾಗೂ ಕೃತಿಯ ಉದ್ದೇಶದ ಕಾರಣದಿಂದಾಗಿಯೇ, ಬೇಂದ್ರೆಯವರ ಅಷ್ಟಷಟ್ಪದಿಗಳಿಗೂ ಇಂಗ್ಲೆಂಡ್‌ನ ಮೆಟಫಿಜ಼ಿಕಲ್ ಕವಿಗಳ ಕವನಗಳಿಗೂ ಸಂಬಂಧವಿದೆ ಎಂಬ ಬಲವಾದ ಭಾವನೆಗೆ ಪೂರಕವಾಗಿ ಮೆಟಫಿಜ಼ಿಕ್ಸ್ ಎಂದರೇನು, ಮೆಟಫಿಜ಼ಿಕಲ್ ಕಾವ್ಯವೆಂದರೇನು, ಮೆಟಫಿಜ಼ಿಕ್ಸ್‌ಗೂ ಅನುಭಾವ, ಅನುಭೂತಿ ಮತ್ತು ಅಧ್ಯಾತ್ಮಗಳಿಗೂ ಇರುವ ವ್ಯತ್ಯಾಸಗಳೇನು, ಇವುಗಳಲ್ಲಿ ಯಾವ ಸ್ವರೂಪದ್ದು ಆಪತ್ಕಾರಿ ಯಾವುದು ಅಲ್ಲ, ಮುಂತಾದ ವಿಚಾರಗಳ ಬಗ್ಗೆ ವಿವರವಾದ ಜಿಜ್ಞಾಸೆಯನ್ನು ನಡೆಸಬೇಕಾಗುತ್ತದೆ. (ಈ ಕುರಿತು ಸ್ವತಃ ರಘುನಂದನರೇ ತಮ್ಮ ಪುಸ್ತಕದಲ್ಲಿ ಸಮರ್ಥನೆ ನೀಡಿದ್ದಾರೆ. ನೋಡಿ: ಪುಟ 186-189). ಮೇಲಾಗಿ, ಈ ಜಿಜ್ಞಾಸೆಯನ್ನು ರಘುನಂದನರು ಅನೇಕ ಕವಿತೆಗಳನ್ನು ವಿಶ್ಲೇಷಿಸುವ ಮುಖಾಂತರವೇ ಸಾದ್ಯಂತವಾಗಿ ಮಾಡಿದ್ದಾರೆ. ಹಾಗಾಗಿ, ಹಿಟ್ಲರ್, ಮುಸಲೋನಿ ಮತ್ತು ಫ್ಯಾಸಿಜ಼ಮ್ ಕುರಿತು ಚರ್ಚಿಸುತ್ತ ಮಾಡಿರುವ ಚಿಂತನೆಯು ಬೇಂದ್ರೆ ಕಾವ್ಯಕ್ಕೆ ಮತ್ತು ಲೇಖಕರ ವಾದಕ್ಕೆ ಅಷ್ಟು ದೀರ್ಘ ವಿವರಗಳೊಂದಿಗೆ ಸಮಂಜಸವಾಗಿ ತಳುಕು ಹಾಕುತ್ತಿಲ್ಲ ಎಂಬ ವಿಜಯಶಂಕರ ಅವರ ಅಭಿಪ್ರಾಯವೇ ಸಮಂಜಸವಾಗಿಲ್ಲ ಎಂದು ಹೇಳಬೇಕಾಗುತ್ತದೆ.
ಉದಾಹರಣೆಗಳು ತೋರುವ ದಾರಿ: ಓದುಗರ ಜವಾಬ್ದಾರಿ..
ಬೇಂದ್ರೆಯವರ ಅಷ್ಟಷಟ್ಪದಿಗಳಲ್ಲಿ ಇಂಗ್ಲಿಷ್ ಮೆಟಫಿಜ಼ಿಕಲ್ ಕಾವ್ಯದ ಲಕ್ಷಣಗಳನ್ನು ಕಾಣಬಹುದು ಎಂದು ರಘುನಂದನರು ‘ಅನಂತ ಪ್ರಣಯ’ ಕವಿತೆಯನ್ನಷ್ಟೇ ಉದಾಹರಿಸುವುದಿಲ್ಲ. ಕೃತಿಯ ಮೊದಲ ಲಹರಿಯಲ್ಲಿ ಅನೇಕ ಅಷ್ಟಷಟ್ಪದಿಗಳ ಬಗ್ಗೆ ತಾವು ನಡೆಸಿದ ಜಿಜ್ಞಾಸೆಯಲ್ಲೂ ಟಿ ಎಸ್ ಎಲಿಯಟ್ ಗುರುತಿಸುವ ಮೆಟಫಿಜ಼ಿಕಲ್ ಕಾವ್ಯದ ಲಕ್ಷಣಗಳ ಪ್ರಸ್ತಾಪ ಮತ್ತು ವಿವರಣೆಯಿದೆ ಎಂದೂ ಚರ್ಚಿಸುತ್ತಾರೆ. (ಪುಟ 216-219). ಇನ್ನು, ಸಮಾನ ರಚನಾಕ್ರಮವನ್ನು ತೌಲನಿಕವಾಗಿ ಸಾದರಪಡಿಸಲು ರಘುನಂದನರು ಹಾಪ್ಕಿನ್ಸ್ ಹಾಗೂ ಬೇಂದ್ರೆಯವರ ತಲಾ ಒಂದು ಕವನವನ್ನು ಮಾತ್ರ ಉದಾಹರಣೆಯಾಗಿ ಬಳಸಿಕೊಂಡಿದ್ದಾರೆ, ನಿಜ. ಆದರೆ, ಮೆಟಫಿಜ಼ಿಕಲ್ ಕವನಗಳ ತೌಲನಿಕ ಅಧ್ಯಯನಕ್ಕೆ ಇಲ್ಲಿ ಕಟ್ಟಿಕೊಡಲಾದ ಮಾದರಿಯನ್ನು ಅನುಸರಿಸಿ ಇನ್ನುಳಿದ ಇಂಗ್ಲಿಷ್ ಮೆಟಫಿಜ಼ಿಕಲ್ ಕವನಗಳನ್ನೂ ಬೇಂದ್ರೆಯವರ ಅಷ್ಟಷಟ್ಪದಿಗಳನ್ನೂ ಹೋಲಿಕೆ ಮಾಡಿ ನೋಡುವುದು, ಹೋಲಿಕೆ ಕಂಡುಬಾರದಿದ್ದಲ್ಲಿ ಅದನ್ನು ಗುರುತಿಸಿ ಹೇಳುವುದು, ಅಥವಾ, ತುಲನೆಯ ಆ ಮಾದರಿಯನ್ನೇ ವಿಮರ್ಶೆಗೊಳಪಡಿಸುವುದು ಗಂಭೀರ ಓದುಗರ ಕೆಲಸವಾಗಿರುತ್ತದೆ. ..ಕವನಗಳನ್ನು ಹೋಲಿಸುವಲ್ಲಿ ಸಾಕಷ್ಟು ಉದಾಹರಣೆಗಳು ಇಲ್ಲ ಎಂದು ಆರೋಪಿಸುವ ಬದಲು ವಿಜಯಶಂಕರ ಅವರು ಆ ಬಗೆಯಲ್ಲಿ ತಾವು ನಡೆಸಿದ ಗಂಭೀರ ಓದಿನ ಪ್ರತಿಫಲನಗಳನ್ನು ತಮ್ಮ ವಿಮರ್ಶೆಯಲ್ಲಿ ದಾಖಲಿಸಬಹುದಿತ್ತು.
ಆರ್ಗಾನಿಕ್ ವಿಕಾಸದ ಲಹರಿ..
ಬೇಂದ್ರೆಯವರ ಸದರಿ ಕವನಗಳಿಗೆ ರಸಸ್ಪಂದನ ನೀಡುತ್ತ, ಆ ಸ್ಪಂದನದ ಭಾಗವಾಗಿ ಹೊಮ್ಮಿದ ಆಲೋಚನೆಗಳನ್ನು ಹಂಚಿಕೊಳ್ಳುವುದಷ್ಟೇ ಅಲ್ಲ, ಬೇರೆ ಉದ್ದೇಶಗಳೂ ಈ ವಿಮರ್ಶಾಕೃತಿಗೆ ಇವೆ ಎಂಬರ್ಥದ ಮಾತುಗಳನ್ನು ವಿಜಯಶಂಕರ ಅವರು ಅಲ್ಲಲ್ಲಿ ಪ್ರಸ್ತಾಪಿಸಿದ್ದಾರೆ. (ಉದಾಹರಣೆಗೆ- ಅಷ್ಟಷಟ್ಪದಿಗಳನ್ನು ಧ್ಯಾನಿಸುವ ಪ್ರಕ್ರಿಯೆಯಲ್ಲಿ ತಮ್ಮದೇ ಆದೊಂದು ಕಾವ್ಯ ಪ್ರಣಾಳಿಕೆಯನ್ನು ವಿವರಿಸುವ ಪ್ರಯತ್ನವೂ ರಘುನಂದನರ ಬರಹಗಳಲ್ಲಿವೆ, ಇತ್ಯಾದಿ). ಆದರೆ, ಅವು ಪ್ರಸ್ತಾಪಗಳಾಗಷ್ಟೇ ಉಳಿಯದೆ ವಿಜಯಶಂಕರ ಅವರ ಬರಹದ ಮುಖ್ಯ ಕಾಳಜಿಯಾಗಿದ್ದಿದ್ದರೆ ಅವರ ವಿಮರ್ಶೆಯು ರಘುನಂದನರ ಕೃತಿಯ ಆರ್ಗಾನಿಕ್ ಬೆಳವಣಿಗೆಯ ಸ್ವರೂಪವನ್ನು ಗುರುತಿಸಿ, ಚರ್ಚಿಸುವ ಸಾಧ್ಯತೆಯಿತ್ತು. ‘ಮೊದಲಿಗೆ ಮುನ್ನ’ ಭಾಗದಲ್ಲಿ ತಮ್ಮ ಕೃತಿಯ ಬಗ್ಗೆ ರಘುನಂದನರು ಹೇಳುವ ..ಆಗುತ್ತ ಆಗುತ್ತ ಒಂದು ವಿಷಯದಿಂದ ಮತ್ತೊಂದು ವಿಷಯದತ್ತ ತನ್ನಿಂತಾನೇ ಅನಿವಾರ್ಯ ಚಾಚಿ, ಹೊರಳಿಕೊಂಡು, ಬೆಳೆಯುತ್ತಹೋದ ಬರಹ (ಪುಟ 14) ಎಂಬ ಮಾತಿಗೆ ಸಾಕ್ಷಿಗಳನ್ನು ಕೃತಿಯುದ್ದಕ್ಕೂ ನಾವು ಕಾಣಬಹುದು. (ಉದಾಹರಣೆಗೆ ನೋಡಿ: ಬೇಂದ್ರೆಯವರ ಅಷ್ಟಷಟ್ಪದಿಗಳು ಅಜ್ಞೇಯತಾಮತ ಅಥವಾ ಮನಃಸ್ಥಿತಿಯ ಸ್ವಭಾವವನ್ನು ಬಣ್ಣಿಸುವ ರೂಪಕಗಳಾಗಿವೆ ಎಂಬ ಕಾಣ್ಕೆ ಗೋಚರಿಸುವ ಭಾಗ – ಪುಟ 171, ಹಾಗೂ, ಬುದ್ಧನ ಆರ್ಯಸತ್ಯಗಳನ್ನು ಚರ್ಚಿಸುವ ಭಾಗ- ಪುಟ 179). ಈ ಆರ್ಗಾನಿಕ್ ವಿಕಾಸವು ಒಂದು ಬಗೆಯ ವ್ಯವಸ್ಥಿತ ರಚನೆಯ ಪರಿಪ್ರೇಕ್ಷ್ಯದಲ್ಲೇ ನಡೆಯುತ್ತದೆ ಎನ್ನುವುದು ಲಹರಿಯಿಂದ ಲಹರಿಗೆ, ಕಂಡಿಕೆಯಿಂದ ಕಂಡಿಕೆಗೆ ಸಾಗುವಾಗ ನಮ್ಮ ಗಮನಕ್ಕೆ ಬರುತ್ತದೆ. ಇದನ್ನು ಗ್ರಹಿಸುವ ಓದುಗರಿಗೆ ವಾದ ಸರಣಿ ಹಿಂದು ಮುಂದು ಆಗಿದೆ ಎಂದನ್ನಿಸದೆ, ಕೃತಿಯ ಓದು, ಕರ್ತೃವಿನ ಅನ್ವೇಷಣೆಯಲ್ಲಿ ಸಹ-ಪಯಣದ ರಸಾನುಭವವನ್ನೇ ನೀಡುತ್ತದೆ.
‘ವಾದ’ಕ್ಕಾಗಿ ನಡೆಸಿದ ‘ಆಯ್ದ’ ಓದಲ್ಲವಿದು..
ಈ ಕೃತಿಯಲ್ಲಿ ಸಾನೆಟ್‌ಗಳ ವಿವರವಾದ ಪ್ರಾಯೋಗಿಕ ವಿಮರ್ಶೆ ರೀತಿಯ ವಿವರಣೆಗಳು ನಡೆದಿವೆ ಎಂದು ವಿಜಯಶಂಕರ ಅವರು ಸರಿಯಾಗಿಯೇ ಗುರುತಿಸಿದ್ದಾರೆ. ಆದರೆ, ಮುಂದೆ ಅವರು ಆರೋಪಿಸುವಂತೆ ಈ ವಿಮರ್ಶೆಯಲ್ಲಿ ಕೆಲವು ವಿವರಗಳನ್ನು ತಮ್ಮ ವಾದಕ್ಕೆ ಅಗತ್ಯವಾಗುವಂತೆ ಬದಿಗೆ ಸರಿಸುವ, ಕೆಲವು ವಿಚಾರಗಳ ಬಗೆಗೆ ಫೋಕಸ್ ಮಾಡುವ – ಅಂದರೆ, ಪ್ರಜ್ಞಾಪೂರ್ವಕವಾಗಿ ಆಯ್ದು, ಆಯ್ಕೆಗೆ ತಕ್ಕಂತೆ ವಾದ ಬೆಳೆಸುವ- ಕೆಲಸವೇನೂ ನಡೆದಿಲ್ಲ. ಕವಿತೆಯ ಪ್ರತಿ ಸಾಲನ್ನೂ ನಿಕಟವಾಗಿ ಓದುತ್ತ, ಕವಿತೆಯನ್ನು ಗಟ್ಟಿಯಾಗಿ ಓದಿದಾಗ ನಮ್ಮ ಅರಿವಿಗೆ ಬರುವ ಕಾವ್ಯದ ಲಯ ಹಾಗೂ ನಮ್ಮಲ್ಲಿ ಉಂಟಾಗುವ ಪರಿಣಾಮವನ್ನು ಕುರಿತು ತಕ್ಕೆಡೆಗಳಲ್ಲಿ ಚರ್ಚೆ ಮಾಡುತ್ತ (ವಿಜಯಶಂಕರ ಅವರು ಬಹುಶಃ ಇದನ್ನೇ ನಾಟಕ ಗ್ರಹಿಕೆಯ ದನಿ ಎಂದು ಗುರುತಿಸಿದ್ದಾರೆ), ಈ ಅಷ್ಟಷಟ್ಪದಿಗಳಲ್ಲಿ ಉಪಮೆ, ಮಿಶ್ರರೂಪಕ, ಪ್ರತಿಮೆ, ಧ್ವನ್ಯರ್ಥಗಳ ಸ್ವರೂಪ ಮತ್ತು ಕ್ರಿಯಾವೈಖರಿಯನ್ನು ವಿವರಿಸುತ್ತ, ಅಸಲಿ ಕಾವ್ಯದ ಕೆಲಸ ಏನು ಎಂಬುದನ್ನು ನಿರಂತರವಾಗಿ ಶೋಧಿಸುವ ರಘುನಂದನರ ಪ್ರಾಯೋಗಿಕ ವಿಮರ್ಶೆಯು ಬಹಳ ಮುಖ್ಯವಾಗಿ, ‘ನನ್ನ ಈ ಕವಿತೆಗಳಲ್ಲಿ ಇವೆ’ ಎಂದು ಸಂಕಲನದ ಮುನ್ನುಡಿಯಲ್ಲಿ ಬೇಂದ್ರೆಯವರೇ ಉಲ್ಲೇಖಿಸಿರುವ ನಾಲ್ಕು ಗುಣಗಳಿಗೆ ಮೂರ್ತರೂಪ ನೀಡಿ, ಅನಾವರಣಗೊಳಿಸುತ್ತದೆ. ರಘುನಂದನರ ಈ ಕೃತಿಯ ಉದ್ದೇಶ ಕಾವ್ಯತತ್ತ್ವಜಿಜ್ಞಾಸೆಯಾಗಿದೆ ಎಂಬುದನ್ನು ಗುರುತಿಸುವುದು ಎಷ್ಟು ಮುಖ್ಯವೋ ಯಾವ ಬಗೆಯ ನಿಕಟ ಓದಿನ ಮುಖಾಂತರ ಈ ಜಿಜ್ಞಾಸೆ ನಡೆದಿದೆ ಎಂಬುದನ್ನು ವಿವರಿಸುವುದು ಕೂಡ ಅಷ್ಟೇ ಮುಖ್ಯ. ವಿಜಯಶಂಕರ ಅವರ ವಿಮರ್ಶೆಯಲ್ಲಿ ಕ್ವಚಿತ್ತಾಗಿಯಷ್ಟೇ ಪ್ರಸ್ತಾಪವಾಗಿರುವ ಇಂಥ ವಿಷಯಗಳು ನಿಜವಾಗಿಯೂ ಈ ಕೃತಿಯ ವಿಮರ್ಶೆಗೆ ಮುಖ್ಯವಿಷಯಗಳೇ ಆಗಬೇಕಿತ್ತು.
ಇದನ್ನು ಓದಿದ್ದೀರಾ?: ಮತ್ತೆ ಸಿಕ್ಕ ಮಧುಗೆರೆ ನರಸಿಂಹ, ತೇಜಸ್ವಿ ತೀರಿಹೋದದ್ದೇ ಗೊತ್ತಿಲ್ಲ ಮಾರಾಯರೆ ಎನ್ನುವುದೇ?
ಇನ್ನು, ವಿಜಯಶಂಕರ ಅವರು ಕೃತಿಯ ಕೆಲವು ವಿಚಾರಗಳನ್ನು ಸರಿಯಾಗಿ ಗ್ರಹಿಸಿಲ್ಲವೇನೋ ಎಂದೂ ಅನ್ನಿಸುತ್ತದೆ.
ತುಯ್ತವೆಲ್ಲ ಯಾವ ನವ್ಯದತ್ತ?
..ಇರುವುದನ್ನು ಇರುವಂತೆ ಕಂಡರೂ, ಅದರ ಮೇಲೆ ಇರಬೇಕಾದಂತೆ ಆಶಿಸುವ ಆದರ್ಶದ ಮನಸ್ಥಿತಿಯನ್ನು ಕೇವಲ ನವ್ಯಕ್ಕೆ ಮಿತಿಗೊಳಿಸಲು ಸಾಧ್ಯವೇ? ಎಂದು ವಿಜಯಶಂಕರರು ಕೇಳುತ್ತಾರೆ. ಆದರೆ, ರಘುನಂದನರು ತಮ್ಮ ಕೃತಿಯಲ್ಲೆಲ್ಲೂ ಅಂಥ ಆದರ್ಶದ ಸ್ಥಿತಿಯನ್ನು ನವ್ಯಕ್ಕೆ ಮಿತಿಗೊಳಿಸಿಲ್ಲ. ಮೇಲಾಗಿ, ಅಂಥ ಸ್ಥಿತಿಯೊಂದು ಕಾವ್ಯದಲ್ಲಿ ಕಂಡುಬಂದಾಕ್ಷಣ ಅದು ನವ್ಯಕಾವ್ಯವಾಗುತ್ತದೆ ಎಂದೂ ಹೇಳಿಲ್ಲ. ಇಲ್ಲೊಂದು ಮುಖ್ಯ ವಿಚಾರವನ್ನು ಗಮನಿಸಬೇಕು. ತುಯ್ತವೆಲ್ಲ ನವ್ಯದತ್ತ ಎಂದು ಯಾವ ನವ್ಯದ ಕಡೆಗೆ ರಘುನಂದನರು ಬೊಟ್ಟು ಮಾಡುತ್ತಿದ್ದಾರೆಯೋ ಅದು ಅಡಿಗ ಮತ್ತು ಕನ್ನಡದ ಇತರ ನವ್ಯಕವಿಗಳ ಕಾವ್ಯದಲ್ಲಿ ಕಂಡುಬರುವ ಗುಣಲ್ಷಣಗಳ ನಿರಪೇಕ್ಷ ಸಮರ್ಥನೆಯಲ್ಲ. ಇದನ್ನು ಅವರು ಪುಸ್ತಕದ ಮೊದಲಿಗೇ (ಪುಟ 22, 23) ಸ್ಪಷ್ಟಪಡಿಸಿದ್ದಾರಲ್ಲದೆ, ‘ಮಧ್ಯಂತರ’ ಕಂಡಿಕೆಯಲ್ಲೂ ವಿವರವಾಗಿ ಚರ್ಚಿಸಿದ್ದಾರೆ.
ಬೇಂದ್ರೆಯವರ ಅಷ್ಟಷಟ್ಪದಿಗಳ ಲಕ್ಷಣಗಳನ್ನೂ, ತಥಾಕಥಿತ ನವ್ಯಕಾವ್ಯದ್ದು ಎಂದು ಗುರುತಿಸಲಾಗುವ ಎಚ್ಚರದ ವಿವೇಚನೆ, ಭಾವಸ್ನಿಗ್ಧತೆ, ನಿಷ್ಠುರತೆ, ಅದ್ಭುತ ಕರ್ಷಣ ಮೊದಲಾದ ಲಕ್ಷಣಗಳನ್ನೂ ಹೊಂದಿರುವ, ಆದರೆ, ಪರಕೀಯತೆಯ ಭಾವ, ಅತಿಯಾದ ಆತ್ಮನಿಂದನೆಯ ವ್ಯಂಗ್ಯ, ಹತಾಶೆಯಿಂದ ಹುಟ್ಟಿದ ಸಿನಿಕತೆ ಮೊದಲಾದ ತಥಾಕಥಿತ ನವ್ಯಕಾವ್ಯದ ಲಕ್ಷಣಗಳನ್ನು ಹೊಂದಿರದ, ಮೆಟಫಿಜ಼ಿಕಲ್ ಕಾವ್ಯಗಳನ್ನು ಹೋಲುವ ನವ್ಯಕಾವ್ಯದ ಮಾದರಿಯೊಂದು ೪೦ರ ದಶಕದಲ್ಲಿ ರೂಪುಗೊಳ್ಳುವ ಸಾಧ್ಯತೆ ಇತ್ತು ಎನ್ನುವುದು ರಘುನಂದನರ ಅಭಿಮತ.
ಭಕ್ತಿ-ಅನುಭಾವ ಸಂಬಂಧದ ಜಿಜ್ಞಾಸೆ..
ರಘುನಂದನರು ಬಸವಣ್ಣನವರ ಬಗ್ಗೆ ಹೇಳುವಾಗ ಭಕ್ತಿ ಮತ್ತು ಅನುಭಾವಗಳ ನಡುವಿನ ವ್ಯತ್ಯಾಸಗಳನ್ನು ವಿವರಿಸಿಲ್ಲ, ವಿವರಿಸಿದರೆ ವಾದಕ್ಕೆ ಇನ್ನಷ್ಟು ಸ್ಪಷ್ಟತೆ, ನಿಖರತೆ ದಕ್ಕುತ್ತದೆ ಎಂದು ವಿಜಯಶಂಕರ ಅವರು ಆರೋಪಿಸುತ್ತಾರೆ. ಇಲ್ಲಿ ಯಾವ ’ವಾದ’ವನ್ನು ಕುರಿತು ಅವರು ಮಾತನಾಡುತ್ತಿದ್ದಾರೆ ಎಂಬುದು ಸ್ಪಷ್ಟವಿಲ್ಲ. ಅದು ಏನೇಯಿದ್ದರೂ, ಈ ಭಾಗದಲ್ಲಿ ರಘುನಂದನರು, ಭಕ್ತಿ ಮತ್ತು ಅನುಭಾವದ ನಡುವಿನ ವ್ಯತ್ಯಾಸವನ್ನು ಉದಾಹರಣೆಗಳ ಸಮೇತ ಸ್ಪಷ್ಟವಾಗಿ ತೋರಿಸಿದ್ದಾರೆ. ಇವರ ಪ್ರಕಾರ ಬಸವಣ್ಣನ ವಚನಗಳಲ್ಲಿ ಕಾಣಿಸುವುದು ಅನುಭಾವದ ಹಂಬಲವೇ ಹೊರತು ಅಪ್ಪಟ ಅನುಭಾವವಲ್ಲ. (ಪುಟ 125-126). ಅವನ ಅನೇಕ ವಚನಗಳು ವಿಭಕ್ತಿಯ ಭಾವವಿರುವ, ಭಾವುಕತೆಯೇ ಪ್ರಧಾನವಾದ ವಚನಗಳು. ಅವನದ್ದು ಮೂಲಭೂತವಾಗಿ ಬಹುತೀವ್ರವಾದ ಭಕ್ತಿಯೇ ಹೊರತು ಅನುಭಾವವಲ್ಲ. ಅಕ್ಕಮಹಾದೇವಿಯು ಕೂಡ ..ವಿಭಕ್ತೆಯೇ; ದ್ವೈತಭಾವವಿದ್ದವಳೇ. ಹೆಚ್ಚೆಂದರೆ, ದ್ವೈತಾದ್ವೈತದ ಭಾವವಿದ್ದವಳು. (ಪುಟ 127). ಅವಳದ್ದು ಆತ್ಯಂತಿಕವಾಗಿ ಭಕ್ತಿ ಮತ್ತು ಆತ್ಮಾರ್ಪಣೆಯ ಭಾವ-ಭಾವುಕತೆ ಆಗಿದೆಯೇ ಹೊರತು ಶುದ್ಧಾನುಭಾವ ಮತ್ತು ಶುದ್ಧಾದ್ವೈತವಲ್ಲ. ಆದರೆ, ಅಲ್ಲಮ ಮತ್ತು ಅವನಂಥವರ ವಚನ ಇಲ್ಲವೆ ಕವಿತೆಗಳಲ್ಲಿ ಕಾಣುವ ಅನುಭಾವದ ಸ್ತರವು ವಿಭಕ್ತ ಗ್ರಹಿಕೆಯಲ್ಲಿ ಮೂಡಿದ ಭಕ್ತಿಯ ಭಾವ-ಭಾವುಕತೆಯನ್ನು ಮೀರಿದ್ದು ಎಂಬುದನ್ನು ರಘುನಂದನರು ಉದಹರಣೆಗಳೊಂದಿಗೆ ಸ್ಪಷ್ಟಪಡಿಸುತ್ತಾರೆ. (ಪುಟ 128-129).
ಮೆಟಫಿಜ಼ಿಕಲ್ ಎಂಬುದು ಆನುಭಾವಿಕ ಅಲ್ಲ..
ಮುಂದುವರಿದು ವಿಜಯಶಂಕರ ಅವರು, ..ಇಂಗ್ಲಿಷ್ ಮೆಟಫಿಜ಼ಿಕಲ್ ಕಾವ್ಯ ವಿವರಣೆ ಕೃತಿಯಲ್ಲಿದೆ. ಆದರೆ ಕನ್ನಡದಲ್ಲಿ ಮೆಟಫಿಜ಼ಿಕಲ್ ಅಥವಾ ಅನುಭಾವ ಕಾವ್ಯದ ಬಗ್ಗೆ ನಡೆದ ಚರ್ಚೆಗಳನ್ನು ಕೃತಿ ಅಷ್ಟೇ ಆಸಕ್ತಿಯಿಂದ ಗಮನಿಸುವುದಿಲ್ಲ ಎಂದು ಹೇಳುತ್ತಾರೆ. ಇಲ್ಲಿ ಅವರು ಮೆಟಫಿಜ಼ಿಕಲ್ ಕಾವ್ಯ ಮತ್ತು ಅನುಭಾವ ಕಾವ್ಯ ಒಂದೇ ಎಂದು ಭಾವಿಸಿದ್ದಾರೆಯೇ ಎಂಬ ಶಂಕೆ ಮೂಡುತ್ತದೆ. ಈ ಸಾಲಿನ ಹಿಂದಿನ ಸಾಲೂ ಈ ಶಂಕೆಗೆ ಪುಷ್ಠಿನೀಡುವಂತೆಯೇ ಇದೆ. ಆದರೆ, ಇವೆರಡೂ ಬೇರೆಬೇರೆ ಎಂದು ಬಹಳ ಸ್ಪಷ್ಟವಾಗಿ ರಘುನಂದನರು ತಮ್ಮ ಕೃತಿಯಲ್ಲಿ ಸಾದರಪಡಿಸಿದ್ದಾರೆ. ರಘುನಂದನರು, ಬೇಂದ್ರೆಯವರ ಅಷ್ಟಷಟ್ಪದಿಗಳು ಇಂಗ್ಲಿಷ್ ಮೆಟಫಿಜ಼ಿಕಲ್ ಕವಿಗಳ ಕವನಗಳನ್ನು ಹೋಲುತ್ತವೆ ಎಂಬ ತಮ್ಮ ಬಲವಾದ ಅನ್ನಿಸಿಕೆ ಮತ್ತು ಭಾವನೆಯನ್ನು ಮುಂದಿಡುತ್ತಾರೆಯೇ ಹೊರತು ಈ ಅಷ್ಟಷಟ್ಪದಿಗಳು ಆನುಭಾವಿಕ ಕವನಗಳಾಗಿವೆ ಎಂದು ವಾದಿಸುತ್ತಿಲ್ಲ. ಇನ್ನು, ಮುಂದಿನ ಪ್ಯಾರಾದಲ್ಲಿ ವಿಜಯಶಂಕರ ಅವರು ಉಲ್ಲೇಖಿಸುವ ಗೌರೀಶ ಕಾಯ್ಕಿಣಿಯವರ ವಿವರಣೆಯು ಬೇಂದ್ರೆಯವರ ಕಾವ್ಯವನ್ನು ಅನುಭಾವದ ಪರಿಭಾಷೆಯಲ್ಲಿ ಗ್ರಹಿಸುತ್ತದೆ; ಮೆಟಫಿಜ಼ಿಕಲ್/ಅಧಿಭೂತತೆಯ ಮೀಮಾಂಸೆಯ ಪರಿಭಾಷೆಯಲ್ಲಿ ಅಲ್ಲ. ಹೀಗಾಗಿ, ಅನುಭಾವದ ಕುರಿತು ಕಾಯ್ಕಿಣಿಯಂಥ ಕನ್ನಡದ ಮೇರು ಚಿಂತಕರ ವಿಚಾರಗಳ ಪ್ರಸ್ತಾಪ, ಕೃತಿಯ ಈ ಭಾಗದ ಚರ್ಚೆಯಲ್ಲಿ, ಅನವಶ್ಯಕವೇ ಆಗಿದೆ.
ಇದನ್ನು ಓದಿದ್ದೀರಾ?: ಆದಾಯ ಅಸಮಾನತೆ | ಬ್ರಿಟಿಷರನ್ನೂ ಮೀರಿಸಿದ ಮೋದಿ!
ಈ ನಿಟ್ಟಿನಲ್ಲಿ, ಬೇಂದ್ರೆಯವರ ಕಾವ್ಯತತ್ತ್ವಗಳು ಸ್ವತಃ ಅವರೇ ಪ್ರತಿಪಾದಿಸಿದ ಚತುರ್ಮುಖ ಸೌಂದರ್ಯದ ತತ್ತ್ವಗಳಿಂದಲೂ ಆಚೆ ಯಾಕೆ ನವ್ಯತತ್ವಗಳು ಎಂಬ ವಿಜಯಶಂಕರ ಅವರ ಪ್ರಶ್ನೆಯೂ ಅಪ್ರಸ್ತುತವಾಗುತ್ತದೆ. ಮೂಲತಃ ಶ್ರೀ ಅರವಿಂದರು ಪ್ರಸ್ತಾಪಿಸುವ ಹಾಗೂ ಅವರಿಂದಲೇ ಬೇಂದ್ರೆಯವರು ಪಡೆದಿರುವ ಆ ಚತುರ್ಮುಖ ಸೌಂದರ್ಯದ ತತ್ತ್ವಗಳ ನೆಲೆಯಿಂದ ರಘುನಂದನರು ಬೇಂದ್ರೆಯವರ ಅಷ್ಟಷಟ್ಪದಿಗಳನ್ನು ನೋಡಿಯೇ ಇಲ್ಲ. ಹಾಗೆ ನೋಡದಿರುವುದರಿಂದಲೇ, ಬೇಂದ್ರೆಯವರ ಕಾವ್ಯದ ಮೇಲೆ ಅರವಿಂದರ ತತ್ತ್ವಗಳ ಪ್ರಭಾವ ಹೆಚ್ಚು ಕಾಣಿಸಿಕೊಳ್ಳಲಾರಂಭಿಸುತ್ತಿದ್ದಂತೆ ಅವರ ಕಾವ್ಯ ಅವರದ್ದೇ ಅಷ್ಟಷಟ್ಪದಿಗಳ ಹೋಲಿಕೆಯಲ್ಲಿ ಸೊರಗಿತು ಎಂಬ ಬಲವಾದ ಅನ್ನಿಸಿಕೆಯೊಂದನ್ನು ಮುಂದಿಡಲು ಈ ಕೃತಿಗೆ ಸಾಧ್ಯವಾಗಿದೆ.
ಹುರುಳಿರುವ ಆರೋಪ ತೂಕದ್ದಾಗುವ ಪರಿ..
ಇನ್ನು, 1950ರ ದಶಕದ ಆರಂಭದಿಂದಾಚೆಗೆ ಬೇಂದ್ರೆಯವರ ಕಾವ್ಯದಲ್ಲಿ ಸಂವೇದನೆಯ ವಿದಳನ ಬಹಳ ಬಲವಾಗಿಯೇ ಆಯಿತು ಎಂದು ರಘುನಂದನರು ಅಭಿಪ್ರಾಯಪಡುತ್ತಾರೆ, ಆದರೆ, ಅವರ ಕಾವ್ಯದ ಉದಾಹರಣೆಗಳ ಮೂಲಕ ಇದನ್ನು ವಿವರಿಸಿಲ್ಲ ಎಂದು ವಿಜಯಶಂಕರ ಅವರು ಆರೋಪಿಸುತ್ತಾರೆ. ಈ ಆರೋಪದಲ್ಲಿ ಹುರುಳಿದೆ. ಆದರೆ, ಈ ಆರೋಪಕ್ಕೆ ಪ್ರತಿಯಾಗಿ ಕಾರಣಗಳನ್ನು ರಘುನಂದನರು ತಮ್ಮ ಕೃತಿಯಲ್ಲೇ ನೀಡಿದ್ದಾರೆ. (ಪುಟ 97-100). ವಿಜಯಶಂಕರ ಅವರು ಆ ಎಲ್ಲ ಕಾರಣಗಳನ್ನು ಪ್ರಸ್ತಾಪಿಸಿ, ಅವುಗಳಲ್ಲಿರಬಹುದಾದ ಸಮಸ್ಯೆಗಳನ್ನು ಗುರುತಿಸಿದ ಬಳಿಕ ತಮ್ಮ ಆರೋಪ ಮಾಡಿದ್ದಿದ್ದರೆ, ಅವರ ಮಾತಿಗೆ ಹೆಚ್ಚಿನ ತೂಕವಿರುತ್ತಿತ್ತು.
ಕೃತಿವಿಮರ್ಶೆಯೊಂದು ವಿಮರ್ಶಾತ್ಮಕ ಸಂವಾದಕ್ಕೆ ದಾರಿಯಾಗಲಿ ಎಂಬ ಆಶಯದೊಂದಿಗೆ, ವಿನಮ್ರತೆಯಿಂದ, ಕೃತಿಯ ಭಿನ್ನ ಓದೊಂದನ್ನು ಈ ಬರಹದ ಮುಖಾಂತರ ಓದುಗರ ಮುಂದಿಟ್ಟಿದ್ದೇನೆ. ರಘುನಂದನರ ಕೃತಿಯ ಅನೇಕ ಗುರುತರ ಸಂಗತಿಗಳನ್ನು ಮುನ್ನೆಲೆಗೆ ತಂದು, ಚರ್ಚಿಸುವ ವಿಜಯಶಂಕರ ಅವರ ವಿಮರ್ಶೆಯು ಆ ಕೃತಿಯನ್ನು ನಾನು ಮತ್ತಷ್ಟು ಆಳವಾಗಿ ಓದಲು ಪ್ರೇರೇಪಿಸಿತು ಎಂಬುದನ್ನಿಲ್ಲಿ ನೆನೆಯುತ್ತಿದ್ದೇನೆ.

ಅಮರ್ ಬಿ ಹೊಳೆಗದ್ದೆ
ಲೇಖಕ