ಮಹಾರಾಷ್ಟ್ರದ ರೈತರ ದೊಡ್ಡ ಶತ್ರು ಬಿಜೆಪಿ, ಮಹಾರಾಷ್ಟ್ರ ‘ಮಹಾ ಪರಿವರ್ತನೆ’ ಆಗ್ರಹಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ. ಹಾಗೆಯೇ ಡಬಲ್ ಎಂಜಿನ್ ಸರ್ಕಾರವನ್ನು ಅಧಿಕಾರದಿಂದ ತೆಗೆದುಹಾಕುವುದರಿಂದ ಮಾತ್ರ ರೈತರಿಗೆ ಲಾಭವಾಗಲಿದೆ ಎಂದು ರಾಜ್ಯವೇ ನಿರ್ಧರಿಸಿದೆ ಎಂದಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆಗಳ ಬಗ್ಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯವನ್ನು ಬರ ಮುಕ್ತಗೊಳಿಸುವ ಭರವಸೆ ಬರೀ ‘ಜುಮ್ಲಾ’ ಎಂದು ಟೀಕಿಸಿದ್ದಾರೆ.
“ಮಹಾರಾಷ್ಟ್ರದ ರೈತರ ದೊಡ್ಡ ಶತ್ರು ಬಿಜೆಪಿ” ಎಂದಿರುವ ಖರ್ಗೆ, ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಪಟ್ಟಿದ್ದಾರೆ. “20,000 ರೈತರು ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ನಿಧಿಯಲ್ಲಿ ಭಾರೀ ಕಡಿತ ಮಾಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಚುನಾವಣೆ ಬಂದಾಗ ‘ಗೋಮಾತೆ’ ಸ್ಮರಣೆ: ದೇಸಿ ಹಸು ರಾಜ್ಯ ಮಾತೆಯಾದರೆ, ಇತರೆ ತಳಿಗಳು ಆಹಾರವೇ?
“20,000 ಕೋಟಿ ರೂಪಾಯಿ ವಾಟರ್ ಗ್ರಿಡ್ ಸುಳ್ಳು ಭರವಸೆ ನೀಡಲಾಗಿದೆ. ಬಿಜೆಪಿಯು ಮಹಾರಾಷ್ಟ್ರವನ್ನು ಬರ ಮುಕ್ತ ಮಾಡುವುದಾಗಿ ಸುಳ್ಳು ಭರವಸೆ ನೀಡಿದೆ. ಹಾಗೆಯೇ ಅನ್ನದಾತರಿಗೆ ಪರಿಹಾರ ನೀಡಲು ಬಿಜೆಪಿ ಸರ್ಕಾರ ನಿರಾಕರಣೆ” ಎಂದು ಆರೋಪಿಸಿದ್ದಾರೆ.
“ವಿಮಾ ಕಂಪನಿಗಳಿಗೆ 8,000 ಕೋಟಿ ರೂಪಾಯಿ ಲಾಭವಾಗಿದೆ. ಈರುಳ್ಳಿ ಮತ್ತು ಸೋಯಾಬೀನ್ ರಫ್ತು ನಿಷೇಧ ಮಾಡಲಾಗಿದೆ ರೈತರ ಮೇಲೆ ಹೆಚ್ಚಿನ ರಫ್ತು ಸುಂಕದ ಹೊರೆ ಹೊರಿಸಲಾಗಿದೆ. ಈ ನಡುವೆ ಹತ್ತಿ ಮತ್ತು ಸೋಯಾಬೀನ್ ಉತ್ಪಾದನೆಯಲ್ಲಿ ಭಾರಿ ಕುಸಿತವಾಗಿದೆ. ರಾಜ್ಯದ ಹಾಲು ಸಹಕಾರಿ ಸಂಘಗಳಲ್ಲಿನ ಬಿಕ್ಕಟ್ಟು ಉಂಟಾಗಿದ್ದು ಸರ್ಕಾರವೇ ಒಪ್ಪಿಕೊಂಡಿದೆ” ಎಂದು ಹೇಳಿದ್ದಾರೆ.
“ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವನ್ನು ಕಿತ್ತೊಗೆದ ನಂತರವೇ ರೈತರಿಗೆ ಲಾಭವಾಗಲಿದೆ ಎಂದು ಮಹಾರಾಷ್ಟ್ರ ನಿರ್ಧರಿಸಿದೆ. ಮಹಾರಾಷ್ಟ್ರ ಮಹಾ ಪರಿವರ್ತನೆಯನ್ನು ಆಗ್ರಹಿಸುತ್ತಿದೆ” ಎಂದು ಖರ್ಗೆ ಎಕ್ಸ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.
