ಗಂಡ ಹೆಂಡತಿ ಮಧ್ಯೆ ಸಣ್ಣ ಮಾತಿನ ಚಕಮಕಿ ನಡೆದ ಬೆನ್ನಲ್ಲೇ ಸ್ವತಃ ತಾಯಿ ತನ್ನ ಮೂವರು ಮಕ್ಕಳಿಗೆ ಸ್ಟೈಟ್ ಬಾಟಲಿಯಲ್ಲಿ ವಿಷ ಬೆರೆಸಿ ಕುಡಿಸಿ, ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಂಚೋಳಿ ತಾಲ್ಲೂಕಿನ ಜಂಗ್ಲಿಪೀರ್ ತಾಂಡಾದಲ್ಲಿ ನಡೆದಿದೆ.
ಗೀತಾಬಾಯಿ ಸಂತೋಷ್ ರಾಠೋಡ್ (30) ಎಂಬ ಮಹಿಳೆ ಗಂಡನ ಮೇಲಿನ ಸಿಟ್ಟಿಗೆ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಮಕ್ಕಳಾದ ಚೈತನ್ಯ (4) ಧನುಷ್ (3) ಲಕ್ಷ್ಮಿ ಗೆ (ಒಂದುವರೆ ತಿಂಗಳು) ಕುಡಿಸಿದ್ದಾಳೆ. ಈ ಪೈಕಿ ಹಸುಗೂಸು ಲಕ್ಷ್ಮಿ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಷುಲ್ಲಕ ಕಾರಣಗಳಿಗೆ ಗಂಡ-ಹೆಂಡತಿ ಮಧ್ಯೆ ಆಗಾಗ ಮಾತಿನ ಚಕಮಕಿ ನಡೆಯುತ್ತಿತ್ತು ಎನ್ನಲಾಗಿದೆ. ಪತ್ನಿ ಗೀತಾ ಮಕ್ಕಳಿಗೆ ಹೊಡೆದಾಗಲೆಲ್ಲಾ ಆತ ಪತ್ನಿಯನ್ನು ದಬಾಯಿಸುತ್ತಿದ್ದ, ಭಾನುವಾರ ಸಹ ಇದೇ ರೀತಿ ದಂಪತಿ ಮಧ್ಯೆ ಪರಸ್ಪರ ವಾಗ್ವಾದ ನಡೆದ ಬಳಿಕ ಸಂತೋಷ್ ಹೊರಗಡೆ ತೆರಳಿದ ವೇಳೆ ಗೀತಾ ಗಂಡನ ಮೇಲಿನ ಸಿಟ್ಟಿನಿಂದ ಮನನೊಂದು ಈ ಕೃತ್ಯ ಎಸಗಿದ್ದಾಳೆ ಎಂದು ಹೇಳಲಾಗಿದೆ
ವಿಷ ಕುಡಿದ ಬಳಿಕ ತೀವ್ರ ಸ್ವರೂಪದ ಹೊಟ್ಟೆ ನೋವು ಹಾಗೂ ಅಸಹನೀಯ ಸಂಕಟದಿಂದ ಮಕ್ಕಳು ಚೀರಾಟ ನಡೆಸಿರುವುದು ಗಮನಿಸಿದ ನೆರೆಹೊರೆಯವರು ಗೀತಾ ತಾನೂ ವಿಷ ಕುಡಿದು ಮಕ್ಕಳಿಗೂ ವಿಷ ಕುಡಿಸಿರುವುದು ಗೊತ್ತಾಗುತ್ತಿದ್ದಂತೆಯೇ ಆಕೆಯ ಪತಿ ಸಂತೋಷನಿಗೆ ಮಾಹಿತಿ ತಲುಪಿಸಿ ತಕ್ಷಣ ತಾಯಿ-ಮಕ್ಕಳನ್ನು ಚಿಂಚೋಳಿಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ʼವಚನ ದರ್ಶನʼ ಕೃತಿಯಿಂದ ವಚನ ಸಾಹಿತ್ಯ ನಿರ್ನಾಮಕ್ಕೆ ಯತ್ನ : ಆರ್.ಕೆ.ಹುಡಗಿ
ಚಿಂಚೋಳಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಎಲ್ಲರನ್ನೂ ಬೀದರ್ ಬ್ರಿಮ್ಸ್‌ಗೆ ರವಾನಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.