- ನನಗಾಗಲಿ, ನಮ್ಮ ಕುಟುಂಬಕ್ಕೆ ಆಗಲಿ ಸೋಲು, ಗೆಲುವು ಹೊಸದೇನಲ್ಲ
- ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಸರ್ಕಾರ ಜನರ ಆಶೋತ್ತರಳಿಗೆ ಸ್ಪಂದಿಸಲಿ
ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಜೆಡಿಎಸ್ ಕೇವಲ 20 ಕ್ಷೇತ್ರಗಳಲ್ಲಿ ಮಾತ್ರವೇ ಗೆಲ್ಲುವ ಸಾಧ್ಯತೆಗಳು ದಟ್ಟವಾಗಿವೆ. ಈ ಹಿನ್ನೆಲೆ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, “ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ, ಸದಾ ಜನರ ಜತೆಯಲ್ಲೇ ಇರುತ್ತೇನೆ” ಎಂದು ಹೇಳಿದ್ದಾರೆ.
“ರಾಜ್ಯದ ಜನತೆಯ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ. ಸೋಲು, ಗೆಲುವನ್ನು ನಾನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಆದರೆ, ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ, ಸದಾ ಜನರ ಜತೆಯಲ್ಲೇ ಇರುತ್ತೇನೆ. ನಮ್ಮ ಪಕ್ಷವನ್ನು ಆಶೀರ್ವದಿಸಿದ ಮಹಾಜನತೆಗೆ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದಾರೆ.
“ನನಗಾಗಲಿ, ನಮ್ಮ ಕುಟುಂಬಕ್ಕೆ ಆಗಲಿ ಸೋಲು, ಗೆಲುವು ಹೊಸದೇನಲ್ಲ. ಈ ಹಿಂದೆ ಎಚ್ ಡಿ ದೇವೇಗೌಡರು, ಎಚ್ ಡಿ ರೇವಣ್ಣ, ನಾನೂ ಸೋತಿದ್ದೆವು. ಹಾಗೆಯೇ ಗೆದ್ದಾಗ ಬದ್ಧತೆಯಿಂದ ಜನಸೇವೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಹೈ ವೋಲ್ಟೇಜ್ ಕ್ಷೇತ್ರದಲ್ಲಿ ಸ್ವರೂಪ್ ಜಯಬೇರಿ; ಪ್ರೀತಂ ಗೌಡಗೆ ಮುಖಭಂಗ
“ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಸರ್ಕಾರಕ್ಕೆ ಶುಭವಾಗಲಿ. ಜನರ ಆಶೋತ್ತರಳಿಗೆ ಸ್ಪಂದಿಸಲಿ” ಎಂದು ಹಾರೈಸಿದ್ದಾರೆ.
“ಈ ಚುನಾವಣೆಯಲ್ಲಿ ಪಕ್ಷದ ಪರವಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರು, ಮುಖಂಡರು, ಅಭ್ಯರ್ಥಿಗಳಿಗೆ ನನ್ನ ಕೃತಜ್ಞತೆಗಳು. ಯಾವುದೇ ಕಾರಣಕ್ಕೂ ಯಾರೂ ಧೃತಿಗೆಡುವುದು ಬೇಡ, ನಿಮ್ಮ ಜತೆಯಲ್ಲಿ ನಾನಿದ್ದೇನೆ” ಎಂದು ಭರವಸೆ ನೀಡಿದ್ದಾರೆ.
Corrupt appa and maga should be jailed.